ವಿಷಯ : ಹೊಸ ವರುಷ ತಂದ ಹರುಷ
ಶೀರ್ಷಿಕೆ : ಆತ್ಮವಿಶ್ವಾಸ…
ಯುಗಾದಿ ಹಬ್ಬವೂ ನಮ್ಮ ಹಿರಿಯರು ಶತಶತಮಾನಗಳಿಂದ ನಡೆಸಿಕೊಂಡು ಬಂದಂತಹ, ಆ ಹೊಸ ವರುಷವನ್ನು ಸಂಭ್ರಮದಿ ಬರಮಾಡಿಕೊಳ್ಳುವ ಒಂದು ಸಾಂಸ್ಕೃತಿಕ ಹಬ್ಬದ ಆಚರಣೆಯಾಗಿದೆ ಎಂದರೆ ತಪ್ಪಾಗಲಾರದು. ಈ ಹಬ್ಬದ ವಿಷೇಶತೆಯೆಂದರೆ ಬೇವು ಮತ್ತು ಬೆಲ್ಲದ ಸಮ್ಮಿಶ್ರಣವನ್ನು ಸರಿಸಮನಾಗಿ ಸ್ವೀಕರಿಸುವುದು, ಅರ್ಥಾತ್ ಬೇವು ನಮ್ಮ ಜೀವನದಲ್ಲಿ ಬರುವ ನೋವು ಹಾಗೂ ಕಷ್ಟದ ಸಂಕೇತ, ಬೆಲ್ಲ ಎಂದರೆ ನಗು ಹಾಗೂ ಸುಖದ ಸಂಕೇತವಾಗಿದೆ. ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಬದುಕಿನಲ್ಲಿ ಬರುವ ಆ ಎಲ್ಲಾ ಏರಿಳಿತಗಳನ್ನು ಒಂದೇ ತೆರನಾಗಿ ಸ್ವೀಕರಿಸಿ ಮುನ್ನಡೆಯುವುದು ಇದರ ತಾತ್ಪರ್ಯವಾಗಿದೆ.
ಎಲ್ಲರೂ ತಮ್ಮ ತಮ್ಮ ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ, ಹೊಸ ಬಟ್ಟೇ ಧರಿಸಿ, ತರಹೇವಾರಿ ತಿನಿಸುಗಳನ್ನು ತಯಾರು ಮಾಡಿ, ಸಿಹಿ ತಿನಿಸುಗಳಾದ ಹೋಳಿಗೆ-ತುಪ್ಪದ ಊಟವನ್ನು ಮನೆಮಂದಿಯೊಂದೆಗೆ ಒಟ್ಟಾಗಿ ಕೂತು ಸವಿಯುವ ಆ ಮಧುರ ಕ್ಷಣಗಳೇ ಚೆಂದಾ, ಏನಂತೀರಾ…ಅಂತ ಒಂದು ಚೆಂದದ ಕುಟುಂಬ ದೊರಕಲು ಸಹ ಅದೃಷ್ಟ ಹಾಗೂ ಪೂರ್ವ ಜನ್ಮದ ಪುಣ್ಯ ಮಾಡಿರಬೇಕು.
ಈ ನವ ಸಂವತ್ಸರದ ಯುಗಾದಿಯಲ್ಲಿ ನನ್ನ ಬಾಳಿನಲ್ಲಿ ಬಂದಂತಹ ಕಷ್ಟ-ನಷ್ಟಗಳು, ನೋವು-ನಿಂದನೆಗಳನ್ನು ಮತ್ತು ಕಹಿ ಘಟನೆಗಳನ್ನು ಆದಷ್ಟು ಮನಸ್ಸಿನಲ್ಲಿಟ್ಟುಕೊಳ್ಳದೆ ಅದನ್ನ ಮರೆತು ನಗುತ ಮುನ್ನಡೆಯುವುದರ ಜೊತೆಜೊತೆಗೆ ಆ ಸೋಲಿನ ಮೆಟ್ಟಿಲುಗಳನ್ನೇ ಗೆಲುವಿನ ಹಾದಿಯನ್ನಾಗಿಸಿಕೊಂಡು ಅಂದುಕೊಂಡಿದ್ದನ್ನು ಬಿಡದೇ ಸಾಧಿಸಿ ಆತ್ಮವಿಶ್ವಾಸದಿಂದ ತಲೆಯೆತ್ತಿ ನಡೆಯುವುದನ್ನು ಕಲಿಸಿದೆ ಎಂದು ಹೇಳಲು ತುಂಬಾ ಖುಷಿಯಾಗುತ್ತದೆ. ಈ ಹೊಸ ವರುಷವು ನನ್ನ ಬಾಳಲ್ಲೂ ಹೊಸತನವನ್ನು ತಂದಿದೆಯೆಂದರೆ ಬಹುಷಃ ತಪ್ಪಾಗದು. ಗೆಲುವಿನ ಹಾದಿಯಲ್ಲಿದ್ದರೂ ಕೊಂಚವೂ ದುರಹಂಕಾರ ಪಡದೆ, ಅನ್ಯಾಯಕ್ಕೆ ತಲೆಬಾಗದೆ, ಕುಹಕ ಬುದ್ದಿಯ ಜನರ ಕೊಂಕು ಮಾತಿಗೆಲ್ಲಾ ಕೊರಗಿ ಸೋತು ಶರಣಾಗದೆ ಗರ್ವದಿಂದ ನ್ಯಾಯದ ದಾರಿಯಲ್ಲಿ ಸಾಗುತ ನನ್ನ ಕಾಲ ಮೇಲೆ ನಾನು ನಿಂತು ನನ್ನ ಕರ್ತವ್ಯಗಳನ್ನು ನಿಭಾಯಿಸುವುದರ ಜೊತೆಗೆ ಯಶಸ್ಸನ್ನು ಸಹ ಕಂಡು ಮನಸ್ಪೂರ್ತಿಯಾಗಿ ಮುಂದೆ ಸಾಗುತ್ತಿರುವ ಬಗ್ಗೆ ನನಗೆ ಆತ್ಮತೃಪ್ತಿ ಹಾಗೂ ಹೆಮ್ಮೆಯಿದೆ.
ಒಳಿತು ಬಯಸುವ ಹಾಗೂ ಮಾಡುವ ಜನರಿಗೆ ಜೀವನದಿ ಅಡೆತಡೆಗಳು ಹಾಗೂ ಸಮಸ್ಯೆಗಳು ನೂರೆಂಟು. ಬದುಕಿನುದ್ದಕ್ಕೂ ಕಲ್ಲು ಮುಳ್ಳಿನ ಹಾದಿಯೇ ಅವರಿಗಿದ್ದರೂ ದೇವರ ಬೆಂಬಲ ಹಾಗೂ ಆಶಿರ್ವಾದದ ಫಲ ಅವರನ್ನು ಯಶಸ್ಸಿನ ಹಾದಿಯತ್ತ ಕೊಂಡೊಯ್ದು ಸದಾ ಕಾಲ ಕಾಪಾಡುತ್ತದೆ ಎನ್ನುವುದು ಸುಳ್ಳಲ್ಲಾ. “ಧೈರ್ಯಂ ಸರ್ವತ್ರ ಸಾಧನಂ” ಇದು ನ್ಯಾಯ-ನೀತಿ-ನಿಷ್ಠೆಯಿಂದ ಬದುಕುವ ಎಲ್ಲಾ ಸ್ವಾಭಿಮಾನಿ ಜೀವಿಗಳ ಪರಮ ಸ್ವತ್ತು. ನಮ್ಮ ಜೀವನದಲ್ಲಿ ನಾವು ನಡೆದು ಬಂದ ದಾರಿಯನ್ನು ಹಾಗೂ ಅದು ಕಲಿಸಿದ ಪಾಠ ಮತ್ತು ಅನುಭವಗಳನ್ನೂ ಎಂದಿಗೂ ಮರೆಯದೆ ಒಳಿತಿನ ಕಾರ್ಯಕ್ಕೆ ಭಯಪಟ್ಟು ಹಿಂದೆ ಸರಿಯದೆ ಧೈರ್ಯವಾಗಿ ಮುನ್ನುಗ್ಗಿ ಸಾಗಿ ಜಯಗಳಿಸಬೇಕು.
ನಾವು-ನೀವೆಲ್ಲರೂ ಈ ಹಾಡನ್ನು ಕೇಳಿಯೇ ಇರುತ್ತೀವಿ ಅಲ್ಲವೇ!?… “ಯುಗ-ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ…ಹೊಸ ವರುಷಕೆ ಹೊಸ ಹರುಷವ ಹೊಸದು ಹೊಸದು ತರುತಿದೆ….” ಆಹಾ ಅದೆಷ್ಚು ಅರ್ಥಪೂರ್ಣ ಸಾಹಿತ್ಯ, ಮೈನವಿರೇಳಿಸುವಂತಹ ಸಂಗೀತ ಹಾಗೂ ಗಾಯನ ಅಲ್ಲವೇ!? ಇದು ಅದೆಷ್ಟೊ ಸಂವತ್ಸರಗಳು ಉರುಳಿದರೂ ಎಂದೆಂದೂ ಮಾಸದೆ ಮನದಲ್ಲಿ ಹಚ್ಚ ಹಸಿರಾಗಿ ಉಳಿಯುವಂತ ಯುಗಳ ಗೀತೆ. ಅಂತೆಯೇ ಸಿಹಿಯಿರಲಿ ಕಹಿಬರಲಿ ಬಂದದ್ದನ್ನು ಪ್ರಸಾದ ಎಂದು ಸ್ವೀಕರಿಸಿ ಮುನ್ನಡೆಯುತ್ತಿದ್ದರೆ ಒಂದಿಲ್ಲೊಂದು ದಿನ ಗೆಲುವು ನಮ್ಮದಾಗುವುದರಲ್ಲಿ ಎಳ್ಳಷ್ಚೂ ಸಂಶಯವಿಲ್ಲಾ. ಎಲ್ಲಾ ದಿನವೂ ಚೆನ್ನಾಗಿರುವುದಿಲ್ಲಾ ಹಾಗೂ ನಮ್ಮದಾಗಿರುವುದಿಲ್ಲಾ ನಿಜಾ…ಆದರೆ, ಪ್ರತಿಯೊಂದು ದಿನದಲ್ಲಿ ಏನಾದರೊಂದು ಚೆಂದದ ಸಂಗತಿ ಇದ್ದೇ ಇರವುದಲ್ಲವೇ!? ಹಾಗೇ ಪ್ರತಿಯೊಂದರಲ್ಲೂ ದುಡುಕದೆ ಒಳಿತನ್ನು ಹುಡುಕುವ ಮೃದು ಮನ ನಮ್ಮದಾಗಲೆಂದು ಬಯಸುತ್ತಾ ನಿಮ್ಮೆಲ್ಲರ ಬಾಳು ಸಹ ಹಸನಾಗಲೆಂದು ಆಶಿಸುತ್ತಾ ನನ್ನೀ ಬರವಣಿಗೆಗೆ ವಿರಾಮ ನೀಡುತ್ತಿದ್ದೇನೆ.
🙏ಸರ್ವೇ ಜನಾಃ ಸುಖಿನೋ ಭವಂತು…🙏
✍️ ಶ್ರೀಮತಿ ಶಿಲ್ಪಾ ಎಲ್. ಎಮ್
🏛 ಬೆಂಗಳೂರು