ಆಡಂಬರ ಆಕರ್ಷಣೀಯ ವಿವಾಹಕ್ಕೆ ಹೆಚ್ಚು ಆದ್ಯತೆ
“””””””””””””””””””‘”‘”””””””‘”””””””‘””””
ಕೆಲವಾರು ವರ್ಷಗಳ ಹಿಂದೆ ವಿವಾಹೇತರ ಕಾರ್ಯಗಳನ್ನು ಸಾಂಪ್ರದಾಯಿಕವಾಗಿ ಶಾಸ್ತ್ರೋಕ್ತವಾಗಿ ಸರಳತೆಯಿಂದ ಆಚರಿಸುತ್ತಿದ್ದರು. ಹಿರಿಯರು ಬಂಧುಗಳೆಲ್ಲ ಕೂಡಿ ಮನೆಯಂಗಳದಲ್ಲಿ ಹಸಿರು ಚಪ್ಪರ ಮಲ್ಲಿಗೆ ಹೂ ಮಾವಿನ ತಳಿರುಗಳಿಂದ ಶುಭ ಸಂಕೇತವಾಗಿ ಅಲಂಕರಿಸುತ್ತಿದ್ದರು. ಆಪ್ತರು ಬಂಧು ಬಾಂಧವರಿನ್ನು ಸ್ವಾಗತಿಸಿ ಆಚರಿಸುತ್ತಿದ್ದ ಮಂಗಳ ಕಾರ್ಯಗಳು ಸರಳತೆಯಿಂದ ಕೂಡಿರುತ್ತಿದ್ದವು. ಯಾವುದೇ ಅತಿಯಾದ ಗೌಜು ಗದ್ದಲವಿಲ್ಲದೆ ಊಟದಲ್ಲೂ ಹಿತಮಿತವಾಗಿ ಯಾವ ಆಹಾರವನ್ನು ಚೆಲ್ಲಾಡದೆ ಸಂತೃಪ್ತಿಯಿಂದ ಮಾಡುತ್ತಿದ್ದರು.
ಆದರೆ ಇಂದು ಬದಲಾದ ಜೀವನಶೈಲಿಗೆ ಹೊಂದಿಕೊಂಡಂತೆ ವಿವಾಹ ಕಾರ್ಯಗಳು ಆಡಂಬರ ಆಕರ್ಷಣೀಯ ಪ್ರದರ್ಶನಗಳಾಗಿ ಮಾರ್ಪಾಡಾಗಿವೆ. ಶ್ರೀಮಂತರಿರಲಿ ಮಧ್ಯಮ ವರ್ಗದವರಿರಲಿ ತಮ್ಮ ಆದಾಯದ ಮಿತಿಯನ್ನು ದಾಟಿ ವಿವಾಹವನ್ನು ಆಚರಿಸುತ್ತಾರೆ. ವೈಭವೇಪಿತ ಕೃತಕ ಹೂವಿನ ಅಲಂಕಾರ ಆಡಿಯೋ ವಿಡಿಯೋ ಎಂದಿಲ್ಲಾ ಲಕ್ಷಾಂತರ ಹಣವನ್ನು ವ್ಯಹಿಸುತ್ತಾರೆ. ಇವುಗಳ ಗದ್ದಲ ಆಕರ್ಷಣೆಯೇ ಪ್ರಾಧಾನ್ಯವಾಗಿ ವಿವಾಹ ಔಚಿತ್ಯವು ಅರ್ಥ ಕಳೆದುಕೊಳ್ಳುತ್ತಿದೆ.
ಅನೇಕ ಬಗೆಯ ನಾವಿನ್ಯ ತಿಂಡಿ ತಿನಿಸುಗಳು ಹೆಚ್ಚಿನದಾಗಿ ಊಟದಲ್ಲಿ ಅಲಂಕರಿಸಿವೆ. ಆಹ್ವಾನಿತರು ಹೆಚ್ಚಾಗಿ ಬಂದಷ್ಟು ನಮ್ಮ ಘನತೆ ಗೌರವ ಹೊಗಳಿಕೆಗೆ ಪಾತ್ರರಾಗುತ್ತೇವೆಂದು ಕಾರ್ಯ ಮಾಡುವವರು ಹೆಚ್ಚು ಬಯಸುತ್ತಾರೆ. ಊಟವು ಹಿತಮಿತವಾಗಿದ್ದರೆ ಊಟದ ರುಚಿ ಏನೆಂದು ಗೊತ್ತಾಗುತ್ತದೆ. ಸಾವಿರಾರು ಜನರನ್ನು ಆಹ್ವಾನಿಸುವುದು ವೈವಿಧ್ಯಮಯ ಭಕ್ಷಭೋಜನಗಳೇ ನಮ್ಮ ದೊಡ್ಡಸ್ತಿಕೆ ಎಂಬ ಧೋರಣೆಯನ್ನು ಬಿಟ್ಟು ಆಮಂತ್ರಣದಲ್ಲಿ ಹಾಗೂ ಊಟದ ವ್ಯವಸ್ಥೆಯಲ್ಲಿ ಸರಳವಾಗಿಯೂ ಮಿತವಾಗಿಯೂ ಇದ್ದರೆ ತಯಾರಿಸಿದ ಆಹಾರವು ಪೋಲಾಗುವುದನ್ನು ತಡೆಗಟ್ಟಬಹುದು. ಆಧುನಿಕ ನಾವೀನ್ಯತೆಯಲ್ಲಿ ಬಫೆಯೆಂಬ ಅದ್ದೂರಿ ವಿವಾಹ ಸಮಾರಂಭಗಳಲ್ಲಿ ಅದೆಷ್ಟೋ ಆಹಾರ ಪದಾರ್ಥಗಳು ಸಾಕಷ್ಟು ದುರ್ಬಳಕೆಯಾಗಿ ಕಸದ ತೊಟ್ಟಿ ಸೇರುತ್ತಿದೆ. ಬಹಳಷ್ಟು ಜನರು ಬಡಿಸಿದ ಆಹಾರವನ್ನು ನಿರ್ದಾಕ್ಷಿಣ್ಯವಾಗಿ ಎಲೆಯಲ್ಲಿ ಬಿಟ್ಟು ಹೊರಡುತ್ತಾರೆ. ನೀರಿಗೆ ಉಪಯೋಗಿಸುವ ಪ್ಲಾಸ್ಟಿಕ್ ಬಾಟಲಿಗಳು ಕುಳಿತಲ್ಲೇ ಕೈ ತೊಳೆಯುವ ಪ್ಲಾಸ್ಟಿಕ್ ಬಟ್ಟಲುಗಳು ಇವೆಲ್ಲಾ ಸರಿಯಾಗಿ ವಿಲೇವಾರಿ ಆಗದಿದ್ದಾಗ ಕೊಳೆತ ಆಹಾರ ಪದಾರ್ಥಗಳ ತ್ಯಾಜ್ಯ ವಸ್ತುಗಳಿಂದ ಪರಿಸರವೂ ಕೂಡ ಕೆಡುತ್ತದೆ.
ವಿವಾಹಗಳಾಗಲಿ ಇನ್ನಿತರೇ ಸಮಾರಂಭಗಳಾಗಲಿ ನಾವು ಚೆಲ್ಲುವ ಒಂದೊಂದು ಅನ್ನದ ಅಗುಳಿನಲ್ಲೂ ರೈತನ ಪರಿಶ್ರಮದ ಬೆವರ ಹನಿಯಿದೆ ಎಂಬುದನ್ನು ಸುಖ ಜೀವಿಗಳು ಅರ್ಥ ಮಾಡಿಕೊಳ್ಳಬೇಕು. ಅದ್ದೂರಿಯ ವಿವಾಹ ಆಚರಣೆ ಅವರವರ ವೈಯಕ್ತಿಕ ವಿಷಯವೇ ಆದರೂ ಅವಶ್ಯಕತೆ ಮೀರಿ ಹಣವನ್ನು ವೆಚ್ಚ ಮಾಡುವುದು ಆಹಾರವನ್ನು ಚೆಲ್ಲಾಡುವುದು ಇಂದಿನ ಬೆಲೆ ಏರಿಕೆ ಆಹಾರದ ಅಭಾವದಲ್ಲಿ ಸಮಂಜಸವಲ್ಲ ಎಂದೆನಿಸುತ್ತದೆ.
ನಮ್ಮ ದೇಶ ವಿಜ್ಞಾನ ತಾಂತ್ರಿಕತೆಯಲ್ಲಿ ಏನೆಲ್ಲಾ ಪ್ರಗತಿ ಸಾಧಿಸಿದರು ಬಡತನದ ಬವಣೆಯಲ್ಲಿ ನಿತ್ಯ ಹಸಿವು ನೀಗಿಸಲು ಕಷ್ಟಪಡುವವರ ಸಂಖ್ಯೆಯು ಬಹಳಷ್ಟು ಇದ್ದಾರೆ ಶ್ರೀಮಂತರು ಶ್ರೀಮಂತರಾಗಿ ಬಡವರು ಬಡವರಾಗಿಯೇ ಬದುಕುತ್ತಿದ್ದಾರೆ. ಜನಸಂಖ್ಯಾ ಸ್ಪೋಟದಿಂದ ಆಹಾರ ಧಾನ್ಯಗಳ ಅಭಾವದಿಂದ ಸಾಕಷ್ಟು ಸಂಗ್ರಹವಿಲ್ಲದೆ ಎಲ್ಲಾ ದೈನಂದಿನ ಪದಾರ್ಥಗಳ ಬೆಲೆಯೂ ಕೂಡ ದಿನೇ ದಿನೇ ಏರಿಕೆಯಾಗುತ್ತಿದೆ. ಸಾಮಾನ್ಯ ವರ್ಗದವರಿಗೂ ಜೀವನ ನಿರ್ವಹಣೆಯಿಂದು ದುಸ್ತರವಾಗಿದೆ.
ಹಸಿದವನಿಗೆ ಮಾತ್ರ ಅನ್ನದ ಬೆಲೆ ಗೊತ್ತು ಬಾಯಾರಿದವನಿಗೆ ಮಾತ್ರ ನೀರಿನ ಬೆಲೆ ಎಷ್ಟೆಂದು ಗೊತ್ತಾಗುವುದು.
“ಮನೆಕಟ್ಟಿ ನೋಡು ಮದುವೆಮಾಡಿ ನೋಡು” ಎಂಬ ಅನುಭವಿಗಳ ಮಾತು ಆಧುನಿಕ ಕಾಲಕ್ಕೂ ಹೆಚ್ಚು ಅನ್ವಯಿಸುತ್ತದೆ.
ಶ್ರೀಮಂತರು ಬಹಳಷ್ಟು ಧನಿಕರು ಕೂಡಿಟ್ಟ ಹಣವನ್ನು ತಮ್ಮ ಸ್ವಾರ್ಥ ಕಾರ್ಯಕಲಾಪಗಳಿಗೆ ಅತಿಯಾಗಿ ದುಂದುವೆಚ್ಚ ಮಾಡದೆ ಅನೇಕ ಅನಾಥ ಸೇವಾ ಸಂಸ್ಥೆಗಳಿಗೆ ಬಡ ಮಕ್ಕಳ ಶಿಕ್ಷಣಕ್ಕೆ ನಿರ್ಗತಿಕ ವೃದ್ಧಾಶ್ರಮಗಳಿಗೆ ಸ್ವಲ್ಪ ಭಾಗವನ್ನಾದರೂ ವಿನಯೋಗಿಸಬೇಕು. ಇದರಿಂದ ಸಮಾಜಕ್ಕೆ ಸ್ವಲ್ಪ ಸೇವೆಯಾದರೂ ಮಾಡಿದ ಸಮಾಧಾನ ತೃಪ್ತಿ ದೊರಕುತ್ತದೆ ಹಾಗೂ ಹಣವು ಸದ್ವಿನಿಯೋಗವಾಗುತ್ತದೆ.
ಸಮಾಜದಲ್ಲಿ ಬಹುತೇಕ ಜನರು ಮಧ್ಯಮ ವರ್ಗದವರಿರಲಿ ಬಡವರಿರಲಿ ಸಾಲ ಎಷ್ಟಾದರೂ ಮಾಡಿ ತಮ್ಮ ಮಕ್ಕಳ ಪ್ರೀತಿಗೆ ಕಷ್ಟಪಟ್ಟಾದರೂ ವೈಭವದ ವಿವಾಹಕ್ಕೆ ಕಟ್ಟುಬೀಳುವುದು ಸಹಜವೇ. ಆದರೂ ಒಂದು ದಿನದ ಆಡಂಬರಕ್ಕೆ ಜೀವನಪೂರ್ತಿ ಚೇತರಿಸಿಕೊಳ್ಳಲಾಗದೆ ಸಾಲದಲ್ಲೇ ಮುಳುಗಿ ಜೀವನದುದ್ದಕ್ಕೂ ಸಂತೋಷ ಹಾಗೂ ಬದುಕಿನ ಗುರಿಯನ್ನು ಕಳೆದುಕೊಂಡು ನಿರಾಶವಾದಿಗಳಾಗುತ್ತಾರೆ. ಉಂಡು ತಿಂದು ಹೊಗಳಿ ಹೋಗುವವರೆಲ್ಲಾ ಆಪತ್ಕಾಲದಲ್ಲಿ ಭಾಗಿಯಾಗುವುದಿಲ್ಲ ಅವರವರ ಯಾಂತ್ರಿಕ ಬದುಕಿನೊಳಗೆ ಎಲ್ಲವನ್ನು ಎಲ್ಲರನ್ನೂ ಕ್ರಮೇಣ ಮರೆಯುತ್ತಾರೆ. ಅವರವರ ಜೀವನದ ಕಷ್ಟಸುಖ ಸ್ಥಿತಿಗತಿಗಳನ್ನು ಅವರೇ ಅನುಭವಿಸಬೇಕು. ಅವರ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ “ಹಾಸಿಗೆ ಇದ್ದಷ್ಟು ಕಾಲುಚಾಚು” ಎಂಬ ಮಾತಿನಂತೆ ನಡೆಯುವುದು ಸೂಕ್ತವಾಗಿದೆ. ಶ್ರೀಮಂತರು ವೈಭವದಿಂದ ಆಚರಿಸುತ್ತಾರೆಂದು ಸಾಮಾನ್ಯ ವರ್ಗದವರು ಅವರನ್ನು ಅನುಕರಣೆ ಮಾಡವುದು ಸೂಕ್ತವಲ್ಲ. ವರದಕ್ಷಿಣೆ ವರೋಪಚಾರ ಅದ್ದೂರಿ ವಿವಾಹಕ್ಕೆ ಹೆಚ್ಚು ಒತ್ತಾಯ ಮನ್ನಣೆ ಕೊಡುವವರು ಗಂಡು ಮಕ್ಕಳ ಪೋಷಕರ ದರ್ಪವೇ ಸಮಾಜದಲ್ಲಿ ಬಹಳಷ್ಟಿದೆ ಎನ್ನಬಹುದು.
1960 ರಲ್ಲೆ ಕವಿ ಕುವೆಂಪುರವರು ಮಂತ್ರ ಮಾಂಗಲ್ಯವೆಂಬ ಸರಳ ಮದುವೆಗೆ ಹೆಚ್ಚು ಪ್ರೋತ್ಸಾಹ ನೀಡಿದರು. ಅಂತರ್ಜಾತಿಯ ವಿವಾಹಕ್ಕೂ ಮಾನ್ಯತೆ ಕೊಟ್ಟರೆಂಬ ಮಾಹಿತಿಯಿದೆ.
ದುಂದುವೆಚ್ಚ ಮಾಡುವ ಹಣವನ್ನು ಉಳಿಸಿ ವಿವಾಹವಾಗುವ ವಧು-ವರರ ಮುಂದಿನ ಕೌಟುಂಬಿಕ ಸಮಸ್ಯೆಗಳಿಗೆ ಉಪಯುಕ್ತವಾಗುವಂತೆ ಹಣವನ್ನು ಅವರ ಬ್ಯಾಂಕ್ ಖಾತೆಯಲ್ಲಿ ಇಡಬೇಕು. ಭಾವಿ ವಧು ವರರಿಗೆ ತಿಳಿಹೇಳಿ ಸರಳ ವಿವಾಹಕ್ಕೆ ಒಪ್ಪಿಸುವುದು ತಂದೆತಾಯಿಯರ ಕರ್ತವ್ಯವು ಆಗಿದೆ. ಮಕ್ಕಳು ಕೂಡ ಸರಳ ವಿವಾಹಕ್ಕೆ ಆದ್ಯತೆ ನೀಡಬೇಕಿದೆ. ವೈಭವೋಪಿತ ವಿವಾಹವಷ್ಟೆ ಮುಖ್ಯವಲ್ಲ. ವೈವಾಹಿಕ ಜೀವನದಲ್ಲಿ ಒಬ್ಬೊರನೊಬ್ಬರು ಅರಿತು ಅರ್ಥಮಾಡಿಕೊಂಡು ಆದರ್ಶವಾಗಿ ಬಾಳುವುದೇ ಮದುವೆಯೆಂಬ ಮೂರಕ್ಷರದ ಸದುದ್ದೇಶವಾಗಿದೆ.
ಅನೇಕ ಧಾರ್ಮಿಕ ಸಂಘಸಂಸ್ಥೆಗಳು ಸಾಮೂಹಿಕ ವಿವಾಹದ ಆಯೋಜನೆಯನ್ನು ಆಗಾಗ್ಗೆ ಹಮ್ಮಿಕೊಂಡಿರುತ್ತಾರೆ. ಸಂಸ್ಥೆಗಳಿಂದಲೇ ವಧುವಿಗೆ ಸೀರೆ ತಾಳಿ, ವರನಿಗೆ ಪಂಚೆ, ಶರ್ಟ್ ಅವರ ಕಡೆಯವರಿಗೆ ಊಟ ಎಲ್ಲಾ ವ್ಯವಸ್ಥೆ ಯನ್ನು ಮಾಡಿರುತ್ತಾರೆ. ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಸಮಾನತೆ ಸಹಬಾಳ್ವೆಗೆ ಸಹಕಾರಿಯಾಗಿವೆ. ಕೆಳವರ್ಗದ ಬಡಜನತೆಗೆ ಸರಳ ವಿವಾಹದಿಂದ ಹಣದ ಉಳಿತಾಯ ಹಾಗೂ ಸಮಾಜಕ್ಕೆ ಅನುಕರಣೀಯವು ಆಗಿದೆ.
ಧಾರ್ಮಿಕ ಸಂಸ್ಥೆಗಳು ಜಾತಿ ವರ್ಗ ಮೀರಿದ ಎಲ್ಲಾ ಧರ್ಮಗಳ ಸಮಾನತೆಯ ಒಗ್ಗೂಡುವಿಕೆಯಲ್ಲಿ ವಿವಾಹ ಕಾರ್ಯಗಳನ್ನು ನೆರವೇರಿಸುತ್ತಿರುವುದು ಎಲ್ಲಾ ದೃಷ್ಟಿಯಿಂದಲೂ ಸಮಾಜಕ್ಕೆ ಮಾದರಿಯಾಗಿದೆ.
ಲೇಖಕಿ: ಯಶೋಧ ರಾಮಕೃಷ್ಣ, ಮೈಸೂರು