Table of Contents

              ನನ್ನ ಭಾವನೆ

ಯಾರು ರಾಗ-ದ್ವೇಷ ಕಾಮಾದಿಕವ, ಜಯಸಿ ಜಗವೆಲ್ಲ ತಿಳಿದಿಹನು
ಸಕಲ ಜೀವಿಗಳಿಗೆ ಮೋಕ್ಷ ಮಾರ್ಗವ ನಿಷ್ಪೃಹನಾಗಿ ಉಪದೇಶಿಹನು,
ಬುದ್ಧ, ವೀರ ಜಿನ, ಹರಿ, ಹರ ಬ್ರಹ್ಮ ಅಥವಾ ಅವನಿಗೆ ಸ್ವಾಧೀನರೆನ್ನಿ
ಭಕ್ತಿ-ಭಾವದಿಂದ ಪ್ರೇರಿತನಾಗಿ ಈ ಚಿತ್ತವು ಅವನಲಿ ತನ್ಮಯಿಸಲೆನ್ನಿ  ||೧||

ಯಾರ ಆಸೆ ವಿಷಯಾದಿಗಳಲಿಲ್ಲ, ಸಾಮ್ಯ ಭಾವ ಧನ ರಕ್ಷಿಸುತ್ತಾರೆ
ನಿಜ-ಪರರ ಹಿತ ಸಾಧನೆಯಲ್ಲಿ ಯಾರು ಹಗಲಿರುಳು ತತ್ಪರನಾಗಿರುತ್ತಾರೆ,
ಸ್ವಾರ್ಥ ತ್ಯಾಗದ ಕಠಿಣ ತಪವನು, ಖೇದವಿಲ್ಲದೆ ಯಾರು ಮಾಡುತ್ತಾರೆ
ಇಂತಹ ಜ್ಞಾನಿ ಸಾಧು ಜಗತ್ತಿನ ದುಃಖ-ಸಮೂಹವ ಕಳೆಯುತ್ತಾರೆ ||೨||

ಸದಾ ಅವರದ್ದೇ ಸತ್ಸಂಗವಿದ್ದು ಧ್ಯಾನವು ಅವರದೆ ನಿತ್ಯವಿರಲಿ
ಅವರಂತಹ ಚರ್ಯೆಯಲ್ಲಿ ಈ  ಚಿತ್ತವು ಸದಾ ನಿಯುಕ್ತವಿರಲಿ,
ಯಾವ ಜೀವಿಗೂ ಕಷ್ಟವ ಕೊಡೆನು, ಅಸತ್ಯ ವಚನವ ನಾನೆಂದಾಡೆನು
ಪರ-ಧನ-ವನಿತೆಯರಲಿ ಆಸಕ್ತನಾಗದೆ, ಸಂತೋಷಾಮೃತವ ಸವಿಯುವೆನು ||೩||

ಅಹಂಕಾರದ ಭಾವ ಇಡೆನು, ಯಾರ ಮೇಲೆಯೂ ಖೇದಗೊಳ್ಳೆನು
ಇನ್ನೊಬ್ಬರ ವೃದ್ಧಿಯನು ನೋಡಿ ಎಂದೂ ಈರ್ಷ್ಯೆಯ  ಭಾವ ಧರಿಸಲಾರೆನು,
ಇಂತಹ ಭಾವನೆ ನನ್ನಲ್ಲಿರಲಿ, ಸರಳ-ಸತ್ಯ-ವ್ಯವಹಾರ ಮಾಡುವೆನು
ಸಾಧ್ಯವಾದಷ್ಟು ಈ ಜೀವನದಲಿ ಮತ್ತೊಬ್ಬರಿಗೆ ಉಪಕಾರ ಮಾಡುವೆನು ||೪||

ಜಗದಲಿ  ನನ್ನ  ಮೈತ್ರಿಭಾವ  ಎಲ್ಲ ಜೀವಿಗಳೊಂದಿಗೆ ನಿತ್ಯವಿರಲಿ
ದೀನ-ದುಃಖಿ ಜೀವಿಗಳೆಡೆ ನನ್ನ ಅಂತರಾಳದಿಂದ ಕರುಣೆಯ ಸ್ತ್ರೋತ ಚಿಮ್ಮಿಸಲಿ,
ದುರ್ಜನ-ಕ್ರೂರ-ದುರ್ಮಾರ್ಗಿಗಳ ಮೇಲೆ  ಕ್ಷೋಭೆ ನನಗೆ ಬರದಿರಲಿ
ಸಾಮ್ಯಭಾವ ಇಡುವೆನು ಅವರಲಿ ಇಂತಹ ಪರಿಣತಿ ಪರಿಣಮಿಸಲಿ ||೫||

ಗುಣವಂತರನ್ನು ನೋಡಿ ನನ್ನ ಹೃದಯದೊಳಗೆ ಪ್ರೇಮವು ಉಕ್ಕಿ ಬರಲಿ
ಸಾಧ್ಯವಾದಷ್ಟು ಅವರ ಸೇವೆಯ ಗೈಯುತ ಈ ಮನವು ಸುಖವ ಪಡೆಯಲಿ
ಎಂದೂ ನಾನು ಕೃತಘ್ನನಾಗದೆ,  ದ್ರೋಹವೆಂದು ನನ್ನ ಅಂತರಾಳದಿ ಬಾರದಿರಲಿ
ಗುಣ-ಗ್ರಹಣದ ಭಾವವಿದ್ದು  ದೃಷ್ಟಿಯೆಂದು ದೋಷದಡಿ ಸುಳಿಯದಿರಲಿ ||೬||

ಮೂಲತಃ : ಪಂ. ಯುಗಕಿಶೋರ ಮುಖ್ತಾರ ‘ಯುಗವೀರ’
ಕನ್ನಡ ಅನುವಾದಕ : ಲಾಲಸಾಬ ಹುಸ್ಮಾನ ಪೆಂಡಾರಿ
ಜಿಲ್ಲಾಧ್ಯಕ್ಷರು: ಕಸ್ತೂರಿ ಸಿರಿಗನ್ನಡ ವೇದಿಕೆ-ವಿಜಯಪುರ
ಇಮೇಲ್ : kavittkarmamani@gmail.com