ಬೀchi ಅವರ ಪರಿಚಯ

ನನಗೆ ತುಂಬಾ ಸಂತೋಷ ತಂದಿರುವ ಸಂಗತಿಗಳಲ್ಲಿ ಬೀchi ಅವರ ಪುಸ್ತಕಗಳು ಪ್ರಮುಖವಾದದ್ದು. ಹಾಗಾಗಿ ಅವರ ಪುಸ್ತಕ ತಿಂಮನ ತಲೆ, ಬೆಳ್ಳಿ ತಿಂಮ ನೂರೆಂಟು ಹೇಳಿದ ನನಗೆ ನಿರಂತರ ಸಂಗಾತಿ.

‘ಏಪ್ರಿಲ್ 23’ ಬೀchi ಅವರ ಹುಟ್ಟಿದ ಹಬ್ಬ.

ಬೀchi ಪ್ರಸಿದ್ಧ ಇಂಗ್ಲಿಷ್ ಕಾದಂಬರಿಗಳ ನಗೆತುಣುಕುಗಳ ಸಾಮಗ್ರಿಯನ್ನು ಕನ್ನಡಕ್ಕೆ ಇಳಿಸಿದ್ದಾರೆ ನಿಜ. ಆದರೆ ಅವರ ಭಾಷಾಪ್ರಜ್ಞೆಯಲ್ಲಿ ಕನ್ನಡದ ಛಾಪು ಇದೆ.

“ಬೀchi” ಕನ್ನಡ-ಹೂಣ ಲಿಪಿಗಳ ಎರಡು ತಲೆ ಕರುವಿನಂತೆ ವಿಚಿತ್ರವಾಗಿ ಕಾಣುವ ಈ ಹೆಸರು ನಿಜವಾಗಿ ಅಚ್ಚಕನ್ನಡದ ‘ಬೀಚಿ’ಯೇ. ಅವರ ನಿಜವಾದ ಹೆಸರು ಹೆದರಿಕೆ ಹುಟ್ಟಿಸುವಂತ ಬಲಶಾಲಿಯಾದ ಹೆಸರೇ. ‘ರಾಯಸಂ ಭೀಮಸೇನರಾವ್’. ಈ ಬಗ್ಗೆ ಅವರೇ ವಿವರಣೆ ನೀಡಿದ್ದಾರೆ.

“ಪಾರ್ಥಸಾರಥಿ ಪಾಚು ಆಗುತ್ತಾನೆ. ನಾರಾಯಣ ನಾಣಿ. ಅಂತೆಯೇ ಭೀಮಸೇನ ಬೀಚಿಯಾದ ಅವರಿವರ ಬಾಯಲ್ಲಿ, ಹಾಗಾದುದೇ ಒಳಿತಾಯಿತು. ಸದಾ ಕರುಳಿನ ಬೇನೆಯಿಂದ ನರಳುವ ಈ ಹೊಟ್ಟೆರೋಗಿ ‘ಭೀಮಸೇನ’ ಹೇಗಾದಾನು?” ಹೀಗಾಗಿ ಈ ‘ಕಾಚಿಕಡ್ಡಿ ಪೈಲುವಾನ’ ಅವರ ಅಮ್ಮನ ಮುದ್ದಿನ ನುಡಿಗತ್ತರಿಗೆ ಸಿಲುಕಿ ‘ಬೀಚಿ’ಯಾದ.

ಅವರ ಜೀವನ ಚರಿತ್ರೆಯ ಒಂದು ಪುಟ ಅವರೇ ಬರೆದ ‘ಬೀchi ಲೈಫೋಗ್ರಫಿ’ಯಲ್ಲಿದೆ.

ಹುಟ್ಟಿದ ತಾರೀಖು: 23 ಏಪ್ರಿಲ್ 1913

ಶಿಕ್ಷಣ: ಎಸ್.ಎಸ್.ಎಲ್.ಸಿ ಪಾಸು 1930

ನೌಕರಿಗೆ ಸೆರಿದ್ದು: ಪೋಲೀಸ್ ಖಾತೆಯಲ್ಲಿ ಅಟೆಂಡರ್ 1931

ಪ್ರಥಮ ಲೇಖನ ಮುದ್ರಣ : ಪ್ರಜಾಮತ(ಮದ್ರಾಸ್) 1933

ಮದುವೆ: ಜಮಖಂಡಿ ಶ್ರೀನಿವಾಸಾಚಾರ್ಯರ ಮಗಳು ಸೌ. ಸೀತಾಬಾಯಿ ಅವರೊಡನೆ. 1933 (ಶ್ರಾವಣ)

ಪ್ರಥಮ ಸಂತಾನ: 1940

ಪ್ರಥಮ ಪುಸ್ತಕ ಪ್ರಕಟಣೆ: 1946

ಕೆಲಸದಲ್ಲಿ ಬಡತಿ: ಸೂಪರಿಂಟೆಂಡೆಂಟ್, ಸ್ಪೆಷಲ್ ಬ್ರಾಂಚ್ ಸಿ.ಐ.ಡಿ ಬೆಂಗಳೂರು (ರಾಜ್ಯದಲ್ಲಿ ಈ ತರಹದ ಹುದ್ದೆ ಇದೊಂದೇ)

ಪಿಂಚಣಿ: 1968

ಪಿಂಚಣಿ ಹಣ: 133 ರೂ.

ಬೀchi ಹರಪನಹಳ್ಳಿಯ ಹುರುಪಿನ ಜೀವ. ಅವರೇ ತಮ್ಮ ಬಾಲ್ಯದ ಬಗೆಗೂ ಹೇಳಿಕೊಂಡಿದ್ದಾರೆ. “ಪರಾವಲಂಬಿಯ ಜೀವಿ ನಾನಲ್ಲ. ಹುಟ್ಟುತ್ತಲೇ ತಂದೆ, ತಾಯಿ ಇಲ್ಲ. ಬಡವರಾದ ಸೋದರತ್ತೆ ಅವರು ಉಳಿದ ತಂಗಳ ಹಾಕಿ ಸಾಕಿದರು…. ಎಸ್ಸೆಸ್ಸೆಲ್ಸಿ ಮುಗಿಸುವುದೇ ಒಂದು ಪ್ರಯಾಸವಾಯಿತು. ಶಾಲೆಗೆ ಫೀಜು ಕಟ್ಟುವುದಕ್ಕೆ ಗತಿಯಿಲ್ಲದೆ ಅಲ್ಲಿಗೆ ಮುಗಿಯಿತು ವಿದ್ಯಾಭ್ಯಾಸದ ಕತೆ. ಅವರಿಗೆ ಬಾಲ್ಯದಲ್ಲಿ ಅಕ್ಷರಾಭ್ಯಾಸವಾದದ್ದು ತೆಲುಗಿನಲ್ಲಿ. ಸೋದರಮಾವ ವೃತ್ತಿಯಲ್ಲಿ ಅರ್ಚಕರು. ಅವರ ಮನೆಯಲ್ಲಿ ‘ಮೇಲುಕರಟದ ತುರಿಯಿಂದ ಬೆಳೆದವನು’ ಎಂದು ಬೀchi ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ಅವರು ಕನ್ನಡ ಕಲಿತದ್ದೇ ಎಸ್.ಎಸ್.ಎಲ್.ಸಿ ವೇಳೆಗೆ, ಪೋಲೀಸ್ ಇಲಾಖೆಯಲ್ಲಿ ಅಖಂಡವಾಗಿ ಮೂವತ್ತೆರಡು ವರ್ಷ ಸೇವೆ. ಬಹುಶಃ ಇವರ ಹುಡುಕುಗಣ್ಣು, ಚುಚ್ಚು ಮಾತು, ಝಾಡಿಸುವ ಮನೋಧರ್ಮ ಇವೆಲ್ಲ ಬಹುಮಟ್ಟಿಗೆ ಆ ಡಿಪಾರ್ಟ್ ಮೆಂಟಿನ ಪ್ರಸಾದ ಎನಿಸುತ್ತದೆ.

ಬೀchi ಬರವಣಿಗೆಗೆ ಇಳಿದದ್ದು ಒಂದು ಆಕಸ್ಮಿಕವೇ. ಅದರಲ್ಲೂ ಹಾಸ್ಯದ ಬರವಣಿಗೆಗೆ ಅವರಿಗೆ ಪ್ರೇರಣೆ ಬಂದದ್ದು ಇನ್ನೊಂದು ಆಕಸ್ಮಿಕ. ಹಾಸ್ಯಪ್ರಜ್ಞೆಯೇನೋ ಅವರಲ್ಲಿ ಧಾರಾಳವಾಗಿತ್ತು.
ಬೀchi ಅವರಿಗೆ ಬರೆಯುವ ಅಭ್ಯಾಸ ಇರಲಿಲ್ಲ ಮಾತ್ರವಲ್ಲ. ಕನ್ನಡದಲ್ಲಿ ಬರೆಯುವುದು ಓದುವುದು ಅಷ್ಟೇನೂ ಗೌರವದ ಕೆಲಸವಲ್ಲ ಎಂಬ ಭಾವನೆಯೂ ಇತ್ತು. ಕನ್ನಡ ಸಾಹಿತ್ಯ ಗ್ರಂಥಗಳ ಪರಿಚಯವೇ ಇಲ್ಲದಿದ್ದ ಬೀchiಯಂತಹ ತರುಣನನ್ನು ಸಾಹಿತ್ಯ ಜಗತ್ತಿನ ಗುರುತ್ವಾಕರ್ಷಣೆಗೆ ಒಳಪಡಿಸಿದವರೆಂದರೆ ಅ.ನ. ಕೃಷ್ಣರಾಯರು. ಅವರ ‘ಸಂಧ್ಯಾರಾಗ’ ಬೀchiಯವರ ಮನಸ್ಸನ್ನು ಸೆಳೆದ ಕಾದಂಬರಿ. ಈ ಕಾದಂಬರಿಯ ಪರಿಚಯವಾದುದ್ದು ಒಂದು ಸ್ವಾರಸ್ಯಕರ ವಿಷಯವೇ. ಇವರ ಪತ್ನಿ ಕನ್ನಡ ಭಕ್ತೆ. ಕನ್ನಡ ಪುಸ್ತಕ ಓದುವ ಹವ್ಯಾಸ ಆಕೆಯದು. ಬೀchi ಅಲ್ಪ ಸ್ವಲ್ಪ ತಿರಸ್ಕಾರದ ಭಾವದಿಂದಲೇ ಒಂದು ಪುಸ್ತಕದ ಅಂಗಡಿಗೆ ಹೋದರಂತೆ. “ಒಂದು ಕನ್ನಡದ ಪುಸ್ತಕ ಕೊಡಿ ಯಾವುದಾದರೂ ಚಿಂತೆಯಿಲ್ಲ. ರೈಲ್ವೆ ಟೈಮ್ ಟೇಬಲ್ ಪುಸ್ತಕ ಕೊಟ್ಟರೂ ಅಡ್ಡಿಯಿಲ್ಲ. ಆದರೆ ಕನ್ನಡದಲ್ಲಿ ಅಚ್ಚಾಗಿರಬೇಕು” ಎಂದರಂತೆ! ಪುಣ್ಯಕ್ಕೆ ಅಂಗಡಿಯಾತ ಕೊಟ್ಟ ಪುಸ್ತಕ ‘ಸಂಧ್ಯಾರಾಗ’. ಅದನ್ನು ಓದಿದ ಬೀchi ಸದ್ದಿಲ್ಲದೆ ಕನ್ನಡದ ಪ್ರೇಮಿಯಾದರು. ಬಳ್ಳಾರಿಯಲ್ಲಿದ್ದ ಗೆಳೆಯ ಕೋ. ಚೆನ್ನಬಸಪ್ಪ ಅವರ ಕಾಟದಿಂದ, ಕೋ.ಚೆ. ಸಂಪಾದಕರಾಗಿದ್ದ ರೈತವಾಣಿ ವಾರಪತ್ರಿಕೆಯಲ್ಲಿ ‘ಬೇವಿನಕಟ್ಟೆ ತಿಂಮ’ ಎಂಬ ಸ್ಥಿರ ಶೀರ್ಷಿಕೆಯಲ್ಲಿ ಹಾಸ್ಯ ಲೇಖನಗಳನ್ನು ಬರೆದು ಅನಂತರ ಪಾ.ಪು. ಅವರ ‘ವಿಶಾಲ ಕರ್ನಾಟಕ’ ದಿನಪತ್ರಿಕೆಯಲ್ಲಿ ‘ಕೆನೆ ಮೊಸರು’ ಸ್ಥಿರ ಶೀರ್ಷಿಕೆಯಡಿಯಲ್ಲಿ ನಿತ್ಯವೂ ಹರಟೆಗಳನ್ನು ಬರೆದರು.

1946ರಲ್ಲಿ ಪ್ರಕಟಿತಗೊಂಡ ರೇಡಿಯೋ ನಾಟಕಗಳಿಂದ ಹಿಡಿದು ತಾವು ತೀರಿಕೊಳ್ಳುವವರೆಗೂ ಬೀchi ಬರವಣಿಗೆಗೆ ವಿಶ್ರಾಂತಿ ಎಂಬುದೇ ಇರಲಿಲ್ಲ. ಐವತ್ತಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ ಅವರ ರಚನೆಗಳಲ್ಲಿ ಹಲವಾರು ನಿರಂತರವಾಗಿ ಮುದ್ರಣದ ಭಾಗ್ಯವನ್ನು ಕಂಡಿವೆ. ‘ತಿಂಮನ ತಲೆ’ಯಂತೂ ಇಂದಿನ ದಿನಗಳಲ್ಲೂ ಪುನರ್ ಮುದ್ರಣ ಕಾಣುತ್ತಲೇ ಸಾಗಿದೆ. ಬೀchi ಸತ್ಕಾರ ಸಮಿತಿಯವರು ಅವರ ಅರವತ್ತನೇ ಹುಟ್ಟುಹಬ್ಬದ ಸನ್ಮಾನ ಸಂದರ್ಭದಲ್ಲಿ ಬೆಳೆಗಾಂವಿಯಿಂದ ಮಿರ್ಜಿ ಅಣ್ಣಾರಾಯ, ಕೃಷ್ಣಕೊಲ್ಹಾರ ಕುಲಕರ್ಣಿ ಇವರುಗಳ ಸಂಪಾದಕತ್ವದಲ್ಲಿ ಹೊರತಂದಿರುವ ‘ತಿಂಮಾಯಣ’ದ ಪರಿವಿಡಿಗಳಲ್ಲಿ ಅವರ ಕೃತಿಗಳ ಪೂರ್ಣವಿವರ ಇದೆ. ಬೀchiಯವರ ಬರವಣಿಗೆಯನ್ನು ಮುಖ್ಯವಾಗಿ ಕಾದಂಬರಿ, ನಾಟಕ, ಕಥೆ, ಹರಟೆ, ಪದ್ಯ ಎಂದು ವಿಂಗಡಿಸಬಹುದು. ಅವರ ‘ದಾಸಕೂಟ’ ಕನ್ನಡದಲ್ಲಿಯೇ ಮೊತ್ತ ಮೊದಲ ಹಾಸ್ಯಪ್ರಧಾನ ಕಾದಂಬರಿ. ಇದರ ಒಂದು ಪಾತ್ರದ ಬೆಳವಣಿಗೆ ಮುಂದಿನ ‘ಸತೀ ಸೂಳೆ’ ಕಾದಂಬರಿಯ ವಸ್ತು. ‘ಸರಸ್ವತಿ ಸಂಹಾರ’, ‘ಖಾದಿ ಸೀರೆ’, ‘ಬೆಂಗಳೂರು ಬಸ್ಸು’, ‘ದೇವನ ಹೆಂಡ’, ‘ಏರದ ಬಳೆ’, ಮೇಡಮ್ಮನ ಗಂಡ’, ‘ಟೆಂಟ್ ಸಿನಿಮಾ’, ‘ಆರಿದ ಚಹಾ’, ‘ಬಿತ್ತಿದ್ದೇ ಬೇವು’ ಮೊದಲಾದ ಮೂವತ್ತಕ್ಕೂ ಹೆಚ್ಚಿನ ಕಾದಂಬರಿಗಳನ್ನು ಅವರು ಬರೆದಿದ್ದಾರೆ. ಕನ್ನಡದಲ್ಲಿ ಬರುತ್ತಿದ್ದ ಬರಿಯ ಕಾಲ್ಪನಿಕವಾದ ಅಸಂಬದ್ಧ ಪತ್ತೆದಾರಿ (detective) ಕಾದಂಬರಿಗಳ ವ್ಯಂಗ್ಯಾನುಕರಣದ ಫಲವಾಗಿ ಅವರ ‘ಸತ್ತವನು ಎದ್ದು ಬಂದಾಗ’ ಎಂಬ ‘Defective’ ಕಾದಂಬರಿ ಮೂಡಿತು. ಸಾಯದೆ ಇದ್ದವನನ್ನು ಶೋಧಿಸುವ ಮೋಜಿನ ಈ ಕಾದಂಬರಿ ತುಂಬ ಜನಪ್ರಿಯವಾಯಿತು. ಅನಕೃ ಅವರನ್ನು ತಮ್ಮ ಗುರುವಾಗಿ ಸ್ವೀಕರಿಸಿದ ಬೀchi ತಮ್ಮ ವಿಶಿಷ್ಟ ವ್ಯಂಗ್ಯಶೈಲಿಯನ್ನು ಮಾತ್ರ ಉಳಿಸಿಕೊಂಡು ಜನಪ್ರಿಯತೆ, ರೋಚಕತೆ, ರೋಮಾಂಚಕತೆಗಳ ವೈಭವದ ಜಾಡಿನಲ್ಲಿ ನುಗ್ಗಿಬಿಟ್ಟರು.

ಬೀchiಯವರಿಗೆ ತುಂಬ ಕೀರ್ತಿ ತಂದುಕೊಟ್ಟ ಕೃತಿಗಳ ಪೈಕಿ ಹನ್ನೊಂದನೆಯ ಅವತಾರ, ರೇಡಿಯೋ ನಾಟಕಗಳು ಇವೆರಡು ಮುಖ್ಯವಾದವು.

ಇದು ‘ತಿಂಮ’ ಕನ್ನಡದಲ್ಲಿ ಬೆಳೆದ ಬಗೆಯೂ ಹೌದು. ಬೀchi ಬೆಳೆದ ಬಗೆಯೂ ಹೌದು. ಬೀchi ಎಲ್ಲ ವಿಷಯಗಳಲ್ಲೂ ತಲೆಹಾಕಲು ಒಂದು ಒಳ್ಳೆಯ ಪಾತ್ರ ಪ್ರತಿಮೆಯನ್ನು ಬಳಸಿಕೊಂಡರು. ಅದೇ ತಿಂಮ, ಬೀಚಿ ತಿಂಮತನ ಈ ಶಬ್ದಗಳ ವ್ಯಾಪಕ ಅರ್ಥದಲ್ಲಿ ಬಳಸಿದ್ದಾರೆ. ತಿಂಮ ‘ತಿಮ್ಮ’ನಾಗದೆ ‘ತಿಂಮ’ನಾದದ್ದೂ ಒಂದು ವಿಶಿಷ್ಟ ಉಪಯೋಗಕ್ಕಾಗಿಯೇ. ಇವನು ಹುಟ್ಟಿದ್ದೂ ಒಂದು ವಿಚಿತ್ರ ಸನ್ನಿವೇಶದಲ್ಲೇ. ಬೀchi ಒಮ್ಮೆ ಆಸ್ಪತ್ರೆಯಲ್ಲಿ ನರಳುತ್ತಿದ್ದರಂತೆ (ಅಂದರೆ ಮನೆಯಲ್ಲಿ ನರಳುತ್ತಲೇ ಇರಲಿಲ್ಲ ಎಂದರ್ಥವಲ್ಲ, ಇರಲಿ!). ಹೊತ್ತು ಕಳೆಯಲು ತುಂಬಾ ಓದುತ್ತಿದ್ದರು. ವೋಡ್ ಹೌಸ್ ನ ‘ಆಮ್ನಿ ಬಸ್’, ‘ಥ್ಯಾಂಕ್ಯೂ ಜೀವ್ಸ್’ ಇವುಗಳನ್ನು ಓದುತ್ತಿದ್ದಾಗ ಕನ್ನಡದಲ್ಲೂ ಜೀವ್ಸ್ ನಂತಹ ಒಂದು ಪಾತ್ರದ ಸೃಷ್ಟಿ ಅಗತ್ಯ ಎಂದುಕೊಂಡರು. ಫಲವಾಗಿ ‘ತಿಂಮ’ ಹುಟ್ಟಿಕೊಂಡ.

ಅವರ ಬರಹಗಳ ವಿಶಿಷ್ಟ ದ್ರವ್ಯ ಇದೇ. ಉತ್ತಮ ವಾಗ್ಮಿಯೂ ಆಗಿದ್ದ ಬೀchi ಈ ಭಾಷಾ ವೈಶಿಷ್ಟ್ಯವನ್ನೇ ಮೆರೆಸಿ ಜನರ ಮನಸ್ಸನ್ನೂ ಗೆದ್ದುಕೊಂಡಿದ್ದರು. ಐವತ್ತಕ್ಕೂ ಹೆಚ್ಚಿನ ಗ್ರಂಥಗಳನ್ನು ಬರೆದ ಬೀchiಯವರ ಯಾವ ಪುಸ್ತಕ ತೆರೆದರೂ ಇಂಥ ಬೀchiಯವರದೆಂದು ಗುರುತಿಸಬಲ್ಲಂಥ ವಿಶಿಷ್ಟಶೈಲಿಯ ದರ್ಶನವಾಗುತ್ತದೆ.

ಬೀchiಯವರು ನಿಧನರಾದದ್ದು ಡಿಸೆಂಬರ್ 7, 1980ರಲ್ಲಿ. ಈ ಮಹಾನ್ ಬರಹಗಾರನಿಗೆ ನಮ್ಮ ಸಾಷ್ಟಾಂಗ ನಮನಗಳು.

ಸಂಗ್ರಹ: ಶ್ರೀ ವಿಶ್ವಾಸ್ ಡಿ. ಗೌಡ, ಸಕಲೇಶಪುರ