ಅಮ್ಮ

ಅಮ್ಮ ಎಂಬ ಧನಿಯಲಿ
ಯಾವ ಶಕ್ತಿ ಅಡಗಿದೆ?
ಮನಕೆ ಮುದದಿ ಶಾಂತಿ ನೀಡಿ
ತನುಗೆ ತಂಪನೆರೆವ
ದಿವ್ಯ ಶಕ್ತಿ ಅಡಗಿದೆ

ಉಸಿರು ನೀಡಿ , ಜಗವ ತೋರಿ
ಅಮೃತದ ಹಾಲುಣಿಸಿ
ಮಮತೆಯಿಂದ ತುತ್ತ ನೀಡಿ
ಬೆಚ್ಚಗಿನ ಮಡಿಲಿನಲ್ಲಿ
ಸಾಕಿ ಸಲಹಿದಾಕೆ
ಹೇಗೆ ಮರೆಯಲಿ ತಾಯೆ
ನಿನ್ನ ಅನುರಾಗ

ಚಂದದಿಂದ ಬಾಳಿರೆಂದು
ಪ್ರೀತಿ ಉಣಿಸಿ ಹರಸಿದಾಕೆ
ಸಹನೆಯಿಂದ ಸಲಹಿದಾಕೆ
ತೊದಲು ನುಡಿಯ ಕಲಿಸಿದಾಕೆ
ತಪ್ಪನೆಲ್ಲ ತಿದ್ದಿ ತೀಡಿ
ಜೇನಿನಂತ ಬಾಳ ನೀಡಿ
ಜೀವರಕ್ಷೆ ಮಾಡಿದಾಕೆ
ಹೇಗೆ ಮರೆಯಲಿ ತಾಯೆ
ನಿನ್ನ ಹೇಗೆ ಮರೆಯಲಿ

ಜೀವತೇದು ಮಕ್ಕಳಿಗೆ
ಬಾಳದಾರಿ ತೂರಿದಾಕೆ
ಮಮತೆ ಎಂಬ ಹಣತೆ ಹಚ್ಚಿ
ಪ್ರೀತಿ ಎಂಬ ಬೆಳಕ ಚೆಲ್ಲಿ
ಜ್ಞಾನದರಿವ ನೀಡಿದಾಕೆ
ಹೇಗೆ ಮರೆಯಲಿ ತಾಯೆ
ನಿನ್ನ ಹೇಗೆ ಮರೆಯಲಿ

ರಚನೆ : ಇಂದಿರಾ ಲೋಕೇಶ್, ಹಾಸನ