ನರಸಿಂಹ
******
ಭಕ್ತಿಯ ಕರೆಯನು ಆಲಿಸಿ ಬಂದನು
ಕಂಬವ ಸೀಳುತ ನರಸಿಂಹ
ಮಡಿಲಲಿ ಕುಳಿತಿಹ ಚಂದವ ನೋಡಲು
ಮನಸಿಗೆ ಆಯಿತು ಆನoದ ll

ತಂದೆಯು ಕೇಳಿದ ಎಲ್ಲಿಹ ಶ್ರೀ ಹರಿ
ಕಂಬದಲಿರುವನೆ ಹೇಳಿಗಾ
ಕರೆದನು ದೇವನ ಒಂದೇ ಮನದಲಿ
ಭಕ್ತಿಗೆ ಮೆಚ್ಚಿದ ಹರಿ ಆಗ ll

ನಿರ್ಮಲ ಮನಸಲಿ ಕರೆಯಲು ಬಂದಿಹ
ಪ್ರಹ್ಲಾದನ ಕರೆಗೆ ನರಸಿಂಹ
ಘೋರ ರೂಪವ ಕಂಡರು ಹೆದರದೆ
ನಿಂದನು ಭಕ್ತಿಲಿ ಜಪಿಸುತ್ತ ll

ದೇವರ ನೆನೆಯಲು ಭಯವದು ಬೇಡವು
ಭಕ್ತಿಯು ಮಾತ್ರವೆ ಬೇಕಿಲ್ಲಿ
ಶರಣರ ಕಾಯುವ ದುರುಳರ ವಧಿಸುವ
ಶಕ್ತಿಯು ಇರುವುದು ನೆನೆದಲ್ಲಿ ll

✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ