ವಿಶ್ವಾಸ್ ಡಿ. ಗೌಡ
ಸಕಲೇಶಪುರ

…. ಮುಂದುವರೆದ ಭಾಗ

ಗಾಳಿ ಹಾಗೂ ಪ್ರಕೃತಿಯನ್ನು ಸಮರ್ಪಕ ರೀತಿಯಿಂದ ಉಪಯೋಗಿಸಿಕೊಂಡು ಅವುಗಳನ್ನು ಅಭಿವೃದ್ಧಿ ಪಡಿಸಬೇಕು ಹಾಗೂ ಸಂರಕ್ಷಿಸಬೇಕು. ಇವುಗಳಿಂದ ಆಗುವ ಹಾನಿಯನ್ನು ಕೂಡ ಪರಿಸರ ಪೂರಕ ಕ್ರಿಯೆಗಳ ಮೂಲಕ ನಿಯಂತ್ರಿಸಬೇಕು. ನೈಸರ್ಗಿಕ ಹಾಗೂ ಜೈವಿಕ ವಿಧಾನಗಳಿಂದ ಕೀಟ ಹಾಗೂ ರೋಗಗಳ ನಿರ್ವಹಣೆ ಮಾಡಿ ಪರಿಸರದಲ್ಲಿ ಪ್ರಯೋಜಕ ಜೈವಿಕ ಕ್ರಿಯೆಯನ್ನು ಹೆಚ್ಚಿಸುವುದು ಅವಶ್ಯ. ನಮ್ಮ ಕೃಷಿ ಪರಿಸರ ನಿಸರ್ಗದತ್ತ ಅರಣ್ಯ ಪರಿಸರದಂತೆ ಅಭಿವೃದ್ದಿ ಹೊಂದಿ ಎಲ್ಲ ಕ್ರಿಯೆಗಳು ನೈಜ ರೀತಿಯಲ್ಲಿ ಸಾಗಬೇಕು. ಜಾನುವಾರುಗಳು ಕೃಷಿಯ ಒಂದು ಅವಿಭಾಜ್ಯ ಅಂಗ. ಅವುಗಳನ್ನು ಕೃಷಿಯಿಂದ ಬೇರ್ಪಡಿಸುವುದಾಗಲೀ ಅಥವಾ ಯಾಂತ್ರಿಕರಣದಿಂದ ಕೃಷಿ ಪರಿಸರಕ್ಕೆ ಪೂರಕವಾಗಿರಲಾರದು. ಸಾವಯವ ಮೂಲದ ಸಸ್ಯಜನ್ಯ ಹಾಗೂ ಪ್ರಾಣಿಜನ್ಯ ವಿಧಾನಗಳಿಂದ ಪೋಷಕಾಂಶಕಗಳ ನಿರ್ವಹಣೆ ಮಣ್ಣಿನ ವಾತಾವರಣ ಅಭಿವೃದ್ಧಿ, ಮಣ್ಣಿನ ಆರೋಗ್ಯ ಕಾಪಾಡುವುದು ಹಾಗೂ ಕೀಟ ಮತ್ತು ರೋಗಗಳ ನಿರ್ವಹಣೆ ಮಾಡುವುದು ಅವಶ್ಯ. ಸಸ್ಯ ಸಂಪತ್ತು ಹಾಗೂ ಪ್ರಾಣಿ ಸಂಪತ್ತು ಕೃಷಿಯಲ್ಲಿ ವೈವಿಧ್ಯತೆ ತಂದು ಸ್ಥಿರ ಕೃಷಿಗೆ ಸಹಕಾರಿಯಾಗುತ್ತದೆ.

ಸಾವಯವ ಕೃಷಿ ಮೂಲ ತತ್ವಗಳು:

1. ಕಡಿಮೆ ಉಳುಮೆ.

2. ಬೆಳೆಗಳಲ್ಲಿ ಹಾಗೂ ತಳಿಗಳಲ್ಲಿ ವೈವಿಧ್ಯತೆ.

3. ಸಾವಯವ ಪದಾರ್ಥಗಳ ಅಧಿಕ ಬಳಕೆಯಿಂದ ಪೋಷಕಾಂಶಗಳ ನಿರ್ವಹಣೆ ಹಾಗೂ ಮಣ್ಣಿನ ಪರಿಸರ ಕಾಪಾಡುವುದು.

4. ಜೈವಿಕ ಗೊಬ್ಬರಗಳ ಬಳಕೆ.

5. ಮಣ್ಣಿನ ಜೈವಿಕ ಕ್ರಿಯೆ ತೀವ್ರಗೊಳಿಸುವುದು.

6. ಬೆಳೆ ಪರಿವರ್ತನೆ ಮತ್ತು ಸೂಕ್ತ ಬೆಳೆ ಪದ್ಧತಿಗಳಿಂದ ಫಲವತ್ತತೆ ನಿರ್ವಹಣೆ.

7. ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು, ಬೆಳಕು, ಗಾಳಿ ಇತ್ಯಾದಿಗಳ ಸಮರ್ಥ ಬಳಕೆ ಮತ್ತು ಸಂರಕ್ಷಿಸುವುದು.

8. ಕೃಷಿ ಅರಣ್ಯ ಪದ್ಧತಿಗಳ ಉಪಯೋಗ.

9. ಜೈವಿಕ ಕೀಟ ಹಾಗೂ ಪೀಡೆ ನಿರ್ವಹಣೆ.

10. ಸಮಗ್ರ ಕೃಷಿ ಪದ್ಧತಿಗಳ ಬಳಕೆ.

ಸಾವಯವ ಕೃಷಿಯಲ್ಲಿ ರೈತರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ರೈತರ ಉತ್ತೇಜನದಿಂದ ಪ್ರಾರಂಭಗೊಂಡ ಸಾವಯವ ಕೃಷಿ ರೈತರಿಂದ-ರೈತರಿಗೆ ನೇರ ಪ್ರಸಾರ ಹೊಂದುತ್ತಿದೆ. ಕೆಲವು ರೈತರು ಜೈವಿ ಸಮಗ್ರ ರೀತಿಯಿಂದ ಸಾವಯವ ಕೃಷಿ ಅಳವಡಿಸಿ ಅದರಿಂದ ಸಂತುಷ್ಟರಾಗಿ ಅವರ ಕೃಷಿ ಕ್ಷೇತ್ರಗಳು ಸಾವಯವ ಕೃಷಿ ಆಸಕ್ತರಿಗೆ ಮಾರ್ಗದರ್ಶನ ನೀಡುತ್ತಿವೆ. ಈ ಸಾವಯವ ಕೃಷಿ ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದಿ, ವಾಣಿಜೀಕರಣ ಹೊಂದುವುದು ಮತ್ತು ವಿವಿಧ ಮೂಲಗಳ ಮುಖಾಂತರ ತಾಂತ್ರಿಕತೆ ಲಭ್ಯಗೊಂಡು ಇದು ಇನ್ನೂ ಹೆಚ್ಚು ಸದೃಢವಾಗಬೇಕಿದೆ. ಈಗ ಸಾವಯವ ಕೃಷಿಯನ್ನು ಕೆಲವೊಬ್ಬ ಬಲ್ಲ ರೈತರು ಹಾಗೂ ಸಬಲ ರೈತರು ಅತ್ಯಂತ ಉತ್ಸುಕತೆಯಿಂದ ಸೈದ್ದಾಂತಿಕ ರೂಪದಲ್ಲಿ ಕೈಗೊಂಡಿದ್ದಾರೆ. ಆದರೆ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನಮಾನ, ಬೆಲೆ ಸಿಗುವಲ್ಲಿ, ಬಳಕೆದಾರರ ವಿಶೇಷ ಬೇಡಿಕೆ, ರಫ್ತು ಬೇಡಿಕೆ ಅದಕ್ಕೆ ಮಾನ್ಯತೆ ಇನ್ನೂ ಹೆಚ್ಚಿಗೆ ಸಿಕ್ಕಿಲ್ಲ. ಸಾವಯವ ಕೃಷಿ ಸಾಮಾನ್ಯ ರೈತರಿಗೆ ಮುಟ್ಟಬೇಕು, ಅವನಿಗೆ ಶಕ್ಯವಾದ ತಂತ್ರಜ್ಞಾನ ಲಭ್ಯವಾಗಬೇಕು. ಅದರಲ್ಲಿ ಸರಳತೆ ತರಬೇಕು. ಆಧುನಿಕ ಕೃಷಿ ಜೊತೆಗೆ ಇದರ ಸಂಯೋಗವಾಗಬೇಕು. ಅದರಲ್ಲಿರುವ ಮಹತ್ತರ ಪರಿಸರಪೂರಕ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ, ಉತ್ಪಾದನೆ ಹೆಚ್ಚಿಸುವ, ಸಾವಯವ ಮೂಲಗಳನ್ನು ಅಭಿವೃದ್ಧಿ ಪಡಿಸುವ, ಕೃಷಿ ವೆಚ್ಚ ಕಡಿಮೆ ಮಾಡುವ ತಾಂತ್ರಿಕತೆಗಳು ಹಾಗೂ ವಿಶಾಲ ಜ್ಞಾನ, ಸಾವಯವ ಕೃಷಿಯನ್ನು ಇನ್ನೂ ಸದೃಢ ಮಾಡಬಲ್ಲದು. ಸಾವಯವ ಕೃಷಿಯ ಬಗ್ಗೆ ಕೃಷಿ ತಜ್ಞರು, ವಿಜ್ಞಾನಿಗಳು, ಆಡಳಿತಗಾರರು ಹಾಗೂ ರಾಜಕಾರಣಿಗಳು ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ನಮ್ಮ ಕೃಷಿ ಯೋಜನೆಯನ್ನು ಇದಕ್ಕೆ ಪೂರಕವಾಗಿ ಮಾರ್ಪಾಡು ಮಾಡಿಕೊಳ್ಳುವ ಅವಶ್ಯಕತೆ ಇದೆ.