ಬತ್ತಿದ ಕಂಬನಿ

ಬದುಕು ಮಾರಿಕೊಂಡವರು ನಾವು
ದೇಶಕ್ಕೆ ಸ್ವಾತಂತ್ರ್ಯ ಬಂದರೂ ಕಾಡುತ ನೋವು
ಇನ್ನೂ ಇಲ್ಲಿ ಹೆಣ್ಣಿಗಿಲ್ಲ ರಕ್ಷಣೆಯ ಬೇಲಿ
ಮೋಸ,ವಂಚನೆ,ಸುಲಿಗೆ ತುಂಬಿದೆ ಬಾಳಲ್ಲಿ !!

ನಲುಗುತಿದೆ ದೈತ್ಯರ ಕೈಯಲ್ಲಿ ಬದುಕು
ಆದರೂ ಹಾಕಿದೆ ಮರ್ಯಾದೆಯ ಮುಸುಕು
ರೆಕ್ಕೆ ಮುರಿದ ಹಕ್ಕಿಯಂತೆ ಯಾತನೆ ಸಹಿಸಿ
ಸೋತು ಹೋದರು ಮುಳ್ಳಿನ ಹಾದಿ ಸವೆಸಿ !!

ನಾಳೆಗಳ ಭರವಸೆಯ ಕಾಣದೆ ನೀರಸವಾಗಿ
ನಿಸ್ತೇಜ ಕಂಗಳಲ್ಲಿ ಬತ್ತಿರುವುದು ಕಂಬನಿ
ನಗುವನ್ನೇ ಕಾಣದೆ ಕತ್ತಲಲ್ಲಿ ಕಳೆದು ದಿನ
ಕೊಂಡವರ ವಸ್ತುವಾಗಿ ಮುದುಡಿದೆ ಮನ !!

ನಮ್ಮತನವಿಲ್ಲದೆ ಅಸ್ತಿತ್ವ ಕಳೆದುಕೊಂಡು
ಪ್ರೀತಿ, ಪ್ರೇಮದ ಅರ್ಥವನರಿಯದ ಬಾಳು
ಎಂದು ಮುಗಿಯುವುದೋ ಕಾಯುವವರಾರು
ಆದರೂ ಜೀವಿಸಿರುವೆ ಕೊನೆಯೆಂದೋ ಕಾಣೆನು !!

ಎ.ಸರಸಮ್ಮ
ಚಿಕ್ಕಬಳ್ಳಾಪುರ