ಸ್ಟೇಟ್ ಇನ್ನೋವೇಶನ್ ಅಂಡ್ ರಿಸರ್ಚ್ ಫೌಂಡೇಶನ್ ವತಿಯಿಂದ ಶಿಕ್ಷಕ ಶರಣಪ್ಪ ಫುಲಾರಿಗೆ ರಾಷ್ಟ್ರೀಯ ಪ್ರಯೋಗಶೀಲ ಶಿಕ್ಷಕ ಪ್ರಶಸ್ತಿ
ಅಕ್ಕಲಕೋಟ :- ತಾಲೂಕಿನ ನಾಗಣಸೂರಿನ ಜಿಲ್ಲಾ ಪರಿಷತ್ ಪ್ರಾಥಮಿಕ ಕನ್ನಡ ಬಾಲಕಿಯರ ಶಾಲೆಯ ವಿಷಯ ಶಿಕ್ಷಕ ಶರಣಪ್ಪ ಫುಲಾರಿ ಅವರಿಗೆ ಸರ್ ಫೌಂಡೇಶನ್‌ ವತಿಯಿಂದ ಕೊಡಮಾಡುವ ರಾಷ್ಟ್ರೀಯ ಪ್ರಯೋಗಶೀಲ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸೊಲ್ಲಾಪುರದ ಸಿಂಹಗಡ ಶೈಕ್ಷಣಿಕ ಸಂಕೀರ್ಣದಲ್ಲಿ ಎರಡು ದಿನಗಳ ರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು .
ಕಾರ್ಯಕ್ರಮದ ಅಧ್ಯಕ್ಷತೆ ಮಹಾರಾಷ್ಟ್ರ ರಾಜ್ಯ ಶೈಕ್ಷಣಿಕ ಸಂಶೋಧನ ಮಂಡಳಿ ಮತ್ತು ಪರೀಕ್ಷಾ ಪರಿಷತ್ತಿನ ಸಹ ಸಂಚಾಲಕಿ ಶೋಭಾ ಖಂದಾರೆ ವಹಿಸಿದ್ದರು.ವೇದಿಕೆಯಲ್ಲಿ ಜಿಲ್ಲಾ ಶಿಕ್ಷಕ ಪ್ರಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಇಬ್ರಾಹಿಂ ನದಾಫ , ಸಿಂಹಗಡ ಶೈಕ್ಷಣಿಕ ಸಂಸ್ಥೆಯ ಪ್ರಾಂಶುಪಾಲ ಶಂಕರ ನವಲೆ, ಸಿದ್ದರಾಮ ಮಾಶಾಳೆ,ಬಾಳಾಸಾಹೇಬ ವಾಘ,ಹೇಮಾ ಶಿಂದೆ ಇದ್ದರು. ದೇಶದ ಮೂಲೆ ಮೂಲೆಗಳಿಂದ ಪ್ರಯೋಗಶೀಲ ಶಿಕ್ಷಕರು ಭಾಗವಹಿಸಿದ್ದರು.

ಶರಣಪ್ಪ ಫುಲಾರಿ ಅವರು ಕಳೆದ 24 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ವಿದ್ಯಾರ್ಥಿಗಳ ಮತ್ತು ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ವಿನೂತನ ಚಟುವಟಿಕೆಗಳನ್ನು ಜಾರಿಗೆ ತರಲು ಪ್ರಯತ್ನಿಸಿದ್ದಾರೆ, ಶಿಕ್ಷಣದ ವಾರಿ,ನನ್ನ ಶಾಲೆ ಸಮೃದ್ಧ ಶಾಲೆ,ವಿದ್ಯಾರ್ಥಿ ಉಳಿತಾಯ ಬ್ಯಾಂಕ್, ವಿದ್ಯಾರ್ಥಿ ಪರಿಷತ್ತು, ಇಕೋ ನೇಚರ್ ಕ್ಲಬ್, ಜನರ ಸಹಭಾಗಿತ್ವ. ಕಾರ್ಯಕ್ರಮಗಳು, ಕ್ಷೇತ್ರ ಭೇಟಿ, ಶೈಕ್ಷಣಿಕ ಪ್ರವಾಸ, ಸ್ಪರ್ಧಾತ್ಮಕ ಪರೀಕ್ಷೆಗಳು ಹೀಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನಿಸಿದ್ದು, ಶಾಲೆಯ ಭೌತಿಕ ಸೌಲಭ್ಯಗಳನ್ನು ಸಂಪಾದಿಸಿ ಶಾಲೆಯನ್ನು ಡಿಜಿಟಲ್, ಸ್ಮಾರ್ಟ್ ಸ್ಕೂಲ್, ಟ್ಯಾಬ್ ಸ್ಕೂಲ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವರ್ಷ, ಅಂಗವಿಕಲ ವಿದ್ಯಾರ್ಥಿ ಝೀ ಕನ್ನಡ ವಾಹಿನಿಯ ಸರಿಗಮಪ ಸ್ಟಾರ್ ಸಿಂಗರ್ ಆದ ಕುರಿತು ಉಪಕ್ರಮ ಸಾದರ ಪಡಿಸಲಾಗಿತ್ತು. ಈ ಆವಿಷ್ಕಾರಕ್ಕಾಗಿ ಆಯ್ಕೆ ಸಮಿತಿಯಿಂದ ರಾಷ್ಟ್ರೀಯ ಪ್ರಯೋಗಶೀಲ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದರಿಂದ ಶರಣಪ್ಪ ಫುಲಾರಿ ಅವರಿಗೆ ಎಲ್ಲ ಹಂತಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಿಇಓ ಕುಲದೀಪ ಜಂಗಮ, ಪ್ರಾಥಮಿಕ ಶಿಕ್ಷಣಾಧಿಕಾರಿ ಕಾದರ್ ಶೇಖ, ಸಮೂಹ ಶಿಕ್ಷಣಾಧಿಕಾರಿ ಪ್ರಶಾಂತ ಅರಬಾಳೆ, ವಿಸ್ತರಣಾಧಿಕಾರಿ ರತೀಲಾಲ್ ಭೂಸೆ, ಸೋಮಶೇಖರ ಸ್ವಾಮಿ, ಕೇಂದ್ರದ ಮುಖ್ಯಸ್ಥ ಶಿವಾಜಿ ಶಿಂಧೆ, ಕೇಂದ್ರ ಮುಖ್ಯಗುರುಗಳು ವಿದ್ಯಾಧರ ಗುರವ, ಶಾಲೆಯ ಮುಖ್ಯಗುರುಗಳು ಶ್ರೀಶೈಲ ದೊಡಮನಿ, ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಗಂಗಾಧರ ಭೋಸಗಿ, ಉಪಾಧ್ಯಕ್ಷ ಬಸವರಾಜ ತೆಗ್ಗಿನಕೇರಿ. ಶಿಕ್ಷಣ ತಜ್ಞೆ ಗುರುಬಾಯಿ ಪ್ರಚಂಡೆ, ಗ್ರಾ.ಪಂ ಪ್ರತಿನಿಧಿ ಸಿದ್ಧೇಶ್ವರ ಗಂಗೊಂಡ, ಶಾಲಾ ವ್ಯವಸ್ಥಾಪನ ಸಮಿತಿಯ ಎಲ್ಲಾ ಸದಸ್ಯರು,ಸರಪಂಚ, ಉಪಸರಪಂಚ ಸರ್ವ ಸದಸ್ಯರು, ಪಾಲಕರು ಗ್ರಾಮಸ್ಥರು,ಸಹಕಾರಿ ಶಿಕ್ಷಕ ಬಂಧು, ಭಗಿನಿಯರು ಹಾರೈಸಿದ್ದಾರೆ.

ಫೋಟೋ ಲೈನ್:-
ಮಹಾರಾಷ್ಟ್ರ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ಪರೀಕ್ಷಾ ಮಂಡಳಿಯ ಸಹ ನಿರ್ದೇಶಕಿ ಶೋಭಾ ಖಂದಾರೆ ಇವರ ಹಸ್ತೆಯಿಂದ ಶರಣಪ್ಪ ಫುಲಾರಿ ಇವರನ್ನು ರಾಷ್ಟ್ರೀಯ ಪ್ರಯೋಗಶೀಲ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆಯಲ್ಲಿ ಡಾಯಟ ಪ್ರಾಂಶುಪಾಲ,ಇಬ್ರಾಹಿಂ ನದಾಫ್, ಸರ್ ಫೌಂಡೇಶನ್ ರಾಜ್ಯ ಸಂಯೋಜಕ ಸಿದ್ಧರಾಮ ಮಾಶಾಳೆ, ಬಾಳಾಸಾಹೇಬ ವಾಘ,ಪ್ರಾಂಶುಪಾಲ ಶಂಕರ ನವಲೇ, ಹೇಮಾ ಶಿಂದೆ,ಅನಘಾ ಜಾಹಾಗಿರದಾರ,ರಾಜ ಕಿರಣ ಚವ್ಹಾಣ ಉಪಸ್ಥಿತರಿದ್ದರು.

ವರದಿಗಾರರು: ದಯಾನಂದ ಪಾಟೀಲ