ಮೇಘಮಾಲೆ
ಮುಗಿಲ ತೊರೆಯಾಗಿ ಸತ್ಫಲದ ಬಿಂಬವಾಗಿ
ಬಯಲ ದಾಹದ ಬಯಕೆಗೆ ಬಸಿರಾಗಿ
ಅನಂತ ಸಮೃದ್ಧ ಸಾಗರ ವರಧಾತೆಯಾಗಿ
ಪ್ರಕೃತಿ ಚೈತನ್ಯದ ನಗುವ ಚೆಲುವಾಗಿ
ಇಳಿದಿಳಿದು ಬಾ ಇಳೆಗೆ
ಬಳಲಿ ಬಾಡಿದ ಭೂಮಾತೆಯ ತಣಿಸುತಲಿ
ಹಾಲ್ಗಡಲ ಹರಿವಿನ ಅಮೃತಧಾರೆಯಲಿ
ಭಾವದ, ಬಿಂಬವಾಗಿ ಆಸರೆಯ ಶಕ್ತಿಯಾಗಿ
ಮಲೆನಾಡಿನ ಮದುವಣಗಿತ್ತಿ ಶೃಂಗಾರದಲಿ
ಸುರಿಸುರಿದು ಬಾ ಇಳೆಗೆ
ನೀಲಮೇಘ ಶ್ಯಾಮನ ಕೊಳಲ್ ಧ್ವನಿಯಾಗಿ
ಜೀವ ಪೊರೆವ, ಜಗದಾನಂದದ ಸೆಲೆಯಾಗಿ
ಸಕಲ ಸಂಕುಲಗಳ ಸಂಜೀವಿನಿಯಾಗಿ
ನಿಸರ್ಗ ರಸಕಾವ್ಯ ಸೃಷ್ಟಿಯ ಚಿತ್ಕಳೆಯಾಗಿ
ಝರಿಯಾಗಿ ನಲಿನಲಿದು ಬಾ ಇಳೆಗೆ
ಕಾರ್ಮೋಡಗಳ ಮೀಟಿ ಬೆಟ್ಟಬಯಲ ದಾಟಿ
ಕಡಲ ಸ್ನೇಹಸಂಗಮ ಧಾರೆಯಾಗಿ
ಧರಣಿಸುತೆ ರಾಗ ಪಲ್ಲವಿಯ ಅಂತರ್ಸೆಲೆಯಾಗಿ
ತಾಯಿ ವಾತ್ಸಲ್ಯದ ಕೃಪಸಾಗರವಾಗಿ
ಒಲಿದೂಲಿದು ಬಾ ಇಳೆಗೆ
– ಯಶೋಧ ರಾಮಕೃಷ್ಣ
ಮೈಸೂರು