ಶ್ರೀಯುತ ಡಾ. ಪ್ರಕಾಶ ಖಾಡೆ’ಯವರ ‘ಬಾಳುಕುನ ಪುರಾಣ’ ಕಥಾ ಸಂಕಲನದ ‘ಬುದ್ದ ಪ್ರಿಯೆ ಶಾಂತಿ’ ಕಥೆಯ ಕುರಿತು
ಶ್ರೀಯುತರ ಕಥೆಯ ಹೆಸರು ‘ಬುದ್ದ ಪ್ರಿಯೆ ಶಾಂತಿ’ ಎಂದಾಗ ನಾನಿಲ್ಲಿ ಇತಿಹಾಸ ಕಂಡ ಏಷ್ಯಾದ ಬೆಳಕು ಬುದ್ಧನ ಕುರಿತಾದ ಕಥೆ ಎಂದು ಮೇಲ್ನೋಟಕ್ಕೆ ಭಾವಿಸಿದ್ದುಂಟು. ಆದರೆ ಈ ಕತೆಯಲ್ಲಿನ ಬುದ್ದ ಪ್ರಿಯೆ ಶಾಂತಿಯೇ ಬೇರೆ, ಇಲ್ಲಿ ಬುದ್ದ, ಪ್ರಿಯೆ ಮತ್ತು ಶಾಂತಿ ಈ ಮೂರು ಕಥೆಯ ಪಾತ್ರಗಳು. ಈ ಕಥೆಯು ಓದುತ್ತಾ ಹೋದಂತೆ ಅಲ್ಲಲ್ಲಿ ವಿಚಿತ್ರ ತಿರುವನ್ನ ಪಡೆದುಕೊಳ್ಳುತ್ತದೆ. ನಮ್ಮ ಬಾಗಲಕೋಟೆ ಜಿಲ್ಲೆಯವರಿಗೆ ಅತ್ಯಂತ ಆಪ್ತವೆನಿಸುವ ಕಥಾ ಅಂದರೆ ಇದಾಗಿದೆ.ಏಕೆಂದರೆ ಈ ಕಥೆಯಲ್ಲೂ ಬರುವಂತಹ ಇಳಕಲ್ಲ ಸೀರೆ, ಗುಳೇದಗುಡ್ಡ ಖಣ, ಅಮಿನಗಡ ಕರದಂಟು ಮಾಲಿಂಗಪುರ ಬೆಲ್ಲ ಬಾದಾಮಿಯ ಬಾದಾಮಿ ಬನಶಂಕರಿ, ಮೇಣ ಬಸದಿ ಗುಡ್ಡಗಳು, ಮಹಾಕೂಟ ರಾಚೊಟೆಪ್ಪನ ಜಾತ್ರೆ,ನಂದಿಕೇಶ್ವರ, ಅಗಸ್ತ್ಯ ತೀರ್ಥ, ಗುಡ್ಡದ ವಾರಿಯ ಬತ್ತಿರೇಶ, ಕ್ಯಾದಿಗಿ ವನ, ಕೆರೂರು, ಗದ್ದಿಗಿ ಮಠ, ಮಾನ್ವಿಯವರ ಓಣಿ, ಕೆಂಧೂಳಿಯವರ ಓಣಿ, ದಡಿಯವರ ಓಣಿ, ಎ.ಆರ್. ಹಿರೇಮಠ ಹೈಸ್ಕೂಲ್, ಹಳ್ಳಿಕೇರಿ ಗುಡ್ಡ, ಲೋಕಾಪುರ, ಕಟಗೇರಿ, ಅಗಸನಕೊಪ್ಪ, ಹಲಕುರ್ಕಿ, ಕೆಲವಡಿ, ತೆಗ್ಗಿ, ಹಂಸಸನೂರ, ಕುಟುಕನಕೇರಿ, ಹಾಲಿಗೇರಿ ಪೀರ, ರಡ್ಡೇರ ತಿಮ್ಮಾಪುರದ ಕರಡಿ ಮೇಳ, ಅನವಾಲದ ಶಹನಾಯಿ ಮೇಳ, ಚಿಚಖಂಡಿ ಪತ್ತಾರ, ಬಾಗಲಕೋಟೆಯ ಅಂಬಾಜಿ ಸುಗತೆಕರ್ ತಂಡ ಇವೆಲ್ಲವೂ ಬಾಗಲಕೋಟೆಯ ಮಣ್ಣಿಗೆ ಸಂಬಂಧಿಸಿದಂತಹ ಸ್ಥಳಗಳು ಮತ್ತು ಪಾತ್ರಗಳಾಗಿವೆ.
ಕಾಲೇಜಿನಲ್ಲಿ ಆರಂಭವಾದ ಕಥೆ ಮ್ಯಾರೇಜಿನಲ್ಲಿ ಮುಕ್ತಾಯವಾಗುತ್ತದೆ. ಶಾಂತಿಗೆ ಬಾಲ್ಯದಲ್ಲಿ ವಿವಾಹ ಆದರೆ ಕಾಲೇಜಿನಲ್ಲಿ ಬುದ್ದ ಮೇಲೆ ಮೋಹ,ಇತ್ತ ಬುದ್ದಪ್ಪ ಇತ್ತ ದಡ್ಡನೂ ಅಲ್ಲ, ಜಾಣನೂ ಅಲ್ಲ. ಮಾವ ಕರೆದುಕೊಂಡು ಹೋಗಿ ತನ್ನ ಮಗಳೊಂದಿಗೆ ಬಲವಂತದ ಮದುವೆ ಮಾಡಿಸಿದ್ದ. ಆ ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾದರೆ, ಈ ಬುದ್ದ ಮತ್ತು ಶಾಂತಿಗೆ ಹೊನ್ನಕುಸುಮ ಮರದ ಕೆಳಗೆ ಪ್ರೇಮೋದಯ, ಅ ಪ್ರೇಮ ಅಥವಾ ಮೋಹದ ಬೀಜವು ಶಾಂತಿಯಲ್ಲಿ ಚಿಗುರೊಡದಿತ್ತು ಆದರೆ ಬುದ್ಧನಲ್ಲಿ ಬೆಳವಣಿಗೆಯೇ ಆಗಿರಲಿಲ್ಲ. ಮೇಲೆ ಬಿದ್ದು ಬಿದ್ದು ಪ್ರೀತಿಸುವ ಶಾಂತಿ ಬಿದ್ದಷ್ಟು ಒದ್ದು ಒದ್ದು ನಡೆಯುವ ಬುದ್ದ, ಹೀಗೆ ಇವರ ನಡುವೆ ಒಂದು ಪ್ರೇಮ ಯುದ್ಧ ನಡೆದಿದ್ದಂತೂ ನಿಜ. ಕಥೆಯ ಉದ್ದಕ್ಕೂ ಬಾದಾಮಿ, ಮಹಾಕೂಟ ಹೀಗೆ ಹತ್ತಲವು ಐತಿಹಾಸಿಕ ಸ್ಥಳಗಳ ಜೊತೆ ಕಥೆಯ ಬೆಸುಗೆ ಸಾಗುತ್ತಲೇ ಇರುತ್ತದೆ. ಕಾಲೇಜಿನಲ್ಲಿ ಕೈಗೊಂಡ ಎನ್ಎಸ್ಎಸ್ ಕ್ಯಾಂಪು ದಾರಿಯಲ್ಲಿ ಬಿಕೆಟ್ಟು ಓಡಿದ ವಿದ್ಯಾರ್ಥಿಗಳು ಹೊನ್ನ ಕುಸುಮ ಮಾರದ ಕೆಳಗಡೆ ಸೇರಿದ ಬುದ್ಧ ಮತ್ತು ಶಾಂತಿ ಅಲ್ಲೊಂದು ಮಿಂಚು, ಮೋಹ, ಸೆಳೆತ ಇವುಗಳ ಹುಟ್ಟುಹೊನ್ನ ಕುಸುಮ ಮರದ ಹಿಂದಿನ ಒಂದು ರೋಚಕ ಘಟನಯಂತೂ ಅತ್ಯದ್ಭುತ ತಿರುವು ನೀಡುವಂತದ್ದು. ಮೋಡಿಯಾಟ ಆಡಿ ಆಡಿ ಸುಕುಗಟ್ಟಿದ್ದ ಸುಕುಮಾರ ಹೊನ್ನ ಮರದಡಿ ಸುಖವನ್ನು ಹೊಂದಿ ಸುಕಮುನಿಯಾದದ್ದು, ಜಾತ್ರೆಯಲ್ಲಿ ತಪ್ಪಿಸಿಕೊಂಡು ಅಕಸ್ಮಾತಾಗಿ ಸುಕಮುನಿಗೆ ಮುಖಾಮುಖಿಯಾದ ಚಿನ್ನದಾಸಿ ಉರ್ಫ್ ಚಿನ್ನಕ್ಕ. ಇವರಿಬ್ಬರ ಬೆಸುಗೆ, ಒಸಗೆ ಮತ್ತು ಮದುವೆ. ಒಂದು ಹೆಣ್ಣು ಮಗುವನ್ನು ಕರುಣಿಸಿ ಕಣ್ಮರೆಯಾದ ಸುಕಮುನಿ, ಅದೇ ಹೆಣ್ಣು ಮಗು ಶಾಂತಿ ಎಂಬುದು ರೋಚಕ ತಿರುವು. ಮಗಳು ದೊಡ್ಡವಳಾಗಿದ್ದರೂ ವಿದ್ಯಾಭ್ಯಾಸದ ಸಲುವಾಗಿ ಗಂಡನ ಮನೆಗೆ ಕಳಿಸಿದ ಚಿನ್ನಕ್ಕ, ಅದೇ ಮಗಳು ಬುದ್ದನ ಮೇಲೆ ಪ್ರೀತಿ-ಗೀತಿ ಅಂತ ಅವಳ ಭವಿಷ್ಯ ಫಜೀತಿಯಾಗುತ್ತದೆಂಬುದನ್ನರಿತು ತರಾತುರಿಯಲ್ಲಿ ಶಾಂತಿಯನ್ನು ಗಂಡನ ಮನೆಗೆ ಕಳುಹಿಸಿಕೊಡುತ್ತಾಳೆ. ಇತ್ತ ಬುದ್ದ ಮಾವನ ಮಗಳು ಪ್ರಿಯೆಯನ್ನು ಮದುವೆಯಾಗಿದ್ದು, ಪ್ರಿಯೆಗೆ ಬುದ್ದನಿಗಿಂತ ಬಂಗಾರವೇ ಹೆಚ್ಚು ಪ್ರಿಯ. ಸಾಹುಕಾರಕಿಯ ಸೊಕ್ಕಂತೂ ಇದ್ದದ್ದೇ. ಆ ಬಂಗಾರದ ಮೇಲೆ ಹಾಲಿಗೆರಿ ಪೀರಾ ಎಂಬ ಕಳ್ಳನ ಕಣ್ಣು, ಅಂತೂ ಇಂತೂ ಕಳ್ಳ ಬಂಗಾರವನ್ನು ಕದ್ದು ಹೊತ್ತೇ ಬಿಡ್ತಾನ. ಇತ್ತ ಬಂಗಾರವನ್ನು ಕಳೆದುಕೊಂಡ ಪ್ರಿಯೆ, ನೀರಿಂದ ಹೊರಬಂದ ಮೀನಿನ ತರ ವಿಲವಿಲ ಒದ್ದಾಟ, ರಂಪಾಟ ಶುರುವಿಟ್ಟುಕೊಂಡದ್ದು, ಅಲ್ಲೇ ಒಂದಷ್ಟು ಕಲಾವಿದರ ತಂಡ ತತ್ವಪದಗಳ ಮೂಲಕ ತಮ್ಮ ಕಲಾ ಪ್ರದರ್ಶನದ ಮೂಲಕ ಈ ಬಂಗಾರ ಆಸ್ತಿ ಇವೆಲ್ಲವೂ ಶಾಶ್ವತವಲ್ಲ ಎಂಬುದರ ಅರಿವು ಮೂಡಿಸುವ ಘಟ್ಟ, ತದನಂತರದಲ್ಲಿ ಬಂಗಾರ ಸಿಗ್ತದ, ಆದರೆ ಅದರ ಮೇಲಿನ ವ್ಯಾಮೋಹ ಕಳೆದುಹೋಗ್ತದ. ಕೊನೆಯಲ್ಲಿ ಶಾಂತಿ ಗಂಡನೊಂದಿಗೆ ಹನಿಮೂನಿಗೆ, ಇತ್ತ ಬುದ್ದ ಪ್ರಿಯೆಯ ಜೊತೆ ಕೊಲ್ಲಾಪುರದ ಶ್ರೀ ಮಹಾಲಕ್ಷ್ಮಿ ದೇವಿ ದರ್ಶನಕ್ಕೆ ಹೋಗುವುದರ ಮೂಲಕ ಕಥೆ ಸುಖಾಂತ್ಯ ಹೊಂದುತ್ತದೆ.
ಮತ್ತೆ ಮುಂದಿನ ಕಥೆ ‘ಇಲ್ಲಿಂದ ಮೇಲೆ ಶಬ್ದವಿಲ್ಲ’ ಇದರ ತಿರುಳನ್ನು ಸದ್ದು ಮಾಡುತ್ತ ಭೇಟಿಯಾಗುತ್ತೇನೆ, ಅಲ್ಲಿಯವರೆಗೆ ಧನ್ಯವಾದಗಳು.
ಮಹಾಂತೇಶ ಆರ್.ಕುಂಬಾರ (ಎಮ್ಮಾರ್ಕೆ)
ಶಿಕ್ಷಕ ಸಾಹಿತಿಗಳು,ರನ್ನ ಬೆಳಗಲಿ