ಸ್ತ್ರೀ ಗುಣಶಕ್ತಿ
(ಹೆಣ್ಣು ಅಬಲೆ ಅಲ್ಲ ಸಬಲೆ)
ಹೆಣ್ಣು ಅಬಲೆಯಲ್ಲ ಸಬಲೆ. ಕಾರಣ ಅವಳಲ್ಲಿರುವ ದೈವದತ್ತ ಗುಣಗಳೇ ಅವಳ ಶಕ್ತಿಯಾಗಿವೆ. ಇದು ಅನಾದಿಕಾಲದ ಸತ್ಯ. ಅದಕ್ಕೆ ಅವಳು ಎಲ್ಲರಿಗೂ ಪ್ರಿಯಳು. ಸ್ವಲ್ಪ ವಿವರವಾಗಿ ನೋಡೋಣವೆ.-
ಭಗವದ್ಗೀತೆ ಹತ್ತನೇ ಅಧ್ಯಾಯ ವಿಭೂತಿಯೋಗದಲ್ಲಿ ಭಗವಂತನು ತನ್ನ ಶ್ರೇಷ್ಠತೆಯ ಅಂಶಗಳು ಯಾವ ವಸ್ತುಗಳಲ್ಲಿ, ಯಾವ ಜೀವಿಗಳಲ್ಲಿ ಮತ್ತು ಯಾರಲ್ಲಿ ಎಷ್ಟು ವ್ಯಾಪಕತೆ ಹೊಂದಿವೆ ಎಂಬುದನ್ನು ತಿಳಿಸಿದ್ದಾನೆ. ಈ ಅಧ್ಯಾಯದ 34ನೇ ಶ್ಲೋಕದನ್ವಯ ಸ್ತ್ರೀಯರಲ್ಲಿರುವ ಏಳು ಗುಣಶಕ್ತಿಗಳು ಹೆಚ್ಚು ಪ್ರಭಾವಶಾಲಿ ಎಂಬ ಮಾತು ನನಗೆ ಬಹಳ ಇಷ್ಟವಾಯಿತು.
ಮೃತ್ಯುಃ ಸರ್ವಹರಶ್ಚಾಮ್ ಉದ್ಭವಶ್ಚ ಭವಿಷ್ಯತಾಮ್ |
ಕೀರ್ತಿಃ ಶ್ರೀರ್ವಾಕ್ ಚ ನಾರೀಣಾಮ್ ಸ್ಮೃತಿರ್ಮೇಧಾ ಧೃತಿಃ ಕ್ಷಮಾ ||10-34||
ಭಗವಂತನು ಅರ್ಜುನನಿಗೆ ಹೇಳುತ್ತಾನೆ- ನಾನು ಎಲ್ಲವನ್ನೂ ನಾಶಪಡಿಸುವ ಮೃತ್ಯು ಆಗಿದ್ದೇನೆ. ಹಾಗೆಯೇ ಉತ್ಪತ್ತಿಯೂ ಆಗಿದ್ದೇನೆ. ಸ್ತ್ರೀಯರಲ್ಲಿರುವ ಏಳು ಗುಣಗಳು ನಾನೇ ಆಗಿದ್ದೇನೆ. ಅವು ಯಾವವೆಂದರೆ- ಕೀರ್ತಿ, ಶ್ರೀ, ವಾಕ್, ಸ್ಮೃತಿ, ಮೇಧಾ, ಧೃತಿ ಮತ್ತು ಕ್ಷಮಾ. ಸ್ತ್ರೀಯರಲ್ಲಿರುವ ಈ ಅದ್ಭುತ ಗುಣಶಕ್ತಿಗಳು ಶ್ರೀಕೃಷ್ಣ ಪರಮಾತ್ಮನ ಅಂಶರೂಪಗಳೇ ಆಗಿವೆ. ಅವು ನನಗೆ ಅತ್ಯಂತ ಪ್ರಿಯ ಹಾಗೂ ಅನುಕರಣೀಯವಾಗಿವೆ.
1) ಕೀರ್ತಿ: ಕೀರ್ತಿ ಅಂದರೆ ಖ್ಯಾತಿ, ಪ್ರಸಿದ್ಧಿ ಎಂದು ಅರ್ಥ. ಧರ್ಮಾಚರಣೆ, ಪ್ರಾಮಾಣಿಕತೆ, ಕರ್ತವ್ಯನಿಷ್ಠೆಯಿಂದ ತಮ್ಮ ತಮ್ಮ ಕ್ಷೇತ್ರದಲ್ಲಿ ಜವಾಬ್ದಾರಿಯುತ ಕಾರ್ಯಮಾಡುತ್ತ ಪ್ರಸಿದ್ಧಿ ಪಡೆದಿರುವುದೇ ಕೀರ್ತಿಯಾಗಿದೆ. ಪ್ರಸಿದ್ಧಿ ಗೌರವ ಇವು ಜೀವಂತವಿರುವವರೆಗೆ ಇರುತ್ತವೆ. ಆದರೆ ಮರಣಾತೀತ ಉಳಿಯುವ ಪ್ರೀಯತೆ ಮತ್ತು ಖ್ಯಾತಿ ಕೀರ್ತಿಯಾಗಿದೆ. ರಾಮಾಯಣದ ಸೀತೆ, ಮಹಾಭಾರತದ ದ್ರೌಪದಿ, ರಾಜಕೀಯದ ಇಂದಿರಾ ಗಾಂಧಿ, ಸಮಾಜ ಸೇವಕಿ ಮದರ್ ತೆರೆಸಾ ಅಂತರಿಕ್ಷಯಾನದಲ್ಲಿ ಮೃತಳಾದ ಕಲ್ಪನಾ ಚಾವ್ಲಾ ಹೀಗೆ ಇನ್ನೂ ಅನೇಕ ಮಹಿಳೆಯರನ್ನು ಉದಾರಿಸಬಹುದು.
2) ಶ್ರೀ: ಶ್ರೀ ಅಂದರೆ ಸಿರಿ, ಸಂಪತ್ತು, ಐಶ್ವರ್ಯ, ಲಕ್ಷ್ಮಿ, ಸಮೃದ್ಧಿ ಇತ್ಯಾದಿ. ಪ್ರತಿ ವ್ಯಕ್ತಿಯಲ್ಲಿ ಸಾತ್ತ್ವಿಕಗುಣ, ಸರಳತೆ, ಸದಾಚಾರ, ಸದ್ವಿಚಾರಗಳಿದ್ದರೆ ಅದೂ ಕೂಡ ಶ್ರೀ ಆಗಿದೆ. ಹೆಣ್ಣು ಸೌಂದರ್ಯವತಿ, ಶಾಲೀನತೆಯುಳ್ಳವಳಾಗಿ ತವರು ಮನೆ, ಅತ್ತೆಯ ಮನೆ ಎರಡನ್ನೂ ಸಂಭಾಳಿಸಿಕೊಂಡು ಹೋಗುತ್ತ ಸಂಪದ್ಭರಿತ ಸಮಾಜ ನಿರ್ಮಿಸಲು ಕಾರಣಳಾಗುತ್ತಾಳೆ.
3) ವಾಕ್: ವಾಕ್ ಅಂದರೆ ವಾಣಿ, ಮಾತು ಎಂದರ್ಥ. ಬಿಡುವಿಲ್ಲದೆ ಬಹಳ ಮಾತಾಡುವುದರಿಂದಲೇ ‘ಮಾತಾ’ ಎಂದು ಹಾಸ್ಯವಾಗಿ ಹೇಳುತ್ತಾರೆ. ವಾಕ್ ಚಾತುರ್ಯದಲ್ಲಿ ಸ್ತ್ರೀ ಎತ್ತಿದ ಕೈ. ಎಂಥವರನ್ನೂ ಸೋಲಿಸಬಲ್ಲಳು. ಬಸವಣ್ಣನವರ ಅನುಭವ ಮಂಟಪದಲ್ಲಿ ಶರಣರಿಗೆ ಸಮನಾಗಿ ಶರಣೆಯರೂ ಇರುತ್ತಿದ್ದರು. ಶರಣೆ ಅಕ್ಕಮಹಾದೇವಿ ಅನುಭವ ಮಂಟಪಕ್ಕೆ ಬಂದಾಗ, ಅಲ್ಲಿ ಕುಳಿತ ಶರಣರು, ಅಲ್ಲಮಪ್ರಭುಗಳು ಅಕ್ಕಮಹಾದೇವಿಗೆ ಗುರು, ಲಿಂಗ, ಜಂಗಮ ಶರಣ ಸಾಹಿತ್ಯ ಕುರಿತು ಪ್ರಶ್ನೆಗಳ ಸುರಿಮಳೆ ಸುರಿಸಿದಾಗ, ಅಕ್ಕನು ನಿರ್ಭಯ ನಿರರ್ಗಳವಾಗಿ ವಚನಗಳ ರೂಪದಲ್ಲಿ ಉತ್ತರಿಸುತ್ತಾಳೆ. ಅವಳ ವಾಕ್’ಚಾತುರ್ಯಕ್ಕೆ ಎಲ್ಲರೂ ತಲೆಬಾಗುತ್ತಾರೆ. ಇನ್ನೊಂದು ಸನ್ನಿವೇಶವೆಂದರೆ- ತನ್ನ ಮೃದು ಮಧುರ ಆದರೆ ಸತ್ಯವನ್ನೇ ನುಡಿದು, ವಾಕ್ ಚಾತುರ್ಯದಿಂದ ಯಮನನ್ನೇ ಸೋಲಿಸಿ, ತನ್ನ ಪತಿಯ ಪ್ರಾಣವನ್ನೇ ಮರಳಿ ಪಡೆದ ಸಾವಿತ್ರಿ ಆದರ್ಶಪ್ರಾಯಳಾಗಿದ್ದಾಳೆ.
4) ಸ್ಮೃತಿ: ಸ್ಮೃತಿ ಅಂದರೆ ಸ್ಮರಣೆ, ನೆನಪು ಎಂದರ್ಥ. ಇದು ಪುರುಷರಿಗಿಂತ 10 ಪಟ್ಟು ಜಾಸ್ತಿ ಸ್ತ್ರೀಯರಲ್ಲಿರುತ್ತದೆಯೆಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಸೃಜನಶೀಲತೆ, ಕಲೆ ಜನ್ಮದಿಂದಲೇ ಬಂದಿರುತ್ತದೆ. ವೃತಾಚರಣೆ, ಪೂಜೆ-ಪುನಸ್ಕಾರ, ಸಂಸ್ಕೃತಿ, ಸಂಸ್ಕಾರಗಳನ್ನು ಸ್ಮರಣೆಯಿಂದ ಮಕ್ಕಳಲ್ಲಿ ರೂಢಿಸಿಕೊಳ್ಳುವವರೆಂದರೆ ಅದು ಹೆಣ್ಣು ಮಕ್ಕಳು ಮಾತ್ರ. ಹೆಣ್ಣುಮಕ್ಕಳ ತಲೆ ಕಂಪ್ಯೂಟರ್ ಇದ್ದಂತೆ. ಗೂಗಲ್ ಅಂತರ್ಜಾಲದಂತೆ ತಟ್ಟನೇ ಮಾಹಿತಿ ಒದಗಿಸುತ್ತಾರೆ. ಕಂಪ್ಯೂಟರ್ ಅಸ್ತಿತ್ವಕ್ಕೆ ಬರುವ ಮೊದಲು, ಶಕುಂತಲಾ ಎಂಬ ಮಹಿಳೆ, ಅಸಂಖ್ಯಾತ ಉದ್ದದ ಗಣಿತಗಳನ್ನು ಸ್ಮರಣೆಯಿಂದ ಬಿಡಿಸಿ ಕ್ಷಣಮಾತ್ರದಲ್ಲಿ ಉತ್ತರ ಕೊಡುತ್ತಿದ್ದಳು. ಅವಳಿಗೆ ಹ್ಯೂಮನ್ ಕಂಪ್ಯೂಟರ್ ಎಂತಲೂ ಕರೆಯಲಾಗುತ್ತಿತ್ತು.
5) ಮೇಧಾ: ಮೇಧಾ ಅಂದರೆ ಉತ್ಕೃಷ್ಟ ಬುದ್ಧಿಯುಳ್ಳ, ಮೇಧಾವಿ ಎಂದರ್ಥ. ಭರತವರ್ಷದಲ್ಲಿ ಅನೇಕ ಮೇಧಾವಿ ಸ್ತ್ರೀಯರು ಆಗಿಹೋಗಿದ್ದಾರೆ ಮತ್ತು ಈಗಲೂ ಇದ್ದಾರೆ. ಪ್ರತಿಯೊಬ್ಬ ಹೆಣ್ಣು ಮಕ್ಕಳಲ್ಲಿ ಈ ಬುದ್ಧಿ, ವಿವೇಕ, ವಿಚಾರಶಕ್ತಿ ಸುಪ್ತ ರೀತಿಯಲ್ಲಿ ಇದ್ದೇ ಇರುತ್ತದೆ. ವೇದಕಾಲದಲ್ಲಿ ಋಷಿಕೆಯರು ಮಹರ್ಷಿಗಳೊಂದಿಗೆ ಅಧ್ಯಾತ್ಮ ವಿದ್ಯೆ, ತತ್ತ್ವಜ್ಞಾನದ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ಆವಾಗ ಕಾಗದದ ಬಳಕೆ ಪ್ರಚಲಿತವಿದ್ದಿಲ್ಲ. ಗುರುಕುಲಗಳಲ್ಲಿ ಎಲ್ಲ ಸ್ಮರಣೆಯಿಂದ ಹೇಳಬೇಕಾಗುತ್ತಿತ್ತು. ಗಾರ್ಗಿ, ಮೈತ್ರೇಯಿಯರು ತಮ್ಮ ಮೇಧಾವಿತನದಿಂದಲೇ ಹೌದೆನ್ನಿಸಿಕೊಂಡರು. ಕಾತ್ಯಾಯಿನಿ, ಅರುಂಧತಿಯಂತಹ ಮಹಿಳೆಯರು ಮಂತ್ರದೃಷ್ಟಾರರಾಗಿದ್ದರು. ಇತ್ತೀಚೆಗೆ ಮೇಧಾವಿಯರೆಂದು ಎಣಿಸಲ್ಪಟ್ಟ ಸ್ತ್ರೀಯರೆಂದರೆ ಡಾ. ಎನಿಬೆಸೆಂಟ್, ಕಿರಣ ಬೇಡಿ, ಸಿರಿಮಾವೊ ಭಂಡಾರ ನಾಯಿಕೆ ಮುಂತಾದವರು. ಗುಜರಾತದ ಸುನಿತಾ ವಿಲಿಯಮ್ಸ್ ಇವಳು 186 ದಿನ ಅಂತರಾಳ ಭ್ರಮಣ ಅರ್ಥಾತ್ ಸ್ಪೇಸ್’ವಾಕ್ ಮಾಡಿ ವಿಶ್ವದಾಖಲೆ ಮಾಡಿದಳು. 23 ಅಗಷ್ಟ 2023 ರಂದು ಭಾರತದ ಚಂದ್ರಯಾನ-3 ರ ಉಪಕ್ರಮದಲ್ಲಿಯ ಸಂಶೋಧಕ ವಿಜ್ಞಾನಿ ಮಹಿಳೆ ಕೆ. ಕಲ್ಪನಾ ಇವಳೂ ಒಬ್ಬ ಮೇಧಾವಿ ಎಂದು ಹೇಳಲು ಗರ್ವ ಎನಿಸುತ್ತದೆ.
6) ಧೃತಿ:- ಧೃತಿ ಎಂದರೆ ಧೈರ್ಯ. ಸಂಕಲ್ಪವನ್ನು ಸಾಧ್ಯಗೊಳಿಸುವ ನಿಟ್ಟಿನಲ್ಲಿ ಮಾಡುವ ಪ್ರಯತ್ನ, ಶ್ರಮ, ಕಷ್ಟ ಇವುಗಳನ್ನು ಎದುರಿಸುವ ಧೈರ್ಯವೇ ಧೃತಿಯಾಗಿದೆ. ಅಧ್ಯಾತ್ಮ ಮಾರ್ಗದಲ್ಲಿ ಧೃತಿ ಗುಣಶಕ್ತಿ ಅತ್ಯಂತ ಮಹತ್ವದ್ದಾಗಿದೆ. ವ್ಯವಹಾರಿಕವಾಗಿ ಹೇಳುವುದಾದಲ್ಲಿ ರಾಣಿ ಕಿತ್ತೂರ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಝಾನ್ಸಿರಾಣಿ ಲಕ್ಷ್ಮೀ, ಬೇಗಮ್ ಹಜರತ್ ಮಹಲ್, ಸುಚೇತಾ ಕೃಪಲಾನಿ, ಸರೋಜಿನಿ ನಾಯಡು, ಕಸ್ತೂರಬಾ ಗಾಂಧಿ ಇವರೆಲ್ಲ ಸ್ವಾತಂತ್ರ್ಯ ಹೋರಾಟಗಾರರು. ದೇಶಕ್ಕಾಗಿ ಮನೆಮಾರು, ಮಕ್ಕಳನ್ನು ತೊರೆದು ಹೋರಾಡಿ ಜೇಲಿಗೆ ಹೋಗಿ ಬಂದವರು.
7) ಕ್ಷಮೆ: ಕ್ಷಮೆ ಇದು ಕರುಣೆ ಮತ್ತು ದಯಾಭಾವದಿಂದ ಉತ್ಪತ್ತಿಯಾಗುತ್ತದೆ. ಮಹಿಳೆಯರಲ್ಲಿ ಕ್ಷಮಾಗುಣ ಹುಟ್ಟಿನಿಂದಲೇ ಬಂದಿರುತ್ತದೆ. ಮಕ್ಕಳು, ಗಂಡ, ಬಂಧು-ಬಳಗ ಯಾರೇಯಿರಲಿ, ಅವರನ್ನು ತಾಯಿ ಭಾವನೆಯಿಂದ ಕ್ಷಮಿಸುತ್ತಾಳೆ. ಈ ರೀತಿ ಏಳು ಅದ್ಭುತ ಗುಣಶಕ್ತಿಗಳು ಮಹಿಳೆಯರಲ್ಲಿ ಭಗವಂತನು ದಯಪಾಲಿಸಿದ ಶ್ರೇಷ್ಠಗುಣಗಳಾಗಿವೆ. –
1) ಹಣಕಾಸುಮಂತ್ರಿ- ಲಕ್ಷ್ಮಿ
2) ಶಿಕ್ಷಣಮಂತ್ರಿ- ಸರಸ್ವತಿ
3) ಆಹಾರಮಂತ್ರಿ- ಅನ್ನಪೂರ್ಣೆ
4) ಸಂರಕ್ಷಣಾಮಂತ್ರಿ- ದುರ್ಗೆ ಕಾಳಿ
5) ಪರ್ಯಾವರಣ ಮಂತ್ರಿ ಬನಶಂಕರಿ
6) ನೀರಾವರಿಮಂತ್ರಿ- ಗಂಗೆ, ತುಂಗೆ ಎಲ್ಲ ನದಿಗಳು
7) ವಾರ್ತಾಪ್ರಸಾರಮಂತ್ರಿ- ಎಲ್ಲ ಸ್ತ್ರೀಯರು.
ಪೃಥ್ವಿಗೆ ವಸುಂಧರೆ ಎಂಬ ಹೆಸರು. ಹೀಗಾಗಿ ಹೆಣ್ಣು ಭೂಮಿಯಿಂದ ಆಕಾಶದ ವರೆಗೆ ವ್ಯಾಪಿಸಿದ್ದಾಳೆ.
– ಅನ್ನಪೂರ್ಣ ಸಕ್ರೋಜಿ ಪುಣೆ
8975323059