Table of Contents

ಆಧುನಿಕ ಕೃಷಿಯಿಂದ ಸೋತ ಪ್ರಕೃತಿ; ಸುಸ್ಥಿರತೆಗೆ ನೈಸರ್ಗಿಕ ಕೃಷಿ ಒಂದೇ ಮಾರ್ಗ

ಮನುಷ್ಯನ ದುರಾಸೆ ಹೆಚ್ಚಾದಂತೆಲ್ಲಾ ಪ್ರಕೃತಿ ಸೋಲುತ್ತಾ ಹೋಗುತ್ತಿದೆ. ವಿವೇಚನೆ ಇಲ್ಲದ ವಿಜ್ಞಾನಿಗಳು ಮತ್ತು ದೂರಾಲೋಚನೆ ಇಲ್ಲದ ಆಡಳಿತಸ್ತರು ಪ್ರಕೃತಿಯ ಸೋಲನ್ನು ತಡೆಯುವ ನಿಟ್ಟಿನಲ್ಲಿ ಕೈಚೆಲ್ಲಿದ್ದಾರೆ. ಪ್ರಾಚೀನ ಕಾಲದ, ಸ್ವಾತಂತ್ರೋತ್ತರ ಮತ್ತು ಸ್ವಾತಂತ್ರ್ಯ ನಂತರ ಮನುಷ್ಯನ ಮನಸ್ಥಿತಿ ಪ್ರಕೃತಿಯ ಜೊತೆ ಹೇಗಿತ್ತು? ಈಗ ಏನಾಗಿದೆ? ಎಂಬ ತುಲನಾತ್ಮಕ ಅಧ್ಯಯನ ಮಾಡ ಬೇಕಾಗಿದೆ. ಪ್ರಕೃತಿಯನ್ನು ಆರಾಧಿಸುತ್ತಾ ತಮ್ಮ ಅಗತ್ಯತೆಗಾಗಿ ಪ್ರಕೃತಿಯನ್ನು ಬಳಸಿಕೊಳ್ಳುತ್ತಿದ್ದರು ನಮ್ಮ ಪ್ರಾಚೀನರು. ತಮ್ಮ ಅಗತ್ಯತೆಗಾಗಿ ಪ್ರಕೃತಿಯನ್ನು ದುಡಿಸಿಕೊಂಡ ಸ್ವಾತಂತ್ರೋತ್ತರ ರೈತರು ಪ್ರಕೃತಿಯಿಂದ ಪಡೆದದ್ದನ್ನು ಪುನಃ ಪಡೆದಲ್ಲಿಗೆ ನೀಡಿ ಮಣ್ಣಿನ ಋಣ ತೀರಿಸುತ್ತಿದ್ದರು. ಆಧುನಿಕ ಸ್ಪರ್ಶ ಸಿಕ್ಕ ನಮ್ಮ ಆಧುನಿಕ ಕೃಷಿಕರಲ್ಲಿ ಫ್ಯಾಷನ್ ಗುಣ ಹೆಚ್ಚಾಯಿತು. ತಮ್ಮ ಮೋಜು ಮಸ್ತಿಗಾಗಿ ಇವರಲ್ಲಿ ಕೊಳ್ಳುಬಾಕುತನ ಹೆಚ್ಚಾಗಿ ತನ್ನೆಲ್ಲಾ ಆ(ದುರಾ)ಸೆಗಳನ್ನು ಪೂರೈಸುವ ಉತ್ಪಾದನ ಯಂತ್ರದಂತೆ ಮಣ್ಣನ್ನು ದುಡಿಸಿಕೊಳ್ಳತೊಡಗಿದ್ದಾರೆ. ಉತ್ಪಾದನೆ ತೆಗೆಯುವ ವಿಚಾರದಲ್ಲಿ ನಮ್ಮ ಆಧುನಿಕ ಕೃಷಿಕರಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಾಗಿದೆ. ಅಧಿಕ ಉತ್ಪಾದನೆಗಾಗಿ ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಔಷದ ಜೊತೆಗೆ ಕಳೆನಾಶಕಗಳನ್ನು ಬಳಸಿ ಮಣ್ಣಿನ ರಕ್ಷಣೆಗಿದ್ದ ವೈವಿಧ್ಯತೆಯನ್ನೇ ನಾಶ ಮಾಡುತ್ತಿದ್ದಾರೆ. ಇದರಿಂದ ಮಣ್ಣು ಪೂರ್ಣ ಸೋತು ತನ್ನ ನೈಸರ್ಗಿಕ ಕ್ರಿಯೆಗಳನ್ನು ನಿಲ್ಲಿಸಿ ಜಡ ವಸ್ತುವಾಗಿದೆ.
ಸ್ವಾತಂತ್ರೋತ್ತರದ ಕೃಷಿ ರೈತರ ಬದುಕಿನ ಒಂದು ಭಾಗವಾಗಿತ್ತು. ನಿಸರ್ಗ ಮತ್ತು ವೃತ್ತಿಯ ಸಮನ್ವಯತೆ ಇತ್ತು. ಸ್ವಾತಂತ್ರ್ಯ ನಂತರ ಆಧುನಿಕ ಸ್ಪರ್ಶ ಸಿಕ್ಕುವ ತನಕ ಅದೇ ಪರಿಸ್ಥಿತಿ ಮುಂದುವರಿದಿತ್ತು. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಸಿಕ್ಕ ರೈತನಿಗೆ ಕೃಷಿ ಕ್ಷೇತ್ರ ತನ್ನ ಮೋಜು ಮಸ್ತಿಗೆ ಬೇಕಾದ ಸಂಪನ್ಮೂಲವನ್ನು ಪೂರೈಸುವ ಆರ್ಥಿಕ ವಲಯವಾಯಿತು. ಜಾಗತೀಕರಣದ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರ ಪೂರ್ಣ ಪ್ರಮಾಣದ ಕೈಗಾರಿಕೆಯ ಸ್ವರೂಪ ಪಡೆಯಿತು. ಅಧಿಕ ಇಳುವರಿಯೇ ಎಲ್ಲರ ಧ್ಯೇಯವಾಯಿತು. ಸಾಂಪ್ರದಾಯಿಕ ಕೃಷಿಯಲ್ಲಿ ಉತ್ಪಾದನೆ ಜೊತೆಗೆ ಮಣ್ಣಿನ ಆರೋಗ್ಯದ ಕಡೆ ಒತ್ತು ಕೊಡಲಾಗುತ್ತಿತ್ತು. ಆಧುನಿಕ ಕೃಷಿಯಲ್ಲಿ ಮಣ್ಣಿನ ಆರೋಗ್ಯವನ್ನು ಪೂರ್ಣ ಕಡೆಗಣಿಸಲಾಯಿತು. ಆಧುನಿಕ ಕೃಷಿಯನ್ನು ಪ್ರಚಾರ ಮಾಡಿದ ವಿಜ್ಞಾನಿಗಳು ಸಹ ಇದಕ್ಕೆ ಗಮನಕೊಡಲಿಲ್ಲ. ಈ ಕಾರಣಕ್ಕೆ ನಾನು “ವಿವೇಚನೆ ಇಲ್ಲದ ವಿಜ್ಞಾನಿಗಳು” ಎಂದು ಟೀಕಿಸುವುದು. ಆಧುನಿಕ ಕೃಷಿ ಪರಿಚಯಿಸಿದ ವಿಜ್ಞಾನಿಗಳಿಗೆ “ನಿಸರ್ಗದ ಸಮತೋಲನಕ್ಕೆ ಆರೋಗ್ಯವಾದ ಮಣ್ಣು ಮುಖ್ಯ” ಎಂಬ ವಿವೇಚನೆ ಬರಲೇ ಇಲ್ಲ.
ಯುವಕರೆ ಎಚ್ಚೆತ್ತುಕೊಳ್ಳಿ:
ದೇಶದ ಎಲ್ಲಾ ಹವಾಮಾನದ ವಲಯಗಳಲ್ಲಿ ಕೃಷಿ ಮಾಡುವ ಯುವ ರೈತರಂತು ಕೃಷಿ ಎಂದರೆ ಅಧಿಕ ಉತ್ಪಾದನೆ ಎಂಬುದೊಂದನ್ನೆ ದೃಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಇವರುಗಳಿಗೆ ನಿಸರ್ಗದ ಬಗ್ಗೆ ಕಾಳಜಿಯೇ ಇಲ್ಲ. ದೇಶೀಯ ಕೃಷಿಯ ಬಗ್ಗೆ ಅರಿವೇ ಇಲ್ಲ. ಅಧಿಕ ಉತ್ಪಾದನೆಗಾಗಿ ರಾಸಾಯನಿಕ ಗೊಬ್ಬರ ದ ಒಳಸುರಿವನ್ನು ಹೆಚ್ಚು ಮಾಡಿದ್ದಾರೆ. ಜೊತೆಗೆ ಫಲ ಕೊಡುವ ಗಿಡ ಬಳ್ಳಿಗಳು ರೋಗದಿಂದ ಬಳಲದಿರಲಿ ಎಂಬ ಕಾರಣಕ್ಕೆ 3-4 ವಿಷ ಔಷಧಿಗಳನ್ನು ಸಿಂಪರಣೆ ಮಾಡುತ್ತಿದ್ದಾರೆ. ಈ ಅಭ್ಯಾಸ ದೀರ್ಘಾವದಿ ಗೆ ಸೂಕ್ತವಲ್ಲ ಎಂದು ಗೊತ್ತಿಲ್ಲದೆ ಕೃಷಿ ಮಾಡುವ ಯುವಕರ ಗುಂಪು ಒಂದೆಡೆಯಾದರೆ ಇದು ಗೊತ್ತಿದ್ದು ಅಧಿಕ ಲಾಭ ಮಾಡಿ ನಗರಗಳಲ್ಲಿ ಆಸ್ತಿ ಕೊಂಡು ಐಶಾರಾಮಿ ಬದುಕು ಕಟ್ಟಿಕೊಳ್ಳುವ ಕನಸು ಹೊಂದಿರುವ ಮತ್ತೊಂದು ಗುಂಪು ಇದೆ. ಯುವಕರ ಈ ಮನೋಗುಣ ಬದಲಾಗಬೇಕು ಇಲ್ಲದಿದ್ದರೆ ಆರ್ಥಿಕತೆ, ಆರೋಗ್ಯ ಮತ್ತು ನಿಸರ್ಗದ ಮೇಲೆ ದೊಡ್ಡ ಪೆಟ್ಟು ಬೀಳುತ್ತದೆ.
ಅಧಿಕ ಲಾಭದಾಸೆಗೆ ಅತಿಯಾಗಿ ರಾಸಾಯನಿಕ ಗೊಬ್ಬರ, ಔಷಧ ಮತ್ತು ಕಳೆನಾಶಕಗಳನ್ನು ಬಳಸಿದ ಪರಿಣಾಮ ಈಗ ಏನಾಗಿದೆ ನೋಡಿ. ಚಿಕ್ಕಮಗಳೂರು ನಗರದ ಯುರೋಲಜಿಸ್ಟ್ ಡಾ. ಮೋಹನ್ ಕುಮಾರ್ ಅಭಿಪ್ರಾಯ ಭಯಮೂಡಿಸುತ್ತದೆ. “ಕಳೆದ 20 ವರ್ಷಗಳ ಹಿಂದೆ ವರ್ಷಕ್ಕೆ ಒಂದೊ ಎರಡೊ ಸಕ್ಕರೆ ಮತ್ತು ಹೃದಯ ಸಂಬಂಧಿ ಕಾಯಿಲೆಯ (ರೈತರಲ್ಲದ)ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದರು. ಈಗ ಈ ಕಾಯಿಲೆಗಳು ಸಾಮಾನ್ಯವಾಗಿವೆ. ಅದೇ ರೀತಿ ಹಿಂದೆ ವರ್ಷಕ್ಕೆ ಒಂದೊ ಎರಡೊ ಕಿಡ್ನಿ ವೈಫಲ್ಯದ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಈಗ ತಿಂಗಳಿಗೆ 7 ರಿಂದ 8 ರೋಗಿಗಳು ನಮ್ಮಲ್ಲಿಗೆ ಬರುತ್ತಾರೆ. ಇದರಲ್ಲಿ ರೈತರೇ ಹೆಚ್ಚು” ಎಂಬ ಆತಂಕ ವ್ಯಕ್ತಪಡಿಸುತ್ತಾರೆ. ಸಾಮಾಜಿಕ ಕಾಳಜಿಯುಳ್ಳ ಡಾ. ಮೋಹನ್ ಕುಮಾರ್ ಅವರು, ರೈತರಲ್ಲೆ ಕಿಡ್ನಿ ವೈಫಲ್ಯತೆ ಹೆಚ್ಚಾಗಲು ಕಾರಣ ಏನು? ಎಂಬ ಶೋಧನೆ ಮಾಡಿ, “ರಾಸಾಯನಿಕ ಔಷಧ ಮತ್ತು ಕಳೆನಾಶಕಗಳನ್ನು ಸಿಂಪರಣೆ ಮಾಡುವಾಗ ಮುಖ ಕವಚ ಮತ್ತು ಕೈ ಕವಚವನ್ನು ಹಾಕಿಕೊಳ್ಳದಿರುವುದರಿಂದ ರೈತರಲ್ಲಿ ಹೆಚ್ಚು ಅನಾರೋಗ್ಯ ಸ್ಥಿತಿ ಉಲ್ಬಣವಾಗಲು ಕಾರಣವಾಗಿದೆ” ಎಂಬ ಸತ್ಯವನ್ನು ಕಂಡುಕೊಂಡಿದ್ದಾರೆ. ರೈತರು ರಾಸಾಯನಿಕ ಕೃಷಿಯಿಂದ ವಿಮುಖವಾಗಿ ನೈಸರ್ಗಿಕ ಕೃಷಿಗೆ ಬದಲಾಗದಿದ್ದರೆ ಕಷ್ಟ ಎಂಬ ಎಚ್ಚರಿಕೆಯನ್ನ ಕೊಟ್ಟಿದ್ದಾರೆ.
ಜನ ಜಾನುವಾರುಗಳ ಆರೋಗ್ಯ ಮಣ್ಣಿನ ಆರೋಗ್ಯದ ಮೇಲೆ ಅವಲಂಬಿತವಾಗಿದೆ. ಮಣ್ಣಿನ ಆರೋಗ್ಯ ಕೃಷಿಕರ ಮೇಲೆ ಅವಲಂಬಿತವಾಗಿದೆ. ಈ ಕಾರಣಕ್ಕೆ ಈಗಿನ ಅಧಿಕ ಉತ್ಪಾದನೆಯ ಆಸೆಗಾಗಿ ನಾಳೆಯ ಬದುಕನ್ನು ನಾಶ ಮಾಡಿಕೊಳ್ಳಬಾರದಲ್ಲವೇ? ಪಂಚಭೂತಗಳನ್ನು ಅವಲಂಬಿಸಿದ ನೈಸರ್ಗಿಕ ಕೃಷಿಯನ್ನು ಮಾಡಿ ಪಂಚಭೂತಗಳ ಸಮತೋಲನಕ್ಕೆ ಅವಕಾಶ ಮಾಡಿಕೊಡ ಬೇಕಾಗಿದೆ. ಅಧಿಕ ಇಳುವರಿಯ ಭ್ರಮೆಯಲ್ಲಿ ರಾಸಾಯನಿಕ ಕೃಷಿ ಮಾಡುವುದನ್ನು ಬಿಟ್ಟು ಕಡಿಮೆ ಖರ್ಚಿನ ನೈಸರ್ಗಿಕ ಕೃಷಿ ಮಾಡಿ ವಾಡಿಕೆ ಇಳುವರಿಯ ಪಡೆದು ಸುಸ್ಥಿರರಾಗೋಣ.
– ವಿಶ್ವಾಸ್.ಡಿ . ಗೌಡ, ಸಕಲೇಶಪುರ