ಪಂಡಿತ ಪುಟ್ಟರಾಜ ಗವಾಯಿ

ಅಂಧರ ಬಾಳಿನ ಆಶಾಕಿರಣ
ನೀನೆ ಎಲ್ಲರ ಬಾಳಿಗೆ ಪ್ರೇರಣ
ಹುಟ್ಟುತಲೇ ಆದೆ ನೀನು ಅನಾಥ
ಸಾಧನೆಯ ಮೇರು ಶಿಖರ ಏರಿದಾತ

ಬಾಲ್ಯದಲೆ ಕಳೆದುಕೊಂಡೆ ನಯನಜ್ಯೋತಿ
ಲೋಕದೊಳು ಬೆಳಗಿಸಿದೆ ಸಂಗೀತ ಜ್ಯೋತಿ
ನ್ಯೂನ್ಯತೆ ಆಗದು ಬದುಕಿಗೆ ಚ್ಯುತಿ
ಎಂದರುಹಿ ಆದೆ ನೀ ನಾದೆ ಲೋಕವಿಖ್ಯಾತಿ

ಕಾಯಕಯೋಗಿ ಪುಟ್ಟರಾಜ ಗವಾಯಿ
ಶಿವಯೋಗಿ ಶರಣ ಮಮತಾಮಯಿ
ಅಂಧ ಅನಾಥರಿಗೆ
ಬಾಳಬೇಳಕಾದೆ
ನಂಬಿ ಬಂದವರಿಗೆ ದಾರಿ ದೀಪವಾದೆ

ಬಣ್ಣಿಸಲಸದಳವು ನಿನ್ನ ನಾಡು ನುಡಿ ಸಂಗೀತ ಸೇವೆ
ಸೇವೆ ಸಂಸ್ಕೃತಿ ಸಂಸ್ಕಾರವ ಶ್ರೀಮಂತಗೊಳಿಸಿರುವೆ
ನಿನ ಕುರಿತು ಬರೆಯಲು ನನ್ನಿಂದ ಸಾಧ್ಯವೇ
ನಿನ್ನ ಸಾಧನೆ ಸಮ್ಮಾನ ಕೀರ್ತಿ ಪ್ರಶಸ್ತಿ ಲೆಕ್ಕವಿಲ್ಲವೇ

ಅಗಣಿತನು ನೀನು ಗಾನ ಗಾರುಡಿಗನೇ
ತ್ರಿಬಾಷೆಯಲಿ ಸಾಹಿತ್ಯ ಗ್ರಂಥ ಬರೆದವನೆ
ಬ್ರೈಲ್ ಲಿಪಿ ಯಲಿ ಭಗವದ್ ಗೀತೆ ಬರೆದ ಮೊದಲಿಗನೇ
ಮಹಾಪ್ರವರ್ತಕನೆ ಅಜ್ಜಯ್ಯ ಗುರುವರನೆ

ನಡೆದಾಡಿದ ದೈವ ವ್ಯಾಮೋಹ ವರ್ಜಿತನೆ
ಸರ್ವಸಂಗ ಪರಿತ್ಯಾಗಿ ಗುರುವೆ ಪಂಡಿತನೆ
ನುಡಿ ನಮನ ಸಲ್ಲಿಸುವೆ ಕವಿ ಪುರುಷೋತ್ತಮನೆ
ನಿನ್ನ ಈ ಜನುಮದಿನ ನಾ ನಿನ್ನ ವಂದಿಪೆನೆ

✍️ ನಾಡಿಗ್ ವಿಜಯಲಕ್ಷ್ಮಿ ಮಂಜುನಾಥ್ ಕಡೂರು