ಪೆಟ್ಟು ಬೀಳುತಿಹ
ಗುಟ್ಟನರಿಯದೆ ಬಾಳಲಿ
ಸಿಟ್ಟಿನಲಿ ಗುರುಗುಟ್ಟುತ
ಹಪಹಪಿಸಿ ನಿಂದಿಸುವ ಚಪಲ
ಬಿಟ್ಟಿ ಸಿಕ್ಕರೂ ತಿನ್ನಲಾರೆ
ತಟ್ಟೆಯಲಿಟ್ಟ ಅನ್ನದಗುಳಲಿ
ಇಟ್ಟಿರದೆ ನಿನ್ನ ಹೆಸರನು
ಕಾಣದ ಶಕ್ತಿಯಲಿ ನಂಬಿಕೆಯಿರದೆ
ಗಟ್ಟಿಸಿ ಕೇಳುವುದ್ಯಾರನು
ನಂಬಿಕೆಟ್ಟವರಿಲ್ಲ ಮನವೇ

ರತ್ನಾಬಡವನಹಳ್ಳಿ

ಶುಭೋದಯ ನುಡಿ
Good Morning

ಮುಂಜಾವಿನ ಮಾತು

ಹಸಿವಿನ ಬಾಧೆ ಅರಿವ ಮುನ್ನ
ಹದವಾದ ಭಕ್ಷ್ಯ ದೊರೆತರೆ
ಬಸಿವ ಬೆವರಿನ ಮೌಲ್ಯ
ಮನಕೆ ಮುಟ್ಟುವುದೆಂತು
ಶ್ರಮದ ಬೆಲೆತಿಳಿವುದೆಂತು
ಕ್ರಮಬದ್ಧತೆಯ ನಡೆ ಕಲಿವುದೆಂತು
ಬೇವು ಬೆಲ್ಲ ಸವಿವುದೆಂತು
ಹೇಳು ನೀ ಮನವೇ

ರತ್ನಾಬಡವನಹಳ್ಳಿ

ಶುಭೋದಯ
ಶುಭೋದಯ

ಮುಂಜಾವಿನ ಮಾತು

ತುಂತುರು ಮಳೆಹನಿಗೆ
ಮೊಗವೊಡ್ಡಿ ನಿಲ್ಲಬಹುದು
ಬೆಳಗಿನ ಕಿರಣಗಳ ಸ್ಪರ್ಶ
ಹಿತವೆನಿಸಲುಬಹುದು
ಮಧುರ ಮಾತುಗಳ
ಹಿತವಾಗಿ ಆಲಿಸಬಹುದು
ಬಿರುಮಳೆ ಉರಿಬಿಸಿಲು
ಕಡುನುಡಿಗಳ ಹಾವಳಿಯ
ಬಯಸುವುದುಂಟೇನು
ಸರಳತೆಯ ಸಾಕಾರ ನೀ ಮನವೇ

ರತ್ನಾಬಡವನಹಳ್ಳಿ

ಶುಭೋದಯ
ಶುಭೋದಯ

ಮುಂಜಾವಿನ ಮಾತು

ಮುನ್ನುಡಿ ಬೆನ್ನುಡಿಯ
ಬರೆವವರು ಯಾರಾದರಾಗಲಿ
ಹಾಳೆಗಳಲಿ ಜೀವ ತುಂಬಿದವರು
ಯಾರಾದರಾಗಿರಲಿ
ಪುಟಗಳ ಮೃದುವಾಗಿ
ತಿರುವಿಹಾಕುವ ಕೈ
ನಮ್ಮದೇ ಆಗಿದ್ದರೆ ಚಂದ
ಎನ್ನುವುದ ಅರಿತಿರುವೆ ಮನವೇ

ರತ್ನಾಬಡವನಹಳ್ಳಿ

ಮುಂಜಾವಿನ ಮಾತು

ಅರೆಬರೆ ತುಂಬಿದ
ತುಳುಕಾಡುವ ಕೊಡಹೊತ್ತು
ಕುಲುಕುತ್ತ ನಡೆಯುತ್ತ
ಒದ್ದೆಯಾಗಿ ನಿಲ್ಲಲೇಕೆ
ನೀರು ಅಲುಗಾಡದ ಹಾಗೆ
ತುಂಬು ಬಿಂದಿಗೆ ಹೊತ್ತು
ಶುದ್ದ ನಡೆಯಲಿ ನಡೆದರೆ
ಎಂತ ಚೆನ್ನ ಬಾಳೆನುವ ದೇವ
ಭಾವಪೂರ್ಣ ನಮನ ನಿನಗೆ
ಅಡಿಗಡಿಗೆ ನೆನಪಿಸುವ ಮನವೇ

ರತ್ನಾಬಡವನಹಳ್ಳಿ

ಮುಂಜಾವಿನ ಮಾತು

ಸಮಸ್ಯೆಯೆಂಬುದು
ಗುಡಿಸಲ ಗರಿಯಲಿಲ್ಲ
ಅರಮನೆಯ ಸಿರಿಯಲಿಲ್ಲ
ಸೃಷ್ಟಿಸಿಕೊಳ್ಳುವ ಜೀವನದಲ್ಲಿದೆ
ಹೊತ್ತು ತಂದ ಕರ್ಮಫಲದಲ್ಲಿದೆ
ಹೊರುವ ಜೀವದಲ್ಲಿದೆ
ನಿಭಾಯಿಸುವ ದಕ್ಷತೆ ತರುವ
ಶಕ್ತಿ ನಿನ್ನಲ್ಲಿದೆ ಮನವೇ

ರತ್ನಾಬಡವನಹಳ್ಳಿ

ಮುಂಜಾವಿನ ಮಾತು

ಎಣ್ಣೆಯಾವುದು ಕಾಳ್ಯಾವುದು
ಯಾವುದರ ಪರಿವೆಯಿಲ್ಲದೆ
ಗಾಣದ ಎತ್ತಿನಂದದಿ
ಮಾನವ ಜನುಮದರಿವಿಲ್ಲದೇ
ಸುತ್ತುವುದೇ ಬದುಕಲ್ಲ
ದುಡಿವುದು ಉಣ್ಣುವುದು
ಗಳಿಸುವುದು ನಿದ್ರಿಸುವುದು
ಸಹಜವು ವಿಶೇಷವಾಗು ಮನವೇ

ರತ್ನಾಬಡವನಹಳ್ಳಿ

ಶುಭೋದಯ ನುಡಿ
Good Morning

ಮುಂಜಾವಿನ ಮಾತು

ಉತ್ತಮರ ವೇಷ ಧರಿಸಿದಾಕ್ಷಣ
ಶ್ರೇಷ್ಠನೆನಿಸಲು ಸಾಧ್ಯವೇ
ನಡೆ ನುಡಿ ಆಚಾರ ವಿಚಾರ
ಸನ್ನಡತೆಯಲಿ ಪರಿಶುದ್ಧನಾದರೆ
ದೈವತ್ವದ ನೆರಳಲಿ ಹಾಯಾಗಿರಬಹುದಲ್ಲದೇ
ನಟನೆಯಿಂದಲ್ಲ‌ ಮನವೇ

ರತ್ನಾಬಡವನಹಳ್ಳಿ

Good Morning
ಶುಭೋದಯ ನುಡಿ

ಮುಂಜಾವಿನ ಮಾತು

ಒಪ್ಪವಾದ ನಡೆಯಲ್ಲೂ
ಎಡವದೇ ನಡೆವ
ತಪ್ಪೆಸಗದಿಹ ಮನುಜನಿರನು
ತಪ್ಪೊಪ್ಪುವ ಮನಸಿರಲು
ಒಪ್ಪಿಸುವ ರೀತಿಗೊಂದು
ನೀತಿಯಿರೆ ಸೊಗಸಿಹುದು
ಬೆಪ್ಪರಾಗಿಸಿ ಬಾಯ್ಮುಚ್ಚಿಸಿ
ತೆಪ್ಪಗಾದರೇನು ಚಂದ ಮನವೇ

ರತ್ನಾಬಡವನಹಳ್ಳಿ

Good Morning
ಶುಭೋದಯ ನುಡಿ  
ಖಾದ್ಯದ ರುಚಿ ಹಲವಿರಲು
ಸವಿಯಲಿಲ್ಲಿ ಸ್ವಾದವು
ಇತಿಮಿತಿ ಮೀರಿದರಿಲ್ಲಿ
ಕಾಣದು ಆರೋಗ್ಯವು
ವಾದ್ಯದ ತಂತಿ ಮೀಟುವಲ್ಲಿ
ಅರಳಬೇಕು ನಾದವು
ನರಳಿದರೆ ಮಧುರವಲ್ಲ
ಆರಾಧಿಸುವ ಗಾನವು
ಅರಳುವಿಕೆ ಸವಿಯುವಿಕೆ
ಅರಿತು ನಡೆವೆ ಮನವೇ

– ರತ್ನಾಬಡವನಹಳ್ಳಿ