- ಶಿವರಾತ್ರಿ
******
ಶಿವನೇ ಶಂಕರ ಪಾರ್ವತಿ ರಮಣನೆ
ಕಾಯೋ ಎಮ್ಮನು ಶಶಿಧರನೆ
ಅಭಯವ ನೀಡುತ ಸಲಹುವೆ ಭಕ್ತರ
ಪಾಪವ ಕಳೆಯುವ ಗುಣನಿಧಿಯೆ ll
ನಾಡಿನ ಎಲ್ಲೆಡೆ ಹಬ್ಬದ ಸಡಗರ
ಶಿವನನು ಭಜಿಸುವ ಶುಭರಾತ್ರಿ
ಪೂಜಿಪೆ ಶಿವನನು ಭಕ್ತಿಯ ಭಾವದಿ
ಶುಭದಿನ ಇದುವೇ ಶಿವರಾತ್ರಿ ll
ಧ್ಯಾನದಿ ನಿರತವು ಹರನನು ನೆನೆಯಲು
ಜ್ಞಾನವ ನೀಡುವ ಶುಭಕರನು
ಬಕುತರ ಕಷ್ಟವ ನೀಗಿಸಿ ಸಲಹುವ
ಕರುಣಾ ಸಾಗರ ಭವಹರನು ll
ಲೋಕವ ರಕ್ಷಣೆ ಗೈದಿಹ ದೇವನು
ವಿಷವನು ಕುಡಿದಿಹ ಮೃಡಹರನೆ
ಮೃತ್ಯುಂಜಯನೇ ಗಿರಿಜಾ ವಲ್ಲಭ
ತ್ರಿಶೂಲ ಧಾರಿಯೆ ವರಮುಖನೆ ll
✍️ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ