ಅಭಿಲಾಷೆ ಕಾದಂಬರಿ ಸಂಚಿಕೆ -44

ಆತ್ಮೀಯ ಓದುಗರಿಗೆ‌ ವಂದನೆಯನ್ನು ತಿಳಿಸುತ್ತಾ 🙏🙏

ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 44 ನೇ ಸಂಚಿಕೆಯನ್ನು ಪ್ರಕಟಿಸುತ್ತಿದ್ದೇನೆ.

  • ಹಿಂದಿನ ಸಂಚಿಕೆಯಲ್ಲಿ

ಮಾರನೇ ದಿನ ಆಶಾ ಎಂದಿನಂತೆ ಕೆಲಸಕ್ಕೆ ಹೊರಟಿರುತ್ತಾಳೆ

ಕಥೆಯನ್ನು ಮುಂದುವರೆಸುತ್ತಾ

ತನ್ನನ್ನು ವಿಕ್ರಮ್ ಅಣ್ಣನೆ ಕಿಡ್ನಾಪ್ ಮಾಡಿದ್ದೆಂದು ತಿಳಿದು, ವಿಕ್ರಮ್ ಕುಟುಂಬದ ಮೇಲೆ ಕೋಪಗೊಂಡು,ತನ್ನ ತಂದೆಯ ಮೇಲೆ ಮೃದು ಧೋರಣೆ ಹೊಂದಿ, ಸಂಜೆ ಬಂದ ನಂತರ ಮಾತಾಡೋಣವೆಂದು ಕೆಲಸಕ್ಕೆ ಬಂದಿರುತ್ತಾಳೆ.
ರಾತ್ರಿ ಒಂಬತ್ತು ಗಂಟೆಗೆ ಆಶಾ ಊಟಕ್ಕೆ ಕುಳಿತುಕೊಳ್ಳುವಷ್ಟರಲ್ಲಿ ಕೋದಂಡರಾಮ್ ರವರು ಆಗಲೇ ಊಟ‌ಮಾಡಿ ಕೈ‌ ತೊಳೆದುಕೊಂಡು ಬರುತ್ತಿರುವುದನ್ನು ಕಂಡು
ಏನಪ್ಪಾ ಮಗಳ ಜೊತೆ ಊಟ‌ ಮಾಡಲು ಬೇಸರವಾಯ್ತಾ? ಒಬ್ಬನೇ ಊಟ ಮಾಡಿ ಹೋಗಿದ್ದೀಯಾ? ಎಂದು ಆಶಾ ಕೇಳಲು
ನಿನ್ನ ಜೊತೆ ಊಟ ಮಾಡುವುದೂ ಬೇಡಾ, ಜಗಳವಾಡುವುದೂ ಬೇಡಮ್ಮಾ ಎಂಬ ಕೋದಂಡರಾಂ ಮಾತಿಗೆ,
ಇಲ್ಲಪ್ಪಾ ಇನ್ನುಮುಂದೆ ಹಾಗಾಗಲೂ ಬಿಡುವುದಿಲ್ಲ, ನಿನ್ನ ಮಾತಿನಂತೆ ನಡೆಯುತ್ತೇನೆಂದು ಆಶಾ ಹೇಳಿದಾಗ
ಹೋಗಲೀ ಬಿಡಮ್ಮಾಈಗಲಾದರೂ ನಿಮ್ಮಪ್ಪನ ಮೇಲೆ ನಂಬಿಕೆ ಬಂತಲ್ಲ ಅಷ್ಟು ಸಾಕು, ನಾವು ನಿನ್ನ ಒಳ್ಳೆಯದಕ್ಕೆ ಹೇಳುತ್ತಿದ್ದರೂ ನೀನು ಮೋಹದ ಪಾಶದಲ್ಲಿ ಸಿಲುಕಿ ಕುರುಡಳಾಗಿದ್ದೆ, ಸರಿಯಾಗಿ ವಿಮರ್ಶೆ ಮಾಡಿ ನಿರ್ಧಾರ ತೆಗೆದುಕೊಳ್ಳಮ್ಮಾ ಎಂದರೂ ನೀನು ನಮ್ಮ ಮಾತನ್ನು ಕಿವಿಯ ಮೇಲೆ ಹಾಕಿಕೊಳ್ಳುತ್ತಿರಲಿಲ್ಲ. ದೇವರು ದೊಡ್ಡವನು ನಿನ್ನ ಮನಸ್ಸು ಪರಿವರ್ತನೆಯಾಯಿತಲ್ಲಾ‌ ಇನ್ನು ನಾವುಗಳು ನೆಮ್ಮದಿಯಾಗಿರಬಹುದು ಎಂದು ಕೋದಂಡರಾಮ್ ಹೇಳಿದಾಗ
ಆಶಾ‌ ತಾಯಿಯು ಧ್ವನಿಗೂಡಿಸಿ, ಹೌದು ಕಣೇ ಆಶಾ, ನಮ್ಮ ಮಗಳು ಇನ್ನೆಲ್ಲಿ ಮೋಸ‌ ಹೋಗಿ ಕಷ್ಟಕ್ಕೆ ಸಿಲುಕುತ್ತಾಳೋ ಎಂದು ನಮಗಂತೂ ದೊಡ್ಡ ಚಿಂತೆಯಾಗಿತ್ತಮ್ಮಾ, ನಿಮ್ಮಪ್ಪ ಇದೇ ಯೋಚನೆಯಲ್ಲಿ ನಿದ್ದೆಯನ್ನೇ ಸರಿಯಾಗಿ ಮಾಡುತ್ತಿರಲಿಲ್ಲ. ಮಗಳು ನಮ್ಮ ಮಾತು ಕೇಳುವಂತೆ ಏನು ಮಾಡಬೇಕೇ ಎಂದು ನನ್ನನ್ನು ದಿನವೂ‌ ಕೇಳುತ್ತಿದ್ದರು. ಇದಕ್ಕೆ ನನ್ನಲ್ಲೂ ಪರಿಹಾರ ಇಲ್ಲ, ಅವಳ ಹಣೆ ಬರಹ ಏನಾಗುತ್ತದೋ ಆಗಲೆಂದು ಮನಸ್ಸು ಗಟ್ಟಿಮಾಡಿಕೊಳ್ಳಿ ಎಂದು ಹೇಳುತ್ತಿದ್ದೆ ಎನ್ನುತ್ತಾರೆ.
ವಿಕ್ರಮ್ ಒಳ್ಳೆಯ ಹುಡುಗನಾಗಿದ್ದ ಅದಕ್ಕೆ ಅವನನ್ನೇ ಮದುವೆಯಾಗುತ್ತೇನೆಂದು ಹೇಳುತ್ತಿದ್ದೆ. ಈಗ ಅವರ ಕುಟುಂಬದ ಮೇಲೆಯೇ ಅನುಮಾನ ಬಂದಿದೆ, ಇನ್ನು ಹೇಗೆ ಅವರ ಮನೆಯ ಸೊಸೆಯಾಗಿ ಹೋಗಲಿ ಅದಕ್ಕೆ ಈ ಲವ್ ಗೀವ್ ಏನೂ ಬೇಡಾ ಎಂದು ನಿರ್ಧರಿಸಿ ಅವರ ಸಂಬಂಧವೇ ಬೇಡವೆಂದು ನಿರ್ಧರಿಸಿದ್ದೇನೆ. ನೀವು ಯಾರನ್ನು ಮದುವೆಯಾಗೆಂದು ಹೇಳುತ್ತೀರೋ ಅವರನ್ನು ಮದುವೆಯಾಗಿ ನೆಮ್ಮದಿಯಾಗಿರಬೇಕೆಂದು ತೀರ್ಮಾನಿಸಿದ್ದೇನೆ ಎಂಬ ಆಶಾಳ ಮಾತಿಗೆ,
ನನ್ನ ಮಗಳು ಅಪರಂಜಿ ಎಂದು ಗೊತ್ತಿತ್ತು, ಆದರೂ ಏಕೋ ತಪ್ಪು ಹೆಜ್ಜೆ ಹಾಕುತ್ತಿದ್ದಾಳೆ, ಇಂದಲ್ಲಾ ನಾಳೆ ಸರಿಹೋಗಬಹುದೆಂಬ ನಂಬಿಕೆ ಇತ್ತಮ್ಮಾ. ಇಂದು ಆ‌ ನಂಬಿಕೆ ನೀನು ನಿಜ ಮಾಡಿಬಿಟ್ಚೆ ಎಂದು ಕೋದಂಡರಾಂ ಹೇಳಿದಾಗ
ಆಯ್ತು ಬಿಡಪ್ಪಾ ಇನ್ನು ಅವರ ಸುದ್ದಿಗೆ ಹೋಗುವುದಿಲ್ಲ. ನಿಮ್ಮ ನೆಮ್ಮದಿಯೇ ನನಗೆ ಮುಖ್ಯವೆಂದು ಹೇಳಿ ಆಶಾ ಕೈ ತೊಳೆದು ತನ್ನ ರೂಮಿಗೆ ಹೋಗುತ್ತಾಳೆ.

ಆಶಾಳ ಅಮ್ಮ ಮಾತನಾಡಿ, ರೀ ನಮ್ಮ ಮಗಳು ಇಷ್ಟು ಬೇಗ‌ ಬದಲಾಗುತ್ತಾಳೆಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲಾ‌, ಸದ್ಯ ಈಗ ಮನಸ್ಸಿಗೆ ನೆಮ್ಮದಿಯಾಯ್ತೆಂದು ಹೇಳಲು
ಈಗ‌ ಆರ್ಮಿ ಹುಡುಗನಿಗೆ ಮದುವೆ ಮಾಡಬಹುದೆಂದು ಕೋದಂಡರಾಂ ನುಡಿಯಲು,
ರೀ ಈಗಲೇ ಈ ವಿಷಯ ಪ್ರಸ್ತಾಪ ಮಾಡುವುದು ಬೇಡಾ, ಅವಳ ಮನಸ್ಸು ಇನ್ನೂ ತಿಳಿಯಾಗಲಿ ನಂತರ ಪ್ರಸ್ತಾಪ ಮಾಡುವಿರಂತೆ ಎಂಬ ಮಾತಿಗೆ
ಲೇಯ್ ನಾನೇನು ಆ ಹುಡುಗನನ್ನು ಒಪ್ಪಿಕೊಳ್ಳುವಂತೆ ಈಗಲೇ ಹೇಳಲು ತುದಿಗಾಲಲ್ಲಿ ನಿಂತಿದ್ದೇನಾ? ನನಗೂ ಗೊತ್ತಿದೆ ಎಂದು ಹುಸಿಕೋಪ‌ ತೋರಿದಾಗ
ಅಯ್ಯೋ ದಿನವೂ ಊಟ‌ ಮಾಡುವಾಗ ಮಗಳ‌ ಜೊತೆ ಜಗಳವಾಡಿ ಕೋಪಿಸಿಕೊಂಡು ಹೋಗುತ್ತಿದ್ರೀ ಈ‌ ದಿನ ಊಟವಾದ‌ ನಂತರ ನನ್ನ ಜೊತೆ ಜಗಳವಾಡುವಂತಿದೆ ಎಂದು ಅವರ ಪತ್ನಿ ಛೇಡಿಸಿದಾಗ
ಅಯ್ಯೋ ಎಲ್ಲಾದರೂ ಉಂಟಾ? ,ಮದುವೆಯಾಗಿ ಮುವ್ವತ್ತು ವರ್ಷವಾಗಿದ್ದರೂ ನೀನು ಇನ್ನೂ ನನ್ನ ಬುದ್ದಿ ಗೊತ್ತಿಲ್ಲದೆ ಮಾತನಾಡುತ್ತೀಯಾ? ನಾನು ಮೇಷ್ಟ್ರು ಕಣೇ ಯಾವತ್ತೂ ಯಾರ ಜೊತೆಯಲ್ಲೂ ಜಗಳವಾಡುವುದಿಲ್ಲ. ಮಕ್ಕಳ‌ು ಜಗಳವಾಡುವುದನ್ನು ನಿಲ್ಲಿಸುವುದು ಮಾತ್ರ ನನಗೆ ಗೊತ್ತು ಎಂದು ಕೋದಂಡರಾಂ ಹೇಳಲು
ಅದು ನನಗೂ ಗೊತ್ತು ರೀ ನಿಮ್ಮನ್ಮು ರೇಗಿಸಲು ಹೇಳಿದೆ ಅಷ್ಟೇ ಎಂದು ಹೇಳುತ್ತಾರೆ ಅವರ ರತ್ನಿ.

ಆಶಾ ತನ್ನ ರೂಮಿನಲ್ಲಿ ಕುಳಿತಿರುವಾಗ, ಆಶಾ ತನ್ವ ಮೊಬೈಲಿನಲ್ಲಿ ವಿಕ್ರಮ್ ಎಂದು ಹೆಸರು ಬಂದಿದ್ದನ್ನು ನೋಡಿ, ಪೂರ್ತಿ ರಿಂಗ್ ಆಗುವ ತನಕ ಸುಮ್ಮನಿದ್ದು, ನಂತರ ಇವನ ಕಾಟ‌ ತಪ್ಪಿಸಿಕೊಳ್ಳುವುದು ಹೇಗೆಂದು ಯೋಚಿಸಿ ವಿಕ್ರಮ್ ನಂಬರನ್ನು ಬ್ಲಾಕ್‌ ಮಾಡುತ್ತಾಳೆ.
ಸ್ವಲ್ಪ ಹೊತ್ತಿನ ನಂತರ ಪುನಃ ಮೊಬೈಲ್ ರಿಂಗ್ ಆದಾಗ, ಹೊಸ‌ ನಂಬರ್ ಇರುವುದನ್ನು ನೋಡಿ ಯಾರು ಈ ವೇಳೆಯಲ್ಲಿ ಫೋನ್ ಮಾಡುತ್ತಿರುವರೆಂದು ರಿಸೀವ್ ಮಾಡುವುದೇ ಇಲ್ಲ. ಪುನಃ ಪುನಃ ರಿಂಗ್ ಆದಾಗ
ಛೇ ಏನು ತಲೆ‌ ತಿನ್ನುತ್ತಾರೋ? ಎಂದು ಗೊಣಗುತ್ತಾ, ಬೇಸರದಿಂದಲೇ ಹಲೋ ಎನ್ನಲು
ಆಶಾ ನನ್ನ ಮೊಬೈಲ್ ನಂಬರನ್ನು ಏಕೆ ಬ್ಲಾಕ್ ಮಾಡಿದ್ದೀಯಾ ? ಪ್ಲೀಸ್ ಅನ್ ಬ್ಲಾಕ್ ‌ಮಾಡೆಂದು ಹೇಳಲು
ನೋ ವಿಕ್ರಮ್ ಇನ್ನೆಂದೂ ನನ್ನ ಜೊತೆ ಮಾತನಾಡಬೇಡ, ಪ್ಲೀಸ್ ಫೋನ್ ಆಫ್ ಮಾಡೆಂದು ಆಶಾ ಗುಡುಗಿದಾಗ
ಕೂಲ್ ಕೂಲ್ ಆಶಾ ಡಿಯರ್ ಎಂದ ತಕ್ಷಣ
ನೀನು ಡಿಯರ್ ಎಂದು ಹೇಳಿ ನನಗೆ ಇರಿಟೇಟ್ ಮಾಡಬೇಡವೆಂಬ‌ ಆಶಾಳ‌ ಮಾತಿಗೆ ಪ್ಲೀಸ್‌ ಆಶಾ ಈ ರೀತಿ ಮಾತನಾಡಿ ನನ್ನ ಕೊಲ್ಲಬೇಡಾ, ನೀನಿಲ್ಲದೆ ನಾನು ಬದುಕಲಾರೆ ಎಂದು ದೈನ್ಯತೆಯಿಂದ ಕೇಳಲು
ನಿನ್ನ ಮನಸ್ಸನ್ನು ದುರ್ಬಲಗೊಳಿಸಿಕೊಳ್ಳಬೇಡ, ನಾನು ಯಾವತ್ತೂ ನಿನ್ನ ಮದುವೆಯಾಗುವುದಿಲ್ಲವೆಂದು ಆಶಾ ಹೇಳಿ ಫೋನ್ ಆಫ್ ಮಾಡುತ್ತಾ,, ಬೇಗನೇ ಅಪ್ಪ ಹೇಳಿದ ಹುಡುಗನನ್ನು ಮದುವೆಯಾದರೆ ಇವನ ಕಾಟ‌ ತಪ್ಪಿಸಿಕೊಳ್ಳಬಹುದೆಂದುಕೊಳ್ಳುತ್ತಾಳೆ.
ಈ ಕಡೆ ವಿಕ್ರಮನು ನಿರಾಶನಾಗಿ ಮೊಬೈಲನ್ನು ‌ಜೇಬಿನಲ್ಲಿ ಇಟ್ಟುಕೊಳ್ಳುತ್ತಾ, ನನ್ನಿಂದ ಆಶಾ‌ ದೂರವಾಗಿದ್ದಾಳೆ, ಬಹುಷಃ ಈ ಜನ್ಮದಲ್ಲಿ ನನಗೆ‌ ಸಿಗುವಂತೆ ಕಾಣುತ್ತಿಲ್ಲವೆಂದುಕೊಳ್ಳುತ್ತಾನೆ.

ಮುಂದುವರೆಯುತ್ತದೆ

ಮನುಷ್ಯ ತಾನು ಬೇರೆಯವರ ಜಗಳವಾಡಬಾರದೆಂದರೂ ಕೂಡಾ‌ ಕೆಲವು ಸನ್ನಿವೇಶ ಸಂದರ್ಭಗಳಲ್ಲಿ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಬಹುದು.