ನವರಾತ್ರಿ ನಾಲ್ಕನೇ ದಿನ ಕೂಷ್ಮಾಂಡ ದೇವಿಗೆ ಪೂಜೆ..!
ನವರಾತ್ರಿಯ ನಾಲ್ಕನೇ ದಿನ ದುರ್ಗಾ ಮಾತೆಯ ನಾಲ್ಕನೇ ಅವತಾರವಾದ ಕೂಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ. ಸದಾ ಮಂದಸ್ಮಿತೆಯಾಗಿರುವ ದುರ್ಗಾದೇವಿಯ ನಾಲ್ಕನೇ ಅವತಾರವೇ ಕೂಷ್ಮಾಂಡ. ಈಕೆಯ ಆರಾಧಾನೆಯಿಂದ ಮನದ ಕ್ಲೇಷ ಕಳೆದು ಜ್ಞಾನದ ಬೆಳಕು ಮೂಡುತ್ತದೆ. ಜ್ಞಾನದ ಹೊನಲು ಸಂತಸಕ್ಕೆ ಕಾರಣವಾಗುತ್ತದೆ ಎಂಬ ನಂಬಿಕೆ ಭಕ್ತರದ್ದು.
ಸಂಸ್ಕೃತದಲ್ಲಿ ಕೂಷ್ಮಾಂಡವೆಂದರೆ ಬೂದುಗುಂಬಳಕಾಯಿ ಎಂದರ್ಥ ಆಯುರ್ವೇದ ಶಾಸ್ತ್ರದ ಪ್ರಕಾರ ಬೂದುಗುಂಬಳ ಕಾಯಿಯು ಜ್ಞಾನವರ್ಧಕ, ತೇಜೋವರ್ಧಕ, ಸಕಲ ತಾಪವನ್ನು ನಿವಾರಣೆ ಮಾಡಿ ದೇಹಕ್ಕೆ ತಂಪೆರೆವ ಶಾಕಾಹಾರ, ಕೂಷ್ಮಾಂಡ ಪದದಲ್ಲಿ ಕು-ಎಂದರೆ ಚಿಕ್ಕದು: ಉಷ್ಮ ಎಂದರೆ ‘ಶಕ್ತಿ’ ಮತ್ತು ಅಂಡ ಎಂದರೆ ಭ್ರೂಣ ಎಂದರ್ಥ. ಸರಳವಾಗಿ ಹೇಳುವುದಾದರೆ ‘ಇಡೀ ಬ್ರಹ್ಮಾಂಡವೆನ್ನುವ ಚೈತನ್ಯ ಶಕ್ತಿಯನ್ನೇ ತನ್ನ ಒಡಲಿನಲ್ಲಿ ಇಟ್ಟುಕೊಂಡಳು’ ಎಂದರ್ಥ.
ದುರ್ಗಾ ಸಪ್ತಶತಿಯ ಪ್ರಕಾರ ಕೂಷ್ಮಾಂಡ ದೇವಿಯೇ ಜಗದ ಸೃಷ್ಠಿಗೆ ಕಾರಣೀಭೂತಳಾಗಿದ್ದಾಳೆ. ಸೌರವ್ಯೂಹದ ಗ್ರಹಗಳ ಚಲನೆಯನ್ನು ನಿಯಂತ್ರಿಸುತ್ತಾಳೆ. ಆಕೆ ಇರುವಲ್ಲಿ ಬೆಳಕು ಹಾಗೂ ಜ್ಞಾನವಿದೆ ಎಂದು ಹೇಳಬಹುದಾಗಿದೆ.
- ನವರಾತ್ರಿಯ ವಿಶೇಷ
ಕೂಷ್ಮಾಂಡ ಅವತಾರದಲ್ಲಿ ದೇವಿ ತನ್ನ ಎಂಟು ಕೈಗಳಿಂದ ಭಕ್ತರಿಗೆ ವರವನ್ನು ನೀಡುತ್ತಾಳೆ. ಎಂಟು ಕೈಗಳನ್ನು ದೇವಿಯು ಹೊಂದಿರುವುದರಿಂದ ಆಕೆಗೆ ಅಷ್ಟಭುಜಾದೇವಿ ಎಂಬ ಹೆಸರೂ ಇದೆ. ದೇವಿಯ ಮೈಬಣ್ಣ ವಿಕಿರಣವಾಗಿದ್ದು ದೇಹದ ಬಣ್ಣ ಚಿನ್ನದ್ದಾಗಿದೆ. ಸಿಂಹದ ಮೇಲೆ ದೇವಿಯು ಸವಾರಿ ಮಾಡುತ್ತಿದ್ದಾಳೆ ಎಂಬ ನಂಬಿಕೆ ಜನಮಾನಸದಲ್ಲಿ ನೆಲೆಯಾಗಿದೆ.
ವಿಶ್ವದ ಸೃಷ್ಟಿಕರ್ತೆಗೆ ಪೂಜೆ ಅನಾದಿ ಕಾಲದ ನಂಬಿಕೆಯಂತೆ ಇಂದಿಗೂ ನಡೆದು ಬರುತ್ತಿದೆ. ವಿಶ್ವವೇ ಇಲ್ಲದಿರುವಾಗ ಸುತ್ತಲೂ ಗಾಢ ಅಂಧಕಾರ ಕವಿದಿತ್ತು. ಆ ಸಮಯದಲ್ಲಿ ಕೂಷ್ಮಾಂಡ ದೇವಿ ನಗುತ್ತಾಳೆ. ಆಕೆಯ ನಗುವಿನಿಂದ ಎಲ್ಲೆಡೆ ಬೆಳಕು ಕಂಡು ಬಂದಿತು ಎಂಬ ಪ್ರತೀತಿಯಿದೆ. ದೇವಿಯು ಭೂಮಿಯನ್ನು ಸೃಷ್ಟಿಸಿದ್ದಾಳೆ. ಅಲ್ಲಿ ಜೀವಿಗಳನ್ನು ರೂಪಿಸಿದ್ದಾಳೆ ಎಂದು ಬಲ್ಲವರ ಮಾತು.
ನವರಾತ್ರಿಯ ನಾಲ್ಕನೇ ದಿನ ಈ ಸೃಷ್ಟಿಯನ್ನು ರಚಿಸಿದ ದೇವಿ ಕೂಷ್ಮಾಂಡೆಯನ್ನು ಪೂಜಿಸುವುದು ವಾಡಿಕೆಯಾಗಿದೆ. ದೇವಿ ಕೂಷ್ಮಾಂಡೆಯನ್ನು ನೀವು ಪೂಜಿಸುತ್ತೇವೆ ಎಂದಾದಲ್ಲಿ ವಿಶ್ವದ ಶ್ರೇಷ್ಠ ಶಕ್ತಿಯನ್ನೇ ನಾವು ಆರಾಧಿಸುತ್ತಿದ್ದೇವೆ ಎಂದರ್ಥ. ಆಕೆಯ ಮೇಲೆ ನಂಬಿಕೆ ಇರಿಸಿದಲ್ಲಿ ನಾವು ನಮ್ಮ ಜೀವನದಲ್ಲಿ ಸರಿಯಾದ ದಾರಿಯಲ್ಲಿ ನಡೆಯಲು ಅವಳು ಮಾರ್ಗದರ್ಶನ ನೀಡುತ್ತಾಳೆ. ಬದುಕಿನ ದು:ಖ, ನೋವುಗಳನ್ನು ಮರೆತು ಸಂತಸವನ್ನು ಆ ದೇವಿ ಜೀವನದಲ್ಲಿ ತುಂಬುವಂತೆ ಮಾಡುತ್ತಾಳೆ ಎಂಬುದು ಪುರಾಣಗಳಿಂದ ತಿಳಿದು ಬರುತ್ತದೆ.
- ಕೂಷ್ಮಾಂಡ ದೇವಿಯ ರೂಪ
ಕೂಷ್ಮಾಂಡ ದೇವಿಯು ತನ್ನ ಏಳು ಕೈಗಳಲ್ಲಿ ಕಮಂಡಲ, ಧನಸ್ಸು, ಬಾಣ, ತಾವರೆ, ಚಕ್ರ, ಗದೆ ಹಾಗೂ ಜಪಮಾಲೆಯನ್ನು ಹಿಡಿದಿದ್ದಾಳೆ. ಇನ್ನೊಂದು ಹಸ್ತವು ಆಭಯ ಮುದ್ರೆಯಲ್ಲಿದ್ದು ಸದಾ ತನ್ನ ಭಕ್ತರನ್ನು ಆಶೀರ್ವದಿಸುತ್ತಾಳೆ ಎನ್ನಲಾಗುತ್ತದೆ. ವ್ಯಾಘ್ರವಾಹಿನಿಯಾಗಿರುವ ಈಕೆ ಧರ್ಮದ ಪ್ರತೀಕವಾಗಿದ್ದಾಳೆ. ಎಂಟು ಭುಜಗಳಿರುವ ಕಾರಣ ಅಷ್ಟಭುಜಾದೇವಿ ಎಂದು ಕರೆಯಲಾಗುತ್ತದೆ. ಕೂಷ್ಮಾಂಡ ದೇವಿಯು ಸೂರ್ಯನಿಗೆ ಅಧಿಪತಿಯಾಗಿರುವ ಕಾರಣ ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಜಾತಕದಲ್ಲಿ ಸೂರ್ಯನಿಂದಾಗುವ ಕೆಡುಕನ್ನು ನಿವಾರಿಸಬಹುದು. ಜೊತೆಗೆ ಎಲ್ಲಾ ರೀತಿಯ ಸಂಕಷ್ಟಗಳು ನಿವಾರಣೆಯಾಗುವುದು ಎಂಬ ನಂಬಿಕೆ ಎಲ್ಲರದ್ದು.
- ಪೂಜಾ ವಿಧಿ
ಕೂಷ್ಮಾಂಡ ದೇವಿಯನ್ನು ಪೂಜಿಸಲು ಅತೀ ಪವಿತ್ರವಾದ ಹೂವೆಂದರೆ ಕೆಂಪು ಬಣ್ಣದ ಹೂಗಳು. ದೇವಿಯನ್ನು ಪೂಜಿಸಿ ನಂತರ ಷೋಡಶೋಪಚಾರ ಪೂಜೆ ಅಂದರೆ 16 ವಿವಿಧ ಪೂಜೆಯನ್ನು ಮಾಡಿದರೆ ದೇವಿ ಪುನೀತಳಾಗುತ್ತಾಳೆ.
– ವಿಶ್ವಾಸ್. ಡಿ .ಗೌಡ, ಸಕಲೇಶಪುರ