Table of Contents

ಮರೆಯದಿರು
ಉತ್ತಮವಾದ ಭಾವನೆಗಳನ್ನು ಬೇಲಿಯ ಮೇಲೆ ನಿಲ್ಲಿಸಿ ಸಮುದ್ರದ ಅಲೆಗಳಂತೆ ಕಣ್ಣೀರು ತರಿಸಿ ಸಿಡಿದೇಳುವ ಜ್ವಾಲೆಯಂತೆ ಶೋಕ ಬರೆಸಿ ಈ ಜೀವನವೆಂಬ ಕಾವಲು ಕಾಯುವ ಗುರಿಕಾರ ನೀನಾಗಬೇಕಾದರೆ ಅನುಸರಿಸಲೇಬೇಕಾದ ಅನಿವಾರ್ಯಗಳನ್ನ ದೃಢವಾದ ನಿರ್ಣಯದಿಂದಲೇ ಪಾಲಿಸಬೇಕು.
ಈ ಜೀವನವೇ ಬಿಡಿಸಲಾಗದ ಒಂದು ಸುಂದರ ಒಗಟು ಈ ಒಗಟಿನ ಬಿಕ್ಕಟ್ಟನ್ನು ಹೋರಾಟ ಎಂಬುದಕ್ಕೆ ಸಮರ್ಥಿಸಿಕೊಂಡು ಸಾಗುತ್ತಿರುವ ಈ ಮಾನವ ನೀ ಏಕೆ ಹೀಗೆ? ಯಂತ್ರ ಮಂತ್ರ ತಂತ್ರಗಳ ಸರದಾರ ನೀನಾದರೂ ಈ ಜೀವನ ಎಂಬ ಸೂತ್ರಕ್ಕೆ ನೀನು ಪಾಲುದಾರನಷ್ಟೇ ಕಾಲು ನಿಂತರೆ, ಕೈ ಸೋತರೆ, ದೇಹ ಒಣಗಿದರೆ, ಬುದ್ಧಿ ಮಾಂದ್ಯವಾದರೆ, ಬತ್ತಿ ಹೋದರೆ, ಹೇ ಮಾನವ ನಿನ್ನಿಂದ ಈ ಬದುಕು ಗೆಲ್ಲಲು ಸಾಧ್ಯವೇ? ಉತ್ತಮ ನೆನೆಸಿಕೊಳ್ಳಲು ಶ್ರೇಷ್ಠ ತತ್ವಗಳು ಬೇಕು ಸಾಧನೆಗಳ ಸರದಾರರಾಗಬೇಕಾದರೆ ತ್ಯಾಗಿ ಆಗಿರಬೇಕು ವೇದನೆಗಳ ಅರಿತು ಬೋಧನೆಯ ಪರಿಪಾಲಕನಾಗಿರಬೇಕು. ಸರ್ವ ಸಂಪನ್ಮೂಲಗಳ ಒಡೆಯ ನೀನಾದರೂ ಈ ಬದುಕು ನಿನ್ನದಲ್ಲ ಹಗಲು ರಾತ್ರಿಗಳ ನಡುವೆ ಅನುಭವಿಸುವ ಕ್ಷಣಗಳು ನಿನಗೆ ಮಾತ್ರ ಸ್ವಂತ ಬತ್ತಿ ಹೋದ ಭಾವನೆಗಳನ್ನ ಸತ್ಯವೆಂಬ ಶಕ್ತಿಯಿಂದ ಬತ್ತಿ ಹೊಸೆದು ಭಾವನೆಗಳನ್ನು ಮತ್ತೆ ಬದುಕಿಸಲು ಸಾಧ್ಯ! ರತ್ನದಂತಿರುವ ಎರಡಕ್ಷರದ ಪ್ರೀತಿಯನ್ನು ಬತ್ತಿಸಿದರೆ ಮತ್ತೆ ಹೊತ್ತಿಸಲು ಕಷ್ಟಕರದ ವಿಷಯ ಮರೆಯದಿರು.

– ಮನಸಿನ ಭಾವನೆಗಳ ಆರಾಧಕ ಪ್ರೀತಿಯಿಂದ ✍️ ಚನ್ನವೀರ ಸ್ವಾಮಿ ಹಿರೇಮಠ್ ಹೊಳಗುಂದಿ