ಕನ್ನಡದ ಬೆಳವಣಿಗೆಗೆ ನಾವೇನು ಮಾಡಬಹುದು?
– ವಿಶ್ವಾಸ್ ಡಿ .ಗೌಡ, ಸಕಲೇಶಪುರ
ಕನ್ನಡದ ಬೆಳವಣಿಗೆಗೆ ನಾವೇನು ಮಾಡಬಹುದೆಂದು ನನ್ನನ್ನು ಆಗಿಂದಾಗ ಉತ್ಸಾಹಿ ಯುವಕ ಯುವತಿಯರು ಕೇಳುತ್ತಿರುತ್ತಾರೆ. ಅವರಿಗೆ ತೋರ್ಗಂಬವಾಗಿ ಕೆಲವು ಸಲಹೆಗಳನ್ನು ಇಲ್ಲಿ ಕೊಟ್ಟಿದ್ದೇನೆ. ಇವುಗಳನ್ನು ಅಳವಡಿಸಿಕೊಳ್ಳಿ ಎಂದು ನನ್ನ ವಿನಂತಿ. ಇದೇ ಮಾದರಿಯ ಇತರ ಉಪಾಯಗಳನ್ನು ನಿಮ್ಮ ಬ್ಲಾಗುಗಳಲ್ಲಿ, ೬ – ಪತ್ರಿಕೆಗಳಲ್ಲಿ ಇತರರಿಗೂ ತಿಳಿಸಿ-ನಿಷ್ಠೆಯಿಂದ ಆಚರಣೆಗೆ ತನ್ನಿ.
1) ನಿಮ್ಮ ದೂರವಾಣಿಯಿಂದಲೋ, ಮೊಬೈಲ್ನಿಂದಲೋ ಅನೇಕ ಸೇವೆಗಳಿಗಾಗಿ ಬ್ಯಾಂಕ್, ವಿಮೆ ಇತ್ಯಾದಿ- ಕರೆಮಾಡುತ್ತಿರುತ್ತೀರಿ. ಆಗ ನಿಮಗೆ ಎದುರಾಗುವುದು “ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್‘ ಸಿಸ್ಟಮ್, ಅಲ್ಲಿ ಬರುವ ಮೊದಲ ಹೇಳಿಕೆ- ‘ಇಂಗ್ಲಿಷ್ಗಾಗಿ ಒಂದನ್ನು ಒತ್ತಿ, ಕನ್ನಡಕ್ಕಾಗಿ ಎರಡನ್ನು ಒತ್ತಿ ಇತ್ಯಾದಿ. ದಯವಿಟ್ಟು ಕನ್ನಡವನ್ನೇ ಆರಿಸಿಕೊಳ್ಳಿ. ಈ ಆಯ್ಕೆಗಳ ಅಂಕಿ ಅಂಶಗಳ ಬಲದಿಂದ ಆ ಉದ್ಯಮಗಳು ಯಾವ ಭಾಷೆಗೆ ಒತ್ತು ನೀಡಬೇಕೆನ್ನುವ ನಿರ್ಧಾರ ಕೈಗೊಳ್ಳುತ್ತವೆ. ಕನ್ನಡದ ಆಯ್ಕೆಯಿಂದ ಕನ್ನಡ ಬೆಳೆಯುತ್ತದೆ.
2) ನೀವು ಆಗಿಂದಾಗ ಅಂತರ್ಜಾಲದಲ್ಲಾಗಲೀ, ನೇರವಾಗಿಯಾಗಲೀ ಉದ್ಯಮಗಳು ನಡೆಸುವ ಸರ್ವೆಗಳಲ್ಲಿ ಭಾಗವಹಿಸುತ್ತಿರುತ್ತೀರಿ. ಮುಂದೆ ಆ ರೀತಿ ಭಾಗವಹಿಸುವಾಗ ನಿಮಗೆ ಗೊತ್ತಿರುವ ಭಾಷೆಯ ಬಗ್ಗೆ ಇರುವ ಪ್ರಶ್ನೆಗೆ ‘ಕನ್ನಡ’ ಎಂದು ಮಾತ್ರ ದಾಖಲಿಸಿ, ನೀವು ಓದುವ ಪತ್ರಿಕೆಗಳ ಬಗ್ಗೆ ಇರುವ ಪ್ರಶ್ನೆಗೆ ಕನ್ನಡದ ದಿನಪತ್ರಿಕೆಗಳ, ನಿಯತ ಕಾಲಿಕಗಳ ಹೆಸರನ್ನು ಮರೆಯದೆ ನಮೂದಿಸಿ. ಇದರಿಂದ ಆ ಸರ್ವೆಯ ಫಲವಾಗಿ ನಡೆಯುವ ಎಲ್ಲ ಕಾವ್ಯಗಳಲ್ಲೂ ಕನ್ನಡದ ಬಳಕೆಗೆ ಇಂಬುಕೊಟ್ಟಂತಾಗುತ್ತದೆ.
3) ಇಂದು ಅನೇಕ ವಿಮೆ, ಬ್ಯಾಂಕ್, ಹಣಕಾಸಿನ ವ್ಯವಹಾರದ ಸಂಸ್ಥೆ ಮುಂತಾದ ಉದ್ಯಮಗಳು ತಮ್ಮ ಮಾರಾಟದ ಜಾಲಕ್ಕೆ ಅನೇಕ ಯುವಕರನ್ನು ನೇಮಿಸಿಕೊಂಡಿದೆ. ಇವರಲ್ಲಿ ನಿಜವಾಗಿ ಹೆಚ್ಚು ಮಂದಿ ಹೊರರಾಜ್ಯಗಳಿಂದ ಅಕ್ಕಪಕ್ಕದ – ರಾಜ್ಯಗಳಿಂದ ಇಲ್ಲಿಗೆ ಬಂದವರು. ನಮ್ಮ ಜೊತೆ ವ್ಯವಹರಿಸಲು ಕನ್ನಡ ಬಲ್ಲವರನ್ನೇ ಕಳುಹಿಸಬೇಕೆಂದು ನಾವು ಒತ್ತಾಯಿಸಿ ಕೇಳಬೇಕು. ಇದರಿಂದ ಈ ಉದ್ಯಮಗಳು ತಮ್ಮ ವ್ಯವಹಾರದಲ್ಲಿ ಕನ್ನಡವನ್ನು ಬಳಸಲೇಬೇಕಾದ ಪರಿಸ್ಥಿತಿ ಒದಗಿ ಬರುತ್ತದೆ. ಕನ್ನಡಿಗರಿಗೆ ಉದ್ಯೋಗಾವಕಾಶಗಳು ಒದಗುತ್ತವೆ.
4) ನಿಮ್ಮ ಮನೆಗಳಿಗೆ ಕಡೆಯಪಕ್ಷ ಒಂದು ಕನ್ನಡ ವಾರ್ತಾಪತ್ರಿಕೆಯನ್ನೂ ಒಂದು ನಿಯತಕಾಲಿಕವನ್ನೂ ತರಿಸಿ-ಅವನ್ನು ಮನೆಯವರೆಲ್ಲಾ ಓದಿ.
5) ನೀವು ಎಲ್ಲೇ ಇದ್ದರೂ ನಿಮ್ಮ ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡಿ, ಇತರ ಕನ್ನಡಿಗರೊಡನೆ ಕನ್ನಡದಲ್ಲೇ ಮಾತನಾಡಲು ಪ್ರೋತ್ಸಾಹಿಸಿ, ಅವರಲ್ಲಿ ಕನ್ನಡ ಪ್ರೇಮದ ಜೊತೆ ಮುಂದಾಳತ್ವದ ಗುಣಗಳು ಹೆಚ್ಚುವಂತೆ ಮಾಡಿ. ಕನ್ನಡ ತಾಯಿಯರು ಈ ಕೆಲಸವನ್ನು ಪ್ರೀತಿಯಿಂದ ಮಾಡಿರಿ.
6) ನಿಮ್ಮ ಪ್ರದೇಶದಲ್ಲಿ ನಡೆಯುವ ಕನ್ನೆಡದ ಕಾರಕ್ರಮಗಳಲ್ಲಿ ತಪ್ಪದೆ ಭಾಗವಹಿಸಿ.
7) ಕನ್ನಡ-ಕನ್ನಡನಾಡು-ಕನ್ನಡಿಗ ಸಾಧಕರು ಈ ಬಗ್ಗೆ ಬೇರೆ ಭಾಷೆಯವರಲ್ಲಿ ಅಭಿಮಾನದಿಂದ ಮಾತನಾಡಿ.
8) ಆದಷ್ಟೂ ಇತರ ಕನ್ನಡಿಗರಿಗೆ ಸಹಾಯಮಾಡಿ, ಅವರ ಕಾಲನ್ನು ಎಳೆಯಬೇಡಿ. ನೀವು ಕೆಲಸಮಾಡುವ ಸ್ಥಳದಲ್ಲಿ ಇತರರು ಕನ್ನಡ ಮಾತನಾಡುವವರ ಮಧ್ಯೆ ವಿರಸವನ್ನುಂಟುಮಾಡುವ ರೀತಿಯನ್ನು ಅನುಸರಿಸುವುದರ ಬಗ್ಗೆ ಬಹಳ ಎಚ್ಚರದಿಂದಿರಿ-ನಿಮ್ಮ ಒಗ್ಗಟ್ಟನ್ನು ಕಾಪಾಡಿಕೊಳ್ಳಿ.
9) ಬೇರೆ ರಾಜ್ಯಗಳಿಂದ ಬಂದು ನಿಮ್ಮೊಡನೆ ಕೆಲಸಮಾಡುವ ಮಂದಿಗೆ ಕನ್ನಡ ಕಲಿತು ಅದರಲ್ಲೇ ಮಾತನಾಡಲು ಪ್ರೋತ್ಸಾಹಿಸಿ.
10) ಕನ್ನಡವೆಂದರೆ ಬರಿಯ ಸಾಹಿತ್ಯವಲ್ಲ, ಸುಗಮ ಸಂಗೀತವಲ್ಲ, ಚಲನಚಿತ್ರವಲ್ಲ: ಈ ರೀತಿಯ ಇನ್ನು ಎಷ್ಟೋ ವಿಚಾರಗಳನ್ನು ಒಳಗೊಂಡ ಒಂದು ಸಂಸ್ಕೃತಿ ಎಂಬುದನ್ನು ಯಾವಾಗಲೂ ನೆನಪಿಡಿ. ಕನ್ನಡಿಗರಾಗಿರುವುದಕ್ಕೆ ಹೆಮ್ಮೆಪಡಿ.