ವಾಸ್ತುಶಿಲ್ಪದ ತೊಟ್ಟಿಲು – ಐಹೊಳೆ
ಐಹೊಳೆಯ ಮೂಲ ರೂಪ ‘ಅಯ್ಯಾವೊಳೆ’ ಅಂದರೆ ಆಯ್ಕೆಗಳ ಹೊಳೆ ಅರ್ಥಾಶ ಅಯ್ಯಗಳು ಅಂದರೆ ಬ್ರಾಹ್ಮಣರು ವಾಸಿಸುತ್ತಿರುವ ಊರು ಎಂದು ತಿಳಿದುಕೊಳ್ಳಬಹುದಾಗಿದೆ. ಅಯ್ಯಾವೊಳೆ ಸಂಸ್ಕೃತದಲ್ಲಿ ಆರ್ಯಪುರವಾಗಿದೆ. ಆರ್ಯರು ಅಂದರೆ ಪಂಡಿತರು ಅಥವಾ ವಿದ್ವಾಂಸರು ಎಂದರ್ಥ, ಪುರ ಅಂದರೆ ಊರು ಅಥವಾ ಪಟ್ಟಣ ಒಟ್ಟಾರೆ ಆರ್ಯಪುರವೆಂದರೆ ಪಂಡಿತರಿಂದ ಹಾಗೂ ವಿದ್ವಾಂಸರಿಂದ ಕೂಡಿಕೊಂಡಂತಹ ಊರಾಗಿತ್ತು.
ಆರ್ಯಪುರವೆಂಬ ಹೆಸರಿನ ಉಲ್ಲೇಖ ಐಹೊಳೆಯಲ್ಲಿರುವ ಲಾಡಖಾನ, ಗೌಡರ ಗುಡಿ ಶಾಸನಗಳಲ್ಲಿ ದೊರೆತಿದೆ. ಅಯ್ಯಾವೊಳೆ ಎಂಬುವದು ಸಂಸ್ಕೃತದಲ್ಲಿ ಅಹಿಹೊಳೆ’ ಎಂದು ಅದಕ್ಕೆ ಅಹಿಚ್ಚತ್ರಪುರವೆಂದು ಹೆಸರಿಸಲಾಗಿದೆ ಇದರ ಉದ್ದೇಶ ಈ ಸ್ಥಳವು ಉತ್ತರ ಹಿಂದೂಸ್ಥಾನದಲ್ಲಿದ್ದ ಅಹಿಚ್ಚತ್ರದಷ್ಟು ಪವಿತ್ರವಾಗಿದೆ. ಐಹೊಳೆಯನ್ನು ‘ಐಪುರಿ’ ಯಂತಲೂ ‘ಐಪುರೀಶ್ವರ ಶತಕ‘ ವನ್ನು ಬರೆದ ಮಗ್ಗೆ ಮಾಯಿ ದೇವನು ಈ ಊರಿನಲ್ಲಿ ಹುಟ್ಟಿದವನು ಎಂದು ನಂಬಲಾಗಿದೆ. ಅಡವೇಶ್ವರ ಸ್ವಾಮಿಗಳು ಈ ನೆಲದಲ್ಲಿ ಸಂಚರಿಸಿ ತಪಸ್ಸನ್ನು ಮಾಡಿ ಈ ನೆಲದ ಜನರನ್ನು ಎಲ್ಲಾ ದೃಷ್ಟಿಯಿಂದ ಪಾರು ಮಾಡಿ ರಕ್ಷಣೆ ಮಾಡಿದಂತಹ ಮಹಾಶಿವಶರಣರು, ಐಹೊಳೆಯ ರಾಮಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿ ಈ ಶರಣರ ಗುಹೆಯನ್ನು ಇಂದಿಗೂ ನೋಡಲು ಸಿಗುತ್ತದೆ.
ಪೌರಾಣಿಕ ಕಥೆ:
ಒಂದಾನೊಂದು ಕಾಲದಲ್ಲಿ ಈ ಪ್ರಾಂತವು ಅರಣ್ಯಮಯವಾಗಿತ್ತು. ರಾಜ್ಯವನ್ನು 1000 ಬಾಹುಗಳುಳ್ಳ ಕಾರ್ತವಿರ್ಯಾರ್ಜುನನು ಆಳ್ವಿಕೆ ಮಾಡುತ್ತಿದ್ದನು. ಕಾರ್ತವಿರ್ಯಾರ್ಜುನನು ಬೇಟೆಗೋಸ್ಕರ ಕಾಡಿಗೆ ಬಂದಿರುವ ಸಮಯದಲ್ಲಿ ಜಮದಗ್ನಿ ಋಷಿ ತನ್ನ ಮನೆಗೆ ಕಾರ್ತವಿರ್ಯಾರ್ಜುನ ಮತ್ತು ಆತನ ಸಹಪರಿವಾರವನ್ನು ಊಟಕ್ಕೆ ಆಹ್ವಾನ ಮಾಡುತ್ತಾರೆ. ಋಷಿಗಳ ಮನೆಯಲ್ಲಿ ಊಟ ಮಾಡಿದ ರಾಜನಿಗೆ ಆಶ್ಚರ್ಯವಾಗಿ ಇಷ್ಟು ಜನರಿಗೆ ಇಷ್ಟು ಬೇಗ ಯಾವ ರೀತಿಯಲ್ಲಿ ಊಟವನ್ನು ಕೊಡಲಿಕ್ಕೆ ಸಾಧ್ಯವಾಯಿತು? ಎಂದು ಕೇಳಿದಾಗ ಆಗ ಜಮದಗ್ನಿ ಋಷಿಯು ತನ್ನ ಹತ್ತಿರ ವಿದ್ದ ಕಾಮಧೇನುವನ್ನು ತೋರಿಸಿದಾಗ ರಾಜ ಆ ಕಾಮಧೇನುವನ್ನು ನನಗೆ ಕೊಡು ಅಂತಾ ಕೇಳಿದಾಗ ರಾಜನ ಕೋರಿಕೆಯನ್ನು ಋಷಿಯು ತಿರಸ್ಕರಿಸುತ್ತಾನೆ. ಆಗ ಕೋಪಗೊಂಡ ರಾಜ ಜಮದಗ್ನಿ ಋಷಿಯನ್ನು ಕೊಲ್ಲುತ್ತಾನೆ. ಕೊಂದು ಅವರ ಹತ್ತಿರ ವಿದ್ದ ಕಾಮಧೇನು ತೆಗೆದುಕೊಂಡು ಹೋಗುತ್ತಾನೆ. ಈ ವಿಷಯ ತಿಳಿದ ಜಮದಗ್ನಿಯ ಮಗನಾದ ಪರಶುರಾಮನು ಕಾರ್ತವಿರ್ಯಾರ್ಜುನ ಮತ್ತು ಕ್ಷತ್ರಿಯರನ್ನು 21 ಸಲ ಭೂಪ್ರದಕ್ಷಣ ಮಾಡಿ ಸಂಹಾರ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದನು. ಕ್ಷತ್ರಿಯರನ್ನು ಸಂಹಾರಮಾಡಿದ ನಂತರ ತಾನು ಮಾಡಿದ ಪಾಪವನ್ನು ಪರಿಹಾರ ಮಾಡಲಿಕ್ಕೆ ತನ್ನ ರಕ್ತ ಸಿಂಚಿತವಾದ ಕೊಡಲಿಯನ್ನು ದಕ್ಷಿಣವಾಹಿನಿಯಿಂದ ಉತ್ತರವಾಹಿನಿಯಾಗಿ ಹರಿದು ನಂತರ ಪೂರ್ವದಿಂದ ಪಶ್ಚಿಮವಾಹಿನಿಯಾಗಿ ಹರಿಯುವ ಮಲಪಹಾರಿ ನದಿಯಲ್ಲಿ ತೊಳೆದಾಗ ನದಿಯ ನೀರೆಲ್ಲಾ ಕೆಂಪಾಗಿ ಹರಿಯಲಿಕ್ಕೆ ಪ್ರಾರಂಭಿಸಿತು ಆರ್ಯಪುರದ ಹೆಣ್ಣು ಮಗಳು ನದಿಗೆ ನೀರನ್ನು ತರಲು ಹೋದಾಗ ನದಿಯ ನೀರೆಲ್ಲಾ ಕೆಂಪಾಗಿ ಹರಿಯುತ್ತಿರುವುದನ್ನು ನೋಡಿ ಆಶ್ಚರ್ಯಚಕಿತಳಾಗಿ ಐ. (ಅಯ್ಯ.)ಹೊಳೆ, ಅಯ್ಯೋ…!!? ಹೊಳೆ, ಎಂದು ಉದ್ಗಾರ ತೆಗೆದಾಗ ಈ ಉದ್ಧಾರವಾಚಕವೇ ಮುಂದೆ ಐಹೊಳೆಯಾಗಲು ಕಾರಣವಾಯಿತು.
ಐಹೊಳೆಯ ಮಹತ್ವ:
ಐಹೊಳೆಯು ಒಂದು ಅಗ್ರಹಾರ ತಾಣವಾಗಿತ್ತೆಂದು ಲಾಡಖಾನ ಗುಡಿಯ ಹೊರ ಗೋಡೆಯ ಮೇಲಿರುವ ಕ್ರಿ.ಶ. 8ನೇ ಶತಮಾನದ ಶಾಸನ ಹಾಗೂ ಇಲ್ಲಿಯ ಇತರ ಶಾಸನಗಳಿಂದ ಮಾಹಿತಿ ದೊರೆಯುತ್ತದೆ. ಬಾದಾಮಿ ಚಾಲುಕ್ಯರ ಕಾಲದಲ್ಲಿ ಐಹೊಳೆ ಒಂದು ವಿದ್ಯಾಕೇಂದ್ರವಾಗಿತ್ತೆಂದು ಶಾಸನಗಳಿಂದ ವ್ಯಕ್ತವಾಗಿದೆ. ಚತುರ್ವೇದಗಳಲ್ಲಿ ವಿದ್ವಾಂಸರಾಗಿದ್ದ 500 ಮಹಾಜನಗಳು ಅಥವಾ ಶ್ರೀಮದ್ ಆರ್ಯಪುರದ (ಅಯ್ಯಾವೊಳೆಯ) ಶ್ರೀ ಮಹಾಚಾತುರ್ವಿಧ ಸಮುದಾಯವಯರ್ವರು ಮಹಾಜನಮುಂ” ಎಂಬ ವಿಶೇಷಣವನ್ನು ಅಯ್ಯಾವೊಳೆ ಐನೂರ್ವರಿಗೆ ನೀಡಲಾಗಿತ್ತು ಎಂಬ ಅಂಶ ತಿಳಿಯುತ್ತದೆ. ಈ ಎಲ್ಲಾ ಸಂಗತಿಗಳಿಗಿಂತಲೂ ಶಾಸನಗಳಲ್ಲಿ ಉಲ್ಲೇಖವಾಗಿರುವ ಅಯ್ಯಾವೊಳೆ ಐನೂರ್ವರು ಎಂಬ ವರ್ತಕರ ಸಂಘ ಇದ್ದು ಬೆಣ್ಣೆಯ ಸೋಮಯ್ಯಾಜಿ ಎಂಬುವನು ಅದರ ಅಧ್ಯಕ್ಷನಾಗಿರುವ ಅಂಶ ಗೊತ್ತಾಗಿದೆ. ಈ ಊರು ಹಿಂದೆ ದೊಡ್ಡ ಪುರವಾಗಿದ್ದು ಹಾಗೆ ಧಾರ್ಮಿಕ ಕ್ಷೇತ್ರವಾಗಿತ್ತೆಂದು ತಿಳಿದು ಬರುತ್ತದೆ. 971 ರಲ್ಲಿ ಕೆಯ್ದಯ ಮತ್ತು ರಾಷ್ಟ್ರಕೂಟ ತೊಟ್ಟಿಗರ ಆಳ್ವಿಕೆಯಲ್ಲಿ ಶಾಂತಗಾವುಂಡನು ಗೋಸಹಸ್ರ ದಾನವನ್ನು ಐಹೊಳೆಯಲ್ಲಿ ಮಾಡಿದ್ದರ ಬಗೆಗೆ ಉಲ್ಲೇಖವಿದೆ.
ಅದೇ ರೀತಿಯಲ್ಲಿ ರಾಷ್ಟ್ರಕೂಟ ಅಮೋಘವರ್ಷನ ಕಾಲದಲ್ಲಿ ಶ್ರೀಸೂರ್ಯ ಭಟಾರನು ಈ ಊರಿನಲ್ಲಿ ಚಾತುರ್ಮಾಸವನ್ನು ಕಳೆದನೆಂದು ಶಾಸನಗಳಿಂದ ತಿಳಿದು ಬರುತ್ತದೆ. ಐಹೊಳೆಯ ಜ್ಯೋತಿಲಿರ್ಂಗ ಗುಡಿಯಲ್ಲಿದ್ದ ಕ್ರಿ.ಶ. 1136 ನೇಯ ವರ್ಷದ ಶಾಸನದಲ್ಲಿ “ಶ್ರೀಮನ್ಮಹಾಕಾಶಿ ಅಯ್ಯಾವೊಳೆ” ಎಂದು ದಾಖಲಿಸಲಾಗಿದೆ. ಇದು ಪರಶುರಾಮ ಕ್ಷೇತ್ರವೆಂದು ಬಹುಕಾಲದಿಂದಲೂ ಪ್ರಸಿದ್ಧವಾಗಿದೆ. ಈ ದಿನಗಳಲ್ಲಿಯೂ ಸಹ ಐಹೊಳೆ ಒಂದು ಪುಣ್ಯ ಕ್ಷೇತ್ರವೆಂದು ಜನರು ಸತ್ತವರ ಆಸ್ತಿಗಳನ್ನು ತಂದು ಈ ಊರಿನ ನದಿಯಲ್ಲಿ ವಿಸರ್ಜಿಸುವರು.
— ಮುಂದುವರೆಯುತ್ತದೆ
ಲೇಖಕರು: ವಿಶ್ವಾಸ್ ಡಿ. ಗೌಡ, ಸಕಲೇಶಪುರ