ಕೋಲಾರ ನೆಲದ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಪ್ರತಿಭೆ
ಕೋಲಾರ ಜಿಲ್ಲೆ ಬರಡು ಭೂಮಿಯಾದರೂ ಈ ನೆಲವು ಕಲೆ ಸಾಂಸ್ಕೃತಿಕ ರಂಗದಲ್ಲಿ ಬಹಳಷ್ಟು ಮುಂಚೂಣಿಯಲ್ಲಿರುವ ಜಿಲ್ಲೆ. ಈ ಮಣ್ಣಿನಲ್ಲಿ ಹಲವಾರು ಪ್ರತಿಭಾವಂತರು ಜನಿಸಿದ್ದಾರೆ. ಈ ಜಿಲ್ಲೆಯು ಪ್ರತಿಭೆಗಳ ತವರೂರು ಹೋರಾಟಗಳ ಬೀಡು. ಇಂತಹ ನೆಲದಲ್ಲಿ ಅಂದಿನ ಕಾಲದಲ್ಲಿಯೇ ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸಿದ ಬಹಳಷ್ಟು ಖ್ಯಾತ ಲೇಖಕರು ಈ ಕೋಲಾರ ಜಿಲ್ಲೆಯವರು ಎಂದು ಅವರನ್ನು ಸದಾ ನೆನೆಯಬಹುದು.
ಇಂದಿನ ಅಧುನಿಕ ಕನ್ನಡ ಸಾಹಿತ್ಯಲೋಕದಲ್ಲಂತೂ ಬಹಳಷ್ಟು ಲೇಖಕರು ಕವಿಗಳು ಕಾದಂಬರಿಕಾರರು ಕವಿಯತ್ರಿಯವರು ಉದಯವಾಗುತ್ತಿದ್ದಾರೆ. ಶಿಕ್ಷಕಿಯಾಗಿ ಶಾಲಾ ಮಕ್ಕಳಿಗೆ ಉಪಯುಕ್ತವಾದ ಪಠ್ಯಪುಸ್ತಕಗಳು ಬರೆಯುತ್ತಾ, ಅದರ ಜೊತೆಯಲ್ಲಿ ಕವಿತೆ ಗಜಲ್ ಕಥೆ ಲೇಖನ ಗಮನ ಸೆಳೆಯುತ್ತಿರುವ ಲೇಖಕಿಯೇ ಶ್ರೀಮತಿ ಡಾ. ಮಮತ ಎಚ್.ಎ.
ಶ್ರೀಮತಿ ಡಾ. ಮಮತ ಎಚ್.ಎ. ರವರು ಕೋಲಾರ ಜಿಲ್ಲೆಯ ವೇಮಗಲ್ ನಲ್ಲಿ ಶ್ರೀ ಅಂಜನಪ್ಪ ಮತ್ತು ತಾಯಿ ಶಾಂತಮ್ಮ ನವರ ಮಗಳಾಗಿ ಜನಿಸಿದರು. ಇವರ ಪ್ರಾಥಮಿಕ ಶಿಕ್ಷಣವು ತಮ್ಮ ಹುಟ್ಟೂರಾದ ವೇಮಗಲ್ ನಲ್ಲಿಯೇ ನಡೆಯಿತು. ಇವರ ತಂದೆ ಅಂಜಿನಪ್ಪರವರು ಸ್ಟೇಟ್ ಬ್ಯಾಂಕ್ ಅಫ್ ಮೈಸೂರಿನ ಉದ್ಯೋಗಿಯಾಗಿದ್ದು, ಈ ವೇಮಗಲ್ ಪ್ರದೇಶದಲ್ಲಿ ಇವರು ಬ್ಯಾಂಕ್ ಅಂಜಿನಪ್ಪ ಎಂದೇ ಅಂದಿನ ಕಾಲದಲ್ಲಿ ಚಿರಪರಿಚಿತರಾಗಿದ್ದರು. ಇವರ ಅಪ್ಪನಿಗೆ ಗೌರಿಬಿದನೂರಿಗೆ ವರ್ಗವಾಯಿತು ಆಗ ಮಮತ’ರವರು ಪ್ರೌಢಶಾಲಾ ಶಿಕ್ಷಣವನ್ನು ಗೌರೀಬಿದನೂರಿನಲ್ಲಿ ಮುಗಿಸಿ ಮತ್ತೆ ಪದವಿಪೂರ್ವ ಶಿಕ್ಷಣವನ್ನು ಸರಕಾರಿ ಪದವಿಪೂರ್ವ ಕಾಲೇಜು ವೇಮಗಲ್’ನಲ್ಲಿ, ಪದವಿಯನ್ನು ಕೋಲಾರದ ಮಹಿಳಾ ಕಾಲೇಜಿನಲ್ಲಿ, ಬಿ.ಇಡಿ ಪದವಿ (ಬಂಗಾರುಪೇಟೆಯ ವಿಷ್ಣು ಕಾಲೇಜಿನಲ್ಲಿ), ಎಮ್.ಇಡಿ ಪದವಿ (ಎಸ.ಜೆ.ಇ.ಎಸ್. ಬೆಂಗಳೂರು) ಎಮ್.ಎ. ಕನ್ನಡ ಹಾಗೂ ಇತಿಹಾಸ (ಹಲಗಪ್ಪ ಮತ್ತು ಕುವೆಂಪು ವಿಶ್ವವಿದ್ಯಾಲಯ) ಪದವಿಯನ್ನು ಪಡೆದರು.
ಬಾಲ್ಯದ ೬ನೇ ತರಗತಿಯಿಂದಲೇ ಅನೇಕ ವೃತ್ತಿಪರ ತರಬೇತಿಗಳನ್ನು ಪ್ರಾರಂಭಿಸಿದರು: ಡಿಪ್ಲೊಮೋ ಇನ್ ಪ್ಯಾಷನ್ ಡಿಸೈನಿಂಗ್, DTP, CAD ಕಂಪ್ಯೂಟರ್ ಕೋರ್ಸ್, ಕರಕುಶಲತೆ, ಟೈಪಿಂಗ್ (Junior & Senior) ಡಿಪ್ಲೊಮಾ ಬ್ಯೂಟೀಶಿಯನ್ ಮುಂತಾದ ತರಬೇತಿಗಳನ್ನು ಪಡೆದು, ವೇಮಗಲ್ ಸುತ್ತ ಮುತ್ತಲಿನ ಗ್ರಾಮೀಣ ಮಹಿಳೆಯರಿಗೆ ಉಚಿತವಾಗಿ ಬ್ಯೂಟೀಷಿಯನ್ ಕೆಲಸ ಮಾಡುತ್ತಿದ್ದರು ಹಾಗೂ ಮಕ್ಕಳಿಗೆ ಹಾಗೂ ಹೆಂಗಸರಿಗೆ ಉಪಯುಕ್ತವಾಗುವಂತೆ ಡ್ರಾಯಿಂಗ್, ಪೇಯಿಂಟಿಂಗ್, ಬಟ್ಟೆ ಕಸೂತಿ, ಕರಕುಶಲತೆ, ಹೊಲಿಗೆ , ಭರತನಾಟ್ಯ ನೃತ್ಯ ತರಬೇತಿಗಳನ್ನು ಬಾಲ್ಯದಲ್ಲಿಯೇ ನೀಡುತ್ತಿದ್ದರು. ಅಂದು ಕೋಲಾರ ತಾಲೂಕಿನಲ್ಲಿಯೇ ಮೊದಲ ಪ್ಯಾಷನ್ ಡಿಸೈನರ್ ಎನ್ನುವ ಹೆಗ್ಗಳಿಕೆ ಅವರದು. ಅನೇಕ ಪ್ಯಾಷನ್ ಶೋಗಳಲ್ಲಿ ವಸ್ತ್ರ ವಿನ್ಯಾಸಗಳನ್ನು ಮಾಡಿ, ಒಂದು ಪ್ಯಾಷನ್ ಶೋ ನಲ್ಲಿ ಅಂದಿಗೆ ಯಾರೂ ಮಾಡದಂತಹ ಅಡುಗೆ ಮನೆಯಲ್ಲಿ ಬಳಕೆ ಮಾಡುವಂತಹ ಅಡುಗೆ ವಸ್ತುಗಳಿಂದ ವಸ್ತ್ರ ವಿನ್ಯಾಸ ಮಾಡಿ ಕರ್ನಾಟಕಾದ್ಯಂತ ಸಂಚಲನ ಮೂಡಿಸಿದ್ದರು.
ತನ್ನ ೧೮ ನೇ ವಯಸ್ಸಿನಲ್ಲಿಯೇ ಆಗಿನ ಕೇಂದ್ರ ಸರ್ಕಾರದ ಹಣಕಾಸಿನ ಮಂತ್ರಿಗಳಾಗಿದ್ದ ಪಿ. ಚಿದಂಬರಂ’ರವರಿಂದ ಯುವ ಸ್ವಯಂ ಉದ್ಯೋಗಿ ಎನ್ನುವ ಪ್ರಶಸ್ತಿಯನ್ನು ಸ್ವೀಕರಿಸಿದರು. ತನ್ನ ತಾಯಿಯಾದ ಶಾಂತಮ್ಮ ಶಿಕ್ಷಕಿಯಾದ ಕಾರಣ ವಿಧ್ಯಾಭ್ಯಾಸದೊಂದಿಗೆ ಸಾಹಿತ್ಯದ ಒಲವನ್ನು ಕೂಡ ಬೆಳೆಸಿಕೊಂಡ ಇವರು ಶಾಲಾದಿನಗಳಿಂದಲೇ ಕನ್ನಡದ ಬರವಣಿಗೆಯನ್ನು ಬರೆಯಲು ಪ್ರಾರಂಭಿಸಿದರು. ಶಾಲಾ ದಿನಗಳಲ್ಲಿಯೇ ಕನ್ನಡದಲ್ಲಿ ಕವಿತೆ, ಕಥೆ ಬರೆಯಲು ಪ್ರಾರಂಭಿಸಿ ಅಮ್ಮನಿಂದ, ಸ್ನೇಹಿತರಿಂದ ಹಾಗೂ ಶಿಕ್ಷಕರಿಂದ ಮೆಚ್ಚುಗೆಯನ್ನು ಪಡೆಯುತ್ತಿದ್ದರು.
ಶ್ರೀಮತಿ ಮಮತ ರವರು ತಂದೆ ತಾಯಿಯ ಸಾಮಾಜಿಕ ಸೇವೆಯನ್ನು ಗಮನಿಸುತ್ತಾ ಬಾಲ್ಯದಿಂದ ಸಮಾಜ ಸೇವೆಗೆ ಮುಂದಾದರು. ಮಮತರವರು ಪ್ರವೃತ್ತಿಯಲ್ಲಿ ಪ್ಯಾಷನ್ ಡಿಸೈನರ್, ವೃತ್ತಿಯಲ್ಲಿ ಶಿಕ್ಷಕಿಯಾಗಿ ವೃತಿಜೀವನವನ್ನು ಪ್ರಾರಂಭಿಸಿದರು. ಮೊದಲು ಪ್ರೇಮ ಸೇವಾ ವಿದ್ಯಾಲಯ ಸಂಸ್ಥೆಯೊಂದರಲ್ಲಿ ಕನ್ನಡ ಮತ್ತು ಚಿತ್ರಕಲೆ ಬೋಧಿಸುವ ಶಿಕ್ಷಕಿಯಾಗಿ ವೃತಿ ಜೀವನವನ್ನು ಆರಂಭಿಸಿ ಬಿಡುವಿನ ವೇಳೆಯಲ್ಲಿ 21ನೇ ವಯಸ್ಸಿನಲ್ಲಿ ಗ್ರಾಮೀಣ ಮಹಿಳೆಯರಿಗೆಂದೇ ಉಚಿತವಾಗಿ ಪ್ಯಾಷನ್ ಡಿಸೈನಿಂಗ್ ತರಬೇತಿಯನ್ನು ಹಾಗೂ ಸ್ವ ಇಚ್ಚೆಯಿಂದ ಬಿಡುವಿನ ಸಮಯದಲ್ಲಿ ಪ್ರೇಮಸೇವ ಸಂಸ್ಥೆಯಲ್ಲಿ ಇದ್ದಂತಹ ಬುದ್ದಿಮಾಂದ್ಯ ಮಕ್ಕಳಲ್ಲಿ ಹುದುಗಿರುವಂತಹ ಕಲೆಯನ್ನು ಗುರುತಿಸಿ ಅವರ ಕಲೆಗೆ ತಕ್ಕಂತೆ ಸೂಕ್ತ ತರಬೇತಿ, ಕರಕುಶಲತೆಯನ್ನು ಕಲಿಸಿ ಅವರಲ್ಲಿ
ನಾವು ಎಲ್ಲರಂತೆ ಕೆಲಸ ಮಾಡಿ ಜೀವಿಸಬಲ್ಲವು ಎನ್ನುವಂತಹ ಮನೋಸ್ಥೈರ್ಯ ಮೂಡಿಸುತ್ತಿದ್ದರು. ಹೀಗೆ ಕೆಲವು NGO ಗಳ ಜೊತೆಗೂಡಿ ಅನಾಥಾಶ್ರಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ೨೦೦೯ ವೈವಾಹಿಕ ಜೀವನಕ್ಕೆ ಅಡಿ ಇಟ್ಟು ಬೆಂಗಳೂರಿನ ಸರ್ಜಾಪುರಕ್ಕೆ ಬಂದು ನೆಲೆಸಿದರು. ಇವರ ಮಾವನವರು ಸಾಹಿತಿಗಳಾದ್ದರಿಂದ ಮಮತ’ರವರಿಗೆ ಕನ್ನಡ ಸಾಹಿತ್ಯದ ಮೇಲೆ ಮತ್ತಷ್ಟು ಒಲವು ಇಮ್ಮಡಿಸಿತು.
ಮದುವೆಯ ನಂತರ ಸರಕಾರಿ ಪ್ರೌಢಶಾಲೆ ಸರ್ಜಾಪುರ, ಇಂಡಸ್ ಇಂಟರ್‌ನ್ಯಾಷನಲ್ ಕಮುನಿಟಿ ಸ್ಕೂಲ್ ಬಿಲ್ಲಾಪುರ, ಮಹಾತ್ಮ ವಿದ್ಯಾಲಯ ಮುತ್ತನಲ್ಲೂರು, ಸಿಲ್ವರ್ ಇಂಟರ್‌ನ್ಯಾಷನಲ್ ಸ್ಕೂಲ್, ಒನ್ ವಲ್ಡ೯ ಇಂಟರ್‌ನ್ಯಾಷನಲ್ ಸ್ಕೂಲ್ ಬೆಂಗಳೂರು ಇಲ್ಲಿ ಕನ್ನಡ ವಿಭಾಗ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ೧೭ ವರ್ಷಗಳ ಅನುಭವದೊಂದಿಗೆ State , ICSE, CBSE & IB ಪಠ್ಯಕ್ರಮದಲ್ಲಿ ಪರಿಣತಿಯನ್ನು ಪಡೆದಿದ್ದಾರೆ.
ಶ್ರೀಮತಿ ಮಮತಾ ರವರು ಬರೀ ತಮ್ಮ ಪ್ರತಿಭಾ ಸಾಮರ್ಥ್ಯವನ್ನು ತನ್ನ ಶಾಲೆಯಲ್ಲಿ ಮಾತ್ರ ಸೀಮಿತಗೊಳಿಸದೇ ಹಲವಾರು ಶಾಲೆಗಳಲ್ಲಿ ಮಾತೃಭಾಷೆ ಕನ್ನಡ ಭೋಧನೆಯ ತರಭೇತಿಯ ಉಪನ್ಯಾಸಗಳನ್ನು ನೀಡಿ ಮಕ್ಕಳು ಕನ್ನಡ ಭಾಷೆಯ ಗ್ರಹಿಕೆ ಸಾಮಾರ್ಥ್ಯವನ್ನು ಹೆಚ್ಚಾಗುವಂತೆ ಮತ್ತು ಕನ್ನಡ ಭಾಷೆಯ ಜ್ಞಾನವನ್ನು ಮಕ್ಕಳಲ್ಲಿ ಬಿತ್ತಲು ಪ್ರಯತ್ನವನ್ನು ಪಟ್ಟಿದ್ದಾರೆ. ಸಾಹಿತ್ಯ ಕಾರ್ಯಕ್ರಮಗಳಲ್ಲಿ ಹಾಗೂ ಶಾಲೆಗಳಲ್ಲಿ ಗೌರವ ಅತಿಥಿಯಾಗಿ ಹಾಗೂ ತೀರ್ಪುಗಾರರಾಗಿ, ಲೇಖಕಿಯಾಗಿ, ಕಥೆಗಾರ್ತಿಯಾಗಿ, ಕವಯಿತ್ರಿಯಾಗಿ, ಗಜಲ್ ಗಾರ್ತಿಯಾಗಿಯೂ ಕೂಡ ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮ ಬರವಣಿಗೆಯನ್ನು ಮುಂದುವರಿಸುತ್ತಾ, ಡಾಕ್ಯುಮೆಂಟ್ರಿ, ಪ್ರೂಫ್ ಕರೆಕ್ಷನ್, ಪುಸ್ತಕಗಳನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದವನ್ನು ಮಾಡಿದ್ದಾರೆ.
ಕೃತಿಗಳು: ಸ್ವ-ಸಂಪಾದಿತ ನಾಲ್ಕು ಕೃತಿಗಳು (ಮಕ್ಕಳ, ಶಿಕ್ಷಕರ ಕವನ & ಲೇಖನಗಳು) ಹಾಗೂ ಬೇರೆ ಬೇರೆ ಸಂಪಾದಕರ ಕೃತಿಗಳಲ್ಲಿ ಸ್ವ ರಚಿತ ಕವನಗಳು ಪ್ರಕಟವಾಗಿವೆ. ೧-೧೦ನೇ ತರಗತಿಯವರಗಿನ ಮಾದರಿ ಪಠ್ಯ ಪುಸ್ತಕಗಳು (ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷೆಗೆ ಸಂಬಂಧಿಸಿದ). 10ನೇ ತರಗತಿಯ CBSE ಕನ್ನಡ ಭಾಷಾವಿಷಯಕ್ಕೆ ಸಂಬಂಧಿಸಿದ ಪ್ರಶ್ನಾಕೋಠಿ ಪುಸ್ತಕಗಳು, ನಾಲ್ಕು ವರ್ಷಗಳಿಂದ ಬರೆದು ಪ್ರಕಟಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ತೃತೀಯ ಲಿಂಗಿಗಳ ಬಗ್ಗೆ ಆಳವಾದ ಅಧ್ಯಯನವನ್ನು ನಡೆಸಿ, “ಕನ್ನಡಿಯಲ್ಲಿ ಕಾಣದ ಬಿಂಬ” ಎಂಬ ಕೃತಿಯನ್ನು ಹೊರತರುವ ಪ್ರಯತ್ನದಲ್ಲಿದ್ದಾರೆ. ಈ ಕೃತಿಯು ಅತ್ಯಂತ ಹಿಂದುಳಿದ ಜನಾಂಗವಾದ ಮಂಗಳ ಮುಖಿಯರ ವ್ಯಥೆ-ನೋವು ಸಮಸ್ಯೆಗಳತ್ತ ಆಕರ್ಷತರಾಗಿ ಅವರು ನಮ್ಮಂತೆಯೇ ಬದುಕುವ ಹಕ್ಕಿದೆ, ಮುಂದಿನ ದಿನಗಳಲ್ಲಿ ಬಿಕ್ಷಾಟನೆ ನಿಲ್ಲಲಿ ಎನ್ನುವ ದೃಷ್ಟಿಯಿಂದ ಈ ಪುಸ್ತಕ ಬರೆದಿದ್ದಾರೆ.
ಇವರ ಹವ್ಯಾಸಗಳು: ಬರವಣಿಗೆ, ಓದು, ಕೈ ತೋಟಗಾರಿಕೆ, ಸಂಗೀತ ಕೇಳುವುದು, ಕರಕುಶಲ ಕಲೆ, ಮತ್ತು ಸಮಾಜಮುಖಿ ಕಾರ್ಯಗಳು, ಗ್ರಾಮೀಣ ಜನತೆಯಲ್ಲಿ ಪರಿಸರ ಹಾಗೂ ನೈರ್ಮಲ್ಯ ಜಾಗೃತಿ ಮೂಡಿಸಲು FM ರೇಡಿಯೋ ಬೆಂಗಳೂರು ಹಾಗೂ ಬಾನುಲಿ ಧಾರವಾಡ ಉಪನ್ಯಾಸ. ಮಹಿಳೆಯರ ಸ್ವಯಂ ಉದ್ಯೋಗಕ್ಕಾಗಿ ಉಚಿತ ತರಬೇತಿಗಳು, ಆಪ್ತ ಸಮಾಲೋಚನೆಯಂತ ಸಾಮಾಜಿಕ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ವಿಶೇಷ ಸಾಧನೆಗಳು Doctorate (ಕನ್ನಡ ಸಾಹಿತ್ಯ) : ಬೆಂಗಳೂರಿನಲ್ಲಿರುವ ಅಂತರಾಷ್ಟ್ರೀಯ ಪ್ರೌಢಶಾಲೆಗಳಲ್ಲಿ ಕನ್ನಡ ಮಾತೃಭಾಷಾ ವಿದ್ಯಾರ್ಥಿಗಳು ದ್ವಿತೀಯ ಭಾಷೆ ಮತ್ತು ಸಾಹಿತ್ಯ ಪ್ರಗತಿಯ ಕುರಿತು ಒಂದು ವರದಿ. ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುವಲ್ಲಿ ಬಿ.ಇಡಿ ಪ್ರಶಿಕ್ಷಣಾರ್ಥಿಗಳ ಪಾತ್ರ ಕುರಿತು ಒಂದು ಅಧ್ಯಯನ.
ಶರಣೆ-ಶರಣರಿಗೆ ಸಂಬಂಧಿಸಿದ ಕವನವನ್ನು ರಚಿಸಿದ್ದಕ್ಕೆ ಲಭಿಸಿದೆ, ಕನ್ನಡ ಬುಕ್ ಆಪ್ ರೆಕಾರ್ಡ್, ಸಿದ್ದೇಶ್ವರ ಸ್ವಾಮಿಯವರ ಜೀವನ ಕುರಿತಾದ ಕವನ ಬರವಣಿಗೆಯಲ್ಲಿ ಕನ್ನಡ ಬುಕ್ ಆಪ್ ರೆಕಾರ್ಡ್ಸ ಹಾಗೂ ವಲ್ಡ್ ಬುಕ್ ಆಪ್ ರೆಕಾರ್ಡ್ ಲಭಿಸಿದೆ.
ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ ಎನ್ನುವಂತೆ ಸಿಮೆನ್ಸ್ ಕಂಪನಿಯ ಚಂದ್ರಶೇಖರ್ ರವರ ಸಹಭಾಗಿತ್ವದಲ್ಲಿ ಖಾಸಗಿ – ಸರ್ಕಾರಿ ಶಾಲೆ- ಇತರೆ ಸಂಸ್ಥೆಗಳಲ್ಲಿ ಗಂಧದ ಗಿಡಗಳನ್ನು ನೆಟ್ಟು ಪರಿಸರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ಶ್ರೀಮತಿ ಮಮತಾರವರು ತನ್ನ ಉಪನ್ಯಾಸಗಳ ಜೊತೆಯಲ್ಲಿಯೇ ಕರ್ನಾಟಕದ ಬಹಳಷ್ಟು ಜಿಲ್ಲೆ ತಾಲ್ಲೂಕು ಮಟ್ಟದ ಕವಿಗೋಷ್ಠಿ ಮತ್ತು ಕನ್ನಡದ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಕಳೆದ ಬಾರಿ ಮೈಸೂರಿನಲ್ಲಿ ನಡೆದ ಪ್ರಸಿದ್ದ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಮತ್ತು ಕರುನಾಡು ಕಲಾ ಸಿರಿ ಬಳಗದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡದ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆಗಳಲ್ಲಿ ಇವರ ಲೇಖನಗಳು ಬರಹಗಳು ಪ್ರಕಟವಾಗಿವೆ.
ಇವರ ಸಾಹಿತ್ಯ ಸೇವೆ ಮತ್ತು ಶಿಕ್ಷಣ ಸೇವೆಯನ್ನು ಗುರುತಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವಾರು ಸಂಘಸಂಸ್ಥೆಗಳು ಇವರನ್ನು ಗೌರವಿಸಿ ಸನ್ಮಾಸಿವೆ. ಇವರು “ದ ಯಂಗ್ ಆಚೀವರ್ ಅವಾರ್ಡ್‌ನ್ನು” ೨೦೨೧ರಲ್ಲಿ ಪಡೆದಿದ್ದಾರೆ. ಕಥಾಬಿಂದು ಪ್ರಕಾಶನ ಮಂಗಳೂರು ಇವರು “ಕನ್ನಡ ತಿಲಕ” ಪ್ರಶಸ್ತಿಯನ್ನು, ರವಿಕಿರಣ ಸಾಹಿತ್ಯ ಪ್ರತಿಷ್ಠಾನ “ಕರುನಾಡ ರತ್ನ” ಪ್ರಶಸ್ತಿಯನ್ನು, ಬೆಳದಿಂಗಳು ಆಶ್ರಯ ಟ್ರಸ್ಟ್ ಬೆಂಗಳೂರು ಇವರು “ಕಾಯಕ ರತ್ನ” ರಾಷ್ಟ್ರ ಪ್ರಶಸ್ತಿಯನ್ನು, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಇವರು “ವಿಶ್ವ ಕನ್ನಡ ಪುನೀತ್ ಸ್ವೂತಿ೯” ಪ್ರಶಸ್ತಿಯನ್ನು, ನವ ಭಾರತಿ ಉದಯ ಪ್ರತಿಷ್ಠಾನ ಇವರು “ಕನ್ನಡದ ಕಣ್ಮಣಿ” ಪ್ರಶಸ್ತಿಯನ್ನು, ಮೇಘಮೈತ್ರಿ ಸಾಹಿತ್ಯ ಸಂಘ ಇವರು “ಸಾವಿತ್ರಿ ಬಾಯಿ ಪುಲೆ” ಪ್ರಶಸ್ತಿಯನ್ನು, ಸಮ್ಮೀಲನ ಸಾಹಿತ್ಯ ಸಂಘ ಬೆಂಗಳೂರು ಇವರು “ಶಾರದಾ ಸುಪುತ್ರಿ” ಪ್ರಶಸ್ತಿಯನ್ನು, ಜನಸಿರಿ ಫೌಂಡೇಶನ್ ಬೆಂಗಳೂರು ಇವರು ಕವಿ ಪ್ರೇರಣ ಪ್ರಶಸ್ತಿಯನ್ನು, ಕವಿವಾಣಿ ಸಾಹಿತ್ಯ ಪರಿಷತ್ತು ಕರ್ನಾಟಕ ಇವರು “ಹೆಮ್ಮೆಯ ಕನ್ನಡತಿ, ಕವಿವಾಣಿ ಸೇವಾರತ್ನ ಪ್ರಶಸ್ತಿ , ಶಿಕ್ಷಕ ರತ್ನ ಪ್ರಶಸ್ತಿಯನ್ನು, ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ಮೈಸೂರು ಇವರು ಕರ್ನಾಟಕ ಕಲಾರತ್ನ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಇವರ ಸಾಹಿತ್ಯ ಕೃಷಿಯು ಹೀಗೆಯೇ ಸಾಗಲಿ, ಶಿಕ್ಷಣ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡ ಸಾಹಿತ್ಯಲೋಕಕ್ಕೆ ಬರಹದ ಮೂಲಕ ಇನ್ನಷ್ಟು ಸೇವೆಯನ್ನು ಸಲ್ಲಿಸಲಿ, ಮುಂಬರುವ ಸಾಹಿತ್ಯವು ನೊಂದ ಮಹಿಳೆಯರ, ಧಮನಿತರ ತಲ್ಲಣಗಳ ಬರಹಗಳನು ಬರೆಯಲಿ, ಇವರು ಲೇಖಕಿಯಾಗಿ ಕರುನಾಡಿನಲ್ಲಿ ಗುರುತಿಸಿಕೊಂಡು ಇನ್ನಷ್ಟು ಗೌರವ ಪುರಸ್ಕಾರಗಳು ಇವರಿಗೆ ಲಭಿಸಲಿ ಎಂದು ಆಶಿಸುತ್ತಾ ಪತ್ರಿಕೆಯ ಪರವಾಗಿ ಹಾಗೂ ವೈಯಕ್ತಿಕವಾಗಿ ಹಾರೈಸುತ್ತೇನೆ.
ನಾರಾಯಣಸ್ವಾಮಿ ವಿ.
ವಕೀಲರು ಮತ್ತು ಲೇಖಕರು
ಮಾಸ್ತಿ ಕೋಲಾರ ಜಿಲ್ಲೆ