Table of Contents

ಮಕ್ಕಳೇ ಮನೆಗೆ ಮಾಣಿಕ್ಯ

ಮನುಷ್ಯರಲ್ಲಿ ಕೂಸು ಹುಟ್ಟಿದ್ದು ಮೊದಲ್ಲೊಂದು ಲೋಕ ಜ್ಞಾನ ಬರುವ ಹಂತದವರೆಗೆ ಬೆಳೆದು ಬಂದ ಶಿಶುಗಳನ್ನು ಮಕ್ಕಳು ಎಂದು ಗುರುತಿಸುತ್ತಾರೆ. ಒಂದು ದೇಶದ ಪ್ರಜೆಗಳನ್ನು ಆ ದೇಶದ ಮಕ್ಕಳು ಎನ್ನುತ್ತಾರೆ. ಮಕ್ಕಳಲ್ಲಿ ಗಂಡು -ಹೆಣ್ಣು, ಮೇಲು-ಕೀಳು, ಬಡವ- ಬಲ್ಲಿದ ಇತ್ಯಾದಿ ತಾರತಮ್ಯ ಭೇದಗಳಿಲ್ಲ. ಮಕ್ಕಳೆಂದರೆ ಮಕ್ಕಳೇ ನೀವು ಗಮನಿಸಿಯೇ ಇರುತ್ತೀರಿ.

ಹೆಣ್ಣು ಮಕ್ಕಳು ಹೆರವರ ಮನೆಗೆ ಹೋಗುತ್ತವೆ ಅಥವಾ ಗಂಡು ಮಕ್ಕಳು ವಂಶದ ಉದ್ಧಾರಕರೆಂಬ ಕಾರಣದಿಂದ, ಹೆಣ್ಣು ಸಂತಾನಗಳನ್ನು ದ್ವೇಷಿಸುವುದನ್ನು ಮತ್ತು ಹೆಣ್ಣು ಶಿಶುಗಳ ಹತ್ಯೆಗಳನ್ನು ನಾವಿಂದು ಗಮನಿಸುತ್ತಿದ್ದೇವೆ. ಆದರೆ ಸರಕಾರವು ಹೆಣ್ಣು ಮಕ್ಕಳ ರಕ್ಷಣೆಗೆ ಹಾಗೂ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವುದು ಸಂತೋಷದ ಸಂಗತಿ. ಅವಕಾಶ ಕಲ್ಪಿಸಿದರೆ ಪುರುಷರಿಗಿಂತ ನಾವು ಯಾವುದರಲ್ಲೂ ಕಡಿಮೆ ಯಿಲ್ಲ ಎಂಬುದನ್ನು ಇಂದಿನ ಮಹಿಳೆಯರು ಸಾಧಿಸಿ ತೋರಿಸುತ್ತಿದ್ದಾರೆ. ಕ್ರೀಡೆಯಲ್ಲಿ, ಸಾಹಸದಲ್ಲಿ ಯಾವುದೇ ಉದ್ಯೋಗದಲ್ಲಿ, ತಮ್ಮ ಪ್ರತಿಭೆಯನ್ನು ಮೆರೆಯುತ್ತಿದ್ದಾರೆ. ಕಾಲ ಬದಲಾಗುತ್ತಿದೆ, ಸಮಾನತೆಯು ವ್ಯಾಪಕವಾಗಿ ಹರಡುತ್ತಿದೆ ಇಂದಿನ ಮಕ್ಕಳು ಹತ್ತನೇ ತರಗತಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ನೂರಕ್ಕೆ ನೂರು ಅಂಕ ಪಡೆದು ತಮ್ಮ ಪ್ರತಿಭೆ ತೋರುತ್ತಿದ್ದಾರೆ. ಇದು ಬದಲಾದ ಶಿಕ್ಷಣ ಪದ್ಧತಿ ಹಾಗೂ ಆಧುನಿಕ ತಂತ್ರಜ್ಞಾನದ ಫಲವೆಂದು ಹೇಳಬಹುದು ನಾವು ಐದಾರು ದಶಕಗಳ ಹಿಂದೆ ಓದುವಾಗ ಶಿಕ್ಷಣದಲ್ಲಿ ಇಷ್ಟೊಂದು ಸವಲತ್ತುಗಳು, ವಿವಿಧ ಗ್ರಂಥಗಳು, ಉಪಕರಣಗಳು ಇರಲಿಲ್ಲ.

ಇಂದಿನ ಎಳೆಯ ಮಕ್ಕಳೂ ಸಹ ಇಂಗ್ಲಿಷ್ ಭಾಷೆಯಲ್ಲಿ ಅರಳು ಹುರಿದಂತೆ ಮಾತನಾಡುತ್ತವೆ ಮೊಬೈಲ್ ಆಟಗಳನ್ನು ಆಡುತ್ತವೆ, ಸಂದೇಶಗಳನ್ನು ರಚಿಸುತ್ತವೆ. ಇಂದಿನ ಮಕ್ಕಳೇನೋ ಹೆಚ್ಚು ಚಾಣರಾಗುತ್ತಿದ್ದಾರೆ ನಿಜ ! ಆದರೆ ಪರಸ್ಪರ ಪ್ರೀತಿ, ವಿಶ್ವಾಸ, ದಯೆ, ಗುರು ಹಿರಿಯರಲ್ಲಿ ತೋರುವ ಗೌರವ ನಶಿಸುತ್ತಿವೆ. ಐಷಾರಾಮಿ ಜೀವನದ ಛಾಂಬೆ ಆಸೆ, ಸ್ವಾರ್ಥ ಕುಟುಂಬಗಳಲ್ಲಿ ಬೆಳೆಯುತ್ತಿವೆ, ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿವೆ.

ಆದ್ದರಿಂದ ಹಿರಿಯ ಅನುಭವಿಗಳು ಹೇಳುವಂತೆ “ಮಕ್ಕಳಿಗೆ ಆಸ್ತಿ ಮಾಡಬೇಡಿ, ಮಕ್ಕಳನ್ನೇ ದೇಶದ ಆಸ್ತಿಯನ್ನಾಗಿ ಮಾಡಿರಿ”, ಆಸ್ತಿ ಮಾಡುವುದು ತಪ್ಪು ಎಂದು ಹೇಳುವುದಿಲ್ಲ. ನಾವು ಬದುಕಲು ಆಸ್ತಿ ಬೇಕೇ ಬೇಕು. ಆದರೆ ಅದರ ಹಿಂದಿನ ಪರಿಶ್ರಮದ ಕಥೆಯನ್ನು ಮಕ್ಕಳು ಅರಿತಿರಬೇಕು. ಬೆವರಿನ ಬೆಲೆಯನ್ನು ತಿಳಿದಾಗ ಆಸ್ತಿ ಹಣವನ್ನು ವೆಚ್ಚ ಮಾಡುವ ಮೊದಲು ಯೋಚಿಸುತ್ತಾರೆ ಪ್ರಜ್ಞಾವಂತ ಮಕ್ಕಳು.

ಅವರು ದೇಶದ ಆಸ್ತಿಯಾಗುತ್ತಾರೆ, ಸಮಾಜದ ಕಣ್ಣಾಗುತ್ತಾರೆ. ಈ ಗುಣ ಬರಬೇಕಾದರೆ ಚಿಕ್ಕ ವಯಸ್ಸಿನಲ್ಲಿ ಸಂಸ್ಕಾರ ಕೊಡಬೇಕು, ಬದುಕುವ ಮಾರ್ಗದರ್ಶನ ನೀಡಬೇಕು. ದೇವರನ್ನು ಹೆತ್ತವರನ್ನು ಹಿರಿಯರನ್ನು, ಗೌರವಿಸುವ ಭಕ್ತಿ ಅವರಲ್ಲಿ ತುಂಬಿರಬೇಕು. ಒಳ್ಳೆಯ ಮಕ್ಕಳು ನಮಗೆ ಸದಾ ಸಂತೋಷ ನೀಡುತ್ತಾರೆ. ಕೆಟ್ಟ ಮಕ್ಕಳು ದುಃಖಕ್ಕೆ ಕಾರಣರಾಗುತ್ತಾರೆ. ಮಕ್ಕಳಿಂದ ನಾವು ಯಾವ ನಿರೀಕ್ಷೆ ಪ್ರತಿ ಫಲಪೇಕ್ಷೆಗಳನ್ನು ಇಟ್ಟುಕೊಳ್ಳಬಾರದು, ನಾವು ಹಕ್ಕಿಗಳ ಹಾಗೆ ಬದುಕಲು ಪ್ರಯತ್ನಿಸಬೇಕು, ಅಂದಾಗ ಮಾತ್ರ ನಮ್ಮ ಬದುಕು ಸುಂದರವಾಗಿರುತ್ತದೆ, ನೆಮ್ಮದಿಯಿಂದ ತುಂಬಿರುತ್ತದೆ.

– ವಿಶ್ವಾಸ್ ಡಿ. ಗೌಡ
ಸಕಲೇಶಪುರ, 9743636831