ನರಕ..!
ಬದುಕಲು ಸಾಧ್ಯವಾಗದ ಸ್ಥಿತಿಯನ್ನು ಹೇಳಲು ಬಳಕೆಯಾಗುವ ಶಬ್ದವೆಂದರೆ ‘ ನರಕ ‘ , ‘ ನರಕ ಅನುಭವಿಸಿಬಿಟ್ಟೆ ‘ , ‘ ಅದೊಂದು ಭಯಾನಕ ನರಕ ‘ ಹೀಗೆಲ್ಲ ದೈನಿಕದಲ್ಲೂ ಬರಹದಲ್ಲೂ ಹೇಳುವುದು ಸಾಮಾನ್ಯ . ನರಕ ಎಲ್ಲರಿಗೂ ಗೊತ್ತಿರುವುದೇ . ಅದು ಜೀವಿ ಸತ್ತ ಮೇಲೆ ಅನುಭವಿಸಬೇಕಾದದ್ದು . ಬದುಕಿದಾಗ ಮಾಡುವ ಕರ್ಮಗಳು ಸಾವಿನ ಅನಂತರ ಫಲಿಸುವಾಗ ಸ್ವರ್ಗ , ನರಕ , ಪುನರ್ಜನ್ಮ , ಪುನರ್ಜನ್ಯದಲ್ಲಿ ಏಳು ಬೀಳು ಇವೆಲ್ಲ ಉಂಟಾಗುವಂತಹದ್ದು . ಇಂದೇನು ಮಾಡುತ್ತೇವೋ ಅದು ನಾಳೆ ಪರಿಣಾಮಕಾರಿಯಾಗುತ್ತದೆ . ಇಂದು ನೆಟ್ಟ ಗಿಡ ಮುಂದೆ ಫಲ ಕೊಡುತ್ತದೆ . ಯಾವ ಬೀಜ ಬಿತ್ತುವವೋ ಆಯಾ ಫಲ ಲಭ್ಯ , ಹಣ್ಣು ನೆಟ್ಟರೆ ಹಣ್ಣು , ಮುಳ್ಳು ನೆಟ್ಟರೆ ಮುಳ್ಳು ಈ ಕರ್ಮದ ಸಿದ್ಧಾಂತ ನಮಗೆ ನರಕದ ಅನುಭವವನ್ನು ಹೇಳುತ್ತದೆ .
ನರಕ ಶಬ್ದಕ್ಕೆ ಕ್ಷೇಶವನ್ನು ಉಂಟುಮಾಡುವುದು ಎಂದು ಅರ್ಥ . ತಪ್ಪು ಮಾಡಿ ಸತ್ತಾಗ ಆ ಲೋಕದಲ್ಲಿ ಜೀವಿ ಕಷ್ಟಪಡಬೇಕಾಗುವುದರಿಂದ ಅದು ನರಕ . ಪಾಪಿಗಳಿಗೆ ಶಿಕ್ಷೆ ಕೊಡುವ ಸ್ಥಳವೇ ನರಕ . ಇಂತಹ ಶಿಕ್ಷಾಸ್ಥಾನಗಳು ಕೋಟಿ ಕೋಟಿ ಇವೆಯಾದರೂ ನಲವತ್ತು ನರಕಗಳು ಪ್ರಮುಖ .
ಅವೀಚಿ , ಕೃಮಿಭಕ್ಷ್ಯ , ವೈತರಣೀ , ಶಾಲ್ಮಲಿ , ರೌರವ , ಮಹಾರೌರವ , ಉಚ್ಛಾಸ , ಯುಗ್ಧಪರ್ವತ , ನಿರುಚ್ಚಾಸ , ಪೂತಿಮಾಂಸ , ಕ್ರಕಚ್ಛೇದ , ಪೂತಿಪೂರ್ಣ , ತಾಮಿಸ್ರ , ಅಂಧತಾಮಿಸ್ಸ , ತಪತುಂಡ , ತೀಕ್ಷಾಸಿ , ನಪುಂಸಕ , ಲೌಹತಪ್ತ , ಕುಂಭೀಪಾಕ , ಕಾಲಸೂತ್ರ , ಪಂಕ , ಮಹಾಪಂಕ , ಸೂಚೀಮುಖ , ಸೂಕರಮುಖ , ಅಪತ್ರ , ಅಂಧಕೂಪ , ತಪ್ತಸೂರ್ಮಿ , ವಜ್ರಕಂಟಕ , ಪೂಯೋದ , ಪ್ರಾಣರೋಧ , ವಿಶಸನ , ಲಾಲಾಭಕ್ಷ , ಸಾರಮೇಯಾದನ , ಅಯಃಪಾನ , ಕಾರಕರ್ದಮ , ಶೂಲಪೋತ , ದಂದಕ , ತಪ್ತಲಾಕ್ಷಾಜಲ , ಮೇದಸ್ತಂಭ , ಶೀತೋಷ್ಣ ಇವು ಪ್ರಮುಖ ನರಕಗಳು .
ಈ ಶಬ್ದಗಳೇ ಆ ನರಕ ಹೇಗಿದೆ ಎನ್ನುವುದನ್ನು ಹೇಳುತ್ತವೆ . ನಮ್ಮ ಪುರಾಣ ಮತ್ತು ಇತಿಹಾಸಗಳು ಯಾವ ತಪ್ಪಿಗೆ ಯಾವ ನರಕ ಎಂದು ವಿಸ್ತಾರವಾಗಿ ವಿವರಿಸುತ್ತವೆ . ಈ ಪಟ್ಟಿಯಲ್ಲಿ ಜೀವಿ ಮಾಡಬಹುದಾದ ಎಲ್ಲ ತಪ್ಪುಗಳೂ ಇವೆ . ಜೊತೆಗೆ ಏನ ಮಾಡಿದರೆ ಈ ನರಕಗಳಿಂದ ತಪ್ಪಿಸಿಕೊಳ್ಳಬಹುದು ಎನ್ನುವುದನ್ನೂ ಇವು ತಿಳಿಸುತ್ತವೆ . ಹಾಗೆಯೇ ತಪ್ಪು ಮಾಡಿ ನರಕಕ್ಕೆ ಹೋದವರ ಕಥೆಗಳನ್ನೂ , ಒಳಿತು ಮಾಡಿ ಸ್ವರ್ಗ ಪಡೆದವರ ಚರಿತೆಯನ್ನೂ , ಮಾಡಿದ ತಪ್ಪನ್ನು ಸರಿಪಡಿಸಿಕೊಂಡು ನರಕ ತಪ್ಪಿಸಿಕೊಂಡವರ ಪರಿಶುದ್ಧಿಯ ಘಟನೆಗಳನ್ನೂ ಪುರಾಣೇತಿಹಾಸಗಳು ತಿಳಿಸುತ್ತವೆ .
ಜೀವಿ ಒಳಿತು ಮಾಡುತ್ತಾ ಬದುಕಬೇಕು ಎನ್ನುವುದು ಆಶಯ . ಒಳಿತೆಂದರೆ ಸಹಜೀವಿಗಳ ಹಿತ , ಸಮಷ್ಟಿ ಸೃಷ್ಟಿಯ ಹಿತ . ಇದರಲ್ಲಿ ತನ್ನ ಹಿತವಿದೆ ಎನ್ನುವುದು ಸನಾತನ ವಿಶ್ವಾಸ , ನಿನಗೆ ಹಿತ ಬೇಕೆಂದರೆ , ನಿನ್ನ ಬದುಕು ಆನಂದಮಯವಾಗಬೇಕು ಎಂದರೆ ಜೀವಹಿತದ ಕಾರ್ಯ ಮಾಡು ಎನ್ನುವುದು ನಮ್ಮ ಪೂರ್ವಜರ ಸೂಚನೆ , ಹಾಗೆ ಮಾಡದೆ , ಕ್ಷಣಿಕವಾದ ಮಿಷಿಗಾಗಿ ತಪ್ಪು ಮಾಡಿದರೆ ಅದು ಒಂದು ದೋಷವಾಗಿ ಜೀವಕ್ಕೆ ಅಂಟಿಕೊಳ್ಳುತ್ತದೆ . ಅದನ್ನು ಕಳೆದುಕೊಳ್ಳಬೇಕೆಂದರೆ ಅದರ ಫಲವನ್ನು ಅನುಭವಿಸಬೇಕು . ಅಥವಾ ನರಕದ ಶಿಕ್ಷೆಗೆ ಒಳಗಾಗಬೇಕು . ಇಲ್ಲಿ ಇರುವುದು ಅಪರಾಧಿಗೆ ಶಿಕ್ಷೆಯ ಭಯ ಹುಟ್ಟಿಸುವುದಲ್ಲ . ಬದಲಿಗೆ ಅವನನ್ನು ಶುದ್ಧಗೊಳಿಸುವುದು . ಹಾಗಾಗಿ ನರಕ ಭಯಂಕರವಾದರೂ ಅದರ ಉದ್ದೇಶದಲ್ಲಿ ಇರುವುದು ಜೀವಹಿತವೇ .
ಭಗವದ್ಗೀತೆ/ಗರುಡ ಪುರಾಣ..
ವಿಶ್ವಾಸ್. ಡಿ .ಗೌಡ
ಸಕಲೇಶಪುರ
9743636831