ಬಾಳೆ ಬಂಗಾರ (ಅನುಭವ ಕಥನ)
ಒಬ್ಬ ಯುವಕನಿಗೆ ಕೃಷಿ ಮಾಡುವ ಮನಸ್ಸಾಯಿತು. ಆದ್ರೆ ಆ ಯುವಕನ ಬಳಿ ಕೃಷಿ ಮಾಡಲು ಜಮೀನು ಇರಲಿಲ್ಲ.
ಅವನು ಕಷ್ಟಪಟ್ಟು ಅವರ ಇವರ ಬಳಿ ಸಾಲ ಮಾಡಿ ಕೃಷಿ ಜಮೀನು ಕೊಂಡು ಕೊಂಡನು ಆ ಬಳಿಕ ಅವನ ಕೃಷಿ ಬದುಕು ಆರಂಭ ಆಯ್ತು.
ಅವನು ಆರಂಭದಲ್ಲಿ ತುಂಬಾ ಹುರುಪಿನಿಂದ ಕೃಷಿ ಮಾಡಲು ಪ್ರಾರಂಭಿಸಿದನು. ತೋಟ ಮಾಡಲು ಜೆ.ಸಿ.ಬಿ. ತರಿಸಿ ಅಡಿಕೆ ಸಸಿಗಳನ್ನು ನೆಡಲು ಹೊಂಡ ತೊಡಿಸಿ ನೀರಿಗಾಗಿ ಬೋರ್ವೆಲ್ ಹೊಡೆಸಿದನು. ಅವನ ಅದೃಷ್ಟ ಚೆನ್ನಾಗಿತ್ತು, ಆರು ಇಂಚು ನೀರು ಕೂಡ ಬಂತು.
ಆ ಯುವಕನಿಗೆ ಖುಷಿಗೆ ಪಾರವೇ ಇರಲಿಲ್ಲ. ಆ ಜಮಿನಿನ ಸುತ್ತ ಮುತ್ತಾ ಇರುವ ಜನರಿಗೆ ಆ ಜಮೀನಿನಲ್ಲಿ ನೀರು ಬಂದ ಬಗ್ಗೆ ಅಶ್ವರ್ಯ ಚಕಿತರಾದ್ರು. ಯಾಕೆ ಅಂದ್ರೆ ಆ ಜಮೀನು ಗುಡದ್ದ ಮೇಲಿನ ಜಮೀನು ಆಗಿದ್ದಕೆ ಅಲ್ಲಿ ನೀರು ಬರುವ ಲಕ್ಷಣ ಇಲ್ಲವೇ ಇಲ್ಲ ಎಂದು ಈ ಹಿಂದೆ ಮಾತಾಡುತ್ತಾ ಇದ್ದರೂ….
ಆದರೂ ಕೂಡ, ಈ ಯುವಕ ಧೈರ್ಯದಿಂದ ಬೋರವೆಲ್’ನ್ನು ಕೊರೆಸಿದನು. ಈಗ ಅವನು ಜಿ 9 ತಳಿಯ 3 ಸಾವಿರ ಬಾಳೆ ಸಸಿಗಳನ್ನು ತಂದು 1 ಸಾವಿರ ಅಡಿಕೆ ಸಸಿಗಳನ್ನು ತಂದು ನಾಟಿ ಮಾಡಿದನು. ಆ ಯುವಕನ ಮನೆಯವರು ಕೂಡ, ಅವನ ಜೊತೆಗೆ ಕೃಷಿ ಕೆಲಸಕೆ ಕೈ ಜೋಡಿಸಿದರು.
ಬಾಳೆ ಬೆಳೆಗೆ ತಿಂಗಳು ತಿಂಗಳಿಗೆ ಗೊಬ್ಬರವನ್ನು ಹಾಕಿಕೊಂಡು ಇಡೀ ಕುಟುಂಬವೇ ಶ್ರಮಪಟ್ಟು ತೋಟದಲ್ಲಿ ಕೆಲಸ ಮಾಡಿದರು.
ಶ್ರಮಪಟ್ಟ ಪರಿಣಾಮ ತೋಟದ ತುಂಬಾ ಬಾಳೆ ಗೋನೆಗಳು ತೂಗಾಡಿದವು. ಆ ಯುವಕ ತೋಟ ನೋಡುತ್ತಾ ಖುಷಿಯಾಗಿ ಇರುವಾಗ ಮಂಗಗಳ ಹಿಂಡು ತೋಟದ ತುಂಬಾ ಕಾಣಿಸಿತು. ಬಾಳೆಕಾಯನ್ನು ತಿನ್ನಲ್ಲು ಪ್ರಾರಂಭ ಮಾಡಿದವು.
ಆ ಯುವಕನಿಗೆ ಹೃದಯವೇ ಬಾಯಿಗೆ ಬಂದ ಹಾಗೆ ಆಯ್ತು. ಇನ್ನೂ ನಾನು ಸುಮ್ಮನೆ ಇದ್ದರೆ ನನ್ನ ತೋಟಕೆ ಉಳಿಗಾಲವಿಲ್ಲ ಎಂದು ಯೋಚಿಸಿ ತೋಟ ಕಾಯಲು ಒಬ್ಬ ವ್ಯಕ್ತಿಯನ್ನು ಇಟ್ಟನು ಹೀಗೆ ದಿನಗಳು ಕಳೆದವು. ತೋಟ ಕಾಯಲು ಬಂದ ಅಳು ದಿನಾ ಒಂದಲ್ಲಾ ಒಂದು ಬೇಡಿಕೆ ಶುರು ಮಾಡಿದನು. ಸಾವಕಾರ್ರೆ ನನಗೆ ಒಬ್ಬನೇ ಇರೋಕೆ ಆಗುವುದಿಲ್ಲ. ನನ್ನ ಹೆಂಡತಿ ಮತ್ತು ಮಗುವನ್ನು ಊರಿನಿಂದ ಕರೆದುಕೊಂಡು ಬಂದು ತೋಟದ ಮನೆಯಲ್ಲಿ ಇರುತ್ತೇವೆ ಎಂದು ಹೇಳಿದನು.
ಆ ಯುವಕನು ಹಾಗೆ ಆಗಲೀ ಎಂದು ಹೇಳಿದನು. ಆ ಬಳಿಕ ಆ ಆಳು ತನ್ನ ಊರಿಗೆ ಹೋಗಿ ತನ್ನ
ಹೆಂಡತಿ ಮಗುವನ್ನು ಕರೆದುಕೊಂಡು ಬಂದನು. ಬಂದ ಮೇಲೆ ಮತ್ತೊಂದು ಬೇಡಿಕೆ ಇಟ್ಟನು ಸಾವ್ಕಾರೆ ನನ್ನ ಹೆಂಡತಿಗೆ ತುಂಬಾ ಬೇಜಾರು ಆಗ್ತಾ ಇದೆ. ನಾನು ಊರಿಗೆ ಹೋಗುತ್ತೆನೆ ಅಂತ ಹೇಳ್ತಾ ಇದ್ದಾಳೆ. ಸಾವ್ಕಾರ್ ನಾನು ನನ್ನ ಹೆಂಡತಿಯನ್ನು ಬಿಟ್ಟು ಇಲ್ಲಿ ಇರುವದಿಲ್ಲ ಎಂದು ಹೇಳಿದನು.
ಆ ಯುವಕನಿಗೆ ಈಗ ತಲೆ ಬಿಸಿ ಸುರು ಆಯ್ತು ಏನು ಮಾಡುವುದು. ಈಗ ಈ ಕಾಲದಲ್ಲಿ ಆಳುಗಳು ಸಿಗುವುದಿಲ್ಲ ಎಂದು ಯೋಚನೆ ಮಾಡುತ್ತಾ ಆಳಿಗೆ ಕರೆದು ನೀನು ಹೋಗಬೇಡ ಮಾರಾಯ ನಿನಗೆ ಏನು ಸವಲತ್ತು ಬೇಕು ಕೇಳು ಮಾರಾಯ ಎಂದು ಕೇಳಿದನು.
ಸಾವ್ಕಾರೆ ಇಲ್ಲಿ ಇರ್ಲಿಕ್ಕೆ ತುಂಬಾ ಬೇಜಾರು ಅದಕ್ಕೆ ನೀವೂ ಒಂದು ಕೆಲಸ ಮಾಡಿ ನನಗೆ ಒಂದು ಟಿವಿ ಮತ್ತೆ ಡಿಶ್ ಬುಟ್ಟಿ ಹಾಕಿ ಕೊಡಿ ನಾನು ನನ್ನ ಹೆಂಡತಿಯನ್ನು ಇಲ್ಲೇ ಇರಲಿಕ್ಕೆ ಹೇಳುತ್ತೇನೆ ಎಂದು ಹೇಳಿದನು.
ಮರು ದಿವಸವೇ ಪೇಟೆಗೆ ಹೋಗಿ ಟಿವಿ ಮತ್ತು ಡಿಶ್ ಬುಟ್ಟಿ ತಂದು ತೋಟದ ಮನೆಗೆ ಹಾಕಿ ಕೊಟ್ಟನು ಸ್ವಲ್ಪ ದಿವಸದ ನಂತರ ಆ ಯುವಕನು ತೋಟದ ಸುತ್ತಲೂ ಓಡಾಡುತ್ತಾ ಇರುವಾಗ ಅವನ ನೋಟ ಅಡಿಕೆಯ ಗಿಡದ ಕಡೆಗೆ ಹೋಗಿತು. ಗಿಡದ ಸುತ್ತಲು ಹೊಂಡ ಹೊಂಡಗಳು ಕಾಣಿಸಿದವು. ಒಂದು ಅಡಿಕೆಯ ಗಿಡವು ನೆಲಕ್ಕೆ ಬಿದ್ದಿತ್ತು.
ಇದನ್ನು ನೋಡಿ ಮತ್ತೆ ಚಿಂತೆ ಮಾಡುತ್ತಾ, ತನ್ನ ಆಳನ್ನು ಕರಿದು ಕೇಳಿದರೆ ಅವ್ನು ಇದು ಕಾಡು ಹಂದಿಗಳು ರಾತ್ರಿ ಬರುತ್ತವೆ. ಇದಕ್ಕೆ ನೀವು ಬೇಲಿಯನ್ನು ಗಟ್ಟಿಯಾಗಿ ಮಾಡಿಸಬೇಕು ಎಂದನು.
ಹಾಗದರೆ ನೀನು ಬೇಲಿಯನ್ನು ಗಟ್ಟಿಯಾಗಿ ಕಟ್ಟುವ ಕೆಲಸವನ್ನು ಮಾಡು ಎಂದನು.
ಸಾವ್ಕರ್ ಇದು ನನ್ನ ಕೆಲಸವಲ್ಲ ನಾನು ಬರಿ ತೋಟ ಕಾಯ್ದುಕೊಂಡು ಹೋಗುವುದು ಮಾತ್ರ. ತನ್ನ ಕೆಲಸ ಈ ಕೆಲಸಕ್ಕೆ ನೀವು ಬೇರೆ ಅಳುಗಳನ್ನ ತರಿಸಿ ಕೆಲಸ ಮಾಡಿಸಬೇಕು ಎಂದನು. ಸರಿ ಮಾರಾಯ ನೀನು ಕೂಡ ಬೇಲಿ ರಿಪೇರಿಗೆ ಸಲ್ಪ ಸಹಾಯ ಮಾಡು. ನಾನು ಬೇರೆ ಆಳುಗಳಿಗೆ ಕರೆದುಕೊಂಡು ಬರುತ್ತೇನೆ ಎಂದು ಹೇಳಿದನು.
ಆನಂತರ ದಿನಗಳಲ್ಲಿ ಅಳು ಮತ್ತೆ ಒಂದು ಬೇಡಿಕೆಯನ್ನು ಇಟ್ಟನು ನನಗೆ ಹೊಸ ಮಿಕ್ಸಿ ಬೇಕು ಮತ್ತು ನೀರು ಕಾಯಿಸಲು ದೊಡ್ಡ್ ಹಂಡೆ ಬೇಕು ಎಂದದ್ದಕ್ಕಾಗಿ ಅದನ್ನು ಕೂಡ ಕೊಡಿಸಿದನು. ಆಳುಗಳು ಬಿಟ್ಟರೆ ಸಿಗುವುದಿಲ್ಲ ಎಂದು ಆಳು ಹೇಳಿದ ಹಾಗೆ ಎಲ್ಲಾ ಕೊಡಿಸುತ್ತಾ ಹೋದನು.
ಕೆಲವು ದಿವಸದ ನಂತರ ಬಾಳೆ ಬೆಳೆದು ಕಟಾವಿಗೆ ಬಂತು
ಆ ಯುವಕನ ಲೆಕ್ಕಾಚಾರ ಕಡಿಮೆಯಂದ್ರು ನನಗೆ ಬಾಳೆ ಇಂದ ನಾಲ್ಕು ಲಕ್ಷ ಲಾಭ ಅಗಬಹುದು ಎಂದು ಮನಸ್ಸಿನಲ್ಲೇ ಲೆಕ್ಕ ಹಾಕ್ತಾ ಇನ್ನು ಎರಡು ವಾರದ ನಂತರ ಬಾಳೆ ಕಟಾವು ಮಾಡ್ಬೇಕು ಎಂದು ಯೋಚಿಸಿ ಬಾಳೆಯ ಮಂಡಿಗೆ ಹೋಗಿ ಬಾಳೆ ಬೆಲೆ ವಿಚಾರಿಸಿದಾಗ ಕೇಜಿಗೆ ಮೂರು ರುಪಾಯಿ ಆಗಿದೆ ಎಂದು ತಿಳಿಸಿದರು.
ಆ ಯುವಕ ನಾನು ಹೋದ ವಾರ ಕೇಳಿದಾಗ ಎಂಟು ರೂಪಾಯಿ ಹೇಳಿದಿರಲ್ಲ ಅಂತ ಕೇಳಿದ ಹೌದು ಸಾರ್ ಏನು ಮಾಡೋದು ಈಗ ಪಚ್ಚ ಬಾಳೆಗೆ ರೇಟ್ ಇಲ್ಲ.
ಪಚ್ಚ್ ಬಾಳೆ ಕೇಳುವವರೆ ಇಲ್ಲ ಎಂದಾಗ ಆ ಯುವಕನ ಲೆಕ್ಕಚಾರ ಎಲ್ಲ ತಲೆ ಕೇಳಗಾಗಿ ಮನೆಗೆ ಬಂದ.
ಮನೆಗೆ ಬಂದ ಮೇಲೆ ಚಿಂತೆಯಿಂದ ಕುಳಿತುಕೊಂಡು ಇರುವಾಗ ಆ ಯುವಕನ ಅಕ್ಕ ಬಂದು ಏನು ಯೋಚನೆ ಮಾಡಬೇಡ ನಿನ್ನ ಬಾಳೆ ಕಟಾವಿಗೆ ಇನ್ನೂ ಇಪ್ಪತ್ತು ದಿವಸ ಇದೆ. ಅಲ್ಲಿಯ ತನಕ ಬೆಲೆ ಬರಬಹುದು ಎಂದು ಹೇಳಿದರು.
ಆ ಯುವಕ ರಾತ್ರಿ ಹಗಲು ಮಲಗದೆ ತನ್ನ ಬಾಳೆ ಬೆಲೆ ಬಗ್ಗೆ ಚಿಂತಿಸ ತೊಡಗಿದ. ಆ ದಿನ ಕೂಡ ಬಂತು. ಮತ್ತೆ ಬಾಳೆ ಮಂಡಿಗೆ ಹೋಗಿ ವಿಚಾರಿಸಿದ ಈಗಾಗಲೇ ಪಚ್ಚ್ ಬಾಳೆ ಬಹಳ ಸಂಗ್ರಹ ಇದೆ ಬೇಕಾದ್ರೆ ನಾವು ಫೋನ್ ಮಾಡುತ್ತೆವೆ. ನಿಮ್ಮ ಫೋನ್ ನಂಬರ್ ಕೊಟ್ಟು ಹೋಗಿ ಎಂದು ಹೇಳಿದರು.
ನಾಲ್ಕೂ ದಿವಸದ ನಂತರ ತೋಟ ಕಾಯುವ
ಆಳು ಆ ಯುವಕನ ಬಳಿ ಜಗಳವನು ಮಾಡಿ ನನಗೆ ನಿಮ್ಮ ಸಂಬಳ ಸಾಲುತ್ತಿಲ್ಲ. ನೀವು ನಂಗೆ ಮತ್ತೆ ಐದು ಸಾವಿರ ಜಾಸ್ತಿ ಸಂಬಳ ಮಾಡಿ ಎಂದು ಹಠ ಹಿಡಿದ ಈಗಾಗಲೇ ಇವ್ನಿಗೆ ಹತ್ತುಸಾವಿರ ಸಂಬಳ ಕೊಟ್ಟು ಅವ್ನು ಹೇಳಿದ ಹಾಗೆ ಎಲ್ಲಾ ಸವಲತ್ತುಗಳನ್ನು ಕೊಟ್ಟು ಮತ್ತ್ ಮತ್ತೆ ಕೊಡುತ್ತ ಹೋದರೆ ನನಗೆ ಉಳಿಗಾಲವಿಲ್ಲವೆಂದು ಮನಗಂಡು ಆಳಿಗೆ ವಾಪಸ್ಸು ಊರಿಗೆ ಕಳಿಸಿದನು.
ಆಳು ಹೋದ ಸ್ವಲ್ಪ ಸಮಯದ ಬಳಿಕ ಬಾಳೆ ಮಂಡಿಯಿಂದ ಪೋನ್ ಬಂತು. ಸರ್ ನೀವು ಎಲ್ಲಿ ಇದ್ದಿರಾ ನಮ್ಮ ಲಾರಿ ನಿಮ್ಮ ತೋಟದ ಹತ್ತಿರ ಇದೆ. ಬಾಳೆ ಕಾಯಿ ಕಟಾವು ಮಾಡಿ ಇಡಿ ಇನ್ನು ಸ್ವಲ್ಪ ಹೊತ್ತಿನಲ್ಲಿ ನಮ್ಮ ಗಾಡಿ ನಿಮ್ಮ ತೋಟಕ್ಕೆ ಬರುತ್ತದೆ ಎಂದು ಹೇಳಿದರು. ಆ ಯುವಕನಿಗೆ ಆಕಾಶವೇ ತಲೆಮೇಲೆ ಬಿದ್ದ ಹಾಗೆ ಆಯ್ತು. ಯಾಕಂದ್ರೆ ಆಳು ಬಿಟ್ಟು ಹೋಗಿದ್ದಾನೆ.
ಈಗ ಬಾಳೆ ಕಟಾವು ಮಾಡಬೇಕು. ಏನು ಮಾಡಬೇಕು ತಕ್ಷಣವೇ ಯಾವ ಆಳುಗಳು ಸಿಗುವುದಿಲ್ಲ. ಇವತ್ತು ಬಾಳೆ
ಮಂಡಿಯ ಗಾಡಿ ಬಂದಿದೇ ಮತ್ತೆ ಪಚ್ಚ ಬಾಳೇ ಹಾಗೆ ಬಿಟ್ಟರೆ ಕೊಳೆಯಲು ಶುರು ಆಗುತ್ತದೆ. ಏನು ಮಾಡ್ಬೇಕು ಅಂತ ಯೋಚಿಸುತ್ತಿದ್ದಾಗ ಮತ್ತೆ ಪೋನ್ ಬರುತ್ತದೆ.
ಹಲೋ ನಾನು ಕಿರಣ ಏನು ಸಾವ್ಕರ್ ಗಾಡಿ ಜೋರಾಗಿ ತೋಟದ ಕಡೆಗೆ ಹೊಂಟಿದಿರಿ ಎನಾಯ್ತು ಎಂದು
ಕೇಳಿದರು. ಏನು ಇಲ್ಲ ಬಾಳೆ ಮಂಡಿಯ ಗಾಡಿ ಬಂದಿದೆ. ಬಾಳೇ ಕಟಾವು ಮಾಡ್ಬೇಕು ನಮ್ಮ ಆಳು ಊರಿಗೆ ಹೋದ ಏನು ಮಾಡಬೇಕು ಅಂತ ತಿಳಿತಾ ಇಲ್ಲ?? ಎಂದಾಗ ಕಿರಣ್ ಹೋ ಹೋ ಅದ್ಕೇನಂತೆ ನಾನು ಮತ್ತೆ ನಮ್ಮ ಅಕ್ಕನ ಮಗ ರವೀಶನು ನಮ್ಮ ಜೊತೆ ಇದಾನೆ. ನಾನು ಮತ್ತು ಅವನು ಬರ್ತೇವೆ. ನೀವು ಏನು ಚಿಂತೆ ಮಾಡಬೇಡಿ ಎಂದು ಹೇಳಿ ಸ್ವಲ್ಪ ಸಮಯದ ಬಳಿಕ ಇಬ್ಬರು ಬಂದರು.
ನಾವು ಮೂರು ಜನ ಸೇರಿ ನಾಲ್ಕು ಟನ್ ಬಾಳೆ ಕಟಾವು ಮಾಡಿದೆವು. ಬಾಳೆ ಮಂಡಿಯ ಗಾಡಿಗೆ ಬಾಳೆಕಾಯಿ ತುಂಬಿದ ಬಳಿಕ ಮಂಡಿಯ ಕೆಲಸಗಾರ ಆ ಯುವಕನ ಕೈಗೆ ಒಂದು
ಲೆಕ್ಕದ ಚೀಟಿ ಕೊಟ್ಟು ನಾಲ್ಕು ಟನ್ ಆಯ್ತು ಸರ್, ಒಂದು ರೂಪಾಯಿ ಕೆಜಿಯಂತೆ ನಾಲ್ಕು ಸಾವಿರ ಆಯ್ತು ಮಂಡಿಗೆ ಬಂದು ನಿಮ್ಮ ಹಣ ತೆಗೆದುಕೊಂಡು ಹೋಗಿ ಎಂದ.
ಆ ಯುವಕನಿಗೆ ಸ್ವಲ್ಪ ಹೊತ್ತು ಮಾತೆ ಬರಲಿಲ್ಲ. ಸ್ವಲ್ಪ ಸಾವರಿಸಿಕೊಂಡು ಆ ಯುವಕ ಕೇಳಿದ ಮೂರು ರೂಪಾಯಿ ಕೆಜಿ ಅಂತ ಹೇಳಿದಿರಲ್ಲ. ಅಂತ ಕೇಳಿದ ಮಂಡಿಯ ಕೆಲಸಗಾರ ಅದು ಅವತ್ತು ಮೂರು ರೂಪಾಯಿ ಇತ್ತು ಇವತ್ತು ಒಂದು ರೂಪಾಯಿ ಕೆಜಿ ಆಗಿದೆ ದಿವಸ ದಿವಸ ಬೆಲೆ ಹೆಚ್ಚು ಕಮ್ಮಿ ಆಗ್ತಿದೆ.
ಈಗ ಪಚ್ಚ ಬಾಳೆಗೆ ಬೆಲೆಯೇ ಇಲ್ಲ , ಏನು ನೀವು
ಪರಿಚಯದವ್ರು!! ಅಂತ ನಮ್ಮ ಸಾವ್ಕಾರರು, ನಿಮ್ಮ ಬಾಳೆ ಕಾಯಿ ಖರೀದೀ ಮಾಡಿದ್ದಾರೆ ಎಂದು ಲಾರಿ ಹತ್ತಿ ಹೋಗಿ ಬಿಟ್ಟ.
ಕಿರಣ್ ಮತ್ತು ರವಿಷ ಆ ಯುವಕನ ಕಂಡು ಮರುಕ ಪಟ್ಟ್ಕೊಂಡು ರೈತರ ಬಾಳೆ ಹೀಗೆ ಎಂದು ಮರುಗಿದರು.
(ಬಾಳೆ ಬೆಳೆದವನ ಬಾಳು ಬಂಗಾರ ಎಂದು ಓದಿದ ನೆನಪು.)
ಆ ಯುವಕ ಈಗ ಕೂಡ ಬಾಳೆ ಬಂಗಾರ ಎಂದರೆ ಕನಸಲ್ಲೂ ಹೆದರುತಿದ್ದಾನೆ. ಯಾಕಂದರೆ ಕೃಷಿ ಚಟುವಟಿಕೆಗೆ ಬ್ಯಾಂಕ್ನಲಿ ಅಡವಿಟ್ಟ ಬಂಗಾರ ನೆನಪಿಗೆ ಬರುತ್ತದೆ😢😢😢😢😢😢
ಆ ಯುವಕನ ಹೆಸರೇ, ಈ ಕಥೆ ಬರೆದ,, ನಾನು. 🙏🙏🙏
ರಾಘವೇಂದ್ರ ಸಿಂತ್ರೆ.
ರಾಜಕಮಲ್, ಶಿರಸಿ.