ಅಭಿಲಾಷೆ ಕಾದಂಬರಿ ಸಂಚಿಕೆ -29
ಹಿಂದಿನ ಸಂಚಿಕೆಯಲ್ಲಿ
ತನ್ನ ಮೇಲೆ ಕಂಪ್ಲೇಂಟ್ ಕೊಟ್ಚಿರುವುದನ್ನು ತಿಳಿದು ಅಭಿಜಿತ್ ಮೇಲೆ ವಿಕ್ರಮ್ ಗೆ ಸಹಿಸಲಾರದ ಕೋಪ ಬಂದಿದ್ದು, ಇವನಿಗೆ ಸರಿಯಾಗಿ ಬುದ್ದಿ ಕಲಿಸಬೇಕೆಂದು ನಿಶ್ಚಯಿಸುತ್ತಾನೆ
ಕಥೆಯನ್ನು ಮುಂದುವರೆಸುತ್ತಾ
ಅಭಿಜಿತ್ ಗೆ ಸರಿಯಾಗಿ ಬುದ್ದಿ ಕಲಿಸಬೇಕೆಂದು ನಿಶ್ಚಯಿಸಿದ ವಿಕ್ರಮ್ ಹೇಗೆ ತೊಂದರೆ ಕೊಡಬಹುದೆಂದು ಯೋಚಿಸುತ್ತಾ, ಆಶಾಗೆ ಫೋನ್ ಮಾಡಿ ವಿಚಾರವನ್ನು ತಿಳಿಸಿದಾಗ
ಆಶಾ ಗಾಬರಿಗೊಂಡು, ಅಯ್ಯೋ ಏನು ಹೇಳುತ್ತಿದ್ದೀಯಾ? ವಿಕ್ರಮ್? ನೀನೇನು ಮಾಡಿದೆಯೆಂದು ನಿನ್ನ ಮೇಲೆ ಕಂಪ್ಲೇಂಟ್ ಕೊಟ್ಚಿದ್ದಾರೆ? ನಾವಿಬ್ಬರೂ ಸ್ಟೇಷನ್ ಗೆ ಹೋಗಿ ನಮ್ಮ ಲವ್ ವಿಚಾರವನ್ನು ತಿಳಿಸೋಣ ಆಗ ಇನ್ಸ್ ಪೆಕ್ಟರ್ ಸುಮ್ಮನಾಗಬಹುದೆಂದು ಹೇಳುತ್ತಾಳೆ.
ಬೇಡಾ ಆಶಾ ಅವನು ನಮ್ಮ ತಂಟೆಗೆ ಬರದಂತೆ ಸರಿಯಾಗಿ ಬುದ್ದಿ ಕಲಿಸಬೇಕು ಎಂದು ವಿಕ್ರಮ್ ಹೇಳಿದಾಗ
ಬೇಡಾ ವಿಕ್ರಮ್ ನಿನಗೆ ಏನಾದರೂ ತೊಂದರೆಯಾದರೆ ಏನು ಮಾಡೋದು? ನಾವಿಬ್ಬರೂ ಮದುವೆಯಾದರೆ ಯಾರೂ ಕೇಳುವುದಕ್ಕೆ ಆಗುವುದಿಲ್ಲವೆಂದು ಆಶಾ ಹೇಳಿದ ಮಾತಿಗೆ
ವಿಕ್ರಮ್ ತನ್ನ ಮನಸ್ಸಿನಲ್ಲಿ ಈಗ ಆಶಾಳನ್ನು ಮದುವೆ ಮಾಡಿಕೊಂಡು ಅಪ್ಪನ ಎದುರಿಗೆ ನಿಲ್ಲಲು ಸಾಧ್ಯವೇ ಇಲ್ಲ. ಅವರು ಬಿಸಿನೆಸ್ ನಲ್ಲಿ ಬಹಳ ಲಾಸ್ ಆಗಿ ತಲೆ ಕೆಡಿಸಿಕೊಂಡಿದ್ದಾರೆ. ಈ ಸನ್ನಿವೇಶದಲ್ಲಿ ಅಪ್ಪನಿಗೆ ಸಹಾಯ ಮಾಡಲು ಏನಾದರೂ ಉಪಾಯ ಮಾಡಿ ನಮ್ಮಪ್ಪನ ಬಿಸ್ನೆಸ್ ನ್ನು ಮೊದಲಿನಂತೆ ಮಾಡಿ ನಂತರ ಆಶಾಳನ್ನು ಮದುವೆಯಾದರೆ ನಮ್ಮಪ್ಪನೂ ಸಂತೋಷ ಪಡುತ್ತಾರೆ. ಆಶಾ ನನ್ನ ಬಿಟ್ಚು ಎಲ್ಲೂ ಹೋಗಲ್ಲಾ ಮುಂದಿನ ದಿನಗಳಲ್ಲಿ ವಿವಾಹವಾಗ ಬಹುದೆಂದು ಕೊಳ್ಳುತ್ತಿರುವಾಗ
ಆಶಾ ಮಾತನಾಡಿ ವಿಕ್ರಮ್ ಏಕೆ ಸೈಲೆಂಟ್ ಆದೆ? ಏನಾದರೂ ಮಾತನಾಡೆಂದು ಕೇಳಿದಾಗ
ಆಶಾ ಪ್ಲೀಸ್ ಈಗಲೇ ಮದುವೆ ಮಾಡಿಕೊಳ್ಳುವುದು ಬೇಡಾ, ನಮ್ಮಪ್ಪನು ಬಹಳ ಲಾಸ್ ನಲ್ಲಿದ್ದಾರೆಂದು ನಿನಗೂ ಗೊತ್ತು, ನಮ್ಮಪ್ಪನ ಸಾಲ ತೀರದ ಹೊರತು ನಾವು ಮದುವೆಯಾಗಲು ಆಗುವುದಿಲ್ಲವೆಂದು ವಿಕ್ರಮ್ ನುಡಿದಾಗ
ಹೇಯ್ ವಿಕ್ರಮ್ ನಾವು ಅದ್ದೂರಿ ಆಡಂಬರದಿಂದ ಮದುವೆ ಮಾಡಿಕೊಳ್ಳುವುದು ಬೇಡಾ , ಅವರಿಂದ ತಪ್ಪಿಸಿಕೊಳ್ಳಲು ಸಿಂಪಲ್ ಆಗಿ ಯಾವುದಾದರೂ ದೇವಸ್ಥಾನದಲ್ಲಿ ಮದುವೆಯಾಗೋಣ ನಂತರ ನಿಮ್ಮಪ್ಪನ ಬಿಸಿನೆಸ್ ನಲ್ಲಿ ಇಂಪ್ರೂವ್ ಆದ ತಕ್ಷಣ ಅದ್ದೂರಿಯಾಗಿ ರಿಸೆಪ್ಷನ್ ಅರೇಂಜ್ ಮಾಡಿಕೊಳ್ಳೋಣವೆಂಬ ಆಶಾ ಮಾತಿಗೆ
ನೋ ಆಶಾ ನಮ್ಮಪ್ಪನ ಈ ಪರಿಸ್ಥಿತಿಯಲ್ಲಿ ನಾವು ಮದುವೆ ಮಾಡಿಕೊಂಡಿದ್ದೇವೆಂದು ಹೇಳಿದರೆ, ನಮ್ಮಪ್ಪನ ಕೋಪ ಸಹಿಸಲು ಆಗುವುದಿಲ್ಲ. ನಿಮ್ಮಪ್ಪನ ಯೋಚನೆ ನಿನಗೆ ಬೇಡಾ ನಿನ್ನ ಯೋಚನೆ ನೀನು ಮಾಡಿಕೋ ಎಂದು ನಿಂದಿಸುತ್ತಾರೆ. ನನಗೀಗ ಬೇಕಿರುವುದು ಒಂದು ಕೋಟಿ ರೂಪಾಯಿಗಳು, ಅದರಿಂದ ನಮ್ಮಪ್ಪನ ಸಾಲ ತೀರಿಸಿದರೆ ನಮ್ಮಪ್ಪ ಸಂತೋಷಪಡುತ್ತಾರೆ. ನಂತರ ನಮ್ಮ ವಿವಾಹವನ್ನು ಅವರೇ ಮಾಡುತ್ತಾರೆ. ನಿನಗೆ ಹಣ ಕೇಳಿದರೆ ಏನೂ ಪ್ರಯೋಜನವಾಗಲಿಲ್ಲ, ನಿಮ್ಮಪ್ಪನಿಂದ ಹಣ ಕೊಡಿಸಲೇ ಇಲ್ಲ, ನಮ್ಮಪ್ಪ ನಮ್ಮಣ್ಣ ಇಬ್ಬರೂ ಸಾಲ ತೀರಿಸಲಾಗದೆ ನನ್ನನ್ನೇ ಹಣವನ್ನು ಅರೇಂಜ್ ಮಾಡಲು ಕೇಳುತ್ತಿದ್ದಾರೆ. ಪ್ಲೀಸ್ ಆಶಾ ನನಗೆ ಈಗ ಒಂದು ಕೋಟಿ ರೂಪಾಯಿಗಳನ್ನು ನೀಡಲು ಅರೇಂಜ್ ಮಾಡು ಇದು ನನ್ಮ ರಿಕ್ವೆಸ್ಟ್ ಎಂದು ತಿಳಿದುಕೋ ಎಂದು ವಿಕ್ರಮ್ ಹೇಳಿದಾಗ
ವಿಕ್ರಮ್ ಪ್ಲೀಸ್ ನನ್ನ ಪರಿಸ್ಥಿತಿಯನ್ನು ನೀನು ಅರ್ಥಮಾಡಿಕೋ, ನಮ್ಮಪ್ಪ ಹಣ ಕೊಡುವುದು ಇರಲಿ, ನಿನ್ನನ್ನು ಮದುವೆಯಾಗಲೇಬೇಡವೆಂದು ಹೇಳುತ್ತಿದ್ದಾರೆ, ಈಗೇನು ಮಾಡಲೆಂದು ಆಶಾ ಪ್ರಶ್ನಿಸಿದಾಗ
ನೀನು ನಿಮ್ಮಪ್ಪನನ್ನು ಸರಿಯಾಗಿ ಕೇಳಿಲ್ಲ ಅದಕ್ಕೆ ನಿನಗೆ ಹಣ ನೀಡಿಲ್ಲವೆಂದು ವಿಕ್ರಮ್ ಹೇಳಲು
ಇಲ್ಲಾ ವಿಕ್ರಮ್ ನಮ್ಮ ಮದುವೆಯನ್ನು ವೆರಿ ವೆರಿ ಸಿಂಪಲ್ ಆಗಿ ಮಾಡು, ಆ ಹಣವನ್ನು ನನಗೆ ಕೊಡು ಎಂದು ಕೇಳಿದರೂ ಕೊಡಲಿಲ್ಲ. ನಾನು ಆಸ್ತಿಯಲ್ಲೇ ಪಾಲು ಕೇಳಿದೆ ಅದಕ್ಕೂ ಒಪ್ಪುತ್ತಿಲ್ಲ ನಾನೇನು ಮಾಡಲಿ ಹೇಳೆಂದು ಆಶಾ ಪ್ರಶ್ನಿಸಲು
ಹಾಗಾದರೆ ನೀನು ನನಗೆ ಹಣ ಕೊಡುವುದಿಲ್ಲವೆಂದಾಯ್ತು ಎಂಬ ವಿಕ್ರಮ್ ಮಾತಿಗೆ
ಬೇರೆ ಕಡೆ ಎಲ್ಲಾದರೂ ಸಾಲ ಮಾಡಿ ಹೊಂದಿಸು ವಿಕ್ರಮ್ ಮದುವೆಯಾದ ಮೇಲೆ ನಮ್ಮಪ್ಪನಿಂದ ಕೊಡಿಸುತ್ತೇವೆಂದು ಆಶ ಹೇಳಲು
ಆಯ್ತು ಬಿಡು ಆಶಾ ನೋಡೋಣವೆಂದು ಹೇಳಿ ವಿಕ್ರಮ್ ಫೋನ್ ಕಟ್ ಮಾಡಿ, ನಮ್ಮಪ್ಪನ ಸಾಲ ತೀರುವವರೆಗೂ ನಾನು ಮದುವೆಯಾಗುವಂತಿಲ್ಲ. ಮದುವೆಯಾಗುವವರೆಗೂ ಆಶಾ ಹಣ ನೀಡುವಂತಿಲ್ಲವಾಗಿದೆ ಈಗೇನು ಮಾಡುವುದೆಂದು ವಿಕ್ರಮ್ ಚಿಂತೆಗೊಳಗಾಗುತ್ತಾನೆ.
ರಾತ್ರಿ ಹನ್ನೊಂದು ಗಂಟೆ ಸಮಯದಲ್ಲಿ ವಿಕ್ರಮ್ ತಂದೆಯು ವಿಕ್ರಮ್ ಹಾಗೂ ಅವರ ಅಣ್ಣನನ್ನು ಕರೆದಾಗ
ಅಣ್ಣ ತಮ್ಮಂದಿರು ಇಬ್ಬರೂ ಅವರಪ್ಪನ ರೂಮಿಗೆ ಹೋಗಿ ವಿಚಾರನೇನೆಂದು ಕೇಳಲು
ಬನ್ನಿ ಕುಳಿತುಕೊಳ್ಳಿ ನಿಮ್ಮ ಬಳಿ ಮುಖ್ಯವಾದ ವಿಚಾರ ಮಾತನಾಡಬೇಕು ಎಂದು ಹೇಳಿ ಒಂದು ನಿಮಿಷ ಮೌನವಾದಾಗ
ಏನಪ್ಪಾ ಮುಖ್ಯವಾದ ವಿಷಯ. ನೀವು ಹೇಳಿದರೆ ತಾನೇ ನಮಗೆ ಗೊತ್ತಾಗುವುದೆಂದು ದೊಡ್ಜ ಮಗನ ಮಾತಿಗೆ
ವಿಕ್ರಮ್ ಮನಸ್ಸಿನಲ್ಲಿ ತನ್ನ ಬಗ್ಗೆ ಪೋಲೀಸ್ ಇನ್ಸ್‌ಪೆಕ್ಟರ್ ಹೇಳಿದ ಮಾತನ್ನೇನಾದರೂ ಕೇಳುತ್ತಾರಾ ಎಂದುಕೊಂಡು ಭಯಭೀತ ನಾಗಿರುತ್ತಾನೆ.
ಒಂದು ನಿಮಿಷದ ನಂತರ ವಿಕ್ರಮ್ ತಂದೆಯೇ ಮಾತನಾಡಿ, ನೋಡ್ರಪ್ಪಾ ಈಗ ಈ ಮನೆಯನ್ನು ಉಳಿಸಿಕೊಳ್ಳುವುದು ಬಿಡುವುದು ನಿಮಗೆ ಸೇರಿದ್ದು ಎಂದ ತಕ್ಷಣ
ದೊಡ್ಡ ಮಗ ಆತಂಕಗೊಂಡು ಈ ಮನೆಗೆ ಏನಾಗಿದೆಯಪ್ಪಾ ಎಂದು ಪ್ರಶ್ನಿಸಿದಾಗ
ಈ ಮನೆಯನ್ನು ಬ್ಯಾಂಕ್ ಗೆ ಅಡವಿಟ್ಟು ಸಾಲ ಪಡೆದು ಬಿಸಿನೆಸ್ ನಡೆಸುತ್ತಿರುವುದು ನಿಮಗೇ ತಿಳಿದಿದೆ ಎಂಬ ಅವರಪ್ಪನ ಮಾತಿಗೆ
ಹೌದಪ್ಪಾ ಈಗ ಏನಾಯ್ತು? ಸಾಲದ ಕಂತು ಸರಿಯಾಗಿ ಕಟ್ಟುತ್ತಿರುವೆಯಲ್ಲವೇ ಎಂದು ವಿಕ್ರಮ್ ಪ್ರಶ್ನಿಸಿದಾಗ
ವಿಕ್ರಮ್ ತಂದೆ ವಿಷಾದದ ನಗೆ ಬೀರುತ್ತಾ, ಆ ರೀತಿ ಇದ್ದಿದ್ದರೆ ನಾನೇಕೆ ಚಿಂತಿಸುತ್ತಿದ್ದೆ ವಿಕ್ರಮ್? ನೀನು ನಮ್ಮ ಬಿಸಿನೆಸ್ ಕಡೆ ತಲೆ ಹಾಕಿಯೂ ಮಲಗುವುದಿಲ್ಲ, ನಮ್ಮ ಕಷ್ಟ ನಿನಗೆ ಹೇಗೆ ಅರ್ಥವಾಗಬೇಕೆಂದು ಅವನಪ್ಪನು ಹೇಳಿದಾಗ
ಸಾರೀ ಕಣಪ್ಪಾ ಸ್ವಲ್ಪ ದಿವಸ ನೀವೇ ನೋಡಿಕೊಳ್ಳುತ್ತಾ ಇರಿ, ನಂತರ ನಿಮ್ಮ ಜೊತೆ ಸೇರಿಕೊಳ್ಳುತ್ತೇನೆಂಬ ವಿಕ್ರಮ್ ಮಾತಿಗೆ
ಅಲ್ಲಿಯವರೆಗೂ ನಮ್ಮ ಬಿಸಿನೆಸ್ ಇರಬೇಕಲ್ಲಪ್ಪಾ? ಎಂದು ನಿರಾಶಾಭಾವದಿಂದ ಅವರಪ್ಪ ಹೇಳಿದಾಗ
ಅಪ್ಪಾ, ಅಂತಾದ್ದು ಏನಾಗಿದೆ? ದಯವಿಟ್ಟು ತಿಳಿಸಪ್ಪಾ ಸಾಧ್ಯವಾದರೆ ನಾವಿಬ್ಬರೂ ಅದನ್ನು ಉಳಿಸಲು ಪ್ರಯತ್ನಿಸುತ್ತೇವೆಂದು ದೊಡ್ಡ ಮಗ ಹೇಳಲು
ಈಗ ಈ ಮನೆಯೇ ಹರಾಜಿಗೆ ಬಂದಿದೆ, ಇದನ್ನು ಹೇಗೆ ಉಳಿಸಿಕೊಳ್ಳುತ್ತೀರೆಂಬ ಅವರಪ್ಪನ ಪ್ರಶ್ನೆಗೆ
ಅಪ್ಪಾ ಜಯನಗರದಲ್ಲಿರುವ ಎರಡು ದೊಡ್ಡ ಸೈಟ್ ಗಳನ್ನು ಮಾರಾಟ ಮಾಡಿ ಈ ಮನೆ ಉಳಿಸಿಕೊಳ್ಳೋಣ ಅದಕ್ಕೆ ನಾವಿಬ್ಬರೂ ಒಪ್ಪುತ್ತೇವೆಂದು ದೊಡ್ಡ ಮಗ ಹೇಳುತ್ತಾನೆ
ಈ ಮನೆ ಜೊತೆಗೆ ಎರಡು ಸೈಟುಗಳನ್ನೂ ಸಹ ಬ್ಯಾಂಕಿನವರು ಹೈಪಾತಿಕೇಟೆಡ್ ಮಾಡಿಕೊಂಡು ಎರಡು ಕೋಟಿ ರೂಪಾಯಿ ಸಾಲ ಕೊಟ್ಟಿದ್ದಾರೆ, ಪ್ರೀಮಿಯಂ ಕಟ್ಟದೇ ಇರುವುದಕ್ಕೆ ಬ್ಯಾಂಕಿನವರು ಈ ಮನೆ ಜಯನಗರದ ಎರಡು ದೊಡ್ಡ ಸೈಟ್ ಎಲ್ಲವನ್ನೂ ಹರಾಜಿಗಿಟ್ಟಿದ್ದಾರೆ ಇಲ್ಲಿ ನೋಡಿರೆಂದು ತಮ್ಮ ಕೈಲಿದ್ದ ಪೇಪರನ್ನು ಇಬ್ಬರಿಗೂ ತೋರಿಸಿದಾಗ
ಇಬ್ಬರು ಮಕ್ಕಳು ಕಾತರದಿಂದ ಪೇಪರ್ ನೋಡಲು ಪುರುಷೋತ್ತಮ್ ರವರು ನಮ್ಮ ಬ್ಯಾಂಕಿನಿಂದ ಸಾಲ ಪಡೆದು ಅಸಲು ಬಡ್ಡಿಯನ್ನು ಕಟ್ಚಲು ವಿಫಲರಾಗಿರುವುದರಿಂದ ಮೂರೂ ಸ್ವತ್ತುಗಳನ್ನು ದಿನಾಂಕ ,,,,,,,ರಂದು ಹರಾಜಿಗೆ ಇಡಲಾಗಿದೆ, ಆಸಕ್ತರು ಬಿಡ್ ಮಾಡಿ ಸ್ವತ್ತುಗಳನ್ನು ಪಡೆಯಬಹುದೆಂದು ಪೇಪರಿನಲ್ಲಿ ಜಾಹೀರಾತು ಬಂದಿರುವುದನ್ನು ನೋಡಿದ ಇಬ್ಬರು ಮಕ್ಕಳು ಅಪ್ಪಾ ಈಗೇನು ಮಾಡೋದಪ್ಪಾ? ಎರಡು ಸೈಟು ಹೋದರೆ ಹೋಗಲಿ, ಈ ಮನೆಯನ್ನಾದರೂ ಉಳಿಸಿಕೊಳ್ಳಲು ಪ್ರಯತ್ನಿಸಬೇಕಪ್ಪಾ ಎಂಬ ಮಗನ ಮಾತಿಗೆ
ಮನೆ ಉಳಿಸಿಕೊಳ್ಳಲು ಒಂದು ಕೋಟಿ ರೂಪಾಯಿ ಬೇಕು
ಇದರ ಜೊತೆಗೆ ಎಂಬತ್ತು ಲಕ್ಷದ ಚೆಕ್ ಬೌನ್ಸ್ ಕೂಡಾ ಆಗಿದೆ, ಅವನೇನಾದರೂ ಕೋರ್ಟಿಗೆ ಹೋದರೆ ಇನ್ನೂ ಕಷ್ಟವಾಗುತ್ತದೆಂದು ವಿಕ್ರಮ್ ಅಪ್ಪ ನುಡಿದಾಗ
ಅಪ್ಪಾ ಅಮ್ಮನು ಅವರಣ್ಣನ ನಿರುದ್ಧ ಹಾಕಿದ್ದ ಪಾರ್ಟಿಷನ್ ಕೇಸ್ ಏನಾಯ್ತಪ್ಪಾ? ಅದರಲ್ಲಿ ನಮ್ಮಮ್ಮನಿಗೆ ಭಾಗ ಬಂದರೆ ಈ ಸಾಲ ಕಟ್ಟಲು ಏನೂ ಕಷ್ಟವಾಗುವುದಿಲ್ಲ ಅಲ್ಲವೇನಪ್ಪಾ ಎಂಬ ವಿಕ್ರಮ್ ಮಾತಿಗೆ,
ಕೇಸ್ ಯಾವಾಗ ಮುಗಿಯುತ್ತದೋ ಯಾರಿಗೆ ಗೊತ್ತಪ್ಪಾ ಅಲ್ಲಿಯವರೆಗೆ ಬ್ಯಾಂಕ್ ನವರಾಗಲೀ ಚೆಕ್ ಕೊಟ್ಟಿದ್ದೇನಲ್ಲಾ ಅವರಾಗಲೀ ಸುಮ್ಮನಿರುತ್ತಾರಾ? ಎಂದು ಅವರಪ್ಪನು ಪ್ರಶ್ನಿಸಿದಾಗ
ಹಾಗಾದರೆ ಏನಾದರೂ ಮಾಡಿ ಈ ಮನೆಯನ್ನು ಉಳಿಸಿಕೊಳ್ಳಲೇ ಬೇಕೆಂದು ಅಣ್ಣ ತಮ್ಮಂದಿರು ಇಬ್ಬರೂ ಹೇಳುತ್ತಾರೆ
ಮುಂದುವರೆಯುತ್ತದೆ
ಡಾ. ಎನ್.ಮುರಳೀಧರ್
ವಕೀಲರು ಹಾಗೂ ಸಾಹಿತಿ
ನೆಲಮಮಗಲ
-
ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯವಾದ ಅಂಶವೇನೆಂದರೆ
ಮಕ್ಕಳಿಗೆ ಮನೆಯ ಜವಾಬ್ದಾರಿ ಏನೆಂದು ತಿಳಿಸುವುದು ಬಹಳ ಮುಖ್ಯ. ನಮ್ಮ ಮಕ್ಕಳಿಗೆ ಕಷ್ಟ ತಿಳಿಯಬಾರದೆಂದು ಅವರಿಗೆ ಮನೆಯ ವ್ಯವಹಾರದ ಬಗ್ಗೆ ಏನೂ ಹೇಳದೆ, ಕೇಳಿದಷ್ಟು ಹಣ ಕೊಟ್ಟು ಜಾಲಿಯಾಗಿರಿ ಎಂದು ಹೇಳುವುದು ಬಹಳ ತಪ್ಪು. ಮಕ್ಕಳು ಅಪ್ಪನ ಜೊತೆಗೂ ಕಷ್ಟಪಡಬೇಕೆಂದು ಹೇಳುವುದಲ್ಲಾ, ಹೆತ್ತವರು ಯಾವ ರೀತಿ ಕಷ್ಟ ಪಡುತ್ತಿದ್ದಾರೆಂದು ಮಕ್ಕಳು ತಿಳಿದರೆ ಸಾಕು,, ಅವರೂ ಸಹ ಬಿಂದಾಸ್ ಜೀವನ ನಡೆಸದೆ ಒಬ್ಬ ಜವಾಬ್ದಾರಿಯುತ ಕುಟುಂಬದ ಸದಸ್ಯನಾಗಬಹುದು. ಮಕ್ಕಳಿಗೆ ಹೆತ್ತವರ ವ್ಯವಹಾರದ ಬಗ್ಗೆ ತಿಳಿಸದೆ ಏಕ್ ದಂ ಕಷ್ಟಕ್ಕೆ ಸಿಲುಕಿದರೆ ಮಕ್ಕಳು ಮಾನಸಿಕವಾಗಿ ಕುಗ್ಗಬಹುದು. ಇದರ ಜೊತೆಗೆ ಮಕ್ಕಳೇ ಹೆತ್ತವರೊಂದಿಗೆ ವ್ಯವಹಾರದಲ್ಲಿ ಸಹಕರಿಸಿದರೆ ಮನೆಯ ವ್ಯವಹಾರವು ಚೆನ್ನಾಗಿ ನಡೆಯಬಹುದು. ಮೊದಲಿನಿಂದಲೂ ಮುಖ್ಯವಾದ ವಿಚಾರವನ್ನು ಏನೂ ಹೇಳದೆ ವಿಕ್ರಮ್ ತಂದೆಯ ರೀತಿ ಕಷ್ಟಕ್ಕೆ ಸಿಲುಕಿದರೆ, ನಮಗೆ ನಿಮ್ಮ ವ್ಯವಹಾರದ ಬಗ್ಗೆ ಏನಾದರೂ ಹೇಳಿದ್ದೆಯಾ ನೀನೇ ಪರಿಹರಿಸೆಂದು ಮಕ್ಕಳು ಅಪ್ಪನ ಹೆಗಲಿಗೆ ಜವಾಬ್ದಾರಿಯನ್ನು ಹೊರೆಸಿ ತಾವು ನುಣುಚಿಕೊಳ್ಳಬಹುದು. ಜವಾಬ್ದಾರಿಯಿಂದ ನುಣುಚಿಕೊಂಡರೂ ಅಪ್ಪನು ಕಷ್ಚಕ್ಕೆ ಸಿಲುಕಿದಾಗ ಎಲ್ಲರೂ ಅಪ್ಪನ ಜೊತೆಗೆ ಕಷ್ಟ ಅನುಭವಿಸಬೇಕಾಗುತ್ತದೆ. ಅದರಿಂದ ಜಾರಿಕೊಳ್ಳಲು ಸಾಧ್ಯವೇ ಇಲ್ಲ