ಮಾನವೀಯತೆ ದೊಡ್ಡದು
ಮಾನವಜನ್ಮ ಅತ್ಯಂತ ಪವಿತ್ರವಾದದ್ದು, ಏಳೇಳು ಜನ್ಮದ ಪುಣ್ಯದ ಫಲವೇ ಈ ಮಾನವ ಜನ್ಮ. ಇಂತಹ ಪುಣ್ಯದ ಫಲದಿಂದ ಜನ್ಮವೆತ್ತಿದ ಮಾನವ ಐಹಿಕ ಸುಖ ಭೋಗಗಳ ಆಸೆಗೆ ದಾಸನಾಗಿ ತನ್ನ ಕರ್ಮದ ಫಲವನ್ನು ಮರೆತು ದುರ್ಮಾರ್ಗಿಯಾಗುತ್ತಾನೆ. ಅನೇಕ ಚಟಗಳಿಗೆ ಬಲಿಯಾಗುತ್ತಾನೆ. ಆಗ ಮಾನವ ಮಾನವೀಯತೆಯ ಮರೆತು ಅಸುರನಾಗುತ್ತಾನೆ. ತನ್ನ ತನವನ್ನು ಮರೆತು ಪೈಶಾಚಿಕ ಕೃತ್ಯಗಳನ್ನು ಎಸಗಿ ಪ್ರೀತಿ, ಸ್ನೇಹ , ದಾನ, ಧರ್ಮ, ದಯೆ ಕರುಣೆಗಳನ್ನು ಮರೆತು ಅಸೂಯೆ, ದ್ವೇಷಗಳಿಗೆ ದಾಸನಾಗಿ ಮಾನವೀಯತೆಯ ಮರೆತು ಬಿಡುತ್ತಾನೆ.
ಇಲ್ಲಿ 12 ನೇ ಶತಮಾನದ ಶ್ರೇಷ್ಠ ವಚನಕಾರರು, ವಿಶ್ವಗುರು ಎನಿಸಿಕೊಂಡ ಮಾನವತಾವಾದಿ ಬಸವಣ್ಣನವರು ಹೀಗೆ ಹೇಳಿದ್ದಾರೆ- ಭೂಮಿಯ ಮೇಲೆ ಮಾನವನಾಗಿ ಹುಟ್ಟುವುದು ದೊಡ್ಡದಲ್ಲ. ಮಾನವನಾದ ಮೇಲೆ ಮಾನವೀಯತೆಯೇ ದೊಡ್ಡದು. ಧರ್ಮ ದೊಡ್ಡದಲ್ಲ, ದಯೆಯೇ ದೊಡ್ಡದು. ಮಾನವೀಯತೆ ಎಂಬುದು ಎಲ್ಲ ಧರ್ಮಕ್ಕಿಂತ ಮಿಗಿಲಾದುದು. ಮಾನವೀಯತೆಯನ್ನು ಕೇವಲ ಒಂದು ದೃಷ್ಟಿ ಯಿಂದ ನೋಡಲಾಗದು. ಮಾನವೀಯತೆ ಅನೇಕ ಸದ್ಗುಣಗಳ ಗಣಿ, ಇಲ್ಲಿ ಸಮಾನತೆ, ನ್ಯಾಯ, ಧೈರ್ಯ, ಸಂಯಮ, ಪ್ರೀತಿ, ನಮ್ರತೆ ಮುಂತಾದ ಉತ್ತಮ ಗುಣಗಳ ಸಮ್ಮಿಲನವೇ ಮಾನವೀಯತೆ.
ಮಾನವೀಯತೆ ಮನುಷ್ಯ ಮನುಷ್ಯನ ನಡುವಿನ ಸ್ನೇಹ, ಪ್ರೀತಿಯ ಸೇತುವೆ. ಇಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚಿ ಅವನನ್ನು ಮೇಲೆತ್ತುವ ಪ್ರಯತ್ನ ಮಾಡಬೇಕು. ಯಾರನ್ನೂ ತುಚ್ವವಾಗಿ ಕಾಣಬಾರದು. ಅವರವರಿಗಿರುವ ಮರ್ಯಾದೆ ಅವರಿಗೆ ಇದ್ದೇ ಇರುತ್ತವೆ. ಎಲ್ಲ ಜಾತಿ ಧರ್ಮಗಳನ್ನು ಸಮಾನ ದೃಷ್ಟಿ ಯಿಂದ ಕಾಣುವುದು. ಇಲ್ಲಿ ಯಾವುದೇ ಲಿಂಗ, ಜಾತಿ, ಧರ್ಮ, ಮೇಲು, ಕೀಳು, ಬಡವ, ಶ್ರೀಮಂತ ನೆನ್ನುವ ಭಾವನೆಯನ್ನು ತೊರೆದು ಸಮ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಮಾನವೀಯತೆ ಇರಬೇಕು. ಇದನ್ನೇ ಬಸವಣ್ಣನವರು ಹೇಳಿರುವುದು. ಮಾನವ ಜನ್ಮ ದೊಡ್ಡದಲ್ಲ, ಮಾನವೀಯತೆ ದೊಡ್ಡದು.
ಉದಾಹರಣೆಗೆ ಮದರ್ ಥೆರೇಸಾ ರವರ ನಿಸ್ವಾರ್ಥ ಸೇವೆ. ಮದರ್ ಥೆರೇಸಾ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವ ದೃಶ್ಯ ವೆಂದರೆ ಅವರ ಸೇವಾ ಮನೋಭಾವ . ಮಮತೆ, ವಾತ್ಸಲ್ಯಗಳ ಗಣಿ, ಅಸಹಾಯಕರ, ನಿರ್ಗತಿಕರ, ಅನಾರೋಗ್ಯವಂತರ ಪಾಲಿನ ದೈವ. ಇಲ್ಲಿ ನಮಗೆ ಥೆರೇಸಾ ಅವರ ಧರ್ಮ ವಾಗಲೀ , ಜಾತಿಯಾಗಲೀ ನೋಡುವುದಿಲ್ಲ. ಬದಲಾಗಿ ಆಕೆಯನ್ನು ಸೇವೆಯ ಮೂರ್ತಿಯಾಗಿ , ಶಾಂತಿಯ ದೇವತೆಯಂತೆ ಕಾಣುತ್ತೇವೆ.
ಇಲ್ಲಿ ಯಾರು ಯಾವ ಧರ್ಮ ವಾದರೇನು ? ಎಲ್ಲ ಧರ್ಮಗಳ ತಳಹದಿಯ ಮೂಲ ದಯೆಯೇ ಆಗಿದೆ. ಈ ಸೃಷ್ಟಿಯ ಸಕಲ ಪ್ರಾಣಿ ಪಕ್ಷಿಗಳಲ್ಲಿ, ದಯೆಯನ್ನು ತೋರುತ್ತ ಬಸವಣ್ಣ ನವರ ಮಾತಿನಂತೆ ದಯೆಯೇ ಧರ್ಮದ ಮೂಲವೆಂದು ತಿಳಿದು, ಧರ್ಮಕ್ಕಿಂತಲೂ ದಯೆಯೇ ದೊಡ್ಡದೆಂದು ಅರಿತು ಸಮಸಮಾಜದ ನಿರ್ಮಾಣದಲ್ಲಿ ಬಸವಣ್ಣ ನವರ ನುಡಿಮುತ್ತುಗಳು ನಮ್ಮೆಲ್ಲರಿಗೂ ಪ್ರೇರಣೆಯಾಗಲೆಂದು ನನ್ನ ಮಾತುಗಳನ್ನು ಮುಗಿಸುತ್ತೇನೆ.
– ಇಂದಿರಾ ಲೋಕೇಶ್, ಹಾಸನ