ಹಿರಿಯರೆಂಬ ಅಜ್ಜ ಅಜ್ಜಿರಬೇಕು ಮನೆಯಲ್ಲಿ
ಹಿರಿಯರಿದ್ದರೆ ಮನೆ ಚಂದ. ಅಜ್ಜ ಅಜ್ಜಿಯರಿದ್ದರೆ ಬಲು ಆನಂದ.ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ತುಂಬಿದ ಮನೆ ಅಂದ. ಎಲ್ಲಾರು ಸೇರಿ ಆಚರಿಸುವ ಸಂಪ್ರದಾಯ ,ಪದ್ಧತಿ,ಹಬ್ಬ ಹರಿದಿನಗಳು, ಕೂಡು ಹಿರಿಯರ ಕುಟುಂಬದಲ್ಲಿ ಕಾಣಬಹುದಾಗಿದೆ, ಕಲ್ಮಶವಿಲ್ಲದ ಮನೆ ಒಳಗೆ ಗುರು ಹಿರಿಯರ ಮಾತೇ ಮುಖ್ಯವಾಣಿಯಾಗಿದೆ, ಮೊಮ್ಮಕ್ಕಳ ನಗು ಅಜ್ಜ ಅಜ್ಜಿಯರಿಗೆ ಬಲು ಇಷ್ಟ, ಮೊಮ್ಮಕ್ಕಳಿಗೆ ಕಥೆ ಹೇಳುವ ಮೂಲಕ ಅಜ್ಜ ಅಜ್ಜಿಯರು ಸಂಪ್ರದಾಯ ಪದ್ಧತಿಯನ್ನು ಹೇಳುವುದರ ಮೂಲಕ ಮಕ್ಕಳು ಅದನ್ನು ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ರಜೆಯ ಕಾಲದಲ್ಲಿ ಮಕ್ಕಳು ಹೆಚ್ಚು ಇಷ್ಟಪಡುವುದು ಹಳ್ಳಿಯ ವಾತಾವರಣವನ್ನು ಅದರಲ್ಲೂ ಮುಖ್ಯವಾಗಿ ಅಜ್ಜ- ಅಜ್ಜಿಯರನ್ನ ನೆನಪಿಸಿಕೊಳ್ಳುತ್ತಾರೆ, ಅಜ್ಜಿಯ ಕೈ ತುತ್ತು ಅಜ್ಜನ ಕತೆ ಕಾದಂಬರಿಗಳು, ಬೆಳದಿಂಗಳ ಊಟ, ಚಂದ್ರ ಮಾಮನ ಕತೆ, ಈಗ ಮೊಮ್ಮಕ್ಕಳು ಹಳ್ಳಿಯ ವಾತಾವರಣಕ್ಕೆ ಹೊಂದುಕೊಳ್ಳುತ್ತಾರೆ, ಪಟ್ಟಣ ವಾತಾವರಣಕ್ಕಿಂತ ಹಳ್ಳಿ ವಾತಾವರಣ ಹೆಚ್ಚು ಖುಷಿಕೊಡುತ್ತದೆ. ನದಿಯಲ್ಲಿ ಈಜುವುದು, ದನ ಕರಗಳನ್ನ ಮೇಯಿಸುವುದು, ಎತ್ತಿನ ಗಾಡಿ ಓಡಿಸುವುದು, ಹೀಗೆ ಬಲು ರೋಮಾಂಚನವಾಗಿದೆ. ಹಳ್ಳಿಯಲ್ಲಿ ಎಲ್ಲರೂ ಒಂದುಗೂಡಿ ಹಬ್ಬವನ್ನು ಆಚರಿಸುವ ಪದ್ಧತಿಯು ಆಗ ಇತ್ತು, ಇತ್ತೀಚಿನ ಕಾಲದಲ್ಲಿ ಅಜ್ಜ ಅಜ್ಜಿಯರನ್ನ ಮೊಮ್ಮಕ್ಕಳು ತೀರ ಮಾತನಾಡಿಸುವುದು ಕಡಿಮೆ ಆಗುತ್ತಾ ಇದೆ. ಕಾರಣ ಮೊಬೈಲ್ ಗಳ ಹಾವಳಿ,ಟಿವಿ ಮಾಧ್ಯಮಗಳು, ಗುರುಹಿರಿಯಂಬ ಭಾವನೆ ಕಡಿಮೆ ಇರುವುದು. ತಂದೆ ತಾಯಿಗಳು ತಮ್ಮ ಅಪ್ಪ ಅಮ್ಮಂದಿರನ್ನ ದೂರ ಮಾಡಿರೋದು ಮಕ್ಕಳೊಂದಿಗೆ ಬಿಡದಿರುವುದು ಅವರಿಗೆ ಪ್ರೀತಿ ದೊರೆಯದೆ ಇರುವುದು ಇತ್ತೀಚಿನ ದಿನದಲ್ಲಿ ಹೆಚ್ಚಾಗಿದೆ. ಆದ್ದರಿಂದ ಹಿರಿಯರಿದ್ದರೆ ಮನೆ ಚಂದ,ಕೂಡಿ ಬಾಳಿದರೆ ಸ್ವರ್ಗವೇ ಧರೆಗಿಳಿದಂತೆ ಆನಂದ.
ಚಂದ್ರಶೇಖರಚಾರ್ ಎಂ
ಶಿಕ್ಷಕರು ವಿಶ್ವಮಾನವ ಪ್ರೌಢಶಾಲೆ
ಚಿತ್ರದುರ್ಗ
💐💐💐💐💐
ಡಾ.ಪ್ರಕಾಶ ಖಾಡೆಯವರ ಕಥಾ ಸಂಕಲನ ‘ಬಾಳುಕುನ ಪುರಾಣ’ ದ ‘ಇಲ್ಲಿಂದ ಮೇಲೆ ಶಬ್ದವಿಲ್ಲ’ ಕಥೆಯ ಕುರಿತು
ಪ್ರಸ್ತುತ ಕಥೆ ಶೀರ್ಷಿಕೆ ‘ಇಲ್ಲಿಂದ ಮೇಲೆ ಶಬ್ದವಿಲ್ಲ ‘ಇದನ್ನು ಓದಿದಾಗ ವಿಜ್ಞಾನ ಶಿಕ್ಷಕನಾದ ನನಗೆ ಬಹುಷಃ ನಿರ್ವಾತ ಪ್ರದೇಶ ನೆನಪಾಗುವುದು ಸಹಜ,ಆದರೆ ಕಥೆಯನ್ನು ಓದುತ್ತ ಹೋದಂತೆ ಕಥಾವಸ್ತಿವಿನ ವಾತಾವರಣದ ಅರಿವಾಗುವುದು.ಕಥೆಯ ಆರಂಭದಲ್ಲಿ ಕಲಾವಿದರ ಆಗಮನವು ನಮ್ಮ ಬಾಲ್ಯದ ಸಾಲಿ ದಿನಗಳನ್ನು ನೆನಪಿಸುತ್ತವೆ.ಸಾಲಿಗಿ ಮ್ಯಾಲಿಂದ ಮ್ಯಾಲ ಬರೋ ಬೈರೂಪಗಾರರು,ಜಾದೂ ಮಾಡಾವರು,ಸರ್ಕಸ್ ಮಾಡಾವರು,ಪವಾಡ ಬಯಲು ಮಾಡಾವರು,ಪುಸ್ತಕ,ಪೆನ್ನು,ಪೆನ್ಸಿಲ್,ಸ್ಕೇಲ್ ಪಟ್ಟಿ,ನಕಾಶ ಮಾರಾವರೆಲ್ಲರೂ ನೆನಪಾಗ್ತಾರ.ಸಾಲಿ ಹೆಡ್ ಮಾಸ್ತರಗೋಳ ಪರಿ(ಮನ)ಸ್ಥಿತಿಯನ್ನು ಒತ್ತಿ ಹೇಳುವ ಸಾಲುಗಳು,ಅವರು ಒತ್ತಡದಲ್ಲಿ ವರ್ತಿಸುವ ರೀತಿ,ಹರಿಹಾಯುವದು,ಯಾವುದೋ ಸಿಟ್ಟನ್ನು ಯಾರದೋ ಮೇಲೆ ವರ್ಗಾಯಿಸುವುದು,ವೃತ್ತಿಗೆ ವಿರುದ್ಧವಾದರೂ ಅಭ್ಯಾಸವಾದ ಗುಟಕಾ ಮತ್ತು ಇಸ್ಫೇಟಿನ ಚಟ,ಕಳ್ಳ ಲೆಕ್ಕ ಹಚ್ಚಿ ಗಳಿಸಿದ ಸಂಬಳವಲ್ಲದ ಗಂಟು,ಹಗುರವಾಗಿ ಪ್ರಯೋಗಿಸುವ ಭಾರ ಬೈಗುಳಗಳು,ಇವನೆಲ್ಲ ಕಂಡು ಉಳಿವರಿಗಾಗುವ ಮನರಂಜನೆ,ಇವೆಲ್ಲ ಓತಪ್ರೋತವಾಗಿ ಕಥಾಹಂದರದಲ್ಲಿ ಹೆಣೆದುಕೊಂಡಿವೆ.
ಹೆಮಾ(ಹೆಡ್ ಮಾಸ್ತರ),ಮಾಂತೂ ಮಾಸ್ತರ,ಲತಾ ಮೇಡಂ,ಯೋಗ ಗುರು ಶ್ರೀಪಾದರು ಇವಷ್ಟು ಕಥೆಯ ಪಾತ್ರಗಳಾಗಿವೆ.ಬಂದ ಬಹಿರೂಪಗಾರರಿಗೆ,ಸರ್ಕಸ್ಸಿನಾವ್ರಿಗೆ ಬಾಯಿಗ್ ಬಂದಂಗ ಮಾತಾಡಿ ಓಡಿಸಿದ್ದು,ಸಾಲಿ ರೊಕ್ಕೆಲ್ಲ ಬಿಡದೇ ಗುಡಿಸಿ ಗುಂಡಾಂತರ ಮಾಡಿದ,ಗುಟಕಾ,ಇಸ್ಪೇಟಿನ ಗೀಳಿನ ಕರ್ಮದ ಫಲವಾಗಿ ‘ಇಲ್ಲದ ಜಡ್ಡ ಬಂದು ಒಲ್ಲದ ಕಡೆ ಒಯ್ತಂತ’ ಅನ್ನೋವಂಗ ಊರಾನ ಡಾಕ್ಟರ್ ಕಡೆ ಆರಾಮಾಗದ,ಹುಬ್ಬಳ್ಳಿಗಿ ಹೋಗಿ ಆಪರೇಷನ್ನು,ಅಲ್ಲಿಯೂ ಸುಧಾರಿಸದೇ ಹೈರಾಣಾಗಿ ಹೈದರಾಬಾದಿಗೆ ಹೋಗಿದ್ದು,ಇತ್ತ ಸಾಲಿ ಚಾರ್ಜು ಮಾಂತೂ ಮಾಸ್ತರಗ ಬಂದಿದ್ದು,ಒಳ್ಳೆ ರೀತಿಲೇ ಸಾಲಿ ನಡಸಿಕೊಂಡು ಹೊಂಟಿದ್ದು,ಸಾಲಿ ವಾತಾವರಣಾನ ಪೂರ್ತಿ ಬದಲಾಗಿರ್ತದ.ಸಾಲಿಗಿ ಯೋಗ ಹೇಳಾಕ ಬರುವಂತ ಶ್ರೀಪಾದ ಗುರುಗಳು ಉತ್ತಮ ರೀತಿಯಲ್ಲಿ ಯೋಗ ಮಕ್ಕಳಿಗೆ ಹೇಳಿಕೊಟ್ಟು ಅವರ ದೈಹಿಕ ಮತ್ತು ಮಾನಸಿಕ ಪರಿಸ್ಥಿತಿ ತುಂಬ ಸುಧಾರಿಸಿದ್ದರು.ಒಂದು ವಾರ ಶ್ರೀಪಾದ ಗುರುಗಳು ಸಾಲಿಗಿ ಬರದೇ ಇದ್ದದ್ದು,ಕಾರಣ ಕಾಶಿಗೆ ಸತ್ಸಂಗಕ್ಕೆ ಹೋಗಿರ್ತಾರ,ಅದಕ ಮಾಂತೂ ಮಾಸ್ತರ ನಮಗೂ ಸತ್ಸಂಗ,ಕ್ಷೇತ್ರದರ್ಶನಕ್ಕ ಕರಕೊಂಡ ಹೋಗರಿ ಅಂತ ವಿನಂತಿಸಿದ್ದರು.
ಎಪ್ರಿಲ್ ತಿಂಗಳ ಸೂಟ್ಯಾಗ ಸಿಬ್ಬಂದಿ ಸಭೆ ಮಾಡಿ ಸಕುಟುಂಬ ಸಮೇತ ಪ್ರವಾಸಕ ತಯಾರಿ ಮಾಡಕೊಂಡ್ರು.ಸೊಲ್ಲಾಪುರಕ ರೇಲ್ವೆ ಹತ್ತಿ,ದೆಹಲಿಗಿ ಬಂದು,ಅಲ್ಲಿಂದ ಬಸ್ಸು ಹಿಡಕೊಂಡ ಹರಿದ್ವಾರಕ್ಕ ಬಂದಿದ್ರು,ಮರುದಿನ ಗಂಗಾಸ್ನಾನ,ಗಂಗಾರತಿ,ಗಂಗಾಮಾತೆಯ ಪ್ರಕೃತಿಯ ಸೌಂದರ್ಯವನ್ನು ಸವಿದು,ಕೇದಾರ,ಬದರೀನಾಥದ ಕಡೆಗೆ ಮುಂದಿನ ಪಯಣ.ಎಲ್ಲ ಸುತ್ತಾಡಿ ಮರಳಿ ಊರಿಗೆ ಬರಲು ರೇಲ್ವೇ ನಿಲ್ದಾಣಕ್ಕೆ ಇವರೆಲ್ಲ ಬಂದಿದ್ರು,ಅತ್ತ ಹೈದರಾಬಾದಿನ್ಯಾಗ ಹೆಮಾ ಮರಳಿ ಬಾರದೂರಿಗೆ ನಿನ್ನ ಪಯಣ ಅಂತ ಹೊರಟೇ ಬಿಟ್ಟಿದ್ರು,ಒಂದು ನಿಮಿಷ ಮೌನಾಚರಣೆ….ಮತ್ತೆ ಇಲ್ಲಿಂದ ಮೇಲೆ ಶಬ್ದವಿಲ್ಲ.ಕಥೆ ಮೌನದ ಅಂತರಾಳದಲ್ಲಿ ನೂರೆಂಟು ಮಾತು ಹೊತ್ತು ನಡೆದಿತ್ತು,ಅದೂ ನಿಶ್ಯಬ್ದವಾಗಿ…..ಮತ್ತೊಂದು ಕಥೆಯ ಹೊತ್ತು ಶೀಘ್ರದಲ್ಲೇ ಶಬ್ದವಾಗಿ,ನಿಮ್ಮ ಕರಣಗಳಿಗೊಂದಷ್ಟು ಕುತೂಹಲವಾಗಿ ಬರುವೆ.
– ಎಮ್ಮಾರ್ಕೆ
ಪಡಿಯಚ್ಚಿಗೊಂದು ನುಡಿಯಚ್ಚು…
ಶಿಕ್ಷಕಿ,ಸಾಹಿತಿ ಭುವನೇಶ್ವರಿ ರು.ಅಂಗಡಿಯವರ *ಪಡಿಯಚ್ಚು* ಇದ್ದಿದ್ ಇದ್ದಂಗೆ….ಟ್ಯಾಗ್ ಲೈನಿಗೆ ತಕ್ಕಂತೆ ಒಂದಷ್ಟು ಫಿಲ್ಟರ್ ಹಾಕದೇ ನಮ್ಮ ಕಡಿ ನಡೆಯುವ ಘಟನಾವಳಿ,ನುಡಿಯುವ ಭಾಷೆಯ ಪ್ರಭಾವಳಿ ಲೇಖನಗಳಲ್ಲಿ ಹಾಸುಹೊಕ್ಕಾಗಿದೆ.ಈ ಅಚ್ಚಿನೊಳಗಿಂದ ಚೊಚ್ಚಲಚ್ಚು *ಹಾಸ್ಟೆಲ್ ಅಂದ್ರ ಜೈಲಲ್ಲ,ಜೀವ್ನದ ಪಾಠ ಕಲಿಸೋ ಗುಡಿ* ಎಂಬ ಶೀರ್ಷಿಕೆ ಹೊತ್ತ ಲೇಖನ,ಬನ್ನಿ ಅದರ ಬಗ್ಗೆ ಒಂದಷ್ಟು ಮನಸು ಬಿಚ್ಚಿ ಮಾತಾಡೋಣ.
ಒಂದು ಲೇಖನದಲ್ಲಿ ಭವಿಷ್ಯದ ತಕ್ಕಡಿಯಲ್ಲಿ ಭೂತಕಾಲವನ್ನು ಅಳೆದು,ಸವಿದು ಲೇಖಕಿಯವರು ನಮ್ಮೆಲ್ಲರ ಮುಂದಿಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಹಾಸ್ಟೆಲಿಗೆ ಸೇರಿಸುದಂದ್ರ ತಂದೆ-ತಾಯಿಗೆ ಎಲ್ಲಿಲ್ಲದ ಆತಂಕ,ಯಾಕಂದ್ರ ಸಾಮಾನ್ಯ ಹಾಸ್ಟೆಲುಗಳಲ್ಲಿ ವಸ್ತಿ ಸೌಲಭ್ಯ,ಊಟದ ಸೌಲಭ್ಯ ಸರಿಯಾಗಿ ಇರ್ತದೋ,ಇಲ್ಲೋ,ನಮ್ ಮಕ್ಕಳಿಗೆ ಬಹಳ ತೊಂದ್ರೆ ಆಗ್ತದ, ನಮ್ ಮಕ್ಳು ನಮ್ ಕಣ್ಣ ಮುಂದ ಇರಬೇಕು ಅನ್ನೋ ಒಂದು ಖಯಾಲಿ ಅಥವಾ ಕಾಯಿಲೆ ಬಹುತೇಕರಲ್ಲಿ ಕಂಡಬರ್ತದ.ಆದ್ರ ಈ ಕಾಯಿಲೆ ಈಗೀಗಿಂದಷ್ಟೇ.ಇಷ್ಟ ಹೇಳಿ ನಮ್ಮನೆಲ್ಲ ನಮ್ಮ ಬಾಲ್ಯಕ್ಕೆ ಕರ್ಕೊಂಡ ಹೋಗತಾರ ನೋಡ್ರಿ,
ಹಳ್ಳಿ,ಅಲ್ಲಿ ಹುಡ್ರು,ಗೆಳೆತನ,ಓಣ್ಯಾಗಿನ ಒಡನಾಟ,ಅದರಾಗ ಹಾಸ್ಟೆಲಿಗಿ ಹೊಂಟ್ರ ವಿದೇಶ ಪ್ರವಾಸ ಹ್ವಾದಂಗ ಫೀಲ್ ಮಾಡ್ಕೊಳ್ಳುವ ಹಳ್ಳಿಗರು,ಒಂಥರಾ ಹೆಣ್ಮಗಳನ್ನ ಮದ್ವಿ ಮಾಡಿ ಗಮನಡನ ಮನಿಗಿ ಕಳಿಸಿದಂಗ ಅಂದ್ರೂ ತಪ್ಪಲ್ಲ ಬಿಡ್ರಿ.ಒಂದ ವಾರ ಮೊದಲ ತಯಾರಿ,ಖಾರ ಹಚ್ಚಿದ ಚುನಮರಿ(ಚೂಡಾ),ಖರ್ಚಿಕಾಯಿ,ಶಂಕರಪೋಳಿ,ಬುಂದೆಯುಂಡಿ ವೆರೈಟಿ ತಿಂಡಿಗಳು,ಉಪ್ಪಿನಕಾಯಿ,ಶೇಂಗಾ ಚಟ್ನಿ,ಕಡಕ್ ಗೋಂಜಾಳ/ಜ್ವಾಳದ ರೊಟ್ಟಿ,ಹಾಕೊಳ್ಳಾಕ ಒಂದೆರಡ ಸೆಟ್ ಹೊಸಾ ಬಟ್ಟಿ,ದೊಡ್ಡ ಟ್ರಂಕ್,ಪೆನ್-ಪುಸ್ತಕ,ವಸತಿಗಾಗಿ ವಸ್ತುಗಳು ಇವೆಲ್ಲವೂ ಹಾಸ್ಟೆಲ್ ಜೀವನದ ಬಗ್ಗೆ ಹೇಳತಾವ.
ಬಾಳ ಹುರುಪಿಲೇ ಹ್ವಾದ ಹುಡುಗರು ಅವರ ಮನಿಯಾವ್ರ ಕಳಿಸಿ ಬರೋವಾಗ ಅನುಭವಿಸುವ ಆ ಕ್ಷಣದ ದುಃಖ,ಹೊಸ ಹೊಸ ಗುರುಬಳಗ,ದೋಸ್ತಿಗಳು ಇವೆಲ್ಲವೂ ಹಾಸ್ಟೆಲ್ ಲೈಪನ್ನು ಶ್ರೀಮಂತಗೊಳಿಸುವಂತಾವು.ಜಾತಿ-ಮತಗಳ ಬೇಧದ ಅರಿವಿಂದ ಅತಿ ದೂರವಿರುವ,ಹಂಚಿಕೊಂಡು ತಿನ್ನುವ,ಕಷ್ಟಕ್ಕೆ ಹೆಗಲಾಗುವ,ಒಗ್ಗೂಡಿ ಸಂಭ್ರವಿಸುವ ಪರಿಯಂತೂ ಸದಾ ಹಸಿರು.ಅದಕ ಲೇಖಕಿಯವ್ರು ಹೇಳಿದ್ಹಾಂಗ *ಹಾಸ್ಟೆಲ್ ಅಂದ್ರ ಜೈಲಲ್ಲ,ಜೀವ್ನದ ಪಾಠ ಕಲಿಸೋ ಗುಡಿ* ಈ ಮಾತಂತೂ ಖರೇನ….ಸರಿ ಮುಂದಿನ ಲೇಖನದ ಕೂಡ ಮತ್ತ ಬರತೀನಿ,ಬರಿತೀನಿ.ಅಲ್ಲಿತನಕ ನೀವು ನಿಮ್ಮ ಹಾಸ್ಟೆಲ್ ಲೈಫನ್ನು ನೆನಪಿಗ್ ತಂದ್ಕಳ್ಳಿ.
– ಎಮ್ಮಾರ್ಕೆ
💐💐💐💐💐
ತಾಯಿಯ ಒಡಲು-ಬಂಗಾರದ ಕಡಲು
ತಾಯಿಯು ಒಂದು ಪದವಾಗಿದ್ದು ಅದು ಸ್ವತಃ ಪರಿಪೂರ್ಣ ಪದವಾಗಿದೆ. ನಮ್ಮ ಅಸ್ತಿತ್ವಕ್ಕೆ ತಾಯಿಯೇ ಮೂಲ ಕಾರಣ. ತಾಯಿ ನಮ್ಮ ಜನ್ಮದಲ್ಲಿ ದೇವರ ಸಂಗಾತಿ. ನಾವು ದೇವರನ್ನು ನೋಡಿಲ್ಲ, ಮುಟ್ಟಿಲ್ಲ, ಆದರೆ ದೇವರನ್ನು ಕಂಡರೆ ಅದು ತಾಯಿಯಂತಾಗಬಹುದು.
ತಾಯಿಯೇ ಮೊದಲ ಗುರು ಎಂದು ನಮ್ಮ ಶಾಸ್ತ್ರಗಳಲ್ಲಿ ಹೇಳಲಾಗಿದೆ, ತಾಯಿಯ ಸೇವೆಯು ಎಲ್ಲಾ ದೇವರ ಸೇವೆ ಮಾಡಿದ ಪ್ರತಿಫಲವಾಗಿದೆ.
ಈ ಭೂಮಿಯ ಮೇಲೆ ದೇವರು ಎಲ್ಲಾ ಕಡೆ ಇರಲು ಅಸಾಧ್ಯವೆಂದು ತಿಳಿದು, ಪ್ರತಿ ಮನೆ ಮನೆಗೆ ಒಬ್ಬ ಮಹಾ ತಾಯಿಯನ್ನು ಕಲ್ಪಿಸಿದ. ಅವಳೇ ನಮ್ಮ ಜನ್ಮಕ್ಕೆ ಕಾರಣೀಭೂತರಾದ ಮಹಾ ತ್ಯಾಗಿ ಜನನಿ. ಒಮ್ಮೊಮ್ಮೆ ನಮ್ಮೊಂದಿಗಿರುವ ಎಲ್ಲಾ ಸಂಬಂಧಗಳು ಶೂನ್ಯವೆನಿಸಬಹುದು. ಆದರೆ ತಾಯಿಯ ಸಂಬಂಧಕ್ಕೆ ಮಿತಿಯೇ ಇಲ್ಲ. ಅದು ಒಂದು ರೀತಿಯ ಕರುಳು ಬಳ್ಳಿಯ ಸಂಬಂಧವಾದದ್ದರಿಂದ ಉಸಿರಿನ ಕೊನೆಯ ಘಳಿಗೆಯ ಆಚೆಗೂ ಮರೆಯದ ಸಂಬಂಧವಾಗಿದೆ. ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ ಎಂಬ ಗಾದೆ ಹೇಳುತ್ತದೆ ತಾಯಿಯ ಅಮೂಲ್ಯವಾದ ಸಂಬಂಧವನ್ನು. ಪ್ರತಿ ಮಗುವಿಗಾಗಿ ಚಿಂತಿಸುವ, ಯೋಚಿಸುವ ಆ ಮಗುವಿನ ಉಜ್ವಲ ಭವಿಷ್ಯಕ್ಕೆ ಹಗಲಿರುಳು ಎನ್ನದೆ ತನ್ನ ಜೀವನವನ್ನೇ ಮುಡಿಪಾಗಿಟ್ಟ ತಾಯಿಯ ಬಗ್ಗೆ ವರ್ಣಿಸಲು ಪದಗಳ ಕೊರತೆ ಬಹಳವಿದೆ. ದಿನನಿತ್ಯದ ಬೆಳಗಿನಿಂದ ರಾತ್ರಿಯವರೆಗಿನ ಮನೆಯ ಎಲ್ಲ ಕೆಲಸ ಕಾರ್ಯಗಳ ಜೊತೆಗೆ ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊತ್ತವಳು ತಾಯಿ. ಅದಕ್ಕಾಗಿಯೇ ಹೇಳಿದ್ದು “ಮಾತೃದೇವೋಭವ” ಎಂದು. ಈ ಭೂಮಿಯ ಮೇಲೆ ಬ್ರಹ್ಮ ಬರೆಯುವ ಹಣೆಬರಹವನ್ನು ತಾಯಿ ಏನಾದರೂ ಬರೆದಿದ್ದರೆ ಯಾವ ಕೆಟ್ಟ ಮಕ್ಕಳು ಕೂಡ ಹುಟ್ಟುತ್ತಿರಲಿಲ್ಲ. ತಾಯ್ತನ ಬಂದಮೇಲೆ ಹೆಣ್ಣು ಮಗಳು ದೇವರಾಗಿ ಕಾಣುವಳು.
ಅಮ್ಮಾ…. ಅದೆಷ್ಟು ಹಿತ ಈ ನುಡಿ ಭೂಮಿಗೆ ಬಿದ್ದಾಕ್ಷಣ ನಾ ಹೇಳಿದ್ದು ಆ ನೋವಿನಲ್ಲೂ ಅದೆಂತಹ ಸಾರ್ಥಕ ನಗು ಹೊರಲು ಭಾರವಿಲ್ಲ, ಹೆರುವ ಕಷ್ಟ ಕಷ್ಟವೇ ಅಲ್ಲ ಎಂದೆಣಿಸಿ ಜೀವ ಕೊಟ್ಟವಳು ಅಮ್ಮ. ತಾಯಿ ಎಂದರೆ ಆಕಾಶದಲ್ಲಿ ಮಿನುಗುತ್ತಾ ಬದುಕು ನೀಡುವ ಬೆಳಕು. ತಾಯಿ ಎಂದರೆ ಹೊಸ ಜೀವಿಯನ್ನು ಅಸ್ತಿತ್ವಕ್ಕೆ ತರುವವಳು ತನ್ನ ದೇಹವನ್ನು ಸಹ ತ್ಯಾಗ ಮಾಡುವ ತ್ಯಾಗಮಹಿ ಅವಳು. ತಾಯಿ ಎಂದರೆ ಎಲ್ಲ ನೋವುಗಳನ್ನು ಬದಿಗೊತ್ತಿ ಮಕ್ಕಳ ಭವಿಷ್ಯಕ್ಕೆ ಜೀವನ ಮುಡಿಪಾಗಿಟ್ಟ ತ್ಯಾಗಮಯಿ. ತಾಯಿ ಎಂದರೆ ತನಗೆ ಹಸಿವಿದ್ದರೂ ಹಸಿವಿಲ್ಲ ನೀವು ಊಟ ಮಾಡಿರಿ ಎಂದು ಹೇಳುವ ಮಾತೃದೇವತೆ ತಾಯಿ. ಒಂದು ವೇಳೆ ಅವಕಾಶವಿದ್ದರೆ ತನ್ನ ಜೀವಿತಾವಧಿಯ ಅರ್ಧ ಆಯುಷ್ಯವನ್ನೇ ಮಕ್ಕಳಿಗೆ ಮೀಸಲಿಡುವ ಕರುಣಾಮಯಿ. ತಾಯಿ ಎಂದರೆ ಎಲ್ಲೇ ಇರಿ ಹೇಗೇ ಇರಿ ಎಂದೆಂದಿಗೂ ಸುಖವಾಗಿ ನೆಮ್ಮದಿಯಿಂದ ಬದುಕಿರಿ ಎಂದು ಆಶೀರ್ವದಿಸುವ ಕಾಮಧೇನು. ತಾಯಿ ಎಂದರೆ ಸಾಕ್ಷಾತ್ ಕಣ್ಣಿಗೆ ಕಾಣುವ ದೇವರು. ನೆನಪಿರಲಿ ಮುಖದ ಕಣ್ಣಿಗೆ ಕಾಣುವ ಸಾವಿರ ದೇವರಿಗಿಂತ ಮನದ ಕಣ್ಣಿಗೆ ಕಾಣುವ ತಾಯಿ ಎಂಬ ಒಬ್ಬ ದೇವರೇ ಶ್ರೇಷ್ಠ. ತನಗೆ ಎಷ್ಟೇ ಕಷ್ಟವಿದ್ದರೂ ತನ್ನ ಮಕ್ಕಳು ಕೆಟ್ಟು ಹೋಗಬಾರದೆಂದು ಬೆಳೆಸುವ ಜವಾಬ್ದಾರಿಯ ವ್ಯಕ್ತಿ ತಾಯಿ. ಕವಿ ಹೇಳುವಂತೆ “ಪ್ರೀತಿ ಯಾವಾಗಲೂ ಗೆಲ್ಬೇಕು, ಗೆಲ್ಲೋ ಪ್ರೀತಿ ತಾಯಿಯ ಪ್ರೀತಿಯಾಗಬೇಕು. ಕಾರಣ ತಾಯಿಯ ಪ್ರೀತಿಗೆ ಯಾವತ್ತೂ ಸಾವೇ ಇಲ್ಲ”. ಅಂತಹ ಸಾವಿರದ ಪ್ರೀತಿಯನ್ನು ಪಡೆದ ನಾವೇ ಧನ್ಯರು. ಇದರೊಂದಿಗೆ ತಾಯಿಯನ್ನು ಪ್ರೀತಿ ಮತ್ತು ತ್ಯಾಗದ ಸಂಕೇತವೆಂದು ಪರಿಗಣಿಸಲಾಗಿದೆ.
ದೇವರ ಹೋಲಿಕೆಗೆ ಸರಿ ಸಾಟಿ, ದೇವರ ಪ್ರತಿ ರೂಪ ಹೊತ್ತವಳು ಜೀವ ಕೊಟ್ಟಳು ಜೀವನ ನಡೆಸುವಳು ತಾಯಿ. ದೇವರಿಗಿಂತ ದೊಡ್ಡವರು ತಾಯಿ, ಕಾರಣ ದೇವರಿಗೆ ಜನ್ಮ ಕೊಟ್ಟವಳು ತಾಯಿ. ರಾಮ,ಕೃಷ್ಣ, ಬಸವಣ್ಣ,ಬುದ್ಧ ಹಾಗೂ ಮಹಾವೀರ ಇವರೆಲ್ಲ ದೇವರೆಂದ ಮೇಲೆ, ಇವರಿಗೆ ಜನ್ಮ ಕೊಟ್ಟ ತಾಯಿ ಮಹಾನ್ ದೇವರು. ಅದಕ್ಕಾಗಿಯೇ ಹೇಳಿದ್ದು ತಾಯಿಯೇ ದೇವರೆಂದು.
ಯಾವ ಕವಿಯೂ ವರ್ಣಿಸಲಾಗದ, ಯಾವ ಚಿತ್ರಕಾರನು ಚಿತ್ರಿಸಲಾಗದ, ಯಾವ ಕತೆಗಾರನಿಗೂ ಬರೆಯಲಾಗದ, ಯಾರೂ ಊಹಿಸಲಾಗದ, ಯಾರೂ ಬಣ್ಣಿಸಲಾಗದ ವ್ಯಕ್ತಿತ್ವದ ರೂವಾರಿ ಯಾರಾದರೂ ಇದ್ದರೆ ಅದು ತಾಯಿ ಮಾತ್ರ.ಯಾರೇ ಏನೇ ಕಂಡು ಹಿಡಿದರೂ ಅವಳ ಎದೆಯ ಹಾಲಿಗಿಂತ ಅಮೃತವಿಲ್ಲ! ನಾ ಓದಿ ತಿಳಿದ ಭಾಷೆ ಬೇರೆ .ಭಾವವೊಂದೇ ಇನ್ನೂ ಸಂಶೋಧಿಸಿ ಕಂಡು ಹಿಡಿಯಿರಿ ಅವಳು ಯಾರಿಗೂ ನಿಲುಕದ ಮಹಾಜ್ಞಾನಿಯವಳು.
ಒಂಬತ್ತು ತಿಂಗಳು ಹೊತ್ತು ನೋವಿನಲ್ಲಿ ಹೆತ್ತು ಸುಮಾರು ವರ್ಷಗಳ ಕಾಲ ಲಾಲನೆ ಪಾಲನೆ ಮಾಡಿ ನಮ್ಮ ಕಾಲ ಮೇಲೆ ನಾವು ನಿಲ್ಲುವಂತೆ ಮಾಡಿದ ತಾಯಿಯನ್ನು ಎಂದೆಂದಿಗೂ ತಿರಸ್ಕರಿಸದೆ ಉಸಿರಿರೋವರೆಗೂ ತಾಯಿಯೇ ಸೇವೆ ಮಾಡಿ ಅವಳ ಪ್ರೀತಿಗೆ ಪಾತ್ರರಾಗೋಣ. ಎಷ್ಟೋ ಜನ ಮಕ್ಕಳಿಗೆ ತಾಯಿ ಇರುವುದಿಲ್ಲ, ಎಷ್ಟೋ ಜನ ತಾಯಂದಿರಿಗೆ ಮಕ್ಕಳು ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ನಾವೆಷ್ಟು ಪುಣ್ಯವಂತರು ಎಂಬುದನ್ನು ಯೋಚಿಸಬೇಕಾಗಿದೆ. ಭೂಮಿಯಲ್ಲಿರುವ ಎಲ್ಲಾ ಪ್ರೀತಿಯಲ್ಲಿ ಮೋಸವಿದೆ ಆದರೆ ತಾಯಿಯ ಪ್ರೀತಿಯಲ್ಲಿ ಮೋಸವಿಲ್ಲ. ಕರುಣೆ, ಮಮತೆ,ನಂಬಿಕೆ,ವಾತ್ಸಲ್ಯ ಮೇಲಾಗಿ ಭಾವನೆ ಇದೆ. ಮುಕ್ಕೋಟಿ ದೇವರಿಗೂ ಮಿಗಿಲಾದವಳು ಮಹಾತಾಯಿ. ಎಷ್ಟೇ ಜನ್ಮ ಹುಟ್ಟಿ ಬಂದರು ತಾಯಿಯ ಋಣ ತೀರಿಸಲಾಗದು. ಜಗತ್ತಿನಲ್ಲಿ ತಾಯಿಯ ಮಡಿಲಿಗಿಂತ ಪವಿತ್ರ ಸ್ಥಳವಿಲ್ಲ. ತಾಯಿಯ ಕೈಗಳ ಸ್ಪರ್ಶಕ್ಕಿಂತ ಬೇರೆ ಸಂತೋಷವಿಲ್ಲ. ತಾಯಿಯನ್ನು ಪ್ರೀತಿಸೋಣ. ಪೂಜಿಸೋಣ. ತಾಯಿಯ ಪ್ರೀತಿಯನ್ನು ಬೇರೆಯವರಿಗೆ ಹೋಲಿಸುವುದು ಸೂರ್ಯನ ಮುಂದೆ ದೀಪವನ್ನು ಬೆಳಗಿಸಿದಂತೆ. ತಾಯಿಯ ಪ್ರೀತಿಗೆ ಆಕಾಶದಷ್ಟು ಮಿತಿಯುoಟೆ ? ತಾಯಿಯ ಕರ್ತವ್ಯಕ್ಕೆ ದೇವರೇ ಕೈಮುಗಿದಿದ್ದು ಗೊತ್ತೇ? ಎಲ್ಲಾ ಸಂಬಂಧಗಳಿಗೂ ಕೇಂದ್ರ ಬಿಂದು ತಾಯಿ. “ತಾಯಿ” ಎನ್ನುವ ಎರಡು ಅಕ್ಷರಕ್ಕೆ ಸಾಕ್ಷಿಯಾದವಳು. ತಾಯಿಯ ಬಗ್ಗೆ ಎಷ್ಟೇ ವರ್ಣನೆ ಮಾಡಿದರೂ ಸಾಲದು.
ಶ್ರೀ ಮುತ್ತು ಯ. ವಡ್ಡರ
ಶಿಕ್ಷಕರು
(ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿರೇಮಳಗಾವಿ)
ಬಾಗಲಕೋಟ
💐💐💐💐💐
ವಿಶ್ವಾಸ್. ಡಿ .ಗೌಡ
ಸಕಲೇಶಪುರ
ಪಟ್ಟದಕಲ್ಲು (ವಿಶ್ವ ಪರಂಪರೆ ಸ್ಮಾರಕ)
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನಲ್ಲಿ ಮಲಪ್ರಭಾ ನದಿಯ ಎಡ ದಂಡೆಯಲ್ಲಿರುವ ಪಟ್ಟದಕಲ್ಲು ಚಾಲುಕ್ಯರ ಸಾಂಸ್ಕೃತಿಕ ರಾಜಧಾನಿಯಾಗಿತ್ತು. ಪಟ್ಟದಕಲ್ಲು ಬಾದಾಮಿಯಿಂದ 22 ಕಿ.ಮೀ. ಮತ್ತು ಐಹೊಳೆಯಿಂದ 13 ಕಿ.ಮೀ.
ಅಂತರದಲ್ಲಿದೆ. ಪಟ್ಟದ ಕಲ್ಲಿನಲ್ಲಿ ಉತ್ತರ ಭಾರತ ದೇವಾಲಯಗಳನ್ನು ಮತ್ತು ದಕ್ಷಿಣ ಭಾರತದ ದೇವಾಲಯಗಳು ಮತ್ತು ಚಾಲುಕ್ಯರ ವಾಸ್ತು ಶಿಲ್ಪ ಹೊಂದಿದೆ. ಅದಕ್ಕೆ ವಿಶ್ವ ಸಂಸ್ಥೆಯವರು ಪಟ್ಟದಕಲ್ಲನ್ನು ವಿಶ್ವ ಪರಂಪರಾ ಸ್ಮಾರಕಗಳ ಪಟ್ಟಿಯಲ್ಲಿ ಸೇರಿಸಿದೆ. ಕರ್ನಾಟಕದಲ್ಲಿ ಪಟ್ಟದಕಲ್ಲು ಮತ್ತು ಹಂಪಿ ವಿಶ್ವ ಪರಂಪರಾ ಸ್ಮಾರಕಗಳು.
_ಐತಿಹಾಸಿಕ ಹಿನ್ನೆಲೆ_
ಕ್ರಿ.ಶ. 2ನೇಯ ಶತಮಾನದಲ್ಲಿ ಭಾರತಕ್ಕೆ ಬಂದಿದ್ದ ಗ್ರೀಕ್ ಭೂಗೋಳ ತಜ್ಞ ಟಾಲೆಮಿ ತನ್ನ ‘ಉಜಠರಡಿಚಿಥಿ’ ಎಂಬ ಗ್ರಂಥದಲ್ಲಿ ಪಟ್ಟದಕಲ್ಲನ್ನು ಪೆಟ್ರಗಲ್” ಎಂದು ಕರೆದಿದ್ದಾನೆ. ನಂತರದ ಸಾಹಿತ್ಯ ಕೃತಿಗಳಲ್ಲಿ ಅದನ್ನು ಕಿಸುವೊಳಲ್ (ಕೆಂಪು ಮಣ್ಣಿನ ಕಣಿವೆ) ಅಥವಾ ಪಟ್ಟದ “ಕಿಸುವೊಳಲ್” ಅಥವಾ “ರಕ್ತಪುರ” ಎಂದು ವರ್ಣಿಸಲಾಗಿದೆ.
ಚಾಲುಕ್ಯ ಅರಸರು ಬಾದಾಮಿಯಲ್ಲಿ ಆಳ್ವಿಕೆ ಮಾಡಿದರೂ ಕೂಡಾ ಪಟ್ಟದಕಲ್ಲಿನಲ್ಲಿ ಪಟ್ಟಾಭಿಷಕ್ತರಾಗುತ್ತಿದ್ದರು ಏಕೆಂದರೆ ಇಲ್ಲಿ ಮಲಪ್ರಭಾ ನದಿಯು ದಕ್ಷಿಣವಾಹಿನಿಯಿಂದ
ಉತ್ತರವಾಹಿನಿಯಾಗಿ ಹರಿದಿರುವ ನದಿಯ ನೀರು ಪುಣ್ಯಜಲ ಇಲ್ಲಿ ಪಟ್ಟಾಭಿಷೇಕ ಮಾಡಿಕೊಂಡರೆ ಜೀವನದಲ್ಲಿ ದಿಗ್ವಿಜಯ ಸಾಧಿಸಬಹುದು ಮತ್ತು ಸಾಮಾಜ್ಯ ವಿಸ್ತರಣೆ ಮಾಡಬಹುದು ಎಂಬ ನಂಬಿಕೆಯಿಂದ ಪಟ್ಟಾಬಿಷೇಕ ಮಾಡಿಕೊಳ್ಳುತ್ತಿದ್ದರು.
ಯುವರಾಜರ ಪಟ್ಟಾಭಿಷೇಕ ನಡೆಯುವ ಸ್ಥಳವಾಗಿದ್ದರಿಂದ ಮುಂದೆ ಪಟ್ಟದಕಲ್ಲು ಎಂಬ ಹೆಸರು ಬಂದಿರಬಹುದು ಸ್ಥಳಿಯ ಒಂದು ಶಾಸನದಲ್ಲಿ ಇದನ್ನು ಕುಂತಲದೇಶವೆಂಬ ಕಾಂತೆಯ ಹಗೆಯಂತಿದ್ದ ಕಿಸುನಾಡಿಗೆ. ಕಿಸುವೊಳಾನ್ ಪಟ್ಟಣವು ಅಮೂಲ್ಯ ರತ್ನದ ಹಾಗಿತ್ತಿಂದು ಕರೆದಿರುತ್ತಾರೆ.
_ರಾಜಕೀಯ ಹಿನ್ನೆಲೆ_
ಕ್ರಿ. ಶ. 6 ನೆಯ ಶತಮಾನದಲ್ಲಿ ವಾತಾಪಿಯನ್ನು (ಬಾದಾಮಿ) ರಾಜಧಾನಿ ಮಾಡಿಕೊಂಡು ಪಶ್ಚಿಮ ಚಾಲುಕ್ಯ ವಂಶವನ್ನು ಸಂಸ್ಥಾಪಿಸಿದ ಒಂದನೆಯ ಪುಲಕೇಶಿಯು ಕರ್ನಾಟಕ ಚರಿತ್ರೆಯಲ್ಲಿ ಉಜ್ವಲ ಯುಗಕ್ಕೆ ನಾಂದಿ ಹಾಡಿದ ಪಲ್ಲವರ ದೊರೆಯಾದ ನರಸಿಂಹ ವರ್ಮನು ಇಮ್ಮಡಿ ಪುಲಕೇಶಿಯನ್ನು ಸೋಲಿಸಿ ಬಾದಾಮಿಯನ್ನು ತನ್ನ ಆಧೀನದಲ್ಲಿಟ್ಟುಕೊಂಡು “ವಾತಾಪಿಕೊಂಡ ಎಂಬ ಬಿರದನ್ನು ಧರಿಸಿದನು. ನಂತರ
ಇಮ್ಮಡಿ ಪುಲಕೇಶಿಯ ಮಗನಾದ ಮೊದಲನೆ ವಿಕ್ರಮಾದಿತ್ಯನು ಪಲ್ಲವರ ಆದೀನದಲ್ಲಿದ್ದು ಚಾಲುಕ್ಯ ಸಾಮ್ರಾಜ್ಯವನ್ನು ಪುನರ್ ಪ್ರತಿಷ್ಠಾಪಿಸಿದ ಕೀರ್ತಿಗೆ ಪಾತ್ರನಾದ ಮೊದಲನೆ ವಿಕ್ರಮಾದಿತ್ಯನು ವೈಷ್ಣವ ಧರ್ಮವನ್ನು ತ್ಯಜಿಸಿ, ಸುದರ್ಶನಾಚಾರ್ಯರಿಂದ ಶೈವದೀಕ್ಷೆ ಪಡೆದು “ಪರಮ ಮಹೇಶ್ವರ ಎಂಬ ಬಿರಿದನ್ನು ಧರಿಸಿದನು. ಇಲ್ಲಿಂದ ಶೈವ ಧರ್ಮ ಪ್ರಾರಂಭವಾಯಿತು. ಆದ್ದರಿಂದ ಪಟ್ಟದಕಲ್ಲಿನ ಎಲ್ಲಾ ದೇವಾಲಯಗಳು ಶೈವ ದೇವಾಲಯಗಳಾಗಿವೆ.
_ಸಾಂದಾರ ಮಾದರಿಯ ದೇವಾಲಯ_
ದೇವಾಲಯದ ಗರ್ಭಗೃಹದ ಸುತ್ತಲೂ ಪ್ರದಕ್ಷಣಾ ಪಥ ಹೊಂದಿರುವ ದೇವಾಲಯಕ್ಕೆ ಸಾಂದಾರ ಮಾದರಿಯಾಗಿದೆ.
_ನಿರಾಧಾರ ಮಾದರಿಯ ದೇವಾಲಯ_
ದೇವಾಲಯದ ಗರ್ಭಗೃಹದ ಸುತ್ತಲೂ ಪ್ರದಕ್ಷಣಾ ಪಥ ಹೊಂದಿರಲಾರದಂತಹ ದೇವಾಲಯವಾಗಿದೆ. ಪಟ್ಟದಕಲ್ಲಿನ ದೇವಾಲಯಗಳನ್ನು ಶೈವ ಮತ್ತು ಲಕ್ಷಣಗಳನ್ನು ನೋಡಿ ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ.
_1) ದ್ರಾವಿಡ – ವಿಮಾನ ದೇವಾಲಯಗಳು_
1) ಸಂಗಮೇಶ್ವರ
2) ವಿರುಪಾಕ್ಷ
3)ಮಲ್ಲಿಕಾರ್ಜುನ
4) ಜೈನ ನಾರಾಯಣ
…..ಮುಂದುವರೆಯುತ್ತದೆ
💐💐💐💐💐💐
ನಿಜವಾದ ಕಾರ್ಮಿಕರು ಯಾರು?
ಮೇ 1ನೇ ತಾರೀಕನ್ನು ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಸರ್ಕಾರವು ರಜೆ ಘೋಷಿಸುವ ಮೂಲಕ ಶ್ರಮಿಕ ವರ್ಗದ ಜನರಿಗೆ ಕೆಲಸದ ಒತ್ತಡದಿಂದ ಹೊರಬರಲು ಒಂದು ದಿನದ ವಿಶ್ರಾಂತಿಯನ್ನು ನೀಡಿದೆ.
ಆದರೆ ಚಿಂತಿಸಬೇಕಾದ ವಿಷಯವೆಂದರೆ ಈ ದಿನದ ರಜೆಯನ್ನು ಅನುಭವಿಸುತ್ತಿರುವ ವರು ಶ್ರಮಿಕರೇ? ಅಥವ ಇನ್ನಿತರ ಉದ್ಯೋಗಕ್ಕೆ ಒಳಪಡುವ ಉದ್ಯೋಗಸ್ಥರೇ?
ಕಚೇರಿಗಳಲ್ಲಿ ಕೆಲಸ ಮಾಡುವ ಜನರು, ಶಿಕ್ಷಣ ಸಂಸ್ಥೆಯ ಉದ್ಯೋಗಿಗಳು, ವಿದ್ಯಾರ್ಥಿಗಳು, ಬ್ಯಾಂಕಿನ ಸಿಬ್ಬಂದಿಯವರು, ಹಲವಾರು ಸಂಸ್ಥೆಗಳಲ್ಲಿ ದುಡಿಯುತ್ತಿರುವ ಜನರು ಶ್ರಮಿಕ ವರ್ಗಕ್ಕೆ ಸೇರಿದವರೇ? .
ಎಲ್ಲ ಸರ್ಕಾರಿ ರಜೆಯನ್ನು ಪಡೆದುಕೊಳ್ಳುವ ಮೇಲ್ಕಂಡ ವರ್ಗದ ಜನರು ಕಾರ್ಮಿಕರ ದಿನದ ರಜೆಯನ್ನು ಪಡೆದುಕೊಳ್ಳುವುದು ಹಾಸ್ಯಸ್ಪದ.
ಮೇ 1 ಕಾರ್ಮಿಕರ ದಿನ ಎಂದು ಸೂಚಿಸುವ ಭಿತ್ತಿಪತ್ರಗಳಲ್ಲಿ ಕಾರ್ಮಿಕರ ಕೆಲಸದ ಸಾಧನಗಳನ್ನು ಬಳಸಿ ಶುಭಾಶಯವನ್ನು ಕೋರುವ ನಾವು ಅಂತಹ ಸಾಧನಗಳಾದ ಸುತ್ತಿಗೆ, ಸ್ಪ್ಯಾನರ್, ಉಪಕರಣಗಳನ್ನು ಉಪಯೋಗಿಸಿ ಕೆಲಸ ಮಾಡುವ ಶ್ರಮಿಕ ವರ್ಗದ ಜನರು , ವಾಹನ ಚಾಲಕರು, ಕಟ್ಟಡ ಕಾರ್ಮಿಕರು ಇಂದಿನ ದಿನ ರಜೆ ಪಡೆದು ಕಾರ್ಮಿಕರ ದಿನವನ್ನು ಆಚರಿಸುತ್ತಿಲ್ಲ ಬದಲಿಗೆ ಕಾಯಕವೇ ಕೈಲಾಸ ಎಂಬಂತ್ತೆ ಇಂದು ಕೂಡ ಸುಡು ಬಿಸಿಲಿಗೆ ದಣಿವಿರದೆ ದುಡಿಯುತ್ತಿರುವುದನ್ನು ಕಾಣಬಹುದು.
ಹಾಗಾದರೆ ಕಾರ್ಮಿಕರ ದಿನದ ರಜೆ ಯಾರಿಗಾಗಿ ?
ಚುನಾವಣೆ ಸಮಯದಲ್ಲಿ ವೇತನ ಕಡಿತಗೊಳಿಸದೆ ಕಾರ್ಮಿಕರಿಗೆ ರಜೆ ನೀಡುವಂತೆ ಕಾರ್ಮಿಕರ ದಿನದಂದು ಕೂಡ ವೇತನ ನೀಡಿ ಒಂದು ದಿನದ ರಜೆ ಘೋಷಣೆ ಮಾಡಿದರೆ ಕಾರ್ಮಿಕರ ದಿನಾಚರಣೆಯು ಅರ್ಥಪೂರ್ಣವಾಗುವುದು.
ಜಯಂತಿ ರೈ
ಮಡಿಕೇರಿ
💐💐💐💐💐💐
ತಾಯಿಯ ಒಡಲು-ಬಂಗಾರದ ಕಡಲು
ತಾಯಿಯು ಒಂದು ಪದವಾಗಿದ್ದು ಅದು ಸ್ವತಃ ಪರಿಪೂರ್ಣ ಪದವಾಗಿದೆ. ನಮ್ಮ ಅಸ್ತಿತ್ವಕ್ಕೆ ತಾಯಿಯೇ ಮೂಲ ಕಾರಣ. ತಾಯಿ ನಮ್ಮ ಜನ್ಮದಲ್ಲಿ ದೇವರ ಸಂಗಾತಿ. ನಾವು ದೇವರನ್ನು ನೋಡಿಲ್ಲ, ಮುಟ್ಟಿಲ್ಲ, ಆದರೆ ದೇವರನ್ನು ಕಂಡರೆ ಅದು ತಾಯಿಯಂತಾಗಬಹುದು.
ತಾಯಿಯೇ ಮೊದಲ ಗುರು ಎಂದು ನಮ್ಮ ಶಾಸ್ತ್ರಗಳಲ್ಲಿ ಹೇಳಲಾಗಿದೆ, ತಾಯಿಯ ಸೇವೆಯು ಎಲ್ಲಾ ದೇವರ ಸೇವೆ ಮಾಡಿದ ಪ್ರತಿಫಲವಾಗಿದೆ.
ಈ ಭೂಮಿಯ ಮೇಲೆ ದೇವರು ಎಲ್ಲಾ ಕಡೆ ಇರಲು ಅಸಾಧ್ಯವೆಂದು ತಿಳಿದು, ಪ್ರತಿ ಮನೆ ಮನೆಗೆ ಒಬ್ಬ ಮಹಾ ತಾಯಿಯನ್ನು ಕಲ್ಪಿಸಿದ. ಅವಳೇ ನಮ್ಮ ಜನ್ಮಕ್ಕೆ ಕಾರಣೀಭೂತರಾದ ಮಹಾ ತ್ಯಾಗಿ ಜನನಿ. ಒಮ್ಮೊಮ್ಮೆ ನಮ್ಮೊಂದಿಗಿರುವ ಎಲ್ಲಾ ಸಂಬಂಧಗಳು ಶೂನ್ಯವೆನಿಸಬಹುದು. ಆದರೆ ತಾಯಿಯ ಸಂಬಂಧಕ್ಕೆ ಮಿತಿಯೇ ಇಲ್ಲ. ಅದು ಒಂದು ರೀತಿಯ ಕರುಳು ಬಳ್ಳಿಯ ಸಂಬಂಧವಾದದ್ದರಿಂದ ಉಸಿರಿನ ಕೊನೆಯ ಘಳಿಗೆಯ ಆಚೆಗೂ ಮರೆಯದ ಸಂಬಂಧವಾಗಿದೆ. ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ ಎಂಬ ಗಾದೆ ಹೇಳುತ್ತದೆ ತಾಯಿಯ ಅಮೂಲ್ಯವಾದ ಸಂಬಂಧವನ್ನು. ಪ್ರತಿ ಮಗುವಿಗಾಗಿ ಚಿಂತಿಸುವ, ಯೋಚಿಸುವ ಆ ಮಗುವಿನ ಉಜ್ವಲ ಭವಿಷ್ಯಕ್ಕೆ ಹಗಲಿರುಳು ಎನ್ನದೆ ತನ್ನ ಜೀವನವನ್ನೇ ಮುಡಿಪಾಗಿಟ್ಟ ತಾಯಿಯ ಬಗ್ಗೆ ವರ್ಣಿಸಲು ಪದಗಳ ಕೊರತೆ ಬಹಳವಿದೆ. ದಿನನಿತ್ಯದ ಬೆಳಗಿನಿಂದ ರಾತ್ರಿಯವರೆಗಿನ ಮನೆಯ ಎಲ್ಲ ಕೆಲಸ ಕಾರ್ಯಗಳ ಜೊತೆಗೆ ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊತ್ತವಳು ತಾಯಿ. ಅದಕ್ಕಾಗಿಯೇ ಹೇಳಿದ್ದು “ಮಾತೃದೇವೋಭವ” ಎಂದು. ಈ ಭೂಮಿಯ ಮೇಲೆ ಬ್ರಹ್ಮ ಬರೆಯುವ ಹಣೆಬರಹವನ್ನು ತಾಯಿ ಏನಾದರೂ ಬರೆದಿದ್ದರೆ ಯಾವ ಕೆಟ್ಟ ಮಕ್ಕಳು ಕೂಡ ಹುಟ್ಟುತ್ತಿರಲಿಲ್ಲ. ತಾಯ್ತನ ಬಂದಮೇಲೆ ಹೆಣ್ಣು ಮಗಳು ದೇವರಾಗಿ ಕಾಣುವಳು.
ಅಮ್ಮಾ…. ಅದೆಷ್ಟು ಹಿತ ಈ ನುಡಿ ಭೂಮಿಗೆ ಬಿದ್ದಾಕ್ಷಣ ನಾ ಹೇಳಿದ್ದು ಆ ನೋವಿನಲ್ಲೂ ಅದೆಂತಹ ಸಾರ್ಥಕ ನಗು ಹೊರಲು ಭಾರವಿಲ್ಲ, ಹೆರುವ ಕಷ್ಟ ಕಷ್ಟವೇ ಅಲ್ಲ ಎಂದೆಣಿಸಿ ಜೀವ ಕೊಟ್ಟವಳು ಅಮ್ಮ. ತಾಯಿ ಎಂದರೆ ಆಕಾಶದಲ್ಲಿ ಮಿನುಗುತ್ತಾ ಬದುಕು ನೀಡುವ ಬೆಳಕು. ತಾಯಿ ಎಂದರೆ ಹೊಸ ಜೀವಿಯನ್ನು ಅಸ್ತಿತ್ವಕ್ಕೆ ತರುವವಳು ತನ್ನ ದೇಹವನ್ನು ಸಹ ತ್ಯಾಗ ಮಾಡುವ ತ್ಯಾಗಮಹಿ ಅವಳು. ತಾಯಿ ಎಂದರೆ ಎಲ್ಲ ನೋವುಗಳನ್ನು ಬದಿಗೊತ್ತಿ ಮಕ್ಕಳ ಭವಿಷ್ಯಕ್ಕೆ ಜೀವನ ಮುಡಿಪಾಗಿಟ್ಟ ತ್ಯಾಗಮಯಿ. ತಾಯಿ ಎಂದರೆ ತನಗೆ ಹಸಿವಿದ್ದರೂ ಹಸಿವಿಲ್ಲ ನೀವು ಊಟ ಮಾಡಿರಿ ಎಂದು ಹೇಳುವ ಮಾತೃದೇವತೆ ತಾಯಿ. ಒಂದು ವೇಳೆ ಅವಕಾಶವಿದ್ದರೆ ತನ್ನ ಜೀವಿತಾವಧಿಯ ಅರ್ಧ ಆಯುಷ್ಯವನ್ನೇ ಮಕ್ಕಳಿಗೆ ಮೀಸಲಿಡುವ ಕರುಣಾಮಯಿ. ತಾಯಿ ಎಂದರೆ ಎಲ್ಲೇ
ಇರಿ ಹೇಗೇ ಇರಿ ಎಂದೆಂದಿಗೂ ಸುಖವಾಗಿ ನೆಮ್ಮದಿಯಿಂದ ಬದುಕಿರಿ ಎಂದು ಆಶೀರ್ವದಿಸುವ ಕಾಮಧೇನು. ತಾಯಿ ಎಂದರೆ ಸಾಕ್ಷಾತ್ ಕಣ್ಣಿಗೆ ಕಾಣುವ ದೇವರು. ನೆನಪಿರಲಿ ಮುಖದ ಕಣ್ಣಿಗೆ ಕಾಣುವ ಸಾವಿರ ದೇವರಿಗಿಂತ ಮನದ ಕಣ್ಣಿಗೆ ಕಾಣುವ ತಾಯಿ ಎಂಬ ಒಬ್ಬ ದೇವರೇ ಶ್ರೇಷ್ಠ. ತನಗೆ ಎಷ್ಟೇ ಕಷ್ಟವಿದ್ದರೂ ತನ್ನ ಮಕ್ಕಳು ಕೆಟ್ಟು ಹೋಗಬಾರದೆಂದು ಬೆಳೆಸುವ ಜವಾಬ್ದಾರಿಯ ವ್ಯಕ್ತಿ ತಾಯಿ. ಕವಿ ಹೇಳುವಂತೆ “ಪ್ರೀತಿ ಯಾವಾಗಲೂ ಗೆಲ್ಬೇಕು, ಗೆಲ್ಲೋ ಪ್ರೀತಿ ತಾಯಿಯ ಪ್ರೀತಿಯಾಗಬೇಕು. ಕಾರಣ ತಾಯಿಯ ಪ್ರೀತಿಗೆ ಯಾವತ್ತೂ ಸಾವೇ ಇಲ್ಲ”. ಅಂತಹ ಸಾವಿರದ ಪ್ರೀತಿಯನ್ನು ಪಡೆದ ನಾವೇ ಧನ್ಯರು. ಇದರೊಂದಿಗೆ ತಾಯಿಯನ್ನು ಪ್ರೀತಿ ಮತ್ತು ತ್ಯಾಗದ ಸಂಕೇತವೆಂದು ಪರಿಗಣಿಸಲಾಗಿದೆ.
ದೇವರ ಹೋಲಿಕೆಗೆ ಸರಿ ಸಾಟಿ, ದೇವರ ಪ್ರತಿ ರೂಪ ಹೊತ್ತವಳು ಜೀವ ಕೊಟ್ಟಳು ಜೀವನ ನಡೆಸುವಳು ತಾಯಿ. ದೇವರಿಗಿಂತ ದೊಡ್ಡವರು ತಾಯಿ, ಕಾರಣ ದೇವರಿಗೆ ಜನ್ಮ ಕೊಟ್ಟವಳು ತಾಯಿ. ರಾಮ,ಕೃಷ್ಣ, ಬಸವಣ್ಣ,ಬುದ್ಧ ಹಾಗೂ ಮಹಾವೀರ ಇವರೆಲ್ಲ ದೇವರೆಂದ ಮೇಲೆ, ಇವರಿಗೆ ಜನ್ಮ ಕೊಟ್ಟ ತಾಯಿ ಮಹಾನ್ ದೇವರು. ಅದಕ್ಕಾಗಿಯೇ ಹೇಳಿದ್ದು ತಾಯಿಯೇ ದೇವರೆಂದು.
ಯಾವ ಕವಿಯೂ ವರ್ಣಿಸಲಾಗದ, ಯಾವ ಚಿತ್ರಕಾರನು ಚಿತ್ರಿಸಲಾಗದ, ಯಾವ ಕತೆಗಾರನಿಗೂ ಬರೆಯಲಾಗದ, ಯಾರೂ ಊಹಿಸಲಾಗದ, ಯಾರೂ ಬಣ್ಣಿಸಲಾಗದ ವ್ಯಕ್ತಿತ್ವದ ರೂವಾರಿ ಯಾರಾದರೂ ಇದ್ದರೆ ಅದು ತಾಯಿ ಮಾತ್ರ.ಯಾರೇ ಏನೇ ಕಂಡು ಹಿಡಿದರೂ ಅವಳ ಎದೆಯ ಹಾಲಿಗಿಂತ ಅಮೃತವಿಲ್ಲ! ನಾ ಓದಿ ತಿಳಿದ ಭಾಷೆ ಬೇರೆ .ಭಾವವೊಂದೇ ಇನ್ನೂ ಸಂಶೋಧಿಸಿ ಕಂಡು ಹಿಡಿಯಿರಿ ಅವಳು ಯಾರಿಗೂ ನಿಲುಕದ ಮಹಾಜ್ಞಾನಿಯವಳು.
ಒಂಬತ್ತು ತಿಂಗಳು ಹೊತ್ತು ನೋವಿನಲ್ಲಿ ಹೆತ್ತು ಸುಮಾರು ವರ್ಷಗಳ ಕಾಲ ಲಾಲನೆ ಪಾಲನೆ ಮಾಡಿ ನಮ್ಮ ಕಾಲ ಮೇಲೆ ನಾವು ನಿಲ್ಲುವಂತೆ ಮಾಡಿದ ತಾಯಿಯನ್ನು ಎಂದೆಂದಿಗೂ ತಿರಸ್ಕರಿಸದೆ ಉಸಿರಿರೋವರೆಗೂ ತಾಯಿಯೇ ಸೇವೆ ಮಾಡಿ ಅವಳ ಪ್ರೀತಿಗೆ ಪಾತ್ರರಾಗೋಣ. ಎಷ್ಟೋ ಜನ ಮಕ್ಕಳಿಗೆ ತಾಯಿ ಇರುವುದಿಲ್ಲ, ಎಷ್ಟೋ ಜನ ತಾಯಂದಿರಿಗೆ ಮಕ್ಕಳು ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ನಾವೆಷ್ಟು ಪುಣ್ಯವಂತರು ಎಂಬುದನ್ನು ಯೋಚಿಸಬೇಕಾಗಿದೆ. ಭೂಮಿಯಲ್ಲಿರುವ ಎಲ್ಲಾ ಪ್ರೀತಿಯಲ್ಲಿ ಮೋಸವಿದೆ ಆದರೆ ತಾಯಿಯ ಪ್ರೀತಿಯಲ್ಲಿ ಮೋಸವಿಲ್ಲ. ಕರುಣೆ, ಮಮತೆ,ನಂಬಿಕೆ,ವಾತ್ಸಲ್ಯ ಮೇಲಾಗಿ ಭಾವನೆ ಇದೆ. ಮುಕ್ಕೋಟಿ ದೇವರಿಗೂ ಮಿಗಿಲಾದವಳು ಮಹಾತಾಯಿ. ಎಷ್ಟೇ ಜನ್ಮ ಹುಟ್ಟಿ ಬಂದರು ತಾಯಿಯ ಋಣ ತೀರಿಸಲಾಗದು. ಜಗತ್ತಿನಲ್ಲಿ ತಾಯಿಯ ಮಡಿಲಿಗಿಂತ ಪವಿತ್ರ ಸ್ಥಳವಿಲ್ಲ. ತಾಯಿಯ ಕೈಗಳ ಸ್ಪರ್ಶಕ್ಕಿಂತ ಬೇರೆ ಸಂತೋಷವಿಲ್ಲ. ತಾಯಿಯನ್ನು ಪ್ರೀತಿಸೋಣ. ಪೂಜಿಸೋಣ. ತಾಯಿಯ ಪ್ರೀತಿಯನ್ನು ಬೇರೆಯವರಿಗೆ ಹೋಲಿಸುವುದು ಸೂರ್ಯನ ಮುಂದೆ ದೀಪವನ್ನು ಬೆಳಗಿಸಿದಂತೆ. ತಾಯಿಯ ಪ್ರೀತಿಗೆ ಆಕಾಶದಷ್ಟು ಮಿತಿಯುoಟೆ ? ತಾಯಿಯ ಕರ್ತವ್ಯಕ್ಕೆ ದೇವರೇ ಕೈಮುಗಿದಿದ್ದು ಗೊತ್ತೇ? ಎಲ್ಲಾ ಸಂಬಂಧಗಳಿಗೂ ಕೇಂದ್ರ ಬಿಂದು ತಾಯಿ. “ತಾಯಿ” ಎನ್ನುವ ಎರಡು ಅಕ್ಷರಕ್ಕೆ ಸಾಕ್ಷಿಯಾದವಳು. ತಾಯಿಯ ಬಗ್ಗೆ ಎಷ್ಟೇ ವರ್ಣನೆ ಮಾಡಿದರೂ ಸಾಲದು.
ಶ್ರೀ ಮುತ್ತು ಯ. ವಡ್ಡರ
ಶಿಕ್ಷಕರು
(ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿರೇಮಳಗಾವಿ)
ಬಾಗಲಕೋಟ
💐💐💐💐💐
ಅದ್ವೈತ ಸಿದ್ಧಾಂತ ಸನಾತನ ಧರ್ಮವನ್ನು ಎತ್ತಿಹಿಡಿದ ಶಂಕರರು
“”””””””””””””””””””””
ಕೇರಳದ ಕಾಲಡಿಯಲ್ಲಿ ಜನಿಸಿದ ಕರ್ಮಯೋಗಿ.
ಹಿಂದೂ ಸನಾತನ ಧರ್ಮದ ಪ್ರತಿಪಾದಕರು. ಮಠ ಮಂದಿರಗಳ ಪುನರುತ್ಥಾನದ ಆಧ್ಯಾತ್ಮಿಕ, ತತ್ವಸಾರಗಳ ಭಗವತ್ಪಾದರು.
ಭಾರತದ ಔನ್ನತ್ಯಕ್ಕೆ, ಹಿರಿಮೆಗೆ ತಕ್ಕಂತೆ ಬದುಕುವಂತೆ ಜನತೆಗೆ ಉಪದೇಶ ಮಾಡಿದ ಮಹಾನ್ ವ್ಯಕ್ತಿತ್ವವುಳ್ಳವರು ಶಂಕರಾಚಾರ್ಯರು.ಕಾಲ್ನಡಿಗೆಯಲ್ಲೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಸಂಚರಿಸಿದ ಸಂತರು,ವಿರಾಗಿಗಳು.ಆತ್ಮಜ್ಞಾನದ ಅರಿವನ್ನು ಭಾರತಕ್ಕೆ ಬೋಧಿಸುತ್ತ ದೇಶದ ನಾಲ್ಕು ದಿಕ್ಕುಗಳಲ್ಲೂ ಮಠ ಮಂದಿರಗಳನ್ನು ಸ್ಥಾಪಿಸಿದರು.ಚಿತ್ತಶುದ್ಧಿಗಾಗಿ ಕರ್ಮವನ್ನು ಮಾಡುತ್ತ ಭಕ್ತಿಮಾರ್ಗ ದಲ್ಲಿ ನಡೆಯಿರಿ ಎಂಬುದು ಅವರ ಬೋಧನೆಯಾಗಿತ್ತು.ಹಲವಾರು ಶಿಷ್ಯರು ಇವರ ಅನುಯಾಯಿಗಳು ಆಗಿದ್ದರು.ಶಿಷ್ಯನ ಜ್ಞಾನಾರ್ಜನೆಯು ಫಲಿಸಬೇಕಾದರೆ ಗುರುವಿನಲ್ಲಿ ನಂಬಿಕೆ ಮತ್ತು ಭಕ್ತಿ ಇರಬೇಕೆಂದು ಉಪದೇಶವಿತ್ತರು.
ಮನುಷ್ಯರು ಪ್ರಪಂಚದಲ್ಲಿ ಹೇಗೆ ನೈತಿಕತೆಯಿಂದ ಬದುಕಬೇಕು ಎಂಬದನ್ನು ತಿಳಿಸಿದ್ದಾರೆ. ನಮ್ಮ ದುಡಿಮೆಯ ಫಲವಾಗಿ ಎಷ್ಟನ್ನು ಸಂಪಾದಿಸುತ್ತೇವೆಯೋ ಅಷ್ಟರಲ್ಲಿ ನಾವು ತೃಪ್ತಿ ಹಾಗೂ ಸಂತೋಷದಿಂದ ಬಾಳಬೇಕೆನ್ನುವುದು ಅವರ ನೀತಿಯಾಗಿದೆ. ಮಾನವನ ಕಲ್ಪನೆಗಳಿಗೆ ಅಶೋತ್ತರಗಳಿಗೆ ಮಿತಿ ಇಲ್ಲದಿದ್ದರೆ ಆಶೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳದಿದ್ದರೆ ಅದಕ್ಕೆ ಅಂತ್ಯವೇ ಇರುವುದಿಲ್ಲ. ಬಯಕೆಗಳನ್ನು ಈಡೇರಿಸುತ್ತಾ ಹೋದಂತೆ ಅವು ವೃದ್ಧಿಯಾಗುತ್ತಲೇ ಇರುತ್ತವೆ. ಅತಿಯಾದಾಗ ಬಾಹ್ಯ ವಸ್ತುಗಳು ನಮ್ಮ ಶಾಂತಿಗೆ ಭಂಗ ತರುತ್ತವೆ. ಮನುಷ್ಯ ಜೀವನದಲ್ಲಿ ತೃಪ್ತಿ ಸಂತೋಷವನ್ನು ಬಯಸುತ್ತಾನೆ ಎಂಬುದು ಸಹಜ. ಹಣ ನಮಗೆ ಲೌಕಿಕ ಸುಖ ಸಂತೋಷಗಳನ್ನು ಒದಗಿಸಬಲ್ಲದು. ನಮ್ಮ ಬಯಕೆಗಳೆಲ್ಲಾ ಈಡೇರಿದವು, ಎನ್ನುವ ತೃಪ್ತಿ ದೊರೆಯುವುದು, ತಾತ್ಕಾಲಿಕವಷ್ಟೇ. ಐಶ್ವರ್ಯದ ದಾಹ ಮನುಷ್ಯನನ್ನು ಎಂತಹ ಕೆಳಮಟ್ಟಕ್ಕೂ ನೀಚತನಕ್ಕೂ ಎಡಮಾಡಿ ಕೊಡುತ್ತದೆ.ಮನುಷ್ಯ ಸಂಪಾದಿಸಲು ಶ್ರಮ ಪಡಲೇಬೇಕು. ಸಂಪಾದಿಸಿದುದನ್ನು ಕಾಪಾಡಿಕೊಳ್ಳಲು ತುಂಬಾ ವಿವೇಕ ಉಳ್ಳವರಾಗಬೇಕು. ಕಷ್ಟಪಟ್ಟು ಕೂಡಿಟ್ಟ ಹಣ ಆಸ್ತಿಯನ್ನಾಗಲಿ ಕಳೆದುಕೊಂಡಾಗ ವ್ಯಥೆಯಿಂದ ಬಳಲುತ್ತೇವೆ.ಮೂಢಮತಿಯಾದ ಮಾನವನನ್ನು ಇಂದು ಆಳುತ್ತಿರುವುದು ಹಣವೆಂದಿದ್ದಾರೆ.
“ನಾನು ನನ್ನದೆಂಬ ದಾಹವ ಬಿಡು ಮೂಢ,ನಿಜವೇನೆಂಬುದ ಚಿಂತಿಸು ಮನದಿ, ಏನನ್ನು ಗಳಿಸಿದೆ ಅದರಿಂದಲೆ ನೀ,ಪಡೆದುಕೂ ನೆಮ್ಮದಿ ಸಂತೋಷವನು,
ಅವರು ರಚಿಸಿದ ದಿವ್ಯಗ್ರಂಥ “ಭಜಗೋವಿದಂ” ನಲ್ಲಿ ಶಂಕರಾಚಾರ್ಯರು ವ್ಯಾಖ್ಯಾನಿಸಿದ್ದಾರೆ. ಅನೇಕ ಸೋತ್ರಗಳು,ಲಹರಿ,ಉಪನಿಷತ್ತುಗಳನ್ನು ರಚಿಸಿದ್ದಾರೆ.
ಬಾಹ್ಯವಸ್ತುಗಳ ಬೆನ್ನತ್ತಿ ಕಾಲವನ್ನು ವ್ಯರ್ಥಮಾಡಿಕೊಳ್ಳಬೇಡ. ನಿತ್ಯ ಸತ್ಯವಾದ ಗೋವಿಂದನನ್ನು ಭಜಿಸು. ಆತ್ಮದೊಳಗೆ ಭಗವಂತನನ್ನು ಕಾಣು. ಪ್ರಯೋಜನಕಾರಿಯಲ್ಲದ ಐಹಿಕ ಸಂಪತ್ತಿಗಾಗ,ಕೀರ್ತಿಗಾಗಿ ಮತ್ತು ಕ್ಷಣಿಕ ಸುಖಕ್ಕಾಗಿ ನಿನ್ನ ಅಮೂಲ್ಯವಾದ ಕಾಲವನ್ನು ವ್ಯರ್ಥ ಮಾಡಿಕೊಳ್ಳಬೇಡ ಎಂದಿದ್ದಾರೆ. ಮನಸ್ಸನ್ನು ರಂಜಿಸುವ ವಿಷಯ ವಿಕಾರಗಳಿಂದ ಬಿಡುಗಡೆಗೊಂಡಾಗ ಮನಸ್ಸು ಅಲೌಕಿಕ ಶಾಂತಿ ಸಹನೆಯ ಕಡೆಗೆ ಜಾಗೃತವಾಗುತ್ತದೆ. ಹಾಗೆಂದು ಲೋಕದ ಉಪಯುಕ್ತ ವಸ್ತುಗಳನ್ನು ಅಲ್ಲಗೆಳೆಯಲಾಗದು. ಯಾವುದೇ ವಸ್ತುಗಳ ವ್ಯಾಮೋಹ ವಿಚಾರದಲ್ಲಿ ಮನಸ್ಸು ವಿವೇಕ ಹಾಗೂ ಪರಿಶುದ್ಧವಾಗಿರಬೇಕು. ಈ ಮಾಯೆ ಎಂಬ ಮಬ್ಬು ಯಾವುದಾದರೂ ರೂಪದಲ್ಲಿ ನಮ್ಮನ್ನು ಸಿಲುಕಿಸಿ ಬಿಡುತ್ತದೆ. ಅವುಗಳನ್ನು ಪಡೆಯುವ ಪ್ರಯತ್ನದಲ್ಲಿ ನಮ್ಮ ಶಕ್ತಿಯನೆಲ್ಲ ವಿನಯೋಗಿಸುತ್ತೇವೆ.ಸುಖವಾಗಿರಲು ಆಸೆಯನ್ನು ತ್ಯಜಿಸು. ಇತರರ ಸಿರಿಗೆ ಆಸೆ ಪಡದಿರು ಎಂದು ಹೇಳಿದ್ದಾರೆ.ಆಸೆಯೇ ದುಃಖಕ್ಕೆ ಮೂಲವೆಂದು ಬುದ್ಧನು ಕೂಡ ಜಗತ್ತಿಗೆ ಸಾರಿದ್ದಾನೆ.
ಸಾಮಾನ್ಯವಾಗಿ ಆನೆ ಹುಲಿ ಜಿಂಕೆ ಮುಂತಾದ ಪ್ರಾಣಿಗಳು ಸತ್ತ ಮೇಲು ಚರ್ಮ,ದಂತ, ಕೊಂಬು ಅವುಗಳ ದೇಹದಿಂದ ಸ್ವಲ್ಪ ಭಾಗವಾದರೂ ಪ್ರಯೋಜನಕ್ಕೆ ಬರಬಹುದು.ಆದರೆ ಮನುಷ್ಯನ ಸಾವಿನ ನಂತರ ಸುಟ್ಟ ಬೂದಿಯಷ್ಟೆ, ಆತ್ಮ ಶೂನ್ಯದಲ್ಲಿ ಲೀನವಾಗುತ್ತದೆ.ಆದ್ದರಿಂದ ಈ “ನಶ್ವರ ದೇಹದ” ವ್ಯಾಮೋಹವನ್ನು ಬಿಟ್ಟು ಮಹತ್ವದ ಸಾಧನೆಯತ್ತ ತೊಡಗಿಸಿಕೊಂಡು ಜೀವಜನ್ಮದ ಸಾಫಲ್ಯವನ್ನು ಹೊಂದು ಎಂಬ ಸಿದ್ಧಾಂತದ ಬದ್ದನಿಲುವಿನ ಗುರುವಂದ್ಯರು ಶಂಕರಾಚಾರ್ಯರು
“ಬಾಲಸ್ತಾವತ್,ಕ್ರೀಡಾಸಕ್ತ,ಸ್ತರುಣಸ್ತಾವತ್ ,ತರುಣೀಸಕ್ತ,ವೃದ್ಧಸ್ತಾವತ್ ಚಿಂತಾಸಕ್ತ,ಪರಮೇ ಬ್ರಹ್ಮಣಿ ಕೋಪಿನ ಸಕ್ತ,ಎಂದಿದ್ದಾರೆ.”
ಬಾಲ್ಯದಲ್ಲಿ ಆಟೋಟದಲ್ಲಿ ಚಪಲ,
ಯೌವನದಲ್ಲಿ ಯುವತಿಯರ ಚಪಲ,ವೃದ್ಧಾಪ್ಯದೊಳು ಚಿಂತೆಯೆಂಬ ಸಂತೆ,ಇರದೊಬ್ಬರಿಗೂ ಪರಬ್ರಹ್ಮನ ಚಿಂತೆ, ಮನುಷ್ಯ ಲೌಕಿಕ ಚಿಂತೆಯಲ್ಲೆ ಸದಾ ಮುಳುಗಿದ್ದಾನೆಂದು ಶಂಕರರು ಉಲ್ಲೇಖಿಸಿದ್ದಾರೆ.ಹೆಣ್ಣು ಹೊನ್ನು ಮಣ್ಣಿಗಾಗಿ ಮನುಷ್ಯ ಇಂದು ಹೊಡದಾಡಿ ಜೀವನವನ್ನೆ ಒತ್ತೆಯಿಡುತ್ತಿದ್ದಾನೆ.
ಸಂಸಾರವೆಂಬುದು ಸರ್ವವಿಧ ಪರೀಕ್ಷೆಗಳಿಗೂ ಕಷ್ಟಗಳಿಗೂ ಒಂದು ರಂಗಭೂಮಿಯಿದ್ದಂತೆ.ಬದುಕೆಂದು ನಿಂತ ನೀರಲ್ಲ.ಪ್ರತಿಯೊಬ್ಬರು ಸುಖ ಬಾಳ್ವೆ ಆರೋಗ್ಯ ಸಂತೋಷವಾಗಿರಬೇಕೆಂದು ಆಶಿಸುವುದು ತಪ್ಪಲ್ಲ.ಆದರೆ ಅದೇ ಜೀವನದ ಗುರಿಯಲ್ಲ.ಈ ಜಗತ್ತೆ ಒಂದು ಕಲಾಕ್ಷೇತ್ರ.ಸಂಸಾರಕ್ಕಂಟಿಯು ಅಂಟದಂತೆ ಸಾಮಾಜಕ್ಕೆ ಆದರ್ಶವಾಗಿ ಸಜ್ಜನರಾಗಿ ಬಾಳಬೇಕೆಂದು ಅವರ ಆಶಯವಾಗಿದೆ.
“ಸತಿ ನಿನಗಾರು ಸುತ ನಿನಗಾರು? ಅತಿ ವೈಚಿತ್ರ್ಯದ ಸಂಸಾರವಿದು,
ನೀನಾರೆಲ್ಲಿಂದಿಲ್ಲಿಗೆ ಬಂದೆ
ಎಂಬುದ ನೀ ಚಿಂತಿಸು ಮನುಜನೆ”ಎಂಬ ಅರಿವಿನ ನುಡಿಗಳನ್ನೇ ಜಗತ್ತಿಗೆ ಬಿತ್ತಿದ್ದಾರೆ, ಶಂಕರ ಗುರುವರ್ಯರು “.ಭಜಗೋವಿಂದಂ” ಶಂಕರಾಚಾರ್ಯರ ಕೃತಿಗಳಲ್ಲಿ ಅತ್ಯಂತ ಶ್ರೇಷ್ಠವಾದ ಕೃತಿ.ಸರಳವಾಗಿ ವೇದಾಂತ ತತ್ವಗಳನ್ನು ಇದರಲ್ಲಿ ನಿರೂಪಿಸಿದ್ದಾರೆ.
ಆಧ್ಯಾತ್ಮ ಅನುಭಾವಿಗಳ ತತ್ವ ನೀತಿಯುಕ್ತ ಸಂದೇಶ ಸನಾತನ ಧರ್ಮವನ್ನು ಪಾಲಿಸುವುದು ಗೌರವಿಸುವುದು ಸಂಸ್ಕಾರವನ್ನು ಉಳಿಸುವುದು ಇಂದಿನ ಶ್ರೇಷ್ಠ ಸಮಾಜದ ಉನ್ನತಿಗೆ ಅಗತ್ಯವಾಗಿ ದೆ.ಪರಿಶುದ್ದ ಮಾನವೀಯತೆಯ ಅತ್ಯುನ್ನತ ಮಟ್ಟಕ್ಕೇರಲು ಆಧ್ಯಾತ್ಮ ಶಕ್ತಿಯತ್ತ,ಶಾಂತಿಯೆಡೆಗೆ ಸಹಮಾನವರು ಮನಸ್ಸನ್ನು ವಿವೇಕದತ್ತ ಅನುಗೊಳಿಸಬೇಕಿದೆ.ತಾತ್ವಿಕ ವೈಚಾರಿಕ ಚಿಂತನಶೀಲರಾಗಿ ಆಲೋಚಿಸಬೇಕಾಗಿದೆ.
ಯಶೋಧ ರಾಮಕೃಷ್ಣ ಮೈಸೂರು
ಲೇಖಕಿ
💐💐💐💐💐
ಬಲೆ ಮಗನೇ ನೀನು ಛಲಗಾರ
ತಾಯಿಯ ಈ ಸ್ಫೂರ್ತಿದಾಯಕವಾದ ಮಾತಿನಿಂದ ತಂದೆಯನ್ನು ಕಳೆದುಕೊಂಡೆ ಎಂದು ಚಿಂತಿಸದೆ ಮನೆ ಜವಾಬ್ದಾರಿಯನ್ನು ತನ್ನ 13ನೇ ವಯಸ್ಸಿನಲ್ಲಿ ಹೊತ್ತುಕೊಂಡು ನಾಲ್ಕಾರು ಎಮ್ಮೆಗಳನ್ನು ಸಾಕಿ ತನ್ನ ಕುಟುಂಬಕ್ಕೆ ನೆರವಾಗುತ್ತಿದ್ದ. ಪ್ರತಿದಿನ ಮುಂಜಾನೆ ಎದ್ದು ಕೂಡಲೇ ದನಕರುಗಳಿಗೆ ಮೇವು ಹುಡುಕಾಟದಲ್ಲಿ ಜೀವನವೇ ಸಾಕೆನಿಸುತ್ತಿತ್ತು ಏಕೆಂದರೆ ಸ್ವಂತ ಜಮೀನು ಇಲ್ಲ ಯಾರ್ ಹೊಲಕ್ಕೆ ಹೋದರೆ ಯಾರು ಬರುತ್ತಾರೋ ಎಂಬೆಲ್ಲ ಆತಂಕದಲ್ಲೇ ಜೀವನ ಸಾಗಿಸುತಿದ್ದ. ಚಿಕ್ಕ ವಯಸ್ಸಿನಲ್ಲಿ ಜವಾಬ್ದಾರಿಗಳು ಹೆಚ್ಚಿದಂತೆಲ್ಲಾ ಮುಖದ ಮೇಲಿನ ಮಂದಹಾಸಗಳು ಕುಗ್ಗುತ್ತಾ ತೊಡಗಿದವು. ಇದೇನಪ್ಪ ಜೀವನ ಈ ನರಕದ ಜೀವನ ಯಾರಿಗೂ ಬರಬಾರದು ಎಂದು ಯಾರು ಇಲ್ಲದ ಸ್ಥಳಕ್ಕೆ ಹೋಗಿ ಕಣ್ಣೀರು ಚಿಮ್ಮಿಸುತಿದ್ದ.ಆಗ ಅವನು 8ನೇ ತರಗತಿ ಓದುತಿದ್ದ ಸರದಿಯ ಗೆಳೆಯರು ಮನಸ್ಸಿಗೆ ಬಂದಂತೆ ಕುಣಿಯುವುದು ನಲಿಯುವುದು ಮೋಜು ಮಸ್ತಿಯಲ್ಲಿ ತೊಡುವುದು ನೋಡಿದಾಗೆಲ್ಲ ಕಣ್ಣಲ್ಲಿ ನೀರು ಜಾರುವುದು 9ನೇ ತರಗತಿಗೆ ಬಂದಾಗ ತನ್ನಿಬ್ಬರ ಅಕ್ಕಂದಿಯರನ್ನು ವಿವಾಹ ಮಾಡಿಕೊಡುವುದು ಮತ್ತು ತನ್ನ ತಂಗಿಯನ್ನು ಚೆನ್ನಾಗಿ ಓದಿಸುವುದು ಇವನ ಹೆಗಲ ಮೇಲೆ ಬಿದಿತು ಈ ಪುಟ್ಟ ಬಾಲಕನ ಜವಾಬ್ದಾರಿಗಳನ್ನು ಕಂಡರೆ ಎಂತಹ ಕಟುಕನಿಗೂ ಕಣ್ಣಲ್ಲಿ ನೀರು ಬರುತ್ತದೆ ಒಬ್ಬನೇ ಮಗ ಸುಖದ ಸಪ್ಪತ್ತಿಗೆಯಲ್ಲಿ ಬೆಳೆಯ ಬೇಕಾದ ಮಗ ಚಿಕ್ಕ ವಯಸ್ಸಿನಲ್ಲೇ ಮನೆ ಜವಾಬ್ದಾರಿ ಹೊತ್ತನೆಂದು ತಾಯಿ ಮನದೊಳಗೆ ಮರುಗುತ್ತಿದ್ದಳು ಇಂಥ ಪರಿಸ್ಥಿತಿಯಲ್ಲಿ ತಾಯಿ ಎದೆಗುಂದಲಿಲ್ಲ ಬದಲಿಗೆ ಸ್ಪೂರ್ತಿದಾಯಕವಾದ ಮಾತುಗಳನ್ನು ಹೇಳಿ ಮಗನನ್ನು ಶಾಲೆಗೆ ಕಳಿಸ್ತಿದ್ದಳು. ಕುಟುಂಬದ ಜವಾಬ್ದಾರಿ ಹೊತ್ತ ಮಗ ಅಮ್ಮ ನಾನು ಶಾಲೆಗೆ ಹೋಗುವುದು ಬೇಡ ನನಗೆ ಓದಲು ಬರೆಯಲು ಬರುತ್ತೆ ಜೀವನ ನಡೆಸಲು ರಟ್ಟೆಯಲ್ಲಿ ಶಕ್ತಿ ತಲೆಯಲ್ಲಿ ಯುಕ್ತಿ ಇದ್ದರೆ ಸಾಕಮ್ಮ ಎಂದು ಮಾತನಾಡುತ್ತಿದ್ದ ಈ ಮಾತುಗಳನ್ನು ಕೇಳಿದ ತಾಯಿ ಒಳಗೊಳಗೇ ಮರಗುತಿದ್ದಳು ಮಗನನ್ನು ಶಾಲೆ ಬಿಡಿಸಿ ಕುಟುಂಬದ ಜವಾಬ್ದಾರಿ ಹೊರಿಸುವುದು ಅವಳಿಗೆ ಕೂಡ ಕಳವಳ ಎನಿಸುತ್ತಿತ್ತು. ಮಗನ ಮಾತಿಗೂ ಬೆಲೆಕೊಟ್ಟು ತನ್ನ ಆಸೆಯನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಬಲೆ ಮಗನೇ ನೀನು ಚಲಗಾರ ನಿನ್ನಲ್ಲಿ ಅಗಾಧವಾದ ಶಕ್ತಿ ಇದೆ ನೀನು ಪ್ರಯತ್ನಪಟ್ಟರೆ ಎಲ್ಲವನ್ನು ಸಾಧಿಸುವ ಛಲವಿದೆ ನಿಮ್ಮ ತಂದೆಯ ಆಸೆಯನ್ನು ಈಡೇರಿಸು ಎಂದು ಬಲವಾಗಿ ಹೇಳಿದ ಕಾರಣ ಅವನ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮ ಬೀರಿ ಶಾಲೆಗೆ ಹೋಗುವ ಸಮಯದಲ್ಲೇ ತನ್ನ ಎಲ್ಲಾ ಕೆಲಸ ಮುಗಿಸಿ ಶಾಲೆಯನ್ನು ಆಗಾಗ ಬಿಟ್ಟು ತನ್ನ ಮನೆಯ ಕೆಲಸದಲ್ಲಿ ತೊಡಗುತ್ತಿದ್ದ. 10ನೇ ತರಗತಿಗೆ ಕಲಿಟ್ಟಂತೆ ಮನೆಯ ಜವಾಬ್ದಾರಿಗಳು ಬಾಣಂತಿಯರಾದ ಅಕ್ಕಂದಿಯರು ಮನೆಗೆ ಬಂದಾಗ ಇನ್ನೂ ಕೆಲಸದ ಒತ್ತಡಗಳು ಹೆಚ್ಚಾದವು ಇದರ ನಡುವೆ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ ಅಭ್ಯಾಸ ಮಾಡೋಕೆ ಸಮಯವೇ ಸಿಗುತ್ತಿರಲಿಲ್ಲ ಹೇಗೋ ದೇವರ ದಯದಿಂದ ಪರೀಕ್ಷೆ ಬರೆದು 56ಫಲಿತಾಂಶ ಬಂದ ಕೂಡಲೇ ತನ್ನ ತಾಯಿಯ ಆಶೀರ್ವಾದವನ್ನು ಪಡೆದು ತದನಂತರ ಎಲ್ಲ ದೇವರಿಗೂ ಕೈಮುಗಿದು ನಮಸ್ಕರಿಸಿ ಮಂದಹಾಸದ ನಗುವಿನ ಮೂಲಕ ಕಂಗೊಳಿಸಿ ತೊಡಗಿದ.
ಕಷ್ಟ ದುಃಖಗಳು ಯಾರಿಗೆ ಇಲ್ಲ ಪ್ರತಿಯೊಬ್ಬರಿಗೂ ಒಂದಿಲ್ಲ ಒಂದು ರೀತಿಯ ಕಷ್ಟ ನೋವುಗಳು ಪರಿಪಾಲಿಸುತ್ತಿರುತ್ತವೆ ಯಾವುದಕ್ಕೂ ಹೆದರದೆ ಮುಂದೆ ಹೆಜ್ಜೆ ಇಡುತ್ತ ಸಾಗಬೇಕು.ನಾವು ಮಾಡುತ್ತಿರುವ ಕರ್ಮಗಳ ಫಲವಾಗಿ ಒಳ್ಳೆಯದು ಕೆಟ್ಟದು ಲಭಿಸುತ್ತೆ. ಉದಾಹರಣೆಗೆ ಒಂದು ದಿನ ಅರ್ಜುನ ಮತ್ತು ಕೃಷ್ಣ ವಿಹಾರಕ್ಕೆಂದು ಸುತ್ತುತ್ತಿರುವ ಸಂದರ್ಭದಲ್ಲಿ ಬ್ರಾಹ್ಮನೊಬ್ಬನು ಭಿಕ್ಷೆ ಬೇಡುತ್ತಾ ನಿಂತಾಗ ಇದನ್ನು ಅರಿತ ಅರ್ಜುನ ಬಂಗಾರದ ನಾಣ್ಯಗಳು ತುಂಬಿದ ಒಂದು ಚೀಲವನ್ನು ಕೊಡುತ್ತಾನೆ.ಆ ಚೀಲನೊಬ್ಬ ಕಳ್ಳ ಕದ್ದುಕೊಂಡು ಹೋದಾಗ ಮತ್ತೆ ಮರುದಿನ ಬ್ರಾಹ್ಮಣ ಬೆಕ್ಷೆ ಬೇಡುತ್ತ ನಿಂತಿದ್ದನ್ನು ಕಂಡು ಅರ್ಜುನ ವಿಚಾರಿಸಿದಾಗ ಕಳ್ಳನೊಬ್ಬ ಕಿತ್ತುಕೊಂಡು ಹೊಯ್ದ ಎನ್ನುತ್ತಾನೆ ಆಗ ಮತ್ತೆ ಅರ್ಜುನ ಎರಡು ವಜ್ರದ ಮುತ್ತುಗಳನ್ನು ನೀಡುತ್ತಾನೆ. ಬ್ರಾಹ್ಮಣ ಆ ಮುತ್ತುಗಳನ್ನು ತೆಗೆದುಕೊಂಡು ನೀರು ತುಂಬುವ ಬಿಂದಿಗೆಯಲ್ಲಿ ಇಡುತ್ತಾನೆ. ಬ್ರಾಹ್ಮಣನ ಪತ್ನಿ ಮಣ್ಣಿನ ಬಿಂದಿಗೆಯನ್ನು ತೆಗೆದುಕೊಂಡು ನೀರು ತುಂಬಲು ಹೋದಾಗ ಆ ಮುತ್ತುಗಳು ನದಿಯಲ್ಲಿ ಜಾರಿ ಬೀಳುತ್ತವೆ. ಬ್ರಾಹ್ಮಣ ಆಲೋಚನೆ ಮಾಡುತ್ತಾ ನನ್ನ ಸಮಯವೇ ಸರಿ ಇಲ್ಲ ಎಂದು ಕುಗ್ಗಿ ಮನದೊಳಗೆ ಯೋಚಿಸುತ್ತಾ ಮತ್ತೆ ಭಿಕ್ಷೆ ಬೇಡುತ್ತಾ ನಿಂತಿರುತ್ತಾನೆ. ಇದನ್ನು ಕಂಡ ಬ್ರಾಹ್ಮಣ ನಡೆದ ಪ್ರಸಂಗವನ್ನು ವಿಚಾರಿಸಿದಾಗ ಅರ್ಜುನ ಮತ್ತೆ ಎರಡು ನಾಣ್ಯಗಳನ್ನು ಕೊಡುತ್ತಾನೆ.ಆ ನಾಣ್ಯಗಳನ್ನು ಜೋಪಾನವಾಗಿ ತೆಗೆದುಕೊಂಡು ಹೋಗುವ ಸಮಯದಲ್ಲಿ ಮೀನುಗಾರನೊಬ್ಬ ಮೀನು ಹಿಡಿದುಕೊಂಡು ಹೋಗುತ್ತಿರುತ್ತಾನೆ ಆ ಮೀನುಗಳ ಮರುಗಾಟ ನೋಡಿದ ಬ್ರಾಹ್ಮಣ ಎರಡು ನಾಣ್ಯಗಳನ್ನು ಕೊಟ್ಟು ಎರಡು ಮೀನುಗಳನ್ನು ತೆಗೆದುಕೊಂಡು ನದಿಯಲ್ಲಿ ಬಿಡುವ ಸಮಯದಲ್ಲಿ ಎರಡು ಮೀನಿನ ಬಾಯಲ್ಲಿದ್ದ ವಜ್ರದ ಮುತ್ತುಗಳು ಹೊರಬಂದವು ಆಗ ಬ್ರಾಹ್ಮಣ ಸಿಕ್ತು….ಸಿಕ್ತು… ಸಿಕ್ತು… ಮುತ್ತುಗಳು ಸಿಕ್ತು… ಎಂದು ಸಂಭ್ರಮ ಪಟ್ಟಾಗ ಅಲ್ಲೇ ಪಕ್ಕದಲ್ಲಿದ್ದ ಕಳ್ಳ ಈ ಬ್ರಾಹ್ಮಣಿಗೆ ನಾನೇ ಕಳ್ಳ ಎಂದು ಗೊತ್ತಾಗಿದೆ ಎಂದು ತಿಳಿದು ಬಂಗಾರ ತುಂಬಿದ ಚೀಲವನ್ನು ಬ್ರಾಹ್ಮನ್ನಿಗೆ ಎಸೆದು ಓಡಿ ಹೋಗುತ್ತಾನೆ. ಬ್ರಾಹ್ಮಣನ ಒಳ್ಳೆಯ ವಿಚಾರದಿಂದ ಕಳೆದುಕೊಂಡ ಎಲ್ಲಾ ವಸ್ತುಗಳು ದೊರಕಿದವು. ನಮ್ಮ ನಡೆ-ನುಡಿ, ಸಹಾಯ ಸಹಕಾರ ಒಳ್ಳೆಯ ಮನೋಭಾವನೆ ನಮ್ಮಲ್ಲಿದ್ದರೆ ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ದೇವರು ನಮ್ಮಣ್ಣ ಕೈಬಿಡುವುದಿಲ್ಲ ಎಂಬುವುದಕ್ಕೆ ಒಂದು ಚಿಕ್ಕ ಉದಾಹರಣೆಯಾಗಿದೆ.
ಲೇಖನ: ಆನಂದ ಬಿರಾದಾರ (ಲೇಖಕರು ಅಥಣಿ)