ಯುಗಾದಿ

ಚೈತ್ರಮಾಸದ ಆದಿ ಯುಗಾದಿ
ಕಾಲಚಕ್ರ ಉರುಳುತಿದೆ ಅನಾದಿ
ಮೊಳಗುತಲಿದೆ ಎಲ್ಲೆಡೆ ಸನಾದಿ
ಕಾಮ ಪ್ರೇಮಗಳಿಗೆ ಬುನಾದಿ
ಸಂಭ್ರಮ ಸಂತಸದ ಯುಗಾದಿ

ಹಚ್ಚ ಹಸಿರು ಸೀರೆಯುಟ್ಟು
ಮಲ್ಲಿಗೆ ಸಂಪಿಗೆಗಳ ನತ್ತನಿಟ್ಟು
ಹಸಿರು ಚುಕ್ಕೆ ಬಳೆಗಳ ತೊಟ್ಟು
ಭೂರಮೆ ನಸು ನಾಚುತಿಹಳು
ವಸಂತನಾಗಮನಕೆ

ಶಿವ ಶಕ್ತಿಯರ ಲೀಲೆಗೆ
ಹೂಬಾಣಗಳ ಸುರಿಮಳೆ
ಪ್ರೇಮದ ಮುತ್ತಿನಮಳೆ
ಆಗಾಗ ಆಣೆಕಲ್ಲುಗಳ
ಸ್ಪರ್ಶಕೆ ರೋಮಾಂಚಿತೆ

ದುಃಖ ನೋವೆಲ್ಲ ಮರೆತು
ಬೇವು ಬೆಲ್ಲದಂತೆ ಬೆರೆತು
ಸಿಹಿ ಕಹಿಗಳನು ಅರಿತು
ಜೀವ ಭಾವಗಳು ಕಲೆತು
ಒಂದಾಗುವ ಬಾಳು ಹೊಸತು

ಕೋಗಿಲೆಗಳ ಗಾನದ ಇಂಪು
ಮಾವು ಬೇವುಗಳ ತಂಪು
ನಾನಾವಿಧ ಹೂಗಳ ಕಂಪು
ನವತರುಣಿಯ ಮುಖ ಕೆಂಪು
ಅಮೃತದೂಟದ ಸೊಂಪು

  • – ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ,
    ಪುಣೆ