Table of Contents

ಮೌನ ಮನದಾಸೆ
“”””””””””””
ಭವಸಾಗರದ ಒತ್ತಡ ಅವಾಂತರ ವಿಷಮತೆ ಕಳಚಿ
ಆವೇಗ ಆತಂಕ ತಲ್ಲಣವ ಸರಿಸಿ
ಭೋಗ ರೋಗಗಳ ಬೆಂಗಾಡನ್ನು ತೊರೆದು
ನಿರ್ಭೀತ ನಿರ್ಮಲ ಪರಿಸರದಿ ಸಂಭ್ರಮಿಸುವಾಸೆ

ನಗರನಂಜಿನ ಬೇಗುದಿಯಿಂದ ಮುಕ್ತವಾಗಿ
ದಾವಂತ ಮೋಹದಾಹ ಪ್ರಹಾರಗಳ ತೊರೆದು
ಕ್ರೌರ್ಯ ವಿಕಾರ ವಿಲಾಸ ವ್ಯೊಹ ಸುಳಿವಿಲ್ಲದ
ಜಲಝರಿಯ ನಿಸರ್ಗ ಮಡಿಲಲ್ಲಿ ನೆಲೆಯೂರುವಾಸೆ

ವೇಗೋತ್ಕರ್ಷಕ ವಿಕೃತ ಸಾಮ್ರಾಜ್ಯದ
ಆಕ್ರಂದನ ವಿಪತ್ತಿನ ಮಂದಾಗ್ನಿಯಲ್ಲಿ
ಮರುಗಿ ಕರಗಿ ನಲುಗೋ ಮುನ್ನ
ಪ್ರಶಾಂತ ಬೆಳದಿಂಗಳ ತಂಬೆಳಕಲ್ಲಿ ವಿಹರಿಸುವಾಸೆ

ನೆರಳಾಗಿ ಸುಳಿವ ಬವಣೆಗಳ ಮೆಟ್ಟಿ
ಉಸಿರುಗಟ್ಟುವ ಭಾವೋದ್ವೇಗಗಳ ಕಟ್ಟಿ
ಪ್ರಕೃತಿ ಸೌಂದರ್ಯದ ಬನಸಿರಿಯ ಲಾಸ್ಯದಲಿ
ಹಕ್ಕಿಗಳಿಂಚರಕೆ ಮಾರ್ಧನಿಯಾಗಿ ಮುಗಿಲೇರುವಾಸೆ

ಭ್ರಮೆ ಭಾವ ಬಂಧನದ ಸಂಕೋಲೆ ಕಳಚಿ
ಅವ್ಯಕ್ತ ಕತ್ತಲ ತೆರೆಯ ಸರಿಸಿ
ನಿಶ್ಯಬ್ದ ನಿರಾಳ ನಿಸರ್ಗದೊಡಲಲ್ಲಿ
ಮೌನಧ್ಯಾನ ದೈವತ್ವದ ಪ್ರಭೆಯಲಿ ಆತ್ಮಾನಂದ ಕಾಣುವಾಸೆ

– ಯಶೋಧ ರಾಮಕೃಷ್ಣ ಮೈಸೂರು