ಸೂರ್ಯೋದಯ

ದಿನಮಣಿಯು ದಿಗಂತ ರಥವೇರಿ
ಅರಿಶಿನ ಕುಂಕುಮ ಮಂಗಳವರ್ಣವೇರಿ
ಪನ್ನೀರ ಹನಿ ಮುತ್ತು ಮಣಿಮಾಣಿಕ್ಯವೇರಿ
ನಸುನಗುವ ವದನವು ಕನ್ನಡಮ್ಮನ ಮೂಡಣವನೇರಿ

ಚೆಂಗುಲಾಬಿಯರಳಿ ಸೋತಿಹೆ
ಪ್ರಿಯಕರಗೆ ಪ್ರೇಮ ಭಿಕ್ಷೆ
ಮಲ್ಲಿಗೆಯು ಬಿರಿದು ಪರಿಮಳವ
ಹಾಸಿದೆ ನಲ್ಲನಿಗೆ ರಕ್ಷೆ
ದಾಸವಾಳವದ ನಗುವು ಇನಿಯನಿಗೆ ಮುಕುಟದಂತೆ ನಕ್ಷೆ
ಕನ್ನಡದ ಪುಷ್ಪಗಳ ಅಭಿಯಾನ ಆದಿತ್ಯನಾಕಾಂಕ್ಷೆ

ಹಕ್ಕಿ ಪಿಕ್ಕಿಯ ಕೂಜನವು ರವಿಯ
ಸುಪ್ರಭಾತ
ರೆಕ್ಕೆ ಪುಕ್ಕವನಗಲಿಸುತ ಹಿಗ್ಗಿಹುದು ಕಂಡು ಪ್ರಭಾತ
ಹೊಲದೊಳಗೆ ಇಳಿಯುತಿಹ ಅನ್ನದಾತ
ಹೊಟ್ಟೆಗಾಗಿ ಹಿಟ್ಟುಣ್ಣಿಸುವ
ದೇವರಾತ

ತಲೆದೂಗಿವೆ ಗಿಡಮರಗಳು ಆನಂದದಿಂದ
ಹಸಿರು ತುಂಬಿ ಆಹ್ಲಾದವೀಯುತಿದೆ ಸಂತಸದಿಂದ
ರಂಗುರಂಗಿನಾಗಸದಲ್ಲಿ ಮೋಡವ್ಯೂಹವು ಚಂದ
ಉದಯರಾಗವು ಮಾನವನ
ಸುಸ್ವರದಿಂದ

ಉಷೆಯ ಸ್ವಾಗತ ಸಹೋದರಗೆ
ನಿಶೆಯ ಕಳೆದಿಹ ನಭದರಸನಿಗೆ
ಕಿರಣ ಚೆಲ್ಲಿಹ ನಕ್ಷತ್ರ ಕೋವಿದಗೆ
ವರ್ಣಮಯಗೆ ಇಳೆಯ ಹಗಲೊಡೆಯನಿಗೆ

– ಕಲ್ಪನಾಅರುಣ