ಬಿಡಿ ನನ್ನನು
ಅರಳಿ ನಗುವ ಹೂವಿನಂತೆ
ಹೆಣ್ಣು ತಾ ಬೆಳೆಯುವಳು
ಹೆತ್ತ ಮನೆಗೆ ಕಾಲಿಟ್ಟ ಮನೆಗೆ
ಕೀರ್ತಿ ಹೊತ್ತು ತರುವಳು.
ಮಮತಾ ಮೂರ್ತಿಯಾಗಿ
ಮಡಿಲ ತುಂಬಿ ನಗುವಳು
ಮಾನಿನಿಯು ತಾನಾಗಿ
ಮನೆಯ ದೀಪ ಬೆಳಗುವಳು.
ಹೆಣ್ಣು ಜಗದ ಕಣ್ಣೆಂದು
ಹೇಳಿದರು ಮಹಾತ್ಮರು
ಹೆಣ್ಣು ಭೋಗದ ವಸ್ತುವಾಗಿ
ಕಂಡರು ಕೆಲ ದುರುಳರು.
ವಿಕೃತ ಕಾಮದ ಕಣ್ಣಿಗೆ
ಕಾಣುವುದೆಲ್ಲ ಬೆತ್ತಲೆ
ರಕ್ಕಸತನ ತೋರುವರು
ಅವರಲ್ಲಿಲ್ಲ ಯಾವ ಕರುಣೆ.
ಮನದಾಸೆ ತೀರಿಸಿಕೊಳ್ಳಲು
ಎಳೆದು ನಿನ್ನೆ ಹೊತ್ತರು
ದಾಹ ತೀರೆ ನಿನ್ನ ಅಲ್ಲೇ
ಕೊಳ್ಳಿ ಇಟ್ಟು ಕೊಂದರು.
ತುಂಬಿದ ಯೌವನವು
ಮುಳುವಾಯಿತೇ ಜೀವಕ್ಕೆ
ಜೀವದ ಬೆಲೆ ಏನು ಗೊತ್ತು
ಕಾಮಾಂಧ ಸಮಾಜಕ್ಕೆ
ಅಬಲೆ ಎಂದು ಹೆಣ್ಣನ್ನು
ಕಾಮ ಬಲೆಯ ಬೀಸದಿರಿ
ಅವಳಿಗೂ ಜೀವವಿದೆ
ಎನ್ನುವುದ ಅರಿಯಿರಿ.
ಎಲ್ಲಾ ಮಹಿಳಾ ಮಣಿಗಳಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು
✍️ ಡಾ. ಮಹೇಂದ್ರ ಕುರ್ಡಿ