ಶ್ರೀದೇವಿ
******
ದೇವತೆಗಳೆಲ್ಲ ಒಂದೆಡೆ ಸೇರುತ
ತಪವನು ಗೈದರು ದೇವಿಯನು
ತಮ್ಮಯ ಕಷ್ಟದ ಬಾಧೆಯ ಸಹಿಸದೆ
ಭಕ್ತಿಯ ಅರ್ಚನೆ ಮಾಡಿದರು ll

ದೇವಿಯು ಭಕ್ತಿಗೆ ಒಲಿಯುತ ಬಂದಳು
ಏನಿದು ಬಂದಿಹ ಕಷ್ಟವದು
ಮಹಿಷನ ಉಪಟಳ ತಾಳದೆ ನೊಂದೆವು
ನಿನ್ನನೆ ಬೇಡುತ ಭಜಿಸಿದೆವು ll

ತಾಳಿರಿ ತಾಳಿರಿ ನನಗದು ತಿಳಿಯಿತು
ಹೆದರಿಕೆ ಬೇಡವು ನಿಮಗಿನ್ನು
ದುಷ್ಟನ ವಧಿಸಲು ಹೊರಡುವೆ ಈಗಲೆ
ಚಿಂತೆಯ ತೊರೆಯಿರಿ ನೀವಿನ್ನು ll

ಕರದಲಿ ತ್ರಿಶೂಲ ಸಿಂಹವ ನೇರುತ
ಹೊರಟಳು ಮಹಿಷನ ವಧೆಗಾಗಿ
ಯುದ್ಧದಿ ಸೋಲಲು ಕರುಣಿಸಿ ಮೋಕ್ಷವ
ದೇವಿಯ ಪಾದಕೆ ಶರಣಾಗಿ ll

✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ