ವಿದ್ಯಾರ್ಥಿಗಳು ಭತ್ತ ಬೆಳೆಯುವ ಗದ್ದೆಗಳಾಗಬೇಕು

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು
ಭವ್ಯ ಭಾರತದ ಬಾವಿ ಪ್ರಜೆಗಳನ್ನು ಸೃಷ್ಟಿಸುತ್ತಿರುವ ನಾವಿಂದು ಎಲ್ಲಿ ಎಡವುತ್ತಿದ್ದೇವೆ ಎಂದು ಯೋಚಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ .

“ವಿದ್ಯಾರ್ಥಿಗಳು ಭತ್ತ ತುಂಬುವ ಚೀಲಗಳಾದೆ, ಭತ್ತ ಬೆಳೆಯುವ ಗದ್ದೆಗಳಾಗಬೇಕು” ಎಂದು ನಮ್ಮ ರಾಷ್ಟ್ರಕವಿ ಕುವೆಂಪುರವರು ಹೇಳಿದ್ದಾರೆ.
STUDENT LIFE IS GOLDEN LIFE ಹೌದು, ಇದನ್ನು ಕನ್ನಡದಲ್ಲಿ ಹೇಳಬೇಕೆಂದರೆ, “ವಿದ್ಯಾರ್ಥಿ ಜೀವನ ಸುವರ್ಣ ಜೀವನ” ಯಾವಾಗಲೂ ನೆನಪಿಗೆ ಬರುವ ಅತ್ಯಂತ ಸಂಭ್ರಮ ಹಾಗೂ ವೈಭವದ ಕಾಲಘಟ್ಟವೆಂದರೆ ಅದು ವಿದ್ಯಾರ್ಥಿ ಜೀವನ. ಇದು ಅತ್ಯಂತ ಮಧುರ ಹಾಗೂ ಸುಂದರವಾದ ಕ್ಷಣ, ಸುಖ-ದು:ಖ, ಇಂದು-ನಾಳೆ, ಬಡವ-ಬಲ್ಲಿದರೆಂಬ ಯಾವ ಅರಿವಿಲ್ಲದೇ ತನ್ನಷ್ಟಕ್ಕೆ ತಾನೇ ಉರುಳಿ ಹೋಗುವ ಸಂಭ್ರಮದ ದಿನಗಳಿವು. ದುಡಿಮೆ – ಗಳಿಕೆಗಳ ರಂಪಾಟವಿಲ್ಲದೆ ಆಡುತ್ತಾ ಕಳೆವ ಆ ಸಮಯ ಅತ್ಯಂತ ಶ್ರೇಷ್ಠವೆನಿಸುತ್ತದೆ. ಮಾನವ ಜೀವನದ ಅತ್ಯಂತ ಅಮೂಲ್ಯ ಸಮಯವೇ ಬಾಲ್ಯ. ಆ ಬಾಲ್ಯದಲ್ಲಿ ಬರುವ ಸುಂದರ ಸಮಯವೇ ವಿದ್ಯಾರ್ಥಿ ಜೀವನ.

ಹಿಂದಿನ ವಿದ್ಯಾರ್ಥಿಗಳಲ್ಲಿ ಜೀವನ ಕೌಶಲ್ಯಕ್ಕೆ ಬೇಕಾದ ತಯಾರಿ ಪ್ರಕೃತಿಯ ವಾತಾವರಣದಲ್ಲಿ ಸಿಗುತ್ತಿತ್ತು. ನಾವು ಆಡುತ್ತಿದ್ದ ಮರಕೋತಿಯಾಟ. ವಾಹ್..! ಮರ ಏರುವುದರಲ್ಲಿ ನಾವು ನಿಪುಣರಾಗಿದ್ದೆವು, ಕೆರೆಯಲ್ಲಿ ಒಂದೇ ನೆಗೆತಕ್ಕೆ ಈ ದಡದಿಂದ ಆ ದಡಕ್ಕೆ ಈಜುತ್ತಾ ದಡ ಸೇರುವ ಅನುಭವ ಅತ್ಯಂತ ರೋಮಾಂಚನವಾಗಿತ್ತೆಂದರೆ ತಪ್ಪಾಗಲಾರದು. ಮೇಷ್ಟ್ರು ಹೇಳಿಕೊಡುತ್ತಿದ್ದ ಅ, ಆ, ಇ, ಈ ವರ್ಣಮಾಲೆ ಅಕ್ಷರಗಳ ಉಚ್ಚಾರಗಳು, ಸ್ವರ – ವ್ಯಂಜನಗಳ ವ್ಯತ್ಯಾಸ, ಕಾಗುಣಿತದ ಉಚ್ಚಾರಗಳು ‘ಕ ಗೆ ತಲಕೊಟ್ಟು ಕ , ಕ ಕ್ಕೆ ಇಳಿ ಕಾ’, ಎಂದು ಹೇಳಿಕೊಡುತ್ತಿದ್ದುದರಿಂದ ನಮ್ಮ ಭಾಷಾ ಶೈಲಿ ಸ್ಪಷ್ಟವಾಗಲು ಕಾರಣವಾಯಿತು. ಗಣಿತ ತರಗತಿಗಳಲ್ಲಿ ಹೇಳಿಸುತ್ತಿದ್ದ ಮಗ್ಗಿ ಪಾಠ ಇಂದು ಅಪರೂಪವಾಗಿದೆ. ಗಣಿತ ಮೇಷ್ಟ್ರು ಬರುವ ಮೊದಲೇ ಶುರುವಾಗುತ್ತಿದ್ದ ನಮ್ಮ ಮಗ್ಗಿ ಪಾಠ ರಾಗಬದ್ಧ, ತಾಳಬದ್ಧವಾಗಿ ಎರಡೊಂದಲಾ – ಎರಡು, ಎರಡೆರಡ್ಲಾ – ನಾಲ್ಕು ಎಂದು ಹೇಳುವುದೇ ಕಿವಿಗಿಂಪಾಗಿರುತಿತ್ತು. ಆದರೆ ವರ್ತಮಾನದ ವಿದ್ಯಾರ್ಥಿ ಜೀವನದ ಪರಿಸ್ಥಿತಿ ಬದಲಾಗಿದೆ. ತಂತ್ರಜ್ಞಾನದ ಹೆಸರಲ್ಲಿ ಮಕ್ಕಳ ಆಲೋಚನಾ ಶಕ್ತಿಯನ್ನೇ ನಾವಿಂದು ಹಾಳು ಮಾಡುತ್ತಿದ್ದೇವೆ ಎಂದೆನಿಸುತ್ತಿದೆ. ಹಿಂದಿನ ವಿದ್ಯಾರ್ಥಿಗಳಲ್ಲಿ ಹೈನುಗಾರಿಕೆ ಬಗ್ಗೆ ಸಾಕಷ್ಟು ಚರ್ಚೆ ನಡೆಸಬಹುದಿತ್ತು. ಆದರೆ ಇಂದಿನ ವಿದ್ಯಾರ್ಥಿಗಳಿಗೆ ನಾವು ಮೊದಲು ಕೇಳಬೇಕಾದ ಪ್ರಶ್ನೆ ನೀವು ಹಸುವನ್ನು ನೋಡಿದ್ದೀರಾ? ಹಾಗಾದರೆ ಒಮ್ಮೆ ನೋಡಿ. ಹಸುವಿಗೆ ಎಷ್ಟು ಕಾಲುಗಳಿವೆ ? ಎಷ್ಟು ಬಾಲವಿದೆ ? ಎಂದು ಕೇಳುವ ಪರಿಸ್ಥಿತಿಗೆ ಬಂದಿರುವುದು ನಿಜವಾಗಿಯೂ ವಿಪರ್ಯಾಸವೇ ಸರಿ.

ಹಿಂದೆ ಆರು-ಏಳು ವರ್ಷವಾದರೂ ಶಾಲೆ ಮುಖ ನೋಡದ ಆಗಿನ ವಿದ್ಯಾರ್ಥಿಗಳು ಸ್ವತಂತ್ರ ಹಕ್ಕಿಗಳಂತೆ ಸ್ವೇಚ್ಛೆಯಾಗಿ ತಿರುಗುತ್ತಿದ್ದರು. ಎಲ್ಲ ಪ್ರಾಣಿ-ಪಕ್ಷಿಗಳ ಹೆಸರು ಹೇಳಿ ಅವುಗಳನ್ನು ಗುರುತಿಸ ಬಲ್ಲವರಾಗಿದ್ದರು. ಪ್ರತಿಯೊಂದು ತರಕಾರಿಯ ಹೆಸರೂ ತಿಳಿದಿತ್ತು, ಅವುಗಳನ್ನು ಗುರುತಿಸುತ್ತಿದ್ದರು. ಗದ್ದೆ, ತೋಟ, ಹೊಲ ವ್ಯತ್ಯಾಸವನ್ನು ಅರಿಯಬಲ್ಲ ಅಪ್ಪಟ ಆಲೋಚನಾ ಶಕ್ತಿ, ವಿವೇವನಾ ಶಕ್ತಿಯನ್ನು ಹೊಂದಿ ಜೀವನ ಕೌಶಲ್ಯಗಳನ್ನು ಮೈಗೂಡಿಸಿಕೊಂಡ ಪುಂಡಾಟದ ವಿದ್ಯಾರ್ಥಿಗಳಾಗಿದ್ದರು.
ಆದರೆ ಇಂದಿನ ತಂತ್ರಜ್ಞಾನದ ಹೆಸರಲ್ಲಿ ಮಕ್ಕಳಿಗೆ ಆಟಿಕೆಯಾಗಿ ನೀಡುತ್ತಿರುವುದು ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟ್ಯಾಪ್, ಇಂಟರ್ನೆಟ್ ಎಂಬ ಮಾಯಾಜಾಲದೊಳಗೆ ಅವರನ್ನು ಬಲವಂತವಾಗಿ ಹಿಡಿದಿಡುತ್ತಿದ್ದೇವೆ.

ಇಲ್ಲಿ ಕುವೆಂಪುರವರು ಹೇಳಿರುವ ಹಾಗೆ ಭತ್ತವನ್ನು ತುಂಬುವ ಚೀಲಕ್ಕೆ ಯಾವ ಬೆಲೆಯೂ ಇಲ್ಲ. ಆದರೆ ಭತ್ತ ಬೆಳೆಯುವ ಗದ್ದೆಗಳಿಗೆ ಬೆಲೆ ಹೆಚ್ಚು. ವಿದ್ಯಾರ್ಥಿಗಳು ಮೊದಲು ತಮ್ಮ ವಿವೇಚನಾ ಸಾಮರ್ಥ್ಯ, ಚಿಂತನ ಕೌಶಲ್ಯ, ಹೊಸ ಹೊಸ ವಿಚಾರಧಾರೆಗಳು, ನವನವೀನ ಆವಿಷ್ಕಾರಗಳ ಬಗ್ಗೆ ಯೋಚಿಸುವುದರೊಂದಿಗೆ ದೇಶದ ಏಳ್ಗೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಬೇಕು.

ಯಂತ್ರ – ತಂತ್ರವ ಮರೆತು
ಆಲೋಚನೆಗೆ ಮುಖ ಮಾಡಿ
ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡೋಣ
ನಾವಿಂದು ಕುವೆಂಪು’ರವರ ವಿಶ್ವ ಮಾನವ ಸಂದೇಶ “ಮನುಜ ಮತ ವಿಶ್ವಪಥ” ವೆಂಬ ಮಂತ್ರವನ್ನು ಪ್ರತಿ ವಿದ್ಯಾರ್ಥಿಗಳಿಗೂ ತಿಳಿಸಿಕೊಡಬೇಕು, ಪ್ರತಿಯೊಂದು ಮಗುವನ್ನು ವಿಶ್ವ ಮಾನವನನ್ನಾಗಿ ಮಾಡುವುದು ವಿದ್ಯೆಯ ಕರ್ತವ್ಯವಾಗಬೇಕಿದೆ.

  • ಲೇಖಕರು: ಇಂದಿರಾ ಲೋಕೇಶ್, ಹಾಸನ