🌧️ ತಂಪೆರಚುವರಾರು 🌧️
ಎಲ್ಲಿ ಓಡುವಿರಿ ಮೇಘಗಳೇ ತೇಲಿ ಬನ್ನಿ
ಕಾರ್ಮುಗಿಲ ಹೊತ್ತು ಮಳೆಬೀಜ ಬಿತ್ತ ಬನ್ನಿ
ಬರುಡಾದ ಈ ಇಳೆಗೆ ತಂಪನ್ನು ಚೆಲ್ಲಬನ್ನಿ
ಬಡವಾದ ತನುವಿನ ದಾಹವನು ನೀಗ ಬನ್ನೀ
ಇಳೆಯ ದಾಹ ತರ ತರ ಗುಟ್ಟಿದೆ
ಭೂ ರಮೆ ಒಣಗಿ ಬರ ಬಾಯ್ಬಿಟ್ಟಿದೆ
ಕೃಶು ಶರೀರವು ದಾಹದೆ ಒಣಗಿ ಹೋಗಿದೆ
ನೀರಿಲ್ಲದ ಕಂಗಳು ಒಣಗಿ ಶೂನ್ಯದಿ ನೆಟ್ಟಿದೆ
ಪ್ರೇಮ ಮಸಣ ಜೊತೆಜೊತೆ ಹೊರಟಿದೆ ಮೆರವಣಿಗೆ
ಸಾವು ಸಂಭ್ರಮ ಜೊತೆ ಉಯ್ಯಾಲೆ ತೂಗಿದೆ
ಬೆವರ ಹನಿ ಬರುವಂತೆ ರೈತ ನಟಿಸಲಾಗದೆ
ಬಿಕ್ಕುತಿಹನು ಅನ್ನದಾತ ನೊಂದ ಇಳೆಯ ನೋಡಲಾಗದೆ
ತನು ಬಡವಾಗಿದೆ ಮನ ಜಡವಾಗಿದೆ ಕತ್ತಲಾವರಿಸಿದೆ
ಮರ ಧರೆಗುರುಳಿದೆ ಕೆರೆಕಟ್ಟೆ ಮುಚ್ಚಿದೆ ಸ್ವಾರ್ಥದೆ
ಭೂಗರ್ಭ ಬಗೆಬಗೆದು ದಾಹ ಮಿತಿ ಮೀರಿದೆ
ತುಂಬಿದ ಹೊಟ್ಟೆಗೆ ಹಸಿವಿನ ಕೂಗು ಕೇಳುವುದೇ
ಧರೆ ಹತ್ತಿ ಉರಿದಿದೆ ಸ್ವಾರ್ಥದ ಕಿಚ್ಚಿಗೆ
ಉಳ್ಳವ ಕುಳಿತಿಹ ಮನೆಯೊಳು ಘಮ್ಮಗೆ ಬೆಚ್ಚಗೆ
ಎಲ್ಲೆಡೆ ನಡೆದಿದೆ ಕೆಸರೆರಚಾಟ ಮನಗಳ ಕಿಚ್ಚಿಗೆ
ತಂಪನು ಎರಚುವರಾರು ಈ ಬರದ ಕಿಚ್ಚಿಗೆ
✍️ ನಾಡಿಗ್ ವಿಜಯಲಕ್ಷ್ಮಿ ಮಂಜುನಾಥ್, ಕಡೂರು