Table of Contents

ಮುಗುಳು ನಗೆ ಮಲ್ಲಿಗೆ

ನಸು ನಗುತ ಹಸಿರು
ಬಳ್ಳಿಯಲಿ ಹಾಸಿದೆ
ಹೂ ರಾಶಿ, ಕೈ ಬೀಸಿ
ಕರೆದಿದೆ ತಂಗಾಳಿಯಲಿ
ಪರಿಮಳದ ಕಂಪು ಸೂಸಿ..

ಶುಭ್ರಾಕಾಶದಿ ಮಿನುಗುವ
ನಕ್ಷತ್ರದಂತೆ, ಹಿತವಾದ
ಬೆಳಕ ಎಲ್ಲೆಡೆ ಬೀರುತಲಿ
ಮೋಡಗಳ ಮರೆಯಿಂದ
ಮುಖದೆರೆದು ಬರುವಂತೆ..

ಎಲೆಗಳ ಮರೆಯಲಿ
ಅವಿತು, ಮಕರಂದದ
ಸವಿಯನು ಜಗಕೆಲ್ಲ
ಮುಗುಳ್ನಗೆಯೊಂದಿಗೆ
ಮುಕ್ತತೆಯಲಿ ನೀಡುತ..

ಒಂದು ದಿನವಲ್ಲ, ಅರ್ಧದಿನ
ಅರಳಿ ಸಂಭ್ರಮಿಸುವ ಪರಿಯು
ಮಾನವ ಲೋಕಕೆ ಮಾದರಿ
ಬದುಕಿರುವಷ್ಟು ಕಾಲವು
ಅರ್ಥವಿರಬೇಕು ಬಾಳಿಗೆ..

ಯಾರೇನೇ ಅಂದರೂ
ಅರಳುವುದು ನಿನ್ನ ಧರ್ಮ
ಸುವಾಸನೆಯ ಸೂಸುತ
ಎಲ್ಲ ಎಲ್ಲೆಯ ಮರೆತು
ಗುರಿ ತಲುಪುವ ಛಲವು..

ಕಷ್ಟ ಸುಖಗಳಲಿ ಸಮತೆ
ಒಂದಿಷ್ಟು ವಿಚಲಿತವಿಲ್ಲ
ಹೊಗಳಿಕೆ ತೆಗಳಿಕೆಗಳಿಗೆ
ಕಿವಿ ಮನಸುಗೊಡದೆ
ಸಾಗಿದ ಸಾರ್ಥಕತೆಯು..

ನಗಬೇಕು ಬಾಳಲಿ
ಮುಗುಳು ನಗೆಯ
ಮಲ್ಲಿಗೆಯಂತೆ, ಸಂತತ
ಮೂರು ದಿನದ ಈ
ಬಾಳು ಪರಿಮಳ ಬೀರುತ..

– ಡಾ. ಬಸಮ್ಮ ಗಂಗನಳ್ಳಿ, ಬೆಳಗಾವಿ