ಋತುಗಾನ ಮಿಡಿತ 
“”””””””””””””””””
ನಗುತ ಬಂದ ವಸಂತ
ಜೀವ ರಸಗಳ ತುಂಬುತ
ಹುಲ್ಲಿನಲ್ಲೂ ಹೂವನರಳಿಸಿ
ಬಂಜರು ಬಯಲಲ್ಲೂ ಹಸಿರ ನಗೆಯುಕ್ಕಿಸಿ
ಯೌವನದ ಕಾಂತಿ ಉಗಮಿಸಿ

ಜಗಮಗಿಸುವ ನಕ್ಷತ್ರಗಳ ಇರುಳು
ದಹಿಸುವ ಉರಿಮಂಡಲ ಹಗಲು
ಬಾನು ಭುವಿಯ ಸ್ನೇಹದೂಲುಮೆಯಲಿ
ಜೀವಗಂಗೆಯ ಸುಮ ಸೌಗಂಧದ ಕಂಪಲಿ

ಋತು ಸಂವತ್ಸರ ಸಂಚಾರದ  ಮಿಡಿತ
ಹೂಂಗೆ ಮಾಮರದಿ ಭೃಂಗಗಳ ಸಂಗೀತ
ಮೊಗ್ಗು ಹೂವಾಗಿ ಬೆಳದಿಂಗಳ ಚೆಲುವಾಗಿ
ಸರ್ವಸೃಷ್ಟಿಯ ಚಿತ್ಕಲೆಯಲಿ ಪ್ರಕೃತಿ ಪಲ್ಲವಿಸಿ

ವಸಂತನ ವದನಕೆ ಒಲವಿನ ಲಗ್ಗೆ
ಹೂಬಳ್ಳಿ ಸುವ್ವಾಲಿ ಹಾಡಾಗಿ
ಜಡವಾದ ವೃಕ್ಷಗಳಿಗೆ ಹೂಗುಚ್ಛಗಳ ಅಪ್ಪುಗೆ
ನಿಸರ್ಗ ಸಿರಿ ಸಂಪದಕೆ ಹಕ್ಕಿಗಳ ಸಂಭ್ರಮ

ಮೂಡಿ ಮಾಮರದಿ ಮಿಡಿಮೊಗರು
ಯುಗಾದಿ ಸಂವತ್ಸರ ಸ್ವಾಗತದ ಆಮಂತ್ರಣ
ಮೇಘಮಾಲೆಯ ಹನಿಹನಿ ಸಿಂಚನ
ಸೃಷ್ಟಿಕರ್ತನ ಅನಂತತೆಯ ವಿಸ್ಮಯ ತಾಣ

– ಯಶೋಧ ರಾಮಕೃಷ್ಣ , ಮೈಸೂರು