ಹೋಳಿ ಹುಣ್ಣಿಮೆ

ಹೋಲಿಕಾ ದೇವಿಯ ದಹನ
ಮದ ಮತ್ಸರಗಳ ದಹನ
ದ್ವೇಷಾಸೂಯೆಗಳ ದಹನ
ವಾಸನೆ ಕಾಮನೆಗಳ ದಮನ
ಸಾಧ್ಯವಿದೆ ಮನುಜನಿಗೆ

ಹಿರಿಯರ ರೂಢಿ ಪರಂಪರೆ
ಸಂಸ್ಕಾರ ಸಂಸ್ಕೃತಿಯ ಹಬ್ಬ
ನೀತಿ ಬೋಧೆಗಳ ಆಚರಣೆ
ಮೊಬೈಲದಲ್ಲಿ ಮುಳುಗಿರುವ
ಮನುಜನಿಗೆ ಸಾಧ್ಯವಿದೆ

ವಸಂತನಾಗಮನ ಎಲ್ಲೆಡೆಗೆ
ಮನಸಿನ ಕನಸು ಚಿಗುರುವಿಕೆ
ಇಚ್ಛೆಆಶೆ ಆಕಾಂಕ್ಷೆಗಳ ಬಯಕೆ
ಕುಹೂ ಕೋಗಿಲೆಯ ಇಂಚರಕೆ
ಸಂತೋಷದಿ ಕುಣಿದಾಡುವ

ಹೊಯ್ಕೊಂಡಬಾಯಿಗೆಹೋಳಿಗೆತುಪ್ಪ
ಮಾವಿನ ಹಣ್ಣಿನ ಸೀಕರ್ಣಿ ಭಜಿ
ಮಾವಿನಕಾಯಿಚಿತ್ರಾನ್ನ ಕೋಸಂಬರಿ
ಭರ್ಜರಿ ಭೋಜನದ ತಯಾರಿ
ಹೋಳಿಹುಣ್ಣಿಮೆಯ ವಿಶೇಷದೂಟ

ಹಲಸು ಮಾವುಗಳ ಘಮಲಿಗೆ
ಮಲ್ಲಿಗೆ ಸಂಪಿಗೆಗಳ ಪರಿಮಳಕೆ
ಬಣ್ಣ ಬಣ್ಣಗಳ ಹೂ ಸೊಬಗಿಗೆ
ಸೂರ್ಯನ ಸುಡು ಬಿಸಿಲ ಧಗೆಗೆ
ನೀರಿನಾಟವಾಡಲು ಬಯಸುವ

ಎಲ್ಲರಲಿ ಜಾತಿಭೇದ ಮರೆಸುವ
ಲಿಂಗಬೇಧ ತೊಡೆದು ಹಾಕುವ
ಮಕ್ಕಳಿಂದ ವೃದ್ಧರವರೆಗೆ ಆಡುವ
ಆನಂದದಿ ಆಡುವ ಏಕೈಕ ಆಟ
ಬಣ್ಣದಾಟ ಹೋಳಿಯಾಟ

ಕವಿಯತ್ರಿ: ಅನ್ನಪೂರ್ಣ ಸಕ್ರೋಜಿ, ಪುಣೆ