ಲೀಲಾ ಮೂರುತಿ ಶ್ರೀಕೃಷ್ಣ
******************
ದೇವಕಿ ಉದರದಿ ಜನಿಸಿದ ನೀತನು
ಮಾನವ ರೂಪದಿ ಬಂದವನು
ಸೋದರ ಮಾವನು ಹೂಡಿದ ತಂತ್ರವ
ಬೇಧಿಸಿ ನಗುತಲಿ ನಿಂದವನು ll

ಕೃಷ್ಣನ ವಧಿಸಲು ಹಬ್ಬದ ನೆಪದಲಿ
ಕಂಸನು ಹೂಡಿದ ಹಬ್ಬವದು
ಕೃಷ್ಣನ ಕರೆಯಲು ಬಂದನು ಅಕ್ರೂರ
ಹೋಗಲು ಕರೆದನು ರಾಮನನು ll

ಸಾಗುತ ಬಂದರು ಜೊತೆಯಲಿ ಆಗಲೆ
ರಜಕನು ಎದುರಿಗೆ ಸಿಗಲಾಗ
ಕೃಷ್ಣನು ಕೇಳಿದ ವಸ್ತ್ರವ ನೀಡಲು
ಉಡಲಿಕೆ ಬೇಕಿದೆ ಬಲುಬೇಗ ll

ಕೊಡುವೆನೆ ನಾನಿದು ರಾಜರ ವಸ್ತ್ರವು
ಎನ್ನಲು ರಜಕನು ಆವಾಗ
ಬುದ್ಧಿಯ ಹೇಳಲು ಕೇಳದ ರಜಕಗೆ
ಬುದ್ಧಿಯ ಕಲಿಸಿದ ಹರಿಯಾಗ ll

ಮತ್ತದು ಬಂದಿಹ ಅಸುರರ ತರಿದನು
ಕಂಸನು ಮಾತ್ರವೆ ಇನ್ನೀಗ
ಹಿಂದಿನ ದಿನವೇ ಕನಸಲಿ ಬೆಚ್ಚಿದ
ಕೃಷ್ಣನ ಮಾಯೆಯ ಕಂಡಾಗ ll

ಸೋದರ ಮಾವನು ಯುದ್ಧದಿ ಸೋಲಲು
ಮುಕ್ತಿಯ ಕರುಣಿಸೆ ಶ್ರೀಕೃಷ್ಣ
ದುಷ್ಟರ ವಧಿಸಲು ಶಿಷ್ಟರ ಪೊರೆಯಲು
ಭಕ್ತಿಲಿ ಕರೆಯುವೆ ಹರಿಕೃಷ್ಣ ll

✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ