ದೇವಕನ್ಯೆಸಕಲೇಶಪುರ

ಮನೋಹರವಾದ ಪ್ರಕೃತಿ ಮಾತೆ
ತನ್ನೊಡಲ ಪ್ರೀತಿಯನೆರೆದು
ಮೋಹಕ ಮಾಟದಿ ಹಸಿರು
ಸೀರೆಯ ನೆರಿಗೆಯ ನೋಟದಿ
ದೇವಲೋಕದ ಅಪ್ಸರೆಯಂತೆ
ಸೃಷ್ಟಿಯ ಸುಂದರ ಕನ್ಯೆ
ಮಲೆನಾಡ ಸೀಮೆಯದುವೆ
ನಮ್ಮ ಹೆಮ್ಮೆಯ ಸಕಲೇಶಪುರ

ಹೇಮಾವತಿಯ ತೀರದಲ್ಲಿ
ಸಕಲೇಶ್ವರನ ಆಶೀರ್ವಾದದಿ
ಉಬ್ಬು ತಗ್ಗಿನ, ಗುಡ್ಡ ಬೆಟ್ಟದಿ
ಮೋಹಕ ಮೋಡದ ನೃತ್ಯದೊಂದಿಗೆ
ಮಂದ ಮಂಜಿನ ಹನಿಗಳೊಡನೆ
ಸೂರ್ಯ ರಶ್ಮಿಯ ಹೊಳಪಿನೊಂದಿಗೆ
ಅಂತರಾತ್ಮದ ಆನಂದಾನುಭೂತಿಯ
ನಿಸರ್ಗದ ಮಡಿಲದುವೆ
ನಮ್ಮ ಹೆಮ್ಮೆಯ ಸಕಲೇಶಪುರ

ರೈತಾಪಿ ವರ್ಗದ ಸಾವಿರಕನಸಿನ
ಕೂಸದುವೆ ಕಾಫೀ ತೋಟ
ನೂರೊಂದು ನಿರೀಕ್ಷೆಯ
ಸುಗಂಧಭರಿತ ಏಲಕ್ಕಿತೋಟ
ಮುಗಿಲ ನೋಡುತ ಬಳುಕೊ
ಭತ್ತದ ತೆನೆಗಳ ತಂಗಾಳಿ
ಮನಸಿಗೆ ಮುದ ನೀಡುವ ತಾಣವದುವೆ
ನಮ್ಮ ಹೆಮ್ಮೆಯ ಸಕಲೇಶಪುರ

ಆಗಸದೆತ್ತರದ ವೃಕ್ಷಗಳ ನಡುವೆ
ಆಶ್ರಯ ಪಡೆದಿಹ ಹಕ್ಕಿಗಳಿಂಚರ
ಮುರುಳಿಲೋಲನ ಕೊಳಲನಾದದಂತೆ
ಕಿವಿಗಿಂಪು ನೀಡುತಿಹ ನಿಸರ್ಗಮಾತೆಯ
ಸಂಗೀತ ಲಹರಿಯ ತಾಣವೇ
ನಮ್ಮ ಹೆಮ್ಮೆಯ ಸಕಲೇಶಪುರ

ರಚನೆ : ಇಂದಿರಾ ಲೋಕೇಶ್, ಹಾಸನ