ಆಸರೆ ಇಲ್ಲದ ಆಧಾರಸ್ತಂಭ

ಗಲ್ಲಿಯೊಂದರ ಮೂಲೆಯಲ್ಲಿ
ಹರಕು ಗೋಣಿಯ ಹೊದ್ದು
ಮುದುಡಿ ಮಲಗಿದೆ ನಲುಗಿದ ಜೀವವು

ಚೈತನ್ಯವಿರದ ದೇಹದಲಿ ಎದ್ದು
ಕಾಣುತಿಹುದು ಮೂಳೆಯು, ಗುಳಿಬಿದ್ದ
ನಿಸ್ತೇಜ ಕಣ್ಣಲ್ಲಿ ಶೂನ್ಯ ಭಾವವು

ತುಂಬಿದ ಮನೆಯ ಪ್ರೀತಿಯ ಅಪ್ಪುಗೆಯಲ್ಲಿ
ಸಂಸ್ಕೃತಿ ಸಂಸ್ಕಾರವ ಧಾರೆಯೆರೆದು
ಪೊರೆಯುತಿದ್ದ ಕಾಲ ಬರಿಯ ನೆನಪು

ಮುಪ್ಪಾದ ಕಾಯದಲಿ
ಕುಂದಲು ಶಕ್ತಿ ಪರಕೀಯ ಭಾವ
ಮನೆಯವರ ಮನದಿ ಮೂಡಿತು

ಪ್ರೀತಿ ಅಕ್ಕರೆ ಸಿಗದೆ ಹಿರಿಯ ಜೀವ
ಕೊರಗಿರಲು ಒಬ್ಬಂಟಿ ಹೆಜ್ಜೆ
ಸಾಗಿದೆ ಪ್ರೀತಿಯನರಸಿ

ಬಾಳ ಪಯಣದ ಹಾದಿಯಲಿ
ಕಂಡಿರುವ ನೋವು ನಲಿವುಗಳ
ಮೆಲುಕುತ್ತಾ ನಡೆದಿದೆ ಹಸಿವ
ತಣಿಸಲು ಗಲ್ಲಿ ಗಲ್ಲಿಗಳಲ್ಲಿ

ಯಾರಾದೋ ಮನೆಯ ಜಗಲಿಯು
ಅರಮನೆಯಾಯ್ತು ಅವರಿವರು ತಿಂದುಳಿದ
ತಂಗಳನ್ನ ಮೃಷ್ಟಾನವಾಯ್ತು

ಕಂಗಳಲ್ಲಿ ಕಾತರದ ಹೊಳಪಿಲ್ಲ
ತನ್ನವರ ಕಾಣಲು ತನ್ನವರೆಂಬ ಭಾವ ಮನದಿ
ಪರಕೀಯರು ಪ್ರೀತಿಯಿಂದ ಮಾತನಾಡಲು

– ಜಯಂತಿ ರೈ