ಅಭಿಲಾಷೆ : ಸಂಚಿಕೆ -13

ಹಿಂದಿನ ಸಂಚಿಕೆಯಲ್ಲಿ

ಮೈಸೂರಿನಿಂದ ಯಾರೋ ಫೋನ್ ಮಾಡಿ,‌ ಟಿವಿಯಲ್ಲಿ ತೋರಿಸಿದ್ದ ಹುಡುಗನಂತೆ ಇರುವವರು ಇಲ್ಲಿದ್ದಾರೆಂದು ಹೇಳಿದ ನಂತರ ಫೋನ್ ಸ್ವಿಚ್‌ ಆಫ್ ಮಾಡಿರುತ್ತಾರೆ

ಕಥೆಯನ್ನು ಮುಂದುವರೆಸುತ್ತಾ

ಕೋದಂಡರಾಮ್ ರವರು ಮೈಸೂರಿನವರಿಗೆ ಪುನಃ ಫೋನ್ ಮಾಡಿದಾಗ‌ ಸ್ವಿಚ್‌ ಆಫ್ ಬಂದಿದ್ದರಿಂದ ಸ್ವಲ್ಪ ಹೊತ್ತಿನ ನಂತರ ಫೋನ್ ಮಾಡೋಣವೆಂದು ಸುಮ್ಮನಾಗಿರುತ್ತಾರೆ.

ರಾತ್ರಿ ಆಶಾ ಹಾಗೂ ಅವಳಪ್ಪ ಊಟ ಮಾಡುತ್ತಿರುವಾಗ
ಕೋದಂಡರಾಮ್ ರವರು ಮಾತನಾಡಿ, ಮೈಸೂರಿನವರು ಫೋನ್ ಮಾಡಿದ‌ ವಿಚಾರವನ್ನು ಹೇಳಿದ ತಕ್ಷಣ
ಅಯ್ಯೋ ಹೌದೇನಪ್ಪಾ ,,,, ಎಂದು ಉತ್ಸುಕಗೊಂಡು ಅಪ್ಪಾ ಮೊದಲು ಅವರಿಗೆ ಫೋನ್ ಮಾಡಿ ಕೇಳಪ್ಪ ಎಂದಾಗ
ಎಷ್ಟು ಸಲ ಫೋನ್ ಮಾಡಿದ್ರೂ ಅವರ‌ ಫೋನ್ ಸ್ವಿಚ್ ಆಫ್ ಎಂದು ಬರ್ತಾ ಇದೆ. ಪುನಃ ವಿಚಾರಿಸಲು ಆಗಲಿಲ್ಲವೆಂದು ಅವಳ ಅಪ್ಪ ಹೇಳಿದಾಗ
ಇಲ್ಲಿ ಕೊಡಪ್ಪ ನಾನೇ ಫೋನ್ ಮಾಡುತ್ತೇನೆಂದು ಆಶಾ ಕೇಳಲು
ಪೂರ್ತಿ ಊಟ ಮಾಡಿ ಫೋನ್ ಮಾಡಮ್ಮಾ ಎಂದು ಅವಳಮ್ಮನ ಮಾತಿಗೆ
ಅಮ್ಮಾ ಊಟ ಎಲ್ಲೂ ಹೋಗುವುದಿಲ್ಲ ಆಮೇಲೆ ಮಾಡುತ್ತೀನಿ ಮೊದಲು ಅಣ್ಣನ ಬಗ್ಗೆ ತಿಳಿದುಕೊಳ್ಳಬೇಕೆಂದು ಹೇಳಿ ಅರ್ಧದಲ್ಲಿಯೇ ಊಟ ಬಿಟ್ಟು ಅಪ್ಪನಿಂದ ಫೋನ್ ಪಡೆದು ಅದರಲ್ಲಿದ್ದ ಮೈಸೂರಿನವರ ಫೋನ್ ನಂಬರನ್ನು ತನ್ನ ಮೊಬೈಲ್ ಗೆ ಟ್ರಾನ್ಸ್ ಫರ್ ಮಾಡಿಕೊಂಡು ತಕ್ಷಣ ಫೋನ್ ಮಾಡುತ್ತಾಳೆ.
ಆಗಲೂ ಸ್ವಿಚ್ ಆಫ್ ಬರುತ್ತಿದ್ದರಿಂದ ನಿರಾಸೆಗೊಂಡು ಏನಪ್ಪಾ ನೀನು ಅವರು ಫೋನ್ ಮಾಡಿದ ತಕ್ಷಣ ಅವರ ವಿಳಾಸ ತೆಗೆದುಕೊಳ್ಳಬಾರದಿತ್ತಾ ಎಂದು ಕೋಪದಿಂದ ಪ್ರಶ್ನಿಸಿದಾಗ
ಕ್ಷಮಿಸು ಮಗೂ ಹಾಳಾದ್ದು ತಲೆ ಓಡಾಲಿಲ್ಲಮ್ಮಾ ,,,,, ಏನು ಮಾಡೋದು ನನ್ನ ಬುದ್ದಿಗೆ ನಾನೇ ಏನಾದರೂ ತೆಗೆದುಕೊಂಡು ಹೊಡೆದುಕೊಳ್ಳಬೇಕೆಂದು ತುಂಬಾ ಪಶ್ಚಾತ್ತಾಪ ಪಡುತ್ತಾರೆ.
ಆಶಾಳಿಗೆ ಅಪ್ಪನ ಮೇಲಿನ ಕೋಪ ಕಡಿಮೆಯಾಗಿರುವುದಿಲ್ಲ.
ಏನಪ್ಪಾ ಎಲ್ಲರಿಗೂ ಬುದ್ದಿವಾದ‌ ಹೇಳುತ್ತೀರಾ ನೀನೇ ಬುದ್ದಿ ಉಪಯೋಗಿಸದೆ ಸಿಕ್ಕ ಅವಕಾಶ‌ ಬಿಟ್ಟೆಯಲ್ಲಾ ಎಂದು ಪ್ರಲಾಪಿಸಿದಾಗ
ಎಷ್ಟು ದಿನ ಸ್ವಿಚ್‌ ಆಫ್ ಮಾಡಿಕೊಂಡಿರುತ್ತಾರೆ. ನಾಳೆ ಫೋನ್ ಮಾಡೋಣ ಆಗ ರಿಂಗ್ ಆದರೆ ರಿಸೀವ್ ಮಾಡೇ ಮಾಡುತ್ತಾರೆಂದು ಸಮಾಧಾನ ಮಾಡಿದರೂ ಏನ್ ರಿಸೀವ್ ಮಾಡುತ್ತಾರೋ ಏನೋ ಎಂದುಕೊಂಡು ಆಶಾ ತನ್ನ ರೂಮಿಗೆ ಹೋಗುತ್ತಾಳೆ.
ಮಾರನೇ ದಿನ ಬೆಳಗಾದ ತಕ್ಷಣ ಆಶಾ ಮೈಸೂರಿನ ನಂಬರಿಗೆ ಫೋನ್ ಮಾಡಿದಾಗ ಎರಡು ಸಲ‌ ರಿಂಗಣಿಸಿ ಪುನಃ ನೀವು ಪೋನ್ ಮಾಡಿದ ಗ್ರಾಹಕರು ಬ್ಯುಸಿಯಾಗಿದ್ಗಾರೆಂದು ಸಂದೇಶ‌ ಬಂದಾಗ
ಇವರು ಬೇಕಂತಲೇ ರಿಸೀವ್ ಮಾಡುತ್ತಿಲ್ಲ ಎಂದುಕೊಂಡು ತನ್ನಮ್ಮನ ಮೊಬೈಲ್ ತೆಗೆದುಕೊಂಡು ಪುನಃ ಅದರಿಂದ ಫೋನ್ ಮಾಡಿದಾಗ ಸ್ವಿಚ್ ಆಫ್ ಬರುತ್ತದೆ.
ಛೇ ಎಂತಹವರು ಇವರು? ಸತ್ಯ ಇದ್ದರೆ ಹೇಳಬೇಕು ಈ ರೀತಿ ಫೋನ್ ಸ್ವಿಚ್ ಆಫ್ ಮಾಡಿಕೊಂಡರೆ ನಮಗೆ ಹೇಗೆ ತಿಳಿಯುತ್ತದೆಂದುಕೊಂಡು, ಕೆಲಸಕ್ಕೆ ಹೋಗಲು ರಡಿಯಾಗಿ ‌ಅಮ್ಮಾ ತಿಂಡಿ ಕೊಡಮ್ಮಾ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದಾಗ
ಆ ವೇಳೆಗೆ ವಾಕಿಂಗ್ ಮುಗಿಸಿಕೊಂಡು ಬಂದ ಅವಳಪ್ಪನು ಏನಮ್ಮಾ ಮೈಸೂರಿನವರಿಗೆ ಫೋನ್ ಮಾಡ್ದಾ‌ ಎಂದು ಕೇಳಲು
ಮಾಡ್ದೆ ಕಣಪ್ಪಾ ಎರಡು ಸಲ ರಿಂಗ್ ಆಗಿ ಆಮೇಲೆ ಬ್ಯುಸಿ ಬಂತು ನಂತರ ಅಮ್ಮನ ಮೊಬೈಲಿನಿಂದ ಫೋನ್ ಮಾಡಿದ್ದಕ್ಕೆ ಸ್ವಿಚ್ ಆಫ್ ಬಂತು ಎಂದು ಆಶಾ ವಿಷಾಧಿಸುತ್ತಾ ಹೇಳಲು
ಅಲ್ಲಿ ಏನೋ ಸಮಸ್ಯೆಯಾಗಿದೆ. ಬಹುಷಃ ಅವರು ಹೇಳಿದ ಹುಡುಗ ನಿಮ್ಮಣ್ಣನೇ ಇರಬಹುದು ಇದರಲ್ಲಿ ಅನುಮಾನವೇ ಇಲ್ಲಮ್ಮಾ ಅವರು ನಿಜ ಹೇಳಲು ಏಕೋ ಹಿಂಜರಿಯುತ್ತಿದ್ದಾರೆ ಬಹುಷಃ ಯಾರೂ ಬಿಡುತ್ತಿಲ್ಲ‌ ಎನಿಸುತ್ತದೆಂದು ಕೋದಂಡರಾಮ್ ಹೇಳಲು
ಹೌದಪ್ಪಾ ನನಗೂ ಹಾಗೇ ಎನ್ನಿಸುತ್ತದೆಂದು ಆಶಾ ಹೇಳುತ್ತಾಳೆ
ಈಗೇನು ಮಾಡೋದು? ಅವರ ಮನೆ ಹೇಗೆ ಹುಡುಕುವುದೆಂದು ಕೋದಂಡರಾಮ್ ರವರು ಕೇಳಿದಾಗ
ಅಪ್ಪಾ ನಿನ್ನ ಪ್ರಿಯ ಶಿಷ್ಯರು ಇನ್ಸ್ ಪೆಕ್ಟರ್ ಇದ್ದಾರಲ್ಲಾ ಅವರಿಗೆ ಹೇಳಿದರೆ, ಅವರು ಫೋನ್ ಮಾಡಿದವರ ಮನೆಯ ಲೊಕೇಶನ್ ಸರ್ಚ್‌ ಮಾಡಿಸುತ್ತಾರೆ ಎಂದಾಗ
ಅಂದ ಹಾಗೆ ಹೌದಲ್ಲವೇನಮ್ಮಾ? ಕೈಯ್ಳಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಅತ್ತಹಾಗಾಯಿತು ಎನ್ನುವ ವೇಳೆಗೆ
ಆಶಾಳ ಅಮ್ಮನು ತಿಂಡಿಯ ತಟ್ಟೆ ಇಟ್ಟುಕೊಂಡು ಆಶಾಳಿಗೆ ಕೊಡುತ್ತಾ, ನಿಮ್ಮ ಮಗಳು ತುಪ್ಪದ‌ ದ್ವೇಷಿ ತುಪ್ಪ ತಿಂದದ್ದು ನೀವು ಎಂದಾದರೂ ನೋಡಿದ್ದೀರಾ ಎಂದು ಅವರ‌ ಗಂಡನನ್ನು ಪ್ರಶ್ನಿಸಲು
ತಿಂಡಿಗೆ ತುಪ್ಪ ಹಾಕೆಂದು ನಿಮ್ಮಮ್ಮನಿಗೆ ಯಾರು ಹೇಳಿದ್ದು, ಕಿವುಡು ಕಿವುಡು ಎಂದರೆ ತೌಡು ತೌಡು‌ ಎನ್ನುವಂತೆ ನಾವೇನೋ ಮಾತನಾಡುತ್ತಿದ್ದರೆ ಇವಳೇನೋ ಮಾತನಾಡುತ್ತಿದ್ದಾಳೆಂದು ಕೋದಂಡರಾಮ್ ರವರು ಹುಸಿಕೋಪ‌ ತೋರಿದಾಗ
ನನಗೆ ವಿಷಯ ಹೇಳಿದರಲ್ಲವೇ ಗೊತ್ತಾಗುವುದು ಅಪ್ಪ ಮಗಳು ನೀವೇ ಮಾತನಾಡಿಕೊಳ್ಳುತ್ತಿದ್ದರೆ ನನಗೇನು ಅರ್ಥವಾಗುತ್ತದೆಂಬ ಅವಳಮ್ಮನ ಮಾತಿಗೆ
ಅಮ್ಮಾ ಮೈಸೂರಿನವರಿಗೆ ಫೋನ್ ಮಾಡಿದ್ದಕ್ಕೆ ಸ್ವಿಚ್‌ ಆಫ್ ಬಂತು ಅದಕ್ಕೆ ಅಪ್ಪನ ಶಿಷ್ಯರು ಇನ್ಸ್ ಪೆಕ್ಟರ್ ಇದ್ದಾರಲ್ಲಾ ಅವರಿಗೆ ಹೇಳಿದರೆ ಫೋನ್ ರಿಂಗ್ ಆದ ಲೊಕೇಶನ್ ಫೈಂಡ್ ಔಟ್ ಮಾಡುತ್ತಾರೆ ಎಂದು ಹೇಳಿದೆ ಕಣಮ್ಮಾ ಎಂದು ಆಶಾ ಹೇಳಲು
ಮೊದಲು ಈ ವಿಷಯವನ್ನು ನಿಮ್ಮಪ್ಪನಿಗೆ ಹೇಳು ಅವರು ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ನನ್ನ ಮಗುವೆಲ್ಲಿ ಎಂದು ಊರೆಲ್ಲಾ ಹುಡುಕಾಡುವರಂತೆ ಆಡುತ್ತಾರೆ ಎಂದು ಅವಳಮ್ಮ ಹೇಳಲು.
ಓ ಹೋ ಹೋ ಹೋ ನಿನ್ನೆ ಸ್ವಲ್ಪ ಯಾಮಾರಿದ್ದಕ್ಕೆ ಅಮ್ಮ ಮಗಳು ಸೇರಿ ನನಗೇನೂ ತಿಳಿಯುವುದೇ ಇಲ್ಲವೆಂಬಂತೆ ಆಡುತ್ತಿದ್ದೀರಿ ನೋಡುತ್ತಿರಿ ನನ್ನ ಶಿಷ್ಯರು ಇನ್ಚ್‌ ಪೆಕ್ಟರ್ ಗೆ ಹೇಳಿದರೆ ಸೀದಾ ಅವರ ಮನೆಗೆ ಕರೆದುಕೊಂಡು ಹೋಗುತ್ತಾರೆ ಎಂದು ಕೋದಂಡರಾಮ್ ಹೇಳಲು
ಅಪ್ಪಾ ಆದಷ್ಟೂ ಬೇಗ ಇನ್ಲ್ ಪೆಕ್ಟರ್ ಗೆ ಫೋನ್ ಮಾಡಪ್ಪಾ ಅವರು ಮೈಸೂರಿನವರ ಲೊಕೇಶನ್ ಹೇಳಿದರೆ ಹೋಗಿ ಬರೋಣವೆಂದು ಆಶಾ‌ ಹೇಳಲು
ಸ್ಲಲ್ಪ ಇರಮ್ಮಾ ಎನ್ನುತ್ತಾ, ಸೋಫಾ ಮೇಲೆ ಕುಳಿತುಕೊಂಡು ತಮ್ಮ ಮೊಬೈಲಿನಲ್ಲಿ ಇನ್ಸ್ ಪೆಕ್ಟರ್ ನಂಬರ್ ಹುಡುಕಿ ಕಾಲ್‌ ಮಾಡಿದಾಗ
ಆಕಡೆಯಿಂದ ಇನ್ಸ್ ಪೆಕ್ಟರ್ ರವರು ಗುರುಗಳೇ ನಮಸ್ಕಾರ‌ ಎಂದಾಗ
ಕೋದಂಡರಾಮ್ ರವರು ಪ್ರತಿ ನಮಸ್ಕಾರ ‌ಹೇಳಿ ನಿಮ್ಮಿಂದ ಒಂದು ಹೆಲ್ಪ್ ಆಗಬೇಕಿತ್ತೆಂದು ಕೋದಂಡರಾಮ್ ಕೇಳಲು
ಏನು ಹೆಲ್ಪ್ ಆಗಬೇಕು ಹೇಳಿ ಗುರುಗಳೇ,,,,,‌ ಖಂಡಿತ ಹೆಲ್ಪ್ ಮಾಡುತ್ತೇನೆ ಎಂದು ಇನ್ಸ್‌ಪೆಕ್ಟರ್ ಮಾತಿಗೆ
ಕೋದಂಡರಾಮ್ ರವರು ನಡೆದ ಘಟನೆ ಹೇಳಿ ಮೈಸೂರಿನವರ ಮನೆಯ ಲೊಕೇಶನ್ ಕಂಡು ಹಿಡಿಯಲು ಆಗುತ್ತಾ‌ ಎಂದು ಕೇಳಲು
ಗುರುಗಳೇ ಮೈಸೂರಿನವರ ಫೋನ್ ನಂಬರ್ ಕೊಡಿ‌ ಎಂದು ಕೇಳಿ ಕೋದಂಡರಾಮ್ ರವರಿಂದ ನಂಬರ್ ಪಡೆದು ಕರೆ ಮಾಡಿದಾಗ
ಎರಡು ಸಲ ರಿಂಗ್ ಆಗಿ ಬ್ಯುಸಿ ಎಂದು ಬರುತ್ತದೆ. ಪುನಃ ಫೋನ್ ಮಾಡಿದಾಗ ಸ್ವಿಚ್ ಆಫ್ ಬರುತ್ತದೆ
ತಕ್ಷಣ ದೆಫೇದಾರರನ್ನು ಕರೆದು ಮೈಸೂರಿನವರ ಫೋನ್ ನಂಬರ್ ಕೊಟ್ಟು ಇದರ ಲೊಕೇಶನ್ ಪಡೆದು ಮೈಸೂರಿನ ಸ್ಟೇಷನ್ ಗೆ ಫೋನ್ ಮಾಡಿ ವಿಚಾರಿಸಲು ಹೇಳಿ ಎನ್ನುತ್ತಾ ಕೋದಂಡರಾಮ್ ರವರಿಗೆ ಗುರುಗಳೇ‌ ಫೋನ್ ಲೊಕೇಶನ್ ಮಾಡಿಸಿ ನಿಮಗೆ ತಿಳಿಸುತ್ತೇನೆಂದು ಹೇಳಿ ಫೋನ್ ಕಟ್‌ ಮಾಡುತ್ತಾರೆ
ದೆಫೇದಾರರು ಫೋನ್ ನಂಬರ್ ಪಡೆದು ಲೊಕೇಶನ್ ತಿಳಿಯಲು‌‌ ಸಂಬಂಧಪಟ್ಟವರಿಗೆ ಫೋನ್ ಮಾಡಿ ತಿಳಿಸುತ್ತಾರೆ

ಮುಂದುವರೆಯುತ್ತದೆ….

 

ಅಭಿಲಾಷೆ – ಸಂಚಿಕೆ -14

ಹಿಂದಿನ ಸಂಚಿಕೆಯಲ್ಲಿ

ಕೋದಂಡರಾಮ್ ರವರು ಇನ್ಸ್ ಪೆಕ್ಟರ್ ಗೆ ಮೈಸೂರಿನಿಂದ ಕರೆ ಬಂದಿದ್ದ ಪೋನ್ ನಂಬರ್ ನೀಡಿ ಇದರ ಲೊಕೇಶನ್ ತಿಳಿಸುವಂತೆ ಕೋರಿದ್ದು, ಇನ್ಸ್ ಪೆಕ್ಟರ್ ರವರು ದೆಫೇದಾರರನ್ನು ಕರೆದು ವಿಷಯ ತಿಳಿಸಿರುತ್ತಾರೆ

ಕಥೆಯನ್ನು ಮುಂದುವರೆಸುತ್ತಾ

ಇನ್ಸ್ ಪೆಕ್ಟರ್ ರವರು ಹೇಳಿದಂತೆ ದೆಫೇದಾರ್ ರವರು ಮೈಸೂರಿನಿಂದ ಬಂದಿದ್ದ ಫೋನ್ ನಂಬರ್ ಲೊಕೇಶನ್ ತಿಳಿಯಲು ಸಂಬಂಧಪಟ್ಚ ಇಲಾಖೆಗೆ ಬಂದಿರುತ್ತಾರೆ.

ಈ ಕಡೆ ಆಶಾ ವಿಕ್ರಮ್ ಗೆ ಫೋನ್ ಮಾಡಿ ವಿಷಯ‌ ತಿಳಿಸಿದಾಗ
ಓ ಹಾಗಾದರೆ ನಿಮ್ಮಣ್ಣ ಸಿಕ್ಕಬಹುದು ನಂತರ ನಮ್ನ ಮದುವೆ ನಡೆಯುತ್ತದೆಂಬ ವಿಕ್ರಮ್ ಮಾತಿಗೆ
ಈಗ ಅವರು ಮೊಬೈಲ್ ನ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಅವರ ವಿಳಾಸ ತಿಳಿಯುತ್ತಿಲ್ಲ . ಅದಕ್ಕೆ ನಮ್ಮ ತಂದೆ ಅವರ ಶಿಷ್ಯರಾದ ಪೋಲೀಸ್ ಇನ್ಸ್ ಪೆಕ್ಟರ್ ಗೆ ವಿಷಯ ತಿಳಿಸಿ ಫೋನ್ ಮಾಡಿದವರ ಲೊಕೇಶನ್ ತಿಳಿಸುವಂತೆ ಕೇಳಿದ್ದಾರೆ ಎಂದು ಹೇಳಿದಾಗ.
ಇನ್ಸ್ ಪೆಕ್ಟರ್ ರವರು ಲೊಕೇಶನ್ ಫೈಂಡ್ ಔಟ್ ಮಾಡ್ತಾರೆ ಬಿಡು ಈಗ ನಮ್ಮ ಮದುವೆ ವಿಷಯವನ್ನು ನಿಮ್ಮ ತಂದೆಗೆ ಹೇಳಿದ್ಯಾ ಎಂದು ವಿಕ್ರಮ್ ಕೇಳಲು
ನಾನು ನಮ್ಮಣ್ಣ ಸಿಗುವವರೆಗೂ ಮದುವೆಯಾಗುವುದಿಲ್ಲವೆಂದು ಹೇಳಿದ್ದೆ ಆದರೂ ಪ್ರತಿ ಭಾನುವಾರ ಯಾವುದಾದರೂ ಗಂಡಿನ ಕಡೆಯವರು ಬಂದಿರುತ್ತಾರೆ. ಯಾರು ಬಂದರೂ ಈಗಲೇ ಮದುವೆ ಬೇಡವೆಂದಿದ್ದೇನೆಂದು ಆಶಾ ನುಡಿರಲು
ನಿಮ್ಮ ತಂದೆಗೆ ನಮ್ಮ ಪ್ರೀತಿಯ ವಿಷಯ ಹೇಳಿದ್ದರೆ ಬೇರೆ ಯಾರನ್ನೂ ಕರೆಸುತ್ತಿರಲಿಲ್ಲವೆಂದು ವಿಕ್ರಮ್ ಹೇಳಲು
ನನಗೆ ಈ ವಿಷಯ ಹೇಳಲು ಏಕೋ ಮನಸ್ಸು ಹಿಂಜರಿಯುತ್ತಿದೆ ವಿಕ್ರಮ್ .‌ ಅಪ್ಪ ಅಮ್ಮ ಏನನ್ನುತ್ತಾರೋ ಎಂಬ ಭಯ ಕಾಡುತ್ತಿದೆಯೆಂಬ ಆಶಾಳ ಮಾತಿಗೆ
ಇಷ್ಟು ಭಯ ಇರುವವಳು ನನ್ನನ್ನೇಕೆ ಲೌವ್ ಮಾಡಿದೆ ಎಂದು ವಿಕ್ರಮ್ ಪ್ರಶ್ನಿಸಲು
ನೀನೇ ನನ್ನನ್ನು ಲೌವ್‌ ಮಾಡುತ್ತಿದ್ದೇನೆ ಎಂದಿದ್ದಕ್ಕೆ ನೀನು ಒಳ್ಳೆಯ ಹುಡುಗ ನಮ್ಮಣ್ಣನನ್ನು ಹುಡುಕುವುದಕ್ಕೆ ಸಹಾಯ ಮಾಡುತ್ತೀಯಾ ಎಂದು ನಿನ್ನ ಪ್ರೇಮ ಪಾಶದಲ್ಲಿ ಬಿದ್ದೆ ಎನ್ನುತ್ತಾಳೆ ಆಶಾ.
ಹಾಗಾದರೆ ನಿಮ್ಮಪ್ಪನಿಗೆ ಹೆದರಿಕೊಂಡು ಅವರು ಹೇಳಿದವರನ್ನು ಮದುವೆಯಾಗಿಬಿಟ್ಟರೆ ನನ್ನ ಗತಿ ಏನೆಂದು ವಿಕ್ರಮ್ ಆತಂಕದಿಂದ ಹೇಳಲು.
ಹಾಗೇನೂ ಆಗುವುದಿಲ್ಲ ಸಮಯ ನೋಡಿ ನಮ್ಮಪ್ಪನಿಗೆ ನಮ್ಮ ವಿಷಯ ತಿಳಿಸುತ್ತೇನೆ ನೀನು ಧೈರ್ಯವಾಗಿರು ವಿಕ್ರಮ್ ಎಂದು ಆಶಾ ಸಮಾಧಾನ ಪಡಿಸುತ್ತಾಳೆ
ಲವ್ ಮಾಡಿಬಿಟ್ಟರೆ ಅವರನ್ನು ಮದುವೆಯಾಗುವ‌ತನಕ ಧೈರ್ಯವಾಗಿ ಇರುವುದಕ್ಕೆ ಆಗುವುದೇ ಇಲ್ಲವೆಂದು ವಿಕ್ರಮ್ ಹೇಳಲು
ಅಂದರೆ ಲವ್ ಮಾಡುವುದಕ್ಕೆ ಇರುವ ಧೈರ್ಯ ನಂತರ ಹೊರಟು ಹೋಗುತ್ತಾ ಎಂಬ ಆಶಾ ಪ್ರಶ್ನೆಗೆ

ಹಾಗಲ್ಲಾ ಆಶಾ ಡಿಯರ್, ನಾನು ಲವ್ ಮಾಡಿರುವ ಹುಡುಗಿ ಇನ್ನೆಲ್ಲಿ ಕೈ ಕೊಡುತ್ತಾಳೋ ಎಂಬ ಭಯ ಒಂದು ಕಡೆಯಾದರೆ, ಅವಳ ಅಪ್ಪ ಅಮ್ಮ. ಇದಕ್ಕೆ ಒಪ್ಪದೆ ಬೇರೆ ಮದುವೆ ಮಾಡಿಬಿಟ್ಟರೇನು ಗತಿ ಎಂದು ಭಯವಾಗಿರುತ್ತದೆ. ನಿಜ ಅಲ್ಲನಾ ಡಿಯರ್ ಎಂಬ ವಿಕ್ರಮ್ ಪ್ಪಶ್ನೆಗೆ ನೋ ನೋ ನಮ್ಮ ಪ್ರೀತಿ ನಿರ್ಮಲವಾಗಿ ದೃಢವಾಗಿದ್ದರೆ ಯಾರೂ ಏನೂ ಮಾಡುವುದಕ್ಕೆ ಆಗುವುದಿಲ್ಲ. ಖಂಡಿತಾ ಎಲ್ಲರ ಮನಸ್ಸನ್ನು ಗೆದ್ಜು ಮದುವೆಯಾಗಬಹುದು ಎನ್ನುತ್ತಾಳೆ‌ ಆಶಾ
ನಿಜವಾಗಿಯು ನಿನ್ನಂಥವಳನ್ನು ಪಡೆದ ನಾನೇ ಅದೃಷ್ಟವಂತ ಎಂದು ವಿಕ್ರಮ್ ಹೇಳಿದಾಗ
ಸ್ವಲ್ಪ ದಿನ ಸುಮ್ಮನಿರು ನಾನೇ ನಮ್ಮಪ್ಪ ಅಮ್ಮನಿಗೆ ತಿಳಿಸಿ ನಿನ್ನನ್ನು ಮನೆಗೆ ಕರೆಸಿ ನಂತರ ನಿಮ್ಮಪ್ಪ ಅಮ್ಮನ ಜೊತೆ ಮಾತನಾಡಿಸಿ ಮದುವೆ ಫಿಕ್ಸ್ ಮಾಡಿಸುತ್ತೇನೆ ಎಂದು ಆಶಾ ಹೇಳಲು
ಓ ನಮ್ಮ ಮದುವೆಯಾಗಲು ಇಷ್ಟೆಲ್ಲಾ ಫಾರ್ಮಾಲಿಚೀಸ್ ಇದೆಯಾ ? ಎಂದು ವಿಕ್ರಮ್ ಪ್ರಶ್ನಿಸಿದಾಗ
ಹೌದು ವಿಕ್ರಮ್ ಎಲ್ಲರೂ ಸಮ್ಮತಿಸಿ ಸಂತೋಷದಿಂದ ಮದುವೆಯಾದರೆ ನಾಳೆ ಎಲ್ಲರ ಪ್ರೀತಿಯೂ ಇರುತ್ತದೆಯಲ್ಲವೇ ಎಂದು ಆಶಾ ಹೇಳಿ ಈಗ ನನಗೆ ಟೈಮ್ ಆಯ್ತು ನಾಳೆ ಮಾತನಾಡೋಣವೆಂದು ಫೋನ್ ಆಫ್ ಮಾಡುತ್ತಾಳೆ

ಭಾನುವಾರ ಬೆಳಿಗ್ಗೆ ಒಂಬತ್ತು ಗಂಟೆಯಾದರೂ ಆಶಾ ಮಲಗಿರುವಾಗ
ಅವಳಮ್ಮ ರೂಮಿಗೆ ಬಂದು ಆಶಾ ಬೇಗ ಏಳಮ್ಮಾ ಇವತ್ತು ಗಂಡಿನ ಕಡೆಯವರು ಬರುತ್ತಿದ್ದಾರಂತೆ ನಿಮ್ಮಪ್ಪ ಹೇಳಿದರು ಎಂದು ಆಶಾಳ ಅಮ್ಮನ ಮಾತಿಗೆ
ಆಶಾಳಿಗೆ ಕೋಪ ಬಂದು ಇದೇನಮ್ಮಾ ಪ್ರತಿ ಭಾನುವಾರವೂ ಇದೊಂದು ಕಾರ್ಯಕ್ರಮ ಇಟ್ಚುಕೊಂಡಿರುತ್ತೀರೀ? ಭಾನುವಾರವೆಂದು ಸ್ವಲ್ಪ ಹೊತ್ತು ಮಲಗಲು ಬಿಡುವುದಿಲ್ಲವೆಂದು ಆಶಾ ರೇಗಾಡಿದಾಗ
ನಿನ್ನ ಮದುವೆ ಗೊತ್ತಾಗುವವರೆಗೂ ಹೀಗೆ ಇರುತ್ತದೆ. ನೀನು ಮದುವೆಗೆ ಒಪ್ಪಿದ ತಕ್ಷಣ ನಿನಗೂ ನೆಮ್ಮದಿ ನಮಗೂ ಗಂಡು ಹುಡುಕುವುದು ತಪ್ಪುತ್ತದೆಂದು ಅವಳಮ್ಮ ನುಡಿಯಲು
ನೋಡಮ್ಮಾ ನನಗೆ ಈ ರೀತಿ ಕಿರಿಕ್ ಮಾಡುವುದು ಸರಿಯಾಗಿರುವುದಿಲ್ಲ‌. ನೀವು ಹುಡುಗನ ಕರೆಸುವ ಮೊದಲು ನನಗೆ ಅವನ ಫೋಟೋ ತೋರಿಸಿ ಒಪ್ಪಿಗೆಯಾ ಎಂದು ಕೇಳಿ ನಂತರ ಮುಂದುವರೆಯಿರಿ ಎಂದು ಆಶಾ ಹೇಳಲು
ಎಷ್ಟು ಫೋಟೋ ತೋರಿಸಿದರೂ ನೀನು ಯಾವುದನ್ನೂ ಒಪ್ಪುತ್ತಿಲ್ಲ ನಾವೇನು ಮಾಡೋಣ? ನಿನ್ನ ಎದುರಿಗೆ ನೇಣು ಹಾರಿಕೊಳ್ಳೋಣ ಆಗಲಾದರೂ ಮದುವೆಗೆ ಒಪ್ಪುತ್ತೀಯಾ? ಹೇಳೆಂದು ಖಾರವಾಗಿ ಅವಳಮ್ಮ ಕೇಳಿದಾಗ
ಅಮ್ಮಾ ಕೆಟ್ಚ‌ ಮಾತು ಆಡಬೇಡಮ್ಮಾ ನಾನೇನು ಅಂತಹ ಕಟುಕಳಾ ಹೇಳು ಎಂದು ಆಶಾ ಕೇಳಲು
ಈಗ ನಿನ್ನ ಹಠ ಬಿಟ್ಟು ನಾವು ತೋರಿಸಿದ ಹುಡುಗನನ್ನು ಮದುವೆಯಾಗಿ ಸುಖವಾಗಿರಮ್ಮಾ, ಎಂಬ ಅವಳಮ್ಮನ ಮಾತಿಗೆ
ಹೋಗಮ್ಮಾ ಇದೊಂದು ಮಾತು ಮಾತ್ರ ಆಡುತ್ತೀರೇಂದು ಕೋಪದಿಂದ ಎದ್ದಾಗ
ಆಶಾ ಬೆಳಿಗ್ಗೆ ಕೋಪದಿಂದ ಏಳಬಾರದಮ್ಮಾ? ಬೆಳಿಗ್ಗೆ ಶಾಂತ ಮನಸ್ಸಿನಿಂದ ಎದ್ದರೆ ದಿನವೆಲ್ಲವೂ ಶಾಂತವಾಗಿರುತ್ತದೆ. ಇಲ್ಲದಿದ್ದರೆ ದಿನನೆಲ್ಲಾ ಕಿರಿಕಿರಿಯಾಗುತ್ತಿರುತ್ತದೆ ಕಣಮ್ಮಾ ಎಂದು ಅವಳಮ್ಮ ಹೇಳಲು
ಆಯ್ತು ಎಂದುಕೊಂಡು ಹಾಸಿಗೆಯಿಂದ ಎದ್ದು ಫ್ರೆಶ್ ಅಪ್ ಆಗಿ ಬಂದಾಗ
ಅವಳಪ್ಪನಿಗೂ ಮಗಳು ಬೇಗ ಎದ್ದು ರಡಿಯಾಗಿದ್ದಾಳೆಂದು ಸಮಾಧಾನದಿಂದ ಏನೂ ಮಾತನಾಡದೆ ಸುಮ್ಮನಿರುತ್ತಾರೆ
ಅವಳಮ್ಮ ಕಾಫಿ ಕೊಡುತ್ತಾ ಬೇಗ ಸ್ನಾನ ಮಾಡಿ ರಡಿಯಾಗಿ ಬಾ ಗಂಡಿನ ಕಡೆಯವರು ಬೇಗನೇ ಬರುತ್ತಾರಂತೆ ಎಂದು ಅವಳಮ್ಮನ ಮಾತಿಗೆೆ,
ಆಶಾ ಏನೂ ಮಾತನಾಡದೆ ಮೌನವಾಗಿ ‌ಹೋಗಿ ರಡಿಯಾಗಿ ಬಂದು, ಹಸಿವಾಗುತ್ತಿದೆಯೆಂದು ತಿಂಡಿ ತಿಂದು ಕೈ ತೊಳೆದುಕೊಂಡು ಬರುವ ವೇಳೆಗೆ‌
ಕರೆಗಂಟೆ ಶಬ್ದವಾದ ತಕ್ಷಣ ಕೋದಂಡರಾಮ್ ರವರು ಓ ಗಂಡಿನ ಕಡೆಯವರು ಬಂದಿರಬೇಕು ಎನ್ನುತ್ತಾ ಸೋಫಾ ಮೇಲಿಂದ ಎದ್ದು ಬಾಗಿಲು ತೆಗೆದಾಗ
ಗಂಡಿನ ಜೊತೆಗೆ ತಂದೆ ತಾಯಿ, ಕೋದಂಡರಾಮ್ ರವರ ಸ್ನೇಹಿತರು ನಿಂತಿರುವುದನ್ನು ನೋಡಿ ಮುಗುಳ್ನಗುತ್ತಾ ಬನ್ನಿ ಒಳಗೆ ಎಂದು ಕರೆದು ಸೋಫಾ ಮೇಲೆ ಕೂಡಿಸಿ ನಂತರ ಉಭಯ ಕುಶಲೋಪರಿ ಮಾತನಾಡಿದ ಮೇಲೆ ಹುಡುಗ ಏನು‌ ಕೆಲಸ ಮಾಡುತ್ತಿದ್ದಾರೆಂದು ಹೇಳಲೇ ಇಲ್ಲವೆಂದಾಗ
ನಿನಗೆ ಸರ್ಪ್ರೈಸ್‌ ಕೊಡಲು ಹೇಳಿಲ್ಲಪ್ಪಾ ಎಂದು ಅವರ ಸ್ನೇಹಿತರ ಮಾತಿಗೆ
ಏನಪ್ಪಾ ಅಂತಹ ಸರ್ಪ್ರೈಸ್ ಕೆಲಸವೆಂದು ಕೋದಂಡರಾಮ್ ಕೇಳಲು.
ನನ್ನ ಮಗ ಇದ್ದಿದ್ದರೆ ಸೈನ್ಯಕ್ಕೆ ಸೇರಿಸುತ್ತಿದ್ದೆ ಮಗಳು ಇರುವುದರಿಂದ ಅಕಸ್ಮಾತ್ ಸೈನ್ಯದಲ್ಲಿರುವವರು ಸಿಕ್ಕಿದರೆ ಬಹಳ‌ ಸಂತೋಷದಿಂದ ಅಳಿಯನನ್ನಾಗಿ ಮಾಡಿಕೊಳ್ಳಬೇಕೆಂಬ ಹಂಬಲ ಇದೆಯೆಂದು ಹೇಳುತ್ತಿದ್ದೆಯಲ್ಲಾ ನೋಡು ನಿನ್ನ ಇಚ್ಛೆಯಂತೆ ಸೈನ್ಯದಲ್ಲಿರುವ ಹುಡುಗನನ್ನು ಕರೆದುಕೊಂಡು ಬಂದಿದ್ದೇನೆಂದ‌ ತಕ್ಷಣ
ಕೋದಂಡರಾಮ್ ರವರು ಕುಳಿತಿದ್ದವರು ಮೇಲೆದ್ದು, ಬಂದಿದ್ದ ಹುಡುಗನಿಗೆ ಸೆಲ್ಯೂಟ್ ಹೊಡೆದು ನಂತರ ಎರಡೂ ಕೈಗಳಿಂದ ಕೈ ಮುಗಿದು, ನೀವು ನಮ್ಮ ದೇಶ‌ರಕ್ಷಿಸುತ್ತಿರುವುದು ಬಹಳ ಹೆಮ್ಮೆಯ ವಿಷಯವೆಂದಾಗ
ಕೋದಂಡರಾಮ್ ರವರ ವರ್ತನೆಯಿಂದ ಎಲ್ಲರಿಗೂ ಸಂತೋಷವಾಗಿ, ಅವರ ಸ್ನೇಹಿತರು ಮಾತನಾಡಿ, ನೀನು ಶಿಕ್ಷಕ ಆಗಿದ್ದಕ್ಕೂ ಸಾರ್ಥಕವಾಯಿತಯ್ಯಾ , ಸೈನ್ಯದಲ್ಲಿರುವವರಿಗೆ ನೀನು ಕೊಡುವ ಗೌರವವನ್ನು ಬೇರೆಯವರು ನಿನ್ನನ್ನು ನೋಡಿ ಕಲಿಯಬೇಕು ಎನ್ನುತ್ತಾರೆ.
ನಾಲ್ಕು ಜನ ಹುಡುಗರಿಗೆ ಪಾಠ‌ ಹೇಳಿಕೊಡುವ ಶಿಕ್ಷಕ‌ ನಾನು ಇತರರಿಗೆ ಮಾದರಿಯಾಗಿರಬೇಕು. ನಮ್ಮ ದೇಶ‌ದ‌ ಬಗ್ಗೆ ದೇಶಭಕ್ತಿ ಉಕ್ಕಿ ಬರುವಂತೆ ಮಕ್ಕಳಿಗೆ ಉಪದೇಶಿಸಬೇಕು. ನಮ್ಮ ದೇಶ‌‌‌ ರಕ್ಷಿಸುವ ಯೋಧರು ಎಲ್ಲೇ ಸಿಗಲಿ ಅವರಿಗೆ ಸೆಲ್ಯೂಟ್ ಹೊಡೆದು ಗೌರವ ಸೂಚಿಸುವಂತೆ ಮಕ್ಕಳಿಗೆ ಹೇಳಬೇಕು. ಇವರೇ ಕಣಪ್ಪಾ ನಮ್ಮ ದೇಶದ ನಿಜವಾದ ರಿಯಲ್ ಹೀರೋಗಳು ಇವರ ಜೊತೆಗೆ ನಮಗೆ ಅನ್ನ ಕೊಡುವ ರೈತರನ್ನು ದಿನವೂ ನೆನಸಿಕೊಳ್ಳಬೇಕು. ಇವರಿಲ್ಲದೆ ದೇಶ‌ ಸುರಕ್ಷಿತವಾಗಿರುವುದಿಲ್ಲ. ರೈತರಿಲ್ಲದೆ ತಿನ್ನಲು ಅನ್ನ ಸಿಗುವುದಿಲ್ಲ ಇವರುಗಳು ನಮ್ಮ ದೇಶದ‌ ಎರಡು ಕಣ್ಣುಗಳೆಂದು ಉತ್ಸಾಹಭರಿತರಾಗಿ ಮಾತನಾಡಿದಾಗ
ನೀನು ದೇಶದ‌ ಬಗ್ಗೆ ಭಾಷಣ ಮಾಡಲು ನಿಂತರೆ ಕೇಳುಗರಿಗೆ ರೋಮಾಂಚನವಾಗಿ, ಮೈ ಮೇಲಿನ ಕೂದಲುಗಳು ಎದ್ದು ನಿಲ್ಲುತ್ತವೆ ಕಣಪ್ಪಾ, ನೀನು ಶಿಕ್ಷಕನಾಗಿದ್ದಕ್ಕೂ ಸಾರ್ಥಕವಾಯ್ತು ಎಂದು ಅವರ ಸ್ನೇಹಿತರು ಹೇಳಿದಾಗ
ಶಿಕ್ಷಕ ಎಂದರೆ ಮಾರ್ಗದರ್ಶಕ ಎಲ್ಲರೂ ತಮ್ಮ ಜೀವನದಲ್ಲಿ ಸತ್ಯ ಮಾರ್ಗದಲ್ಲಿ ನಡೆಯುವಂತೆ ಸನ್ಮಾರ್ಗ ತೋರುವವನೇ ಗುರು ಇಲ್ಲದಿದ್ದರೆ ಶಿಕ್ಷಕನಾದರೂ ಪ್ರಯೋಜನವಿಲ್ಲ ಅಲ್ಲವೇ ? ನನಗಂತೂ ಸುಳ್ಳು ಹೇಳುವವರನ್ನು ಕಂಡರೆ ಆಗುವುದಿಲ್ಲ‌ಕಣಪ್ಪಾ ಎಂಬ ಕೋದಂಡರಾಮ್ ರವರ ಮಾತಿಗೆ ಅವರ ಸ್ನೇಹಿತರು ತಲೆದೂಗಿ, ಮಾತಿನಲ್ಲಿ ನಿನ್ನ ಮೀರಿಸುವವರು ಯಾರು? ಈಗ ಮುಂದಿನ ಕಾರ್ಯಕ್ರಮ ನಿನ್ನ ಮಗಳನ್ನು ಕರೆಸು ಇಬ್ಬರು ಒಪ್ಪಿದರೆ ಮುಂದಿನ ಮಾತುಕತೆ ನಡೆಸೋಣವೆಂದು ಹೇಳಿದ‌ ತಕ್ಷಣ
ಕೋದಂಡರಾಮ್ ರವರು ಮಗಳನ್ನು ಕರೆದುಕೊಂಡು ಬರುವಂತೆ ತಮ್ಮ ಪತ್ನಿಗೆ ಹೇಳುತ್ತಾರೆ

ಮುಂದುವರೆಯುತ್ತದೆ

ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯವಾದ ಅಂಶವೆನೆಂದರೆ

ತಮಗೆ ವಿಷಯ ತಿಳಿದಿದೆಯೆಂದು ಬೇರೆಯವರಿಗೆ ಹೇಳಿ, ನಂತರ ವಿಷಯ ಹೇಳದೆ ತಪ್ಪಿಸಿಕೊಳ್ಳಲು ಪ್ರಯತ್ನಿಸಬಾರದು. ಇದರಿಂದ ಗೊತ್ತಿರುವ ವಿಷಯ ಹೇಳುತ್ತೇನೆ ಎಂದವರಿಗೆ ಮಾನಸಿಕವಾಗಿ ತೊಳಲಾಡುವಂತಾಗುತ್ತದೆ.
ಹೆತ್ತವರು ಮಕ್ಕಳ ಮದುವೆಯನ್ನು ತಾವಿರುವಾಗಲೇ ಮಾಡಿ ಕಣ್ತುಂಬ ನೋಡಬೇಕೆಂಬ ಆಶಯ ಹೊಂದಿರುತ್ತಾರೆ. ಹೆತ್ತವರಿಗೆ ಸತ್ಯ ಹೇಳದೆ ಸತಾಯಿಸಿ ಎಷ್ಟೋ ದಿನ ನೋವುಂಟು ಮಾಡಿದ ನಂತರ ಹೇಳಿದರೆ ತಾಳ್ಮೆಗೆಟ್ಟು ನಿಷ್ಠೂರ ಮೂಡಬಹುದು.

 

ಅಭಿಲಾಷೆ : ಸಂಚಿಕೆ -15

ಹಿಂದಿನ ಸಂಚಿಕೆಯಲ್ಲಿ

ಆಶಾಳಿಗೆ ಬಂದಿದ್ದ ಗಂಡು ಸೈನ್ಯದಲ್ಲಿದ್ದಾರೆಂದು ತಿಳಿದು ಕೋದಂಡರಾಮ್ ಗೆ ಬಹಳ‌ ಸಂತೋಷವಾಗಿದ್ದು, ತನ್ನ ಮಗಳನ್ನು ಕರೆದುಕೊಂಡು ಬರಲು ತನ್ನ ಪತ್ನಿಗೆ ಹೇಳುತ್ತಾರೆ

ಕಥೆಯನ್ನು ಮುಂದುವರೆಸುತ್ತಾ

ತನ್ನ ಪತಿ ಹೇಳಿದ್ದಕ್ಕೆ, ಆಶಾಳ ಅಮ್ಮನು ತನ್ನ ಜೊತೆಗೆ‌ ಮಗಳನ್ನು ಕರೆದುಕೊಂಡು ಬಂದು ಸೋಫಾ ಮೇಲೆ ಕುಳಿತುಕೊಂಡಾಗ
ಗಂಡು ಹೆಣ್ಣು ಮುಖಾ ಮುಖಿಯಾದ ನಂತರ ಕೋದಂಡರಾಮ್ ರವರ ಸ್ನೇಹಿತರು ಇಬ್ಬರೂ ಏನಾದರೂ ಮಾತಾಡುವುದಿದ್ದರೆ ಮಾತನಾಡಬಹುದೆಂದು ಹೇಳಲು
ಮಾತನಾಡುವುದು ಏನೂ ಇಲ್ಲವೆಂದು ಆಶ ಹೇಳಿದಾಗ
ಕೋದಂಡರಾಮ್ ರವರು ನಮ್ಮ ಅಭಿಪ್ರಾಯವನ್ನು ‌ಸಂಜೆ ತಿಳಿಸುತ್ತೇವೆಂದು ಹೇಳಿದ ನಂತರ
ಗಂಡಿನ ಕಡೆಯವರು ಸಹ ನಾವಿನ್ನು ಬರುತ್ತೇವೆಂದು ಹೇಳಿ ಹೋಗುತ್ತಾರೆ
ಆಶ ತನ್ನ ರೂಮಿನಲ್ಲಿ ಕುಳಿತುಕೊಂಡು ಬಂದಿದ್ದ ಗಂಡಿನ ಬಗ್ಗೆ ಯೋಚಿಸುತ್ತಾ, ಬಂದಿದ್ದವರು ತುಂಬಾ ಹ್ಯಾಂಡ್ ಸಮ್ ಆಗಿದ್ದಾರೆ. ಇವರು ಯಾವ ಹೀರೋಗು ಕಡಿಮೆ ಇಲ್ಲ.ಇವರ ಮುಂದೆ ವಿಕ್ರಮ್ ಏನೂ ಇಲ್ಲವೆಂದು ಮನಸ್ಸು ಸ್ವಲ್ಪ ಚಂಚಲವಾದ ತಕ್ಷಣ ಎಚ್ಚೆತ್ತುಕೊಂಡ ಆಶಾ ವಿಕ್ರಮ್ ಗೆ ನನ್ನ ಮನಸ್ಸು ಕೊಟ್ಟಾಗಿದೆ, ಅವನಿಗೆ ಮೋಸ‌ ಮಾಡಲು ಆಗುವುದಿಲ್ಲ. ವಿಕ್ರಮ್ ಗೆ ಮೋಸ‌ ಮಾಡಿದರೆ ನನ್ನ ಪವಿತ್ರವಾದ ಪ್ರೀತಿಯೇ ಪ್ರಶ್ನಾರ್ಥಕ ಚಿಹ್ನೆಯಾಗುತ್ತದೆ. ನನ್ನ ಪ್ರೀತಿ ದೃಢವಾಗಿದೆ ವಿಕ್ರಮ್ ಗೆ ಮೀಸಲು ಎಂದುಕೊಂಡು ಕುಳಿತಿರುವಾಗ,
ಅವಳಮ್ಮ ಒಳಗೆ ಬಂದು, ಆಶಾ ಈ ಹುಡುಗನನ್ನಾದರೂ ಒಪ್ಪಿಕೊಂಡು, ಗಂಡು ಹುಡುಕುವ ನಮ್ಮ ಕೆಲಸಕ್ಕೆ ಪುಲ್‌‌ಸ್ಟಾಪ್‌ ಹಾಕಮ್ಮಾ ಎಂದಾಗ
ಅಮ್ಮಾ ಗಂಡು ಹುಡುಕೆಂದು ನಾನೇನೂ ಹೇಳಿಲ್ಲ, ನೀವೇ ಗಂಡುಗಳನ್ನು ಹುಡುಕೀ ಹುಡುಕೀ ಕರೆದು ತಂದು ಪ್ರದರ್ಶನದ ಗೊಂಬೆಯಂತೆ ನನ್ನನ್ನು ಕೂಡಿಸುತ್ತಿದ್ದೀರಿ ಅಷ್ಟೇ ಎಂಬ ಆಶಾಳ ಮಾತಿಗೆ,
ಅವಳಮ್ಮ ನೀನು ಯಾವುದಾದರೂ ಗಂಡನ್ನು ಒಪ್ಪುವವರೆಗೂ ಇದೇ ಕೆಲಸ ಮಾಡುತ್ತೇವೆ ಎಂದಾಗ
ನೀವು ಎಷ್ಟು ಗಂಡನ್ನು ಕರೆದುಕೊಂಡು ಬಂದರೂ ನಾನು ಇದೇರೀತಿ ರಿಜೆಕ್ಟ್‌ ಮಾಡುತ್ತೇನೆ ಎನ್ನುತ್ತಾಳೆ ಆಶಾ
ಆಶಾ ಆ ರೀತಿ ಹೇಳಬೇಡ ನಿನ್ನ ಧೋರಣೆ ಬಿಟ್ಟು, ಇಂದು ಬಂದಿದ್ದ ಹುಡುಗನನ್ನು ಒಪ್ಪಿಕೋ ಎಂದು ಅವಳಮ್ಮ ನುಡಿಯಲು
ಅಮ್ಮ ದಯವಿಟ್ಟು ಬಲವಂತ ಮಾಡಬೇಡಮ್ಮಾ ಎಂಬ ಆಶಾ ಮಾತಿಗೆ
ಯಾಕೆ ಆಶಾ? ನಿನಗೆ ಸೈನ್ಯದಲ್ಲಿರುವ ಗಂಡು ಇಷ್ಟವಾಗಲಿಲ್ಲವಾ? ಎಂದಾಗ
ಹಾಗಲ್ಲಮ್ಮಾ ನನಗೂ ಅಪ್ಪನಂತೆ ಸೈನ್ಯದಲ್ಲಿರುವವರನ್ನು ಕಂಡರೆ ಇಷ್ಟವೇ ಆದರೆ,
ಆದರೇನು ಪುನಃ ಕೊಂಕು ತೆಗೆಯುತ್ತಿದ್ದೀಯಲ್ಲಾ? ನಿನಗೆ ಇಷ್ಟವಾದರೆ ಒಪ್ಪಿಕೊಳ್ಳಮ್ಮಾ, ನಿಮ್ಮ ತಂದೆಗೂ ಸಂತೋಷವಾಗುತ್ತದೆ ಎಂದು ಅವಳಮ್ಮನು ಮಗಳಿಗೆ ಹೇಳಿದಾಗ
ನನಗೆ ಸ್ವಲ್ಪ ಟೈಂ ಕೊಡಮ್ಮಾ, ಹೇಳುತ್ತೇನೆ ಎನ್ನಲು
ನೋಡು ಇದುವರೆಗೂ ಟೈಮ್ ಕೊಟ್ಟಿದ್ದಾಗಿದೆ. ಇನ್ನು ಟೈಂ ಕೊಡಲು ಆಗುವುದಿಲ್ಲ. ನೀನು ಈ ಗಂಡನ್ನು ಒಪ್ಪಲೇಬೇಕು, ನಮಗಂತೂ ಗಂಡು ಹುಡುಕೀ ಹುಡುಕೀ ಸಾಕಾಗಿ ಹೋಗಿದೆ ಎಂದು ಅವಳಮ್ಮ ಹೇಳಲು
ಅಮ್ಮಾ ಈ ರೀತಿ ನನಗೆ ಬಲವಂತ ಮಾಘಸ್ನಾನ ಮಾಡಿಸಬೇಡ. ನನಗೆ ಇಷ್ಟ‌ ಆದರೆ ನಾನೇ ಹೇಳುತ್ತೇನೆ ಎಂದು ಆಶಾ‌ ಸಿಡುಕಿನಿಂದ ನುಡಿಯಲು
ಆಶಾಳ ಮಾತಿನಿಂದ ಅವಳಮ್ಮನಿಗೂ ತಾಳ್ಮೆಗೆಡುತ್ತದೆ
ನೋಡು ಆಶಾ,,,, ನಿಮ್ಮಪ್ಪ ಅಮ್ಮನಿಗೆ ಈ ವಿಷಯದಲ್ಲಿ ನೀನಂತೂ ತುಂಬಾ ಸತಾಯಿಸುತ್ತಾ‌ ಇದ್ದೀಯಾ, ನಮಗೂ ಒಂದು ಮಿತಿ ಎನ್ನುವುದು ಇರುತ್ತದೆ, ಅದು ಮೀರಿದರೆ ಪರಿಣಾಮವೇ ಬೇರೆಯಾಗುತ್ತದೆ ಎಂದು ಅವಳಮ್ಮ ಸ್ವಲ್ಪ ಏರುಧ್ವನಿಯಲ್ಲಿ ಹೇಳಿದಾಗ
ಹೋಗಮ್ಮಾ ನಿನಗೆ ಮಗಳ ಬಗ್ಗೆ ಸ್ಲಲ್ಪವೂ ಕಾಳಜಿಯಿಲ್ಲ ಸುಮ್ಮನೆ ಮದುವೆ ಮಾಡಿಕೋ,,, ಮದುವೆ ಮಾಡಿಕೋ,,,, ಎಂದು ಬಲವಂತ ಮಾಡುತ್ತೀಯಾ ಎಂದು ಆಶಾ ಹೇಳಲು
ಇರುವ ಒಬ್ಬ ಮಗಳ ಮೇಲೆ ನಮಗೆ ಕಾಳಜಿ ಯಿಲ್ಲವೆಂದು ಯಾವ‌ ಬಾಯಲ್ಲಿ ಹೇಳುತ್ತಿದ್ದೀಯೇ? ಹೋಗಲೀ ಬೇರೆ ಯಾರಾದರೂ ನಿನ್ನ ಮನಸ್ಸಿನಲ್ಲಿದ್ದಾರಾ ಅದೂ ಹೇಳಮ್ಮಾ , ಯಾರನ್ನಾ‌ದರೂ ಲೌವ್ ಮಾಡುತ್ತಿದ್ದೀಯಾ ಅದನ್ನಾದರೂ ಹೇಳಮ್ಮಾ , ನೀನು ಹೇಳಿದರೆ ತಾನೇ‌ ನಮಗೆ ತಿಳಿಯುವುದೆಂದು ಅವಳಮ್ಮ ನುಡಿಯಲು.
ಅಮ್ಮಾ ಈಗ ನೀನು ನನ್ನ ಟ್ರಾಕಿಗೆ ಬರುತ್ತಿದ್ದೀಯಾ ಎಂದು ಆಶಾ ಹೇಳಿದ ತಕ್ಷಣ
ಏನೇ ನಿನ್ನ ಮಾತು? ಹಾಗಾದರೆ ಯಾರನ್ನೋ ನೀನೇ ನೋಡಿಕೊಂಡುಬಿಟ್ಚಿದ್ದೀಯಾ ಎಂದಾಯ್ತು ಎಂದು ಅವಳಮ್ಮ ಆತಂಕದಿಂದ ಕೇಳಲು
ಆಶಾ ಹೌದಮ್ಮಾ ಎನ್ನುತ್ತಾಳೆ
ಯಾರೇ ಅವನು? ನಮಗೇಕೆ ಮೊದಲೇ ಹೇಳಲಿಲ್ಲ? ಮೊದಲೇ ಹೇಳಿದ್ದರೆ ಗಂಡು ಹುಡುಕುವ ಕಷ್ಟವೇ ಇರುತ್ತಿರಲಿಲ್ಲವೆಂಬ ಅವಳಮ್ಮನ ಮಾತಿಗೆ
ಆಶಾ ನೀವೂ ಕೇಳಲಿಲ್ಲ ನಾನೂ ಹೇಳಲಿಲ್ಲ ಎನ್ನುತ್ತಾಳೆ
ನಿಮ್ಮಪ್ಪ ಬಹಳ ಸ್ಟ್ರಿಕ್ಟ್ ಎಂದು ನಿನಗೇ ಗೊತ್ತಿದೆ, ಯಾರು ಯಾರನ್ನೋ, ಬೀದೀಲಿ ಹೋಗುವವರನ್ನು ಲೌವ್ ಮಾಡುತ್ತಿದ್ದೇನೆಂದು ಹೇಳಿ ನಮ್ಮನ್ನು ನಿಷ್ಠೂರಕ್ಕೆ ಗುರಿ ಮಾಡಬೇಡ ತಿಳೀತಾ ಎಂದು ಅವಳಮ್ಮ ಹೇಳಲು
ಅಮ್ಮ ಅವರು ಬೇರೆ ಯಾರೂ ಅಲ್ಲಮ್ಮಾ ನನ್ನ ಕಾಲೇಜಿನಲ್ಲಿ ಓದಿದವರೆಂದು ಆಶಾ ನುಡಿಯಲು
ಓ ಹೋ ಅಲ್ಲಿಂದಲೇ ಶುರುವಾಗಿತ್ತಾ ನಿಮ್ಮ ಪ್ರೀತಿ ಎಂದು ಅವಳಮ್ಮನ ಮಾತಿಗೆ
ಇಲ್ಲಮ್ಮಾ ಅಣ್ಣನನ್ನು ಹುಡುಕಲು ಹೋದಾಗಿನಿಂದ ಅಷ್ಟೇ ಕಣಮ್ಮಾ , ಅವರೂ ಕೂಡಾ ಅಣ್ಣನನ್ನು ಹುಡುಕಲು ಸಹಾಯ ಮಾಡುತ್ತಿದ್ದಾರೆಂದು ಆಶಾ ಹೇಳಲು
ನೋಡಮ್ಮಾ ನೀನುಂಟೂ ನಿನ್ನ ಅಪ್ಪ ಉಂಟು ಏನಾದರೂ ಮಾಡಿಕೊಳ್ಳಿ ಎಂಬ ಅವಳಮ್ಮನ ಮಾತಿಗೆ
ಅಮ್ಮಾ ,,,ಅಮ್ಮಾ ,,,, ನೀನಿಲ್ಲದಿದ್ದರೆ ಈ ಕೆಲಸವಾಗುವುದಿಲ್ಲವಮ್ಮಾ ಪ್ಲೀಸ್ ಹೆಲ್ಪ್ ಮಾಡಮ್ಮಾ ಎಂದು ದೈನ್ಯತೆಯಿಂದ ಆಶಾ ಕೇಳಿದಾಗ
ನೋಡು ನಾನು ಈ‌ ವಿಷಯವನ್ನು ನಿಮ್ಮಪ್ಪನಿಗೆ ಹೇಳುತ್ತೇನೆ ಅವರು ಒಪ್ಪಿದರೆ ನನಗೂ ಒಪ್ಪಿಗೆ ಕಣಮ್ಮಾ ಎಂದು ಅವಳಮ್ಮ ಹೇಳಲು
ಹಾಗಾದರೆ ನೀನೇ ಅಪ್ಪನನ್ನು ಒಪ್ಪಿಸಬೇಕೆಂದು ಆಶಾ ಹಠ ಹಿಡಿದಾಗ
ಆಯ್ತು ನೋಡೋಣವೆಂದು ಅವಳಮ್ಮ ಹೇಳಿ ಹೊರಗೆ ಬರುತ್ತಾರೆ‌.

ಸಂಜೆ ಕೋದಂಡರಾಮ್ ರವರು ಮನೆಯ ಬಾಲ್ಕನಿಯಲ್ಲಿ ಕುಳಿತಿರುವಾಗ
ಅವರ ಪತ್ನಿ ಕಾಫಿ ಜೊತೆಗೆ ಖಾರದ ತಿಂಡಿಯನ್ನು ತಟ್ಟೆಯಲ್ಲಿ ಹಾಕಿಕೊಂಡು ಬಂದು ಪತಿಯ ಕೈಗೆ ಕೊಟ್ಟು ತಾನೂ ಕುಳಿತುಕೊಂಡಾಗ
ಕೋದಂಡರಾಮ್ ರವರು ಮಾತನಾಡಿ ಈ ದಿನ ಬಂದ ಗಂಡಿನ ಬಗ್ಗೆ ಮಗಳು ಏನು ಹೇಳುತ್ತಾಳೆ? ಗಂಡು ಒಪ್ಪಿಗೆಯಂತಾ ಎಂದು ಕೇಳಲು
ಹ್ನೂಂ ಒಂದು ರೀತಿ ಒಪ್ಪಿಕೊಂಡುಬಿಟ್ಟಿದ್ದಾಳೆ ನೀವು ಯೋಚಿಸಬೇಕಾದ‌ ಅಗತ್ಯವಿಲ್ಲವೆಂಬ ಅವರ ಪತ್ನಿಯ ಮಾತಿಗೆ.
ಓ ಹೋ ಪರವಾಗಿಲ್ಲವೇ,,,,, ಈ ದಿನ ಬಂದಿದ್ದ ಗಂಡು ಒಪ್ಪಿದರೆ ನಾನು ಕೆಲಸದಲ್ಲಿರುವಾಗಲೇ‌ ಮದುವೆ ಮಾಡಬಹುದೆಂಬ ನನ್ನ ಆಸೆ ಈಡೇರುತ್ತದೆಂದು ಕೋದಂಡರಾಂ ರವರು ಹಸನ್ಮುಖರಾಗುತ್ತಾರೆ
ಹೌದೌದು ನಿಮ್ಮ ಮಾತು ನಿಜ. ನೀವು ಸರ್ವೀಸ್‌ ನಲ್ಲಿದ್ದಾಗಲೇ ಮಗಳ ಮದುವೆ ಮಾಡುವ ಆಸೆ ಈಡೇರುತ್ತದೆಂದು ಪುನಃ ಅವರ ಪತ್ನಿ ಹೇಳಿದಾಗ,
ನಿನ್ನ ಮಾತಿನ ಅರ್ಥವೇನೇ ಎಂದು ಕೋದಂಡರಾಂ ರವರು ಪುನಃ ಕೇಳಲು
ಅದೇ ರೀ ನೀವು ಕೆಲಸದಲ್ಲಿದ್ದಾಗಲೇ ಮಗಳ ಮದುವೆ ಮಾಡಬೇಕೆಂದಿದ್ದೀರಲ್ಲಾ ನೀವು ಮನಸ್ಸು ಮಾಡಿದರೆ ಅದು ನೆರೆವೇರುತ್ತದೆ ಎನ್ನುತ್ತಾರೆ
ಈ ದಿನ ಬಂದಿದ್ದ ಹುಡುಗ ಸೈನ್ಯದಲ್ಲಿದ್ದಾರೆ ಎಂದ ತಕ್ಷಣ ನನಗೆ ಅವರನ್ನು ಅಳಿಯನನ್ನಾಗಿ ಮಾಡಿಕೊಳ್ಳಲು ಒಪ್ಪಿಗೆಯಾಯ್ತು. ಈಗ ಮಗಳೂ ಒಪ್ಪಿದ್ದಾಳೆಂದರೆ ಮುಗೀತು, ಕೆಲಸದಲ್ಲಿ ಇರುವಾಗಲೇ ಮಗಳ‌ ಮದುವೆ ಮಾಡಿದಂತಾಗುತ್ತದೆ ಇದರ ಜೊತೆಗೆ ಯೋಧನನ್ನು ಅಳಿಯ ಮಾಡಿಕೊಳ್ಳಬೇಕೆಂಬ ಆಸೆಯೂ ಈಡೇರುತ್ತದೆಂದು ಕೋದಂಡರಾಮ್ ರವರು ಹೇಳಲು
ಅವರ ಪತ್ನಿ ಅದು ನಿಮ್ಮ ಭ್ರಾಂತಷ್ಚೇ ಎನ್ನುತ್ತಾರೆ
ಅಯ್ಯೋ ಇದೇನೆ ಎರಡು ಮಾತೂ ನೀನೇ ಆಡುತ್ತೀಯಾ ನಿನ್ನ ಒಗಟಿನ ಮಾತು ನನಗೆ ಅರ್ಥವಾಗುವುದಿಲ್ಲವೆಂಬ ಕೋದಂಡರಾಮ್ ಮಾತಿಗೆ
ನಿಮ್ಮ ಮಗಳು ಯಾರನ್ನೋ ಲೌವ್ ಮಾಡುತ್ತಿದ್ದಾಳಂತೆ ಎಂದ ತಕ್ಷಣ
ಏನಂದೇ? ನ,,,ನ,,,ನನ್ನ ಮಗಳು,,,,, ಯಾರನ್ನೋ ,,,,,ನೋ ನೋ ಇದನ್ನು ನಾನು ನಂಬುವುದಿಲ್ಲ ನೀನೇ ಬೇಕಂತ ನನ್ನ ಫೂಲ್ ಮಾಡಲು ಹೇಳುತ್ತಿದ್ದೀಯ ಎಂದು ಕೋದಂಡರಾಮ್ ಹೇಳುತ್ತಾರೆ.
ಅವಳನ್ನೇ ಕೇಳಿ ತಿಳಿಯುತ್ತದೆ ಎಂದು ಅವರ ಪತ್ನಿಯು ಹೇಳಿದಾಗ
ಕರಿ ಅವಳನ್ನು ಎಂದು ಕೋದಂಡರಾಮ್ ಹೇಳಲು
ನೀವೇ ಫೋನ್ ಮಾಡಿ ಇಲ್ಲಿಗೆ ಕರೆದು ಕೇಳಿ ಎಂಬ ಅವರ ಪತ್ನಿಯ ಮಾತಿಗೆ
ಓ ಹೌದಲ್ಲವೇ ಎನ್ನುತ್ತಾ ತಮ್ಮ ಮಗಳಿಗೆ ಕರೆ ಮಾಡಿ ಬಾಲ್ಕನಿಗೆ ಬರಲು ಹೇಳಿದಾಗ
ಆಶಾ ತನ್ನ ಮನಸ್ಸಿನಲ್ಲಿ, ಅಪ್ಪನಿಗೆ ಅಮ್ಮ ನನ್ನ ವಿಷಯ ಹೇಳಿರಬೇಕು ಅದಕ್ಕೆ ಕರೆಯುತ್ತಿದ್ದಾರೆ ಅಪ್ಪ ಕೋಪಿಸಿಕೊಂಡಿದ್ದರೆ ಹೇಗೆ ಎದುರಿಸಲಿ? ಎದುರಿಸದೇ ಇದ್ದರೆ ನನ್ನ ಲೌವ್ ಸಕ್ಸಸ್‌ ಆಗುವುದಿಲ್ಲ, ಅಪ್ಪ ಕೋಪಿಸಿಕೊಂಡರೆ ನಾನು ವಿಕ್ರಮ್ ನನ್ನು ಬಿಡಲಾಗುವುದಿಲ್ಲ. ಅಪ್ಪನನ್ನು ಎದುರಿಸಲೇ ಬೇಕೆಂದು ಮಾನಸಿಕವಾಗಿ ತಯಾರಾಗಿ, ಆತಂಕದಿಂದಲೇ ಐದು ನಿಮಿಷದ ನಂತರ ಅಪ್ಪ ಅಮ್ಮ ಕುಳಿತಿದ್ದ ಬಾಲ್ಕನಿಗೆ ಹೋಗಿ ನಿಂತುಕೊಂಡು ಏನಪ್ಪಾ ಕರೆದೆ ಎಂದು ಮೆಲುಧ್ವನಿಯಲ್ಲಿ ಆಶಾ ಕೇಳಿದಾಗ
ಕೋದಂಡರಾಂ ರವರು ಮಗಳ ಮುಖವನ್ನು ನೋಡಿ, ಏನಮ್ಮಾ ನಿಮ್ಮಮ್ಮ ಹೇಳುತ್ತಿರುವುದು ನಿಜಾನಾ ಎಂದು ಮೆಲ್ಲಗೆ ಕೇಳಿದಾಗ
ಏನು ವಿಷಯಾನಪ್ಪಾ ಎಂದು ಆಶಾ ಪ್ರಶ್ನಿಸಲು
ನೀನು ಯಾರನ್ನೋ ಪ್ರೀತಿಸುತ್ತಿರುವುದು ನಿಜವಾ ಎಂದು ಕೋದಂಡರಾಂ ಕೇಳಲು
ರೂಮಿನಿಂದ ಬರುವಾಗ ಎಷ್ಟೇ ಮಾನಸಿಕವಾಗಿ ತಯಾರಾಗಿ ಬಂದಿದ್ದರೂ ಸಹಾ, ಅಪ್ಪನ ನೇರವಾದ ಪ್ರಶ್ನೆಗೆ ಹೇಗೆ ಉತ್ತರಿಸಬೇಕೆಂದು ತಿಳಿಯದೆ ಮನಸ್ಸಿನಲ್ಲಿ ದ್ವಂದ್ವವಾಗಿ ಅಪ್ಪಾ ಅದೂ,,,,, ಎಂದು ಮಾತು ನಿಲ್ಲಿಸಿದಾಗ
ನಿನ್ನ ಮೌನ ನನಗೆ ಅರ್ಥವಾಗುವುದಿಲ್ಲ ನನ್ನ ಪ್ರಶ್ನೆಗೆ ನೇರನಾಗಿಯೇ ಉತ್ತರಿಸಬೇಕೆಂದು ಕೋದಂಡರಾಮ್ ರವರು ಏರು ಧ್ವನಿಯಲ್ಲಿ ಕೇಳಲು
ಅವಳಪ್ಪನ ಏರು ಧ್ವನಿಯ ಪ್ರಶ್ನೆಗೆ ಆಶಾಳ ಹೃದಯ ಜಕ್ಕನೆ ನಡುಗಿದಂತಾಗಿ ಪುನಃ ಮೌನವಾದಾಗ
ಗಂಡನು ಇನ್ನೆಲ್ಲಿ ರೌದ್ರಾವತಾರ ತಾಳುತ್ತಾರೋ ಎಂಬ ಭಯದಿಂದ ಅವಳಮ್ಮನೇ ಮಾತನಾಡಿ, ಅವಳ ಕಾಲೇಜ್ ಫ್ರೆಂಡ್ ನ ಲೌವ್ ಮಾಡುತ್ತಿರುವುದಾಗಿ ನನಗೇ ಹೇಳಿದ್ದಾಳೆ ಎಂದ ತಕ್ಷಣ
ಅಲ್ಲಿಯವರೆಗೂ ಏರುಧ್ವನಿಯಲ್ಲಿ ಮಾತನಾಡುತ್ತಿದ್ದ ಕೋದಂಡರಾಂ ರವರು ತಕ್ಷಣ ಸ್ವಲ್ಪ ನಿಧಾನವಾಗಿ ಈ ವಿಚಾರ‌ ಮೊದಲೇ ಹೇಳಿದ್ದರೆ ನಾವು ಗಂಡು ಹುಡುಕುವ ತೊಂದರೆ ತೆಗೆದುಕೊಳ್ಳುತ್ತಿರಲಿಲ್ಲವಲ್ಲಮ್ಮಾ ಎಂಬ ಅವರ ಮೆಲು ಧ್ವನಿಯ ಮಾತಿಗೆ
ಅಮ್ಮ ಮಗಳು ಇಬ್ಬರಿಗೂ ಆಶ್ಚರ್ಯವಾಗುತ್ತದೆ.

ಮುಂದುವರೆಯುತ್ತದೆ

ಈ ಸಂಚಿಕೆಯಲ್ಲಿ ಕಂಡು ಬರುವ‌ ಮುಖ್ಯವಾದ ಅಂಶವೇನೆಂದರೆ

ತನ್ನನ್ನು ನಂಬಿದವರಿಗೆ ಮೋಸ‌ ಮಾಡಬಾರದು ಎಂಬುದು ಸರಿಯಾದ ನಿರ್ಧಾರವೇ, ಆದರೆ ಮನುಷ್ಯ ಬೇರೆಯವರಿಗೆ ಮಾತು ಕೊಡುವಾಗ ಸ್ವಲ್ಪ ಮುಂದಾಗುವ ಆಗುಹೋಗುಗಳ ಬಗ್ಗೆ ಯೋಚಿಸಿ ನಿರ್ಧಾರ ಮಾಡಬೇಕು.
ಪ್ರತಿಯೊಂದು ಸಮಸ್ಯೆಯೂ ಕೂಡಾ ಮುಳ್ಳಿನ ಮೇಲೆ ಬಟ್ಟೆ ಹಾಕಿರುವಂತೆ ಇರುತ್ತದೆ. ಜೋರಾಗಿ ಎಳೆದರೆ ಹರಿದು ಹೋಗುತ್ತದೆ. ಆದ್ದರಿಂದ ನಿಧಾನವಾಗಿ ಎಳೆಯಲು ವ್ಯವಧಾನ ಹಾಗೂ ತಾಳ್ಮೆಯು ಇರಬೇಕು. ಮುಳ್ಳಿನ ಮೇಲಿನ ಬಟ್ಟೆಯನ್ನು ನಿಧಾನವಾಗಿ ಬಿಡಿಸುವಂತೆ ಸಮಸ್ಯೆಗಳನ್ನೂ ಬಗೆಹರಿಸಬೇಕು. ಪರಿಹಾರವಿಲ್ಲದೆ ಯಾವುದೇ ಸಮಸ್ರೆ ಇರುವುದಿಲ್ಲ. ಕೆಲವರ ಒಣ ಪ್ರತಿಷ್ಠೆಯಿಂದ ಸಮಸ್ಯೆಗಳು ಬಗೆಹರಿಯುವುದರ ಬದಲಿಗೆ ಜಟಿಲವಾಗುತ್ತಾ ಹೋಗುತ್ತದೆ. ಆದರೂ ಸಮಸ್ಯೆಗಳು ಜಟಿಲವಾಗುವುದರೊಳಗಾಗಿ ಬಗೆಹರಿಸಿದರೆ ಯಾವ ರೀತಿಯ ನಿಷ್ಠೂರ ಬರುವುದಿಲ್ಲ. ಕೆಲವೊಮ್ಮೆ ಸಮಸ್ಯೆಯು ಕೆಲವರ ಭಿನ್ನಾಭಿಪ್ರಾಯ ದಿಂದ ಬಗೆಹರಿದಿರಬಹುದು ಆದರೂ ಪುನಃ ಯಾವಾಗ ಭುಗಿದೇಳುತ್ತದೋ ಗೊತ್ತಾಗುವುದಿಲ್ಲ. ಆದ್ದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಮಾತ್ರ ನೆಮ್ಮದಿ ಕಾಣಬಹುದು.

ಅಭಿಲಾಷೆ – ಸಂಚಿಕೆ 16

ಹಿಂದಿನ ಸಂಚಿಕೆಯಲ್ಲಿ

ಕಾಲೇಜಿನ ಸಹಪಾಠಿಯನ್ನು ಪ್ರೀತಿಸುತ್ತಿರುವುದಾಗಿ ಆಶಾ ತನ್ನ ಅಪ್ಪನಿಗೆ ಹೇಳಿದಾಗ
ಅವಳಪ್ಪನು ತಾಳ್ಮೆಯುಂದಲೇ ಯಾರು ಆ ಹುಡುಗನೆಂದು ಕೇಳುತ್ತಾರೆ

ಕಥೆಯನ್ನು ಮುಂದುವರೆಸುತ್ತಾ

ಕೋದಂಡರಾಂ ರವರು ಸಮಾಧಾನದಿಂದ ಮಾತನಾಡಿದ್ದನ್ನು ನೋಡಿ, ಇದೇನು ಇದುವರೆಗೂ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದನರು ಇದ್ದಕ್ಕಿದ್ದಂತೆ ತಣ್ಣಗಾಗಿದ್ದಾರಲ್ಲಾ ಎಂದು ಅಮ್ಮ ಮಗಳಿಗೆ ಆಶ್ಚರ್ಯವಾಗುತ್ತದೆ.
ಯಾರಮ್ಮಾ ಅವನು, ಅವನದ್ದು ಯಾವ ಊರು? ಅವನ ಹೆಸರೇನು? ಅವನ ಅಪ್ಪ ಅಮ್ಮ ಯಾರು? ಎಲ್ಲಾ ಹೇಳಮ್ಮಾ ಎಂದು ಪುನಃ ಕೇಳಿದಾಗ
ಅಪ್ಪಾ ಅವರ ಹೆಸರು ವಿಕ್ರಮ್ ಇದೇ ಊರಿನವರೆಂದು ಹೇಳಿ ಆಶಾ ಮೌನವಾಗಲು
ಅವನ ಸ್ವಂತ ಊರು, ಅಪ್ಪ ಅಮ್ಮ ಗೊತ್ತಿಲ್ಲವಾ‌? ಎಂಬ ಕೋದಂಡರಾಮ್ ಮಾತಿಗೆ
ಗೊತ್ತಿಲ್ಲವೆಂದು ಆಶಾ ತಲೆ ಆಡಿಸುತ್ತಾಳೆ
ಏನಮ್ಮಾ ನೀನು ? ಅಪ್ಪ ಅಮ್ಮ ಯಾರೋ? ಊರು ಯಾವುದೋ? ಹುಡುಗನನ್ನು ನೋಡಿದ ತಕ್ಷಣ ಲೌವ್ ಮಾಡಿ ಮದುವೆಯಾಗುತ್ತೀಯಾ? ಮದುವೆಯಾಗಿ ನಂತರ ಎಲ್ಲವೂ ತಿಳಿಯುವ ವೇಳೆಗೆ ನಾನು ಮೋಸ‌ಹೋದನೆಂದು ಕಣ್ಣೀರಲ್ಲಿ ಕೈ ತೊಳೆಯುತ್ತಾ, ಡೈವೋರ್ಸ್ ಕೇಳುತ್ತೀರೀ ಅಲ್ಲವಾ? ಎಂದು ಕೋದಂಡರಾಮ್ ಛೇಡಿಸಿದಾಗ
ಹಾಗೇನೂ ಆಗುವುದಿಲ್ಲಪ್ಪಾ ಅವರು ಕೋಟ್ಯಾಧೀಶ್ವರರಂತೆ ಎಂದು ಆಶಾ ನುಡಿಯಲು
ಕೋದಂಡರಾಮ್ ರವರು ನಗುತ್ತಾ ಹೌದಮ್ಮಾ ಈಗಿನ ಕಾಲದಲ್ಲಿ ಬೆಂಗಳೂರಿನಲ್ಲಿ ಒಂದು ಮನೆ ಸೈಟು ಹೊಂದಿರುವವರೆಲ್ಲರೂ ಕೋಟ್ಯಾಧೀಶ್ವರರೇ ಕಣಮ್ಮಾ ಕೇವಲ ಮನೆ ಸೈಟು ಇದ್ದರೆ ಜೀವನ ನಡೆಯುತ್ತದೇನಮ್ಮಾ ಜೀವನ ನಡೆಸಲು ಹಣ ಬೇಡವಾ ಎಂದು ಕೇಳಿದಾಗ.
ಅವರಪ್ಪನು ಯಾವುದೋ ಫ್ಯಾಕ್ಟರಿ ನಡೆಸುತ್ತಿದ್ದಾರಂತಪ್ಪಾ ಎಂಬ ಆಶಾಳ ಮಾತಿಗೆ, ಆ ಫ್ಯಾಕ್ಟರಿ ಲಾಭದಲ್ಲಿದೆಯೋ ನಷ್ಚದಲ್ಲಿದೆಯೋ‌ ಗೊತ್ತೇನಮ್ಮಾ ಎಂದು ಕೋದಂಡರಾಮ್ ರವರು ಮರು ಪ್ರಶ್ನಿಸಲು
ಅಪ್ಪಾ ಅದೆಲ್ಲಾ ಗೊತ್ತಿಲ್ಲ, ಹೋಗ್ತಾ ಹೋಗ್ತಾ ತಿಳಿದುಕೊಳ್ಳುತ್ತೇನೆಂದು ಆಶಾ ಹೇಳುತ್ತಾಳೆ.
ಇದೇ ಕಣಮ್ಮಾ ನೀವು ತಪ್ಪು ಮಾಡುವುದು, ಮೊದಲಿಗೆ ಹುಡುಗನ ಹಿನ್ನೆಲೆ ತಿಳಿಯಬೇಕು, ನಂತರ ಸಮಾಧಾನವಿದ್ದರೆ‌ ಮುಂದುವರೆಯಬೇಕೆಂಬ ಕೋದಂಡರಾಮ್ ಮಾತಿಗೆ
ಈಗ ಮಗಳು ಲೌವ್ ಮಾಡಿದ್ದಾಗಿದೆ, ಇದಕ್ಕೆ ನಿಮ್ಮ ಸಮ್ಮತವಾ ಇಲ್ಲವಾ ಅಷ್ಟು ಹೇಳಿ ಸಾಕೆಂದು ಅವರ ಪತ್ನಿ ಹೇಳಲು
ಮಗಳು ಲೌವ್ ಮಾಡಿದ್ದಾಳೆಂದು ನೀನೇ ಹೇಳಿದ್ದೀಯಾ ಈಗ ಮದುವೆಯಾಗ ಬೇಡವೆಂದು ಹೇಳಿದರೆ ಕೇಳುತ್ತಾಳಾ? ನಮ್ಮ ಸಮಾಧಾನಕ್ಕೆ ಕೇಳಬೇಕಷ್ಟೇ, ಮದುವೆಯಾದ ನಂತರ ತನ್ನ ಜೀವನ ನಡೆಸಲಾಗದೆ, ನನ್ನ ಮುಂದೆ ಬಂದು ನಿಂತರೇನು ಮಾಡೋದು? ಹೋಗಲೀ ಅದೂ ಕೇಳುವುದಿಲ್ಲಮ್ಮಾ, ಮದುವೆಯಾದ ತಪ್ಪಿಗೆ ನಮ್ಮ ಹಣೆಬರಹವೆಂದು ಒಬ್ಬಳೇ ಮಗಳೆಂದು ಅವಳ ಜೀವನ‌ ನಡೆಸಬಹುದು, ಆದರೆ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಎಂದು ವರದಕ್ಷಿಣೆ ಕಿರುಕುಳ ನೀಡಿದರೇನು ಮಾಡುವುದು ಹೇಳು ಎಂದು ಕೋದಂಡರಾಮ್ ರವರು ಪುನಃ ಪ್ರಶ್ನಿಸಲು
ಹಾಗೇನೂ ಆಗುವುದಿಲ್ಲಾ ರೀ, ಅವನೂ ಕೆಲಸದಲ್ಲಿದ್ದಾನಂತೆ, ಇವಳೂ ದುಡಿಯುತ್ತಿದ್ದಾಳೆ ಜೀವನ ನಡೆದುಕೊಂಡು ಹೋಗುವುದರಲ್ಲಿ ಸಂಶಯವಿಲ್ಲಾ, ಈಗ ನೀವು ಒಪ್ಪಿಗೆ ಕೊಟ್ಟರೆ ಮದುವೆ ಮಾಡಿಬಿಡೋಣವೆಂದು ಅವಳಮ್ಮನ ಮಾತಿಗೆ
ಇದೇನೇ ಮಗಳಿಗಿಂತ ನೀನೇ ಮದುವೆ ಮಾಡಲು ಆತುರ ಪಡುತ್ತಿದ್ದೀಯಲ್ಲಾ ಸ್ವಲ್ಪ ಇರು, ನಮ್ಮ ಮನೆಯಲ್ಲಿ ಸುಖವಾಗಿ ಬೆಳೆದವಳು, ನಾಳೆ ಗಂಡನ ಮನೆಗೆ ಹೋಗಿ ಕಷ್ಟ ಪಡುತ್ತಿದ್ದರೆ ನಾವು ತಾನೇ ನೋಡಬೇಕು ಹೇಳು ಎಂಬ ಕೋದಂಡರಾಮ್ ರವರ ಪ್ರಶ್ನೆಗೆ
ಲೌವ್ ಮಾಡಿದ್ದಾಗಿದೆ ಈಗ ನಾವು ಬೇಡ ಎಂದರೂ ನಿಲ್ಲುವುದಿಲ್ಲವೆಂದು ಅವಳ‌ ತಾಯಿ ನುಡಿಯಲು
ನಾವು ಬೇಡವೆಂದರೂ ಮನೆಯಿಂದ ಓಡಿ ಹೋಗಿ ರಿಜಿಸ್ಟರ್ ಮದುವೆ ಮಾಡಿಕೊಳ್ಳುತ್ತಾರೆಂದು ನನಗೂ ಗೊತ್ತು ಮನಸ್ಸಿಗೆ ಸಮಾಧಾನ ಮಾಡಿಕೊಳ್ಳಲು ಕೇಳಿದೆ ಅಷ್ಚೇ ಎಂದು ಕೋದಂಡರಾಮ್ ಹೇಳುತ್ತಾ ಹುಡುಗನ ಫೋಟೋ ಇದೆಯಾ ಎಂದು ಮಗಳನ್ನು ಕೇಳಿದಾಗ
ಆಶ ತನ್ನ ಮೊಬೈಲಿನಲ್ಲಿ ವಿಕ್ರಮ್ ನ ಫೋಟೋ ವನ್ನು ಡೌನ್ ಲೋಡ್ ಮಾಡಿ ಅವಳಪ್ಪನಿಗೆ ಮೊಬೈಲ್ ಕೊಟ್ಟಾಗ
ಅವಳಪ್ಪನು ಮೊಬೈಲ್ ತೆಗೆದುಕೊಂಡು ಒಂದು ನಿಮಿಷ ದಿಟ್ಟಿಸಿ ನೋಡಿ ತಲೆ ಅಲ್ಲಾಡಿಸುತ್ತಾ, ತನ್ನ ಪತ್ನಿಗೆ ತೋರಿಸಿ ಬೆಳಿಗ್ಗೆ ಬಂದಿದ್ದ ಹುಡುಗನಿಗೂ ಇವನಿಗೂ ಅಜಗಜಾಂತರ ವ್ಯತ್ಯಾಸ ವಿದೆ ಅಲ್ಲವೇನೇ ಎಂದು ಕೇಳಲು.
ನೋಡ್ರೀ ಒಬ್ಬರಿದ್ದಂತೆ ಇನ್ನೊಬ್ಬರು ಇರುವುದಿಲ್ಲಾರೀ ಎಂಬ ಆಶಾಳ‌‌ ತಾಯಿಯ ಮಾತಿಗೆ
ಹೌದೇ ಅದು ನನಗೂ ಗೊತ್ತು ಇರುವುದನ್ನು ಹೇಳಿದೆ ಅಷ್ಟೇ ಎನ್ನುತ್ತಾ, ಹುಡುಗನನ್ನು ಯಾವಾಗ‌ ಮನೆಗೆ ಕರೆದುಕೊಂಡು ಬರುತ್ತೀಯಾ ಹೇಳಮ್ಮಾ ಹುಡುಗನನ್ನು ಒಂದು ಸಲ ನೋಡುತ್ತೇನೆ. ನಂತರ ಅಪ್ಪ ಅಮ್ಮನ ಕರೆಸಿ ಮದುವೆ ಮಾತುಕತೆ ಆಡಿ ಶುಭ ಕಾರ್ಯ ಬೇಗ ಮುಗಿಸೋಣವೆಂದಾಗ
ಮುಂದಿನ ವಾರ ಕರೆದುಕೊಂಡು ಬರುತ್ತೇನೆಂದು ಆಶಾ‌ ಹೇಳಿದ ನಂತರ
ಸರಿ ಬಿಡಮ್ಮಾ ಒಟ್ಟಿನಲ್ಲಿ ನೀನು ಚೆನ್ನಾಗಿದ್ದರೆ ಸಾಕೆಂದು ಹೇಳುತ್ತಾ ಮೊಬೈಲನ್ನು ಮಗಳ ಕೈಗೆ ನೀಡಿದಾಗ
ಥ್ಯಾಂಕ್ಸ್ ಕಣಪ್ಪಾ ಎಂದು ಹೇಳಿ ಆಶ ತನ್ನ ರೂಮಿಗೆ ಬರುತ್ತಾಳೆ.

ಈ ಕಡೆ ಕೋದಂಡರಾಂ ರವರು ತಮಗೆ ಮೈಸೂರಿನಿಂದ ಬಂದಿತ್ತೆಂದು ಹೇಳಲಾದ ಫೋನ್ ನಂಬರನ್ನು ಇನ್ಸ್ ಪೆಕ್ಟರ್ ಗೆ ನೀಡಿದ್ದ ಫೋನ್ ನಂಬರಿನ ಜಾಡು ಹಿಡಿದು ಅದರ ಲೊಕೇಶನ್ ಕಂಡು ಹಿಡಿದುಕೊಂಡು ‌ಕರೆ ಮಾಡಿದ್ದ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದಾಗ,
ಆ ವ್ಯಕ್ತಿಯು ತಾನು ವರ್ಷದ ಹಿಂದೆ ಇದೇ ರೀತಿಯ ವ್ಯಕ್ತಿಯನ್ನು ನೋಡಿದ್ದು ನಿಜ. ಆದರೆ ಈಗ ಆ ವ್ಯಕ್ತಿ ಎಲ್ಲಿದ್ದಾನೋ‌ ಗೊತ್ತಿಲ್ಲವೆಂದು ಹೇಳಿದಾಗ
ನೀವೇಕೆ ಫೋನ್ ಮಾಡಿ ಸ್ವಿಚ್ ಆಫ್ ಮಾಡಿಕೊಂಡ್ರಿ ? ನಿಮ್ಮನ್ನು ಹುಡುಕಲು ಬಹಳ‌ಶ್ರಮ ಪಡಬೇಕಾಯಿತೆಂದು ಇನ್ಸ್ ಪೆಕ್ಚರ್ ಪ್ರಶ್ನಿಸಲು
ಸಾರ್ ಫೋಟೋದಲ್ಲಿರುವ ಯುವಕನನ್ನು ನೋಡಿ ವರ್ಷವಾಗಿದೆ. ಅಲ್ಲಿಂದ ನಾನು ನೋಡೇ ಇಲ್ಲ. ನಾನು ಏನಾದರೂ ಈ ವಿಷಯವನ್ನು ಮುಂದುವರೆಸಿದರೆ ನನಗೇ ಸಮಸ್ಯೆ ಯಾಗುತ್ತದೆಂದು ಫೋನ್ ಸ್ವಿಚ್ ಆಫ್ ಮಾಡಿಕೊಂಡೆ‌ ಎನ್ನುತ್ತಾನೆ.
ಆ ಹುಡುಗ ಇರುವ ಮನೆಯನ್ನು ನಮಗೆ ತೋರಿಸೆಂದು ಇನ್ಸ್ ಪೆಕ್ಟರ್ ನುಡಿದಾಗ
ಫೋನ್ ಮಾಡಿದ ವ್ಯಕ್ತಿಯು ಇನ್ಸ್ ಪೆಕ್ಟರ್ ಗೆ ಯುವಕನಿದ್ದ ಮನೆಯನ್ನು ದೂರದಿಂದ ತೋರಿಸಿದಾಗ
ಇನ್ಸ್ ಪೆಕ್ಟರ್ ರವರು ಒಬ್ಬರು ಸಿಬ್ಬಂದಿಗೆ ಫೋನ್ ಮಾಡಿದ್ದ ವ್ಯಕ್ತಿಯು ಎಲ್ಲೂ ಹೋಗದಂತೆ ನೋಡಿಕೊಳ್ಳಲು ಹೇಳಿ ನಂತರ
ಯುವಕನ ಮನೆಗೆ ಹೋಗಿ, ಕರೆಗಂಟೆ ಒತ್ತಿದಾಗ
ಆ ಮನೆಯ ಯಜಮಾನನು ಬಾಗಿಲು ತೆಗೆದು ಎದುರಿಗೆ ಇನ್ಸ್ ಪೆಕ್ಟರ್ ನಿಂತಿರುವುದನ್ನು ನೋಡಿ ಗಾಬರಿಯಾಗಿ, ಸಾರ್ ನನ್ನ ಮನೆಗೇಕೆ ಬಂದಿದ್ದೀರೀ ಎಂದು ಪ್ರಶ್ನಿಸಲು
ಇನ್ಸ್ ಪೆಕ್ಟರ್ ಮನೆಯ ಸುತ್ತಲೂ ನೋಡಿ ಟೇಬಲ್ ಮೇಲೆ ಅಪ್ಪ ಅಮ್ಮನ ಜೊತೆಗಿದ್ದ ಯುವಕನ ಫೋಟೋ ನೋಡಿ, ಕೋದಂಡರಾಮ್ ರವರು ನೀಡಿದ್ದ ಫೋಟೋವನ್ನು ಒಂದು ಸಲ ನೋಡಿ, ನಂತರ ಟೇಬಲ್ ಮೇಲೆ ಇಟ್ಟಿದ್ದ ಫೋಟೋವನ್ನು ಕೈಗೆತ್ತಿಕೊಂಡು ತಮ್ಮ ಕೈಲಿದ್ದ ಫೋಟೋವನ್ನು ಪಕ್ಕದಲ್ಲಿ ಹಿಡಿದು ನೋಡಿದಾಗ, ಫೋಟೋದಲ್ಲಿದ್ದ ಯುವಕನ ಮುಖದ ಚಹರೆಗೂ ಕೋದಂಡರಾಮ್ ನೀಡಿದ್ದ ಫೋಟೋದಲ್ಲಿದ್ದ ಮುಖದ ಚಹರೆ ಹೆಚ್ಚು ಕಡಿಮೆ ಸುಮಾರು 75% ಪರ್ಸಂಟ್ ಹೋಲಿಕೆಯಾದರೂ ಬಣ್ಣದಲ್ಲಿ ಬಹಳ ವ್ಯತ್ಯಾಸ‌ ವಿರುತ್ತದೆ. ಓ ಇದು ಚಿಕ್ಕ ಹುಡುಗನ ಫೋಟೋವನ್ನು ಫೋಟೋ ಸಾಫ್ಚ್ ವೇರ್ ನಿಂದ ಡೆವಲಪ್ ಮಾಡಿದ್ದರಿಂದ ವ್ಯತ್ಯಾಸ‌ವಿರಬಹುದೆಂದುಕೊಂಡು ಇನ್ಸ್‌ಪೆಕ್ಟರ್ ರವರು‌ ಈ ಹುಡುಗ ಯಾರೆಂದು ಪ್ರಶ್ನಿಸಲು
ಆ ಮನೆಯ ಯಜಮಾನ ಕಕ್ಕಾಬಿಕ್ಕಿಯಾಗಿ, ಇದೇನ್ ಸಾರ್ ಹೀಗೆ ಪ್ರಶ್ನಿಸುತ್ತಿದ್ದೀರಿ? ಇವನು ನಮ್ಮ ಮಗ, ಬೇರೆಯವನಾಗಲು ಹೇಗೆ ಸಾಧ್ಯ ಎಂದು ಇನ್ಸ್‌ಪೆಕ್ಟರ್ ಗೆ ಪ್ರಶ್ನಿಸಲು
ಅದಕ್ಕೆ ಈ ಹುಡುಗ ಯಾರೆಂದು ನಿಮ್ಮನ್ನು ಕೇಳುತ್ತಿರುವುದೆಂಬ ಇನ್ಸ್‌ಪೆಕ್ಟರ್ ಪ್ರಶ್ನೆಗೆ
ಸಾರ್ ಈ ಹುಡುಗ ನಮ್ಮ ಸ್ವಂತ ಮಗ ಸಾರ್ ಎಂದು ಮನೆಯ ಯಜಮಾನ ಪುನಃ ಹೇಳಲು
ನಿಮ್ಮ ಹುಡುಗನೇ ಆಗಿದ್ದರೆ ಅವನ ಬರ್ತ್ ಸರ್ಟಿಫಿಕೇಟ್ ಎಲ್ಲಿ ಎಂದು ಇನ್ಸ್ ಪೆಕ್ಟರ್ ಕೇಳಿದಾಗ
ಆ ಮನೆಯ ಯಜಮಾನ ಸೀದಾ‌ ತನ್ನ ರೂಮಿಗೆ ಹೋಗಿ ತನ್ನ ಸ್ವಂತ ಮಗನೆಂದು ಹೇಳಲಾದ ಯುವಕನ ಬರ್ತ್ ಸರ್ಟಿಫಿಕೇಟ್ ತಂದು ಇನ್ಸ್ ಪೆಕ್ಚರ್ ಗೆ ನೀಡಿ ನನ್ನ ಮಗನ ಬರ್ತ್ ಸರ್ಟಿಫಿಕೇಟ್ ನೋಡಿ ಸಾರ್ ಎಂದು ಹೇಳಿ ಎದುರಿಗೆ ನಿಲ್ಲುತ್ತಾರೆ.
ಈ ಹುಡುಗ ಯಾವ ಆಸ್ಪತ್ರೆಯಲ್ಲಿ ಹುಟ್ಟಿದ ಎಂದು ಇನ್ಸ್ ಪೆಕ್ಟರ್ ಪ್ರಶ್ನಿಸಲು
ಸಾರ್ ನಮ್ಮ ಮಗ ಮನೆಯಲ್ಲೇ ಹುಟ್ಟಿದ ಎಂದು ಆ‌ ಮನೆಯ ಯಜಮಾನನ ಮಾತಿಗೆ,
ಇದು ನಿಜವಾ ಎಂದು ಇನ್ಸ್ಪೆಕ್ಟರ್ ಪ್ರಶ್ನೆಗೆ ಯಾಕೆ ಸಾರ್ ಅನುಮಾನವೆಂದು ಯಜಮಾನ ಪ್ರಶ್ನಿಸಲು
ಸುಮಾರು ವರ್ಷಗಳಿಂದ ನಗರದಲ್ಲಿರುವವರು ಹೆಚ್ಚಾಗಿ ಆಸ್ಪತ್ರೆಯಲ್ಲೇ ಡೆಲಿವರಿ ಮಾಡಿಸಿಕೊಳ್ಳುತ್ತಾರೆ ಅದಕ್ಕೆ ಕೇಳಿದೆ ಎಂದು ಇನ್ಸ್‌ಪೆಕ್ಟರ್ ಹೇಳಿದಾಗ
ಮನೆಯಲ್ಲಿಯೇ ಡೆಲಿವರಿಯಾದ ನಿದರ್ಶನಗಳಿಲ್ಲವೇ ಎಂದು ಮನೆಯ ಯಜಮಾನ ಡಿಫೆಂಡ್ ಮಾಡಿಕೊಳ್ಳುತ್ತಾರೆ
ಅದು ಹೋಗಲೀ ನಿಮ್ಮ ಮನೆಯವರು ಪ್ರಗ್ನಂಟ್ ಆಗಿದ್ದಾಗ ಎಲ್ಲಿ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದರೆಂದು ಇನ್ಲ್ ಪೆಕ್ಟರ್ ಪ್ರಶ್ನಿಸುತ್ತಾರೆ
ಯಾವುದೋ ಪ್ರೈವೇಟ್ ಕ್ಲಿನಿಕ್ ನಲ್ಲಿ ಟೆಸ್ಚ್ ಮಾಡಿಸುಕೊಳ್ಳುತ್ತಿದ್ದರು, ಆ ಡಾಕ್ಟರ್ ಈಗ ಇಲ್ಲವೆಂದು ಹೇಳಲು
ಕ್ಲಿನಿಕ್ ನಲ್ಲಿ ಟೆಸ್ಟ್ ಮಾಡಿಸಿಕೊಂಡಿರುವ ಬಗ್ಗೆ ರಿಪೋರ್ಟ್ ಕಾರ್ಡ್ ಇದೆಯಾ ಎಂಬ ಇನ್ಸ್ ಪೆಕ್ಚರ್ ಪ್ರಶ್ನೆಗೆ
ನಮ್ಮ ಮಗ ಹುಟ್ಟಿ ಮುವ್ವತ್ತು ವರ್ಷವಾಗಿದೆ ರಿಪೋರ್ಚ್ ಕಾರ್ಡ್ ಎಲ್ಲಿರುತ್ತದೆಂದು ಮನೆಯ ಯಜಮಾನ ಹೇಳುತ್ತಾರೆ
ಹೋಗಲೀ ನಿಮ್ಮ ಮಗನ ಹೆಸರೇನೆಂದು ಇನ್ಸ್ ಪೆಕ್ಟರ್ ಕೇಳಲು
ಸಾಗರ್ ಎಂದು ಹೇಳಿದಾಗ
ಈಗ ನಿಮ್ಮ ಹುಡುಗ ಎಲ್ಲಿ ಎಂದ ತಕ್ಷಣ
ಅಲ್ಲಿಯವರೆಗೂ ಸಮಾಧಾನದಿಂದ ಉತ್ತರಿಸುತ್ತಿದ್ದ ಆ ಮನೆಯ ಯಜಮಾನ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡುತ್ತಾರೆ.
ಯಜಮಾನ್ರೇ ಏಕೆ ಅಳುತ್ತಿದ್ದೀರೀ ಸಮಾಧಾನ ಮಾಡಿಕೊಳ್ಳಿ ಎಂದು ಇನ್ಸ್‌ಪೆಕ್ಟರ್ ಮಾತಿಗೆ
ಇನ್ನೆಲ್ಲಿಯ ಸಮಾಧಾನ ಸಾರ್‌ಎಂದು ಇನ್ನೂ ಅಳುವನ್ನು ಜಾಸ್ತಿ ಮಾಡುತ್ತಾರೆ
ಯಜಮಾನ್ರೇ ಸಮಾಧಾನ ಮಾಡಿಕೊಂಡು ಏಕೆ ಅಳುತ್ತಿದ್ದೀರೆಂದು ಹೇಳಿ ಎನ್ನಲು
ನಮ್ಮ ಹುಡುಗ ಹೋಗಿ ವರ್ಷದ ಮೇಲಾಯ್ತು ಸಾರ್‌ ಎಂದು ಮನೆಯ ಯಜಮಾನ ಹೇಳಲು
ಅಂದರೆ ನಿಮ್ಮ ಮಾತಿನ ಅರ್ಥವೇನೆಂದು ಇನ್ಸ್ ಪೆಕ್ಟರ್ ರವರು ಯಜಮಾನರನ್ನು ಕೇಳುತ್ತಾರೆ

ಮುಂದುವರೆಯುತ್ತದೆ

ಕಂಡು ಬರುವ ಮುಖ್ಯ ಅಂಶವೇನೆಂದರೆ

ಮಕ್ಕಳು ಯಾವುದಾದರೂ ವಿಷಯದಲ್ಲಿ ಹೆತ್ತವರಿಗೆ ತಿಳಿಸದೆ ನಿರ್ಧಾರ ತೆಗೆದುಕೊಂಡರೆ, ಅದರಿಂದ ಮಕ್ಕಳು ಎಂದೂ ಹಿಂದೆ ಸರಿಯುವುದಿಲ್ಲವೆಂಬುದನ್ನು ಹೆತ್ತವರು ಅರಿತು ಯಾರ ಮನಸ್ಸಿಗೂ ನೋವಾಗದಂತೆ ವ್ಯವಹರಿಸಿದರೆ ಒಳ್ಳೆಯದು.

ಜೀವನದಲ್ಲಿ ಯಾರಿಗೂ ಅಷ್ಟಾಗಿ ತಮ್ಮ ಗುರುಗಳಿಗೆ ಸಹಾಯ ಮಾಡುವ ಅವಕಾಶ ದೊರೆಯುವುದೇ ಇಲ್ಲ. ಗುರುಗಳೂ ಸಹ ತಮ್ಮ ಶಿಷ್ಯರು ಎಷ್ಚೇ ಎತ್ತರದಲ್ಲಿ ಬೆಳೆದಿದ್ದರೂ ಯಾರೂ ಕೂಡಾ ಸಹಾಯ ಮಾಡಲು ಕೇಳಲು ಹೋಗುವುದಿಲ್ಲ. ತಾವಾಯ್ತು ತಮ್ಮ ಕೆಲಸವಾಯ್ತೆಂದು ತಮ್ಮ ಕರ್ತವ್ಯದಲ್ಲಿ ನಿರತರಾಗಿರುತ್ತಾರೆ. ಗುರುಗಳೆಲ್ಲೋ ಶಿಕ್ಷಕರೆಲ್ಲೋ ಎಂಬಂತೆ ಆಗಿರುತ್ತದೆ. ತಮ್ಮ ಶಿಷ್ಯರು ದೊಡ್ಡ ಹುದ್ದೆಯಲ್ಲಿದ್ದಾರೆಂದು ತಿಳಿದಾಗ ಅವರಿಗಿಂತ ಸಂತೋಷ ಪಡುವವರು ಬೇರೆ ಯಾರೂ ಇಲ್ಲ‌ ಎನಿಸುತ್ತದೆ. ಅಕಸ್ಮಾತ್ ಯಾರಾದರೂ ಶಿಷ್ಯಂದರಿಗೆ ಗುರುಗಳ‌ ಸೇವೆ ಮಾಡಲು ಅವರಾಶ ದೊರೆತರೆ ಅದಕ್ಕಿಂತ ಬೇರೆ ಅದೃಷ್ಟವಿಲ್ಲವೆಂದು ತಿಳಿದು ಬೇಸರವಿಲ್ಲದೆ ತಮ್ಮ ಗುರುಗಳಿಗೆ ಸಹಾಯ ಮಾಡುವವರು ಶ್ರೇಷ್ಠರಾದಂತ ಶಿಷ್ಯರಾಗುತ್ತಾರೆ.

– ಜಾ.ಎನ್ ಮುರಳೀಧರ್
ವಕೀಲರು ಹಾಗೂ ಸಾಹಿತಿ
ನೆಲಮಂಗಲ