ಓ ತಾಯಿ

ಓ ತಾಯಿ ಭಾರತಿ ನಿನಗೆ ಕುಸುಮ ಆರತಿ
ಕಂಗೊಳಿಪ ದೇವಿಯೇ ಸಾಲಂಕೃತ
ಮೂರುತಿ
ಪಾದಪದ್ಮ ನೀಲಸಲಿಲೆಯ ಲೀಲಾವಳಿ
ಕನ್ಯಾಕುಮಾರಿ ಶೋಭಿಸಿಹ ತೆಂಕಣದ ದೃಶ್ಯಾವಳಿ
ಸುಮಧುರ ಸುಂದರ ತಾಯ ಚರಣದ ಕರಾವಳಿ
ಸಾಗರದ ಅಬ್ಬರದಲಿ ರೋಚಕವು
ಭಾಷ್ಪಾಂಜಲಿ

ವೈಶಾಲ್ಯ ತಾಯ ಮಮತೆಯ ಹೃದಯ
ಮೂಡಣ ಪಡುವಣದುದ್ದವೂ
ಹರಡಿಹ ತಾಯ್ನೆಲದ ಹರೆಯ
ವೈವಿಧ್ಯಮಯ ಭಾಷೆ ವೇಷ
ಬುಡಕಟ್ಟು ಪಾಳಯ
ನದಿ ನದಗಳ ಜುಳು ಜುಳು ಗಾನದಲಿ ಕಳೆಯ
ಹಸಿರು ಧಾನ್ಯಗಳ ಸಿರಿಯಲ್ಲಿ
ಹಿರಿಯ
ಒಡಲು ತುಂಬಿದ ತೃಪ್ತ ಭಾವದಲಿ
ನೀ ಒಡೆಯ

ಶಿರದಲ್ಲಿ ಧವಳಗಿರಿ ಸುಂದರ ಕಾಶ್ಮೀರ ಭುವನಿ
ಪಕ್ಷಿಯಂದದ ಬಡಗಣ
ಆಕರ್ಷಕ ಅವನಿ
ಮಿಡಿಸುವೆ ಪ್ರಜೆಗಳಲಿ ಕೌತುಕ
ಆನಂದ ಧಮನಿ
ಶಾಂತತೆಗೆ ತವಕಿಸುತ ಆಧ್ಯಾತ್ಮಕೆ
ಒಲಿವ ಧಾಮಿನಿ
ಸಾಧು ಸಂತರ ವಿಚಾರಗಳಲಿ
ಸಾಧ್ವಿಮಣಿ ನೀ ರಮಣಿ
ಓ ತಾಯೇ ನೀ ಸರ್ವಾಂಗ ಸುಂದರಿ
ಜಗದ ಗುರು ಶಿರೋಮಣಿ!!

ನಿನ್ನ ಸೆರಗಿನಲಿ ನಾನೊಂದು ಕಂದ
ಸೌಜನ್ಯತೆಯ ಬದುಕಿನಲಿ ನಡೆಯುವದು ಅಂದ
ತಿಳುವಳಿಕೆ ಬಳುವಳಿಯು
ನಿನ್ನ ಮಮತೆಯಿಂದ
ಪುಣ್ಯ ದೇಶದಲಿ ಜನುಮ ಪಡೆದ
ನಾನು ಚೆಂದ
ನನ್ನ ನಿನ್ನ ಪ್ರೇಮ ವಾತ್ಸಲ್ಯ ಆಜೀವ
ಸಂಬಂಧ
ಸ್ವಾತಂತ್ರ್ಯ ಸಂದೇಶ ಜೀವನದ ಕಬಂಧ

– ಕವಿಯತ್ರಿ ಕಲ್ಪನಾಅರುಣ, ಬೆಂಗಳೂರು