ಗಜಲ್
********

ಮಳೆಗಾಲದ ಹನಿ ನೋಡಲು ಕನಸೊಂದು ಬೀಳಬೇಕು
ಬಿರುಕುನೆಲದಲಿ ಚಿಗುರೊಡೆಯಲು ಕನಸೊಂದು ಬೀಳಬೇಕು.

ಕನಸನ್ನೇ ಹೆರುವ ಕಣ್ಣೀಗ ಕರಿ ಮೋಡವನ್ನೇ ಹುಡುಕುತಿವೆ
ನದಿ ಮೇಲೆ ಪನಿಯೊಂದು ಮಿಂಚಲು ಕನಸೊಂದು ಬೀಳಬೇಕು.

ಆಸರೆಯೇ ನಮಗೆಲ್ಲ ಈ ಧರಣಿಯೂ ಬಡವಾಗಿ ಹೋದಳಲ್ಲ!
ಸಿರಿ ಇಲ್ಲದ ಕಾಡಲ್ಲಿ ಹೂವೊಂದು ನಗಲು ಕನಸೊಂದು ಬೀಳಬೇಕು

ಬತ್ತಿಹೋಗಿವೆ ಜಲಪಾತಗಳು ಗಿರಿಶಿಖರುಗಳೂ ಕಳೆಗುಂದಿವೆ
ಕಲೆಗಾರ ಬರೆದ ತೋರಣಕೆ ಜೀವ ಬರಲು ಕನಸೊಂದು ಬೀಳಬೇಕು.

ಎದೆಗೂಡಲ್ಲಿ ಬಚ್ಚಿಟ್ಟುಕೊಂಡಿದ್ದಾಳೆ ಹಡೆದವ್ವ ಚೂರು ತುತ್ತೊಂದನು
ಗಿಡಮರಗಳಲ್ಲಿನ ಕೋಕಿಲಗಳ ದನಿಕೇಳಲು ಕನಸೊಂದು ಬೀಳಬೇಕು

ರವೀ ಸರಿಸಬಾರದೆ ಶವಪೆಟ್ಟಿಗೆಯೆಂಬ ಬಾನೆತ್ತರದ ಕಟ್ಟಡಗಳನು
ಆಳ ನೆಲದಲ್ಲವಿತು ಕೂತ ಗಂಗೆ ಚಿಮ್ಮಲು ಕನಸೊಂದು ಬೀಳಬೇಕು

– ರವಿ ವಿಠ್ಠಲ ಆಲಬಾಳ
(ಕನ್ನಡಿಗ ರವಿ)