ಶಿಕ್ಷಕರು ದಿಕ್ಸೂಚಿಯಂತೆ
ವಿಲಿಯಮ್ ಆರ್ಥ‌್ರವರ್ಡ್ ಎಂಬ ಲೇಖಕ ಶಿಕ್ಷಕರು ಹೇಗಿರಬೇಕೆಂದು ವಿವರಿಸಿದ್ದಾರೆ.
ಒಬ್ಬ ಸಾಮಾನ್ಯ ಶಿಕ್ಷಕ ಪಾಠ ಹೇಳಿಕೊಡುತ್ತಾನೆ,
ಒಬ್ಬ ಒಳ್ಳೆಯ ಶಿಕ್ಷಕ ವಿವರಿಸುತ್ತಾನೆ.
ಒಬ್ಬ ಉತ್ತಮ ಶಿಕ್ಷಕ ಪ್ರದರ್ಶಿಸುತ್ತಾನೆ.
ಒಬ್ಬ ಅದ್ಭುತ ಶಿಕ್ಷಕ ಉತ್ಸಾಹ ತುಂಬುತ್ತಾನೆ.
ಪ್ರಮುಖ ಶಿಕ್ಷಣ ತಜ್ಞರು ಶಿಕ್ಷಕರು ಹೇಗಿರಬೇಕೆಂದು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅವರು ವಿವರಿಸಿದ ಕೆಲವು ಪ್ರಮುಖ ಅಭಿಪ್ರಾಯಗಳನ್ನು ವಿಶ್ಲೇಷಿಸಿ ಇಲ್ಲಿ ತಿಳಿಸಲಾಗಿದೆ.
- 1. ಪ್ರೀತಿ.. ಪ್ರೀತಿ.. ಪ್ರೀತಿ..
ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ಳಬೇಕು.
ಮಾತಾಪಿತೃಗಳಿಗಿಂತಲೂ ಶಿಕ್ಷಕರು ಹೆಚ್ಚು ಎಂಬ ಭಾವನೆ ಮಕ್ಕಳಲ್ಲಿ ಮೂಡಿಸುವಂತಿರಬೇಕು. ಹಾಗೆ ಪ್ರೀತಿಸಿ ಅವರ ಕೈಯಲ್ಲಿ ಅದ್ಭುತಗಳನ್ನು ಮಾಡಿಸಿದ ಶಿಕ್ಷಕರು ಅಂದಿನಿಂದ ಇಂದಿನವರೆಗೂ ಇದ್ದಾರೆ. ಹೊಡೆಯುವುದು, ಶಿಕ್ಷಿಸುವುದಕ್ಕಿಂತ ಪ್ರೀತಿಯಿಂದ ಅವರನ್ನು ತಿದ್ದಬಹುದು.
2. ಪಾಠ ಕಥೆಯಂತೆ ಹೇಳಬೇಕು
ಪಾಠವನ್ನು ಪಾಠದಂತೆ ಹೇಳಿಕೊಡುವವರು ಸಾಧಾರಣ ಶಿಕ್ಷಕರಾಗಿ ಉಳಿದು ಬಿಡುತ್ತಾರೆ. ಪಾಠಕ್ಕೆ ಮೊದಲು ಕೆಲವು ಉದಾಹರಣೆಗಳು, ಒಂದು ಘಟನೆ, ಸಂದರ್ಭಕ್ಕೆ ತಕ್ಕಂತೆ ಒಂದು ಚಿಕ್ಕ ಕಥೆ ಹೇಳಿ ಪಾಠ ಬೋಧಿಸಬೇಕು. ಕಥೆ ಹೇಳದಿದ್ದರೂ ಆಸಕ್ತಿ ಮೂಡಿಸುವಂತಹ ವಿಚಾರಗಳ ಮೂಲಕ ಪಾಠ ಹೇಳಿಕೊಡಬೇಕು. ಅಂತಹ ಶಿಕ್ಷಕರು ಯಾವಾಗಲೂ ಮಕ್ಕಳ ನೆನಪಿನಲ್ಲಿ ಉಳಿಯುತ್ತಾರೆ.
3. ವಿದ್ಯಾರ್ಥಿಗಳೆಲ್ಲರೂ ಒಂದೇ
ಶಾಲೆಯಲ್ಲಿ ಶಿಕ್ಷಕರಿಗೆ ಎಲ್ಲ ವಿದ್ಯಾರ್ಥಿಗಳೂ ಒಂದೇ. ತನ್ನವರು, ಬೇರೆಯವರು, ಬುದ್ಧಿವಂತರು, ದಡ್ಡರು ಎಂದು ಮುದ್ರೆಹಾಕಬಾರದು. ಮೇಲ್ದಾತಿ, ಕೀಳುಜಾತಿ ಎಂಬ ಬೇಧಭಾವ, ನಮ್ಮ ಜಾತಿ ಎಂಬ ಪ್ರತ್ಯೇಕ ಅಭಿಮಾನ ಕೂಡದು.
4. ಸೀನಿಯರ್ಸ್-ಜೂನಿಯರ್ಸ್
ಯಾವುದೇ ಉದ್ಯೋಗದಲ್ಲಿ ಅನುಭವಸ್ಥರಿಗೆ ಹೆಚ್ಚು ವಿಷಯ ತಿಳಿದಿರುತ್ತದೆ. ಆ ಸತ್ಯವನ್ನು ಎಲ್ಲರೂ ಅರಿತುಕೊಳ್ಳಬೇಕು. ಮುಖ್ಯವಾಗಿ ಬೋಧನೆಯ ವಿಷಯದಲ್ಲಿ, ಶಿಕ್ಷಕರು ಓದಿದ ಪುಸ್ತಕಗಳು ಎಲ್ಲವೂ ಒಂದೇ, ಆದರೆ ಅನುಭವಗಳು ಭಿನ್ನವಾಗಿರುತ್ತವೆ. ಆದ್ದರಿಂದ ಕಿರಿಯ ಶಿಕ್ಷಕರು ತಮ್ಮ ಸೀನಿಯರ್ಸನ್ನು ಯಾವಾಗಲೂ ಗೌರವಿಸಬೇಕು. ಅವರಿಂದ ಸಲಹೆ ಪಡೆಯಬೇಕು.
5. ನಿತ್ಯ ವಿದ್ಯಾರ್ಥಿ
ಶಿಕ್ಷಕರು ದಿನವೂ ವಿದ್ಯಾರ್ಥಿಗಳೇ, ದಿನವೂ ಹೇಳಿಕೊಡುವ ಪಾಠಗಳೇ ಆದರೂ, ವಿದ್ಯಾರ್ಥಿಗಳ ವೈಖರಿಯನ್ನು ಆಧರಿಸಿ ದಿನಕ್ಕೊಂದು ಹೊಸ ವಿಧಾನದಲ್ಲಿ ಬೋಧಿಸಬೇಕು. ರೋಮ್ ಸಾಮ್ರಾಜ್ಯ ಪತನದ ಪಾಠ ಹತ್ತುವರ್ಷದ ಹಿಂದೆ ಏನು ಹೇಳಿದರೋ ಈಗಲೂ ಅದೇ ಇದೆ. ಆದರೆ ಪ್ರಸ್ತುತ ಪರಿಸ್ಥಿತಿಗೆ ಹೋಲಿಸಿ ಬೋಧನಾ ವಿಧಾನ ಬದಲಾಯಿಸಿ ಹೇಳಿದರೆ ಚೆನ್ನಾಗಿ ಅರ್ಥವಾಗುತ್ತದೆ.
6. ಪ್ರಾಮಾಣಿಕತೆ
ಈ ದೇಶದಲ್ಲಿ ಯಾರಿಗೆ ಪ್ರಾಮಾಣಿಕತೆ ಇದ್ದರೂ, ಇಲ್ಲದಿದ್ದರೂ ಶಿಕ್ಷಕರಿಗೆ ಮುಖ್ಯವಾಗಿ ಇರಬೇಕು ಎಂಬುದು ಪ್ರಮುಖರ ಅಭಿಪ್ರಾಯ. ಏಕೆಂದರೆ ಅವರು ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಾರೆ. ಅವರು ಹೇಳಿಕೊಟ್ಟದ್ದನ್ನು ಆಚರಿಸುತ್ತ ಜೀವನಕ್ಕೆ ಅಗತ್ಯ ವಿಚಾರಗಳನ್ನು ಕಲಿಸಿದರೆ, ಆ ಸೇವೆ ಸಮಾಜಕ್ಕೆ ಒಳಿತುಂಟುಮಾಡುತ್ತದೆ. ದೇಶ ಅಭಿವೃದ್ಧಿಯಾಗುತ್ತದೆ.
7. ಅರ್ಪಣಾ ಮನೋಭಾವ
ಶಿಕ್ಷಕರು ತಮ್ಮ ವೃತ್ತಿಯನ್ನು ದೇವರ ಸೇವೆ ಎಂದು ಭಾವಿಸಬೇಕು. ದೇವರ ಮೇಲೆ ಭಕ್ತಿಯುಳ್ಳವರು ತಮ್ಮ ಧರ್ಮಾನುಸಾರ ಪೂಜೆಪುನಸ್ಕಾರಗಳನ್ನು ಎಷ್ಟು ಶ್ರದ್ಧೆಯಿಂದ ಮಾಡುವರೋ, ಶಿಕ್ಷಕರು ತಮ್ಮ ವೃತ್ತಿಯಲ್ಲಿ ಅಷ್ಟು ಶ್ರದ್ಧೆಯಿಂದ ತೊಡಗಿಸಿ ಕೊಂಡರೆ ಅವರು ಭಗವಂತನ ಸ್ವರೂಪಿಗಳೇ, ಶ್ರದ್ಧೆಭಕ್ತಿಯಿಂದ ಮಾಡಿದ ಯಾವುದೇ ಕೆಲಸದಲ್ಲಿ ತಪ್ಪುಗಳು ಸಂಭವಿಸುವುದಿಲ್ಲ.
8. ದುಶ್ಚಟಗಳಿಂದ ದೂರವಿರಿ
ಶಿಕ್ಷಕ ವೃತ್ತಿಯಲ್ಲಿರುವವರು ಕೆಟ್ಟ ಚಟಗಳಿಂದ ದೂರವಿರಬೇಕು. ಅವರನ್ನು ಕಂಡು ಮಕ್ಕಳು ಕೂಡ ಕೆಟ್ಟ ಅಭ್ಯಾಸಕ್ಕೆ ಕೈಹಾಕುತ್ತಾರೆ. ಮುಖ್ಯವಾಗಿ ಜೂಜು, ಧೂಮಪಾನ, ಕುಡಿತಗಳು ಶತೃಗಳಂತೆ ಎಂದು ಭಾವಿಸಬೇಕು. ಇದು ಆರೋಗ್ಯದ ಜೊತೆಗೆ ಶಿಕ್ಷಕ ವೃತ್ತಿಗೆ ಕಳಂಕ ತರುವಂತಹ ದುಶ್ಚಟಗಳು.
9. ಅಂಗವಿಕಲರಿಗೆ ಸಹಾನುಭೂತಿ
ಇದು ಮುಖ್ಯವಾದ ಅಂಶ ಎಂಬುದನ್ನು ಶಿಕ್ಷಕರು ಅರಿತುಕೊಳ್ಳಬೇಕು. ದುರದೃಷ್ಟವಶಾತ್ ಅಂಗವೈಕಲ್ಯಕ್ಕೆ ತುತ್ತಾದವರಿಗೆ, ಇತರ ಆರೋಗ್ಯ ಸಮಸ್ಯೆ, ತೊದಲು ಸಮಸ್ಯೆ ಇರುವವರಿಗೆ ಶಿಕ್ಷಕರು ಸಹಾನುಭೂತಿ ತೋರಿಸಬೇಕು. ಸಹ ವಿದ್ಯಾರ್ಥಿಗಳು ಅವರನ್ನು ಅವಹೇಳನ ಮಾಡದಂತೆ ಎಚ್ಚರಿಕೆ ನೀಡಬೇಕು. ದೇಹಕ್ಕೆ ಅಂಗವಿಕಲತೆಯೇ ಹೊರತು ಅವರ ಮನಸ್ಸಿಗಲ್ಲ ಎಂದು ಇತರ ವಿದ್ಯಾರ್ಥಿಗಳಿಗೆ ಹೇಳಬೇಕು.
10. ಪ್ರೀತಿ, ಪ್ರೇಮ
ಪ್ರಾಯದಲ್ಲಿರುವ ಶಿಕ್ಷಕಿ/ಶಿಕ್ಷಕರು, ಕೆಲವೊಂದು ಸಂದರ್ಭಗಳಲ್ಲಿ ನಿಯಮಗಳನ್ನು ಮರೆತು ಪ್ರೀತಿಯಸೆಲೆಗೆ ಒಳಗಾಗಬಹುದು. ಇಂತಹವರು ಕೇವಲ ಶೇಕಡಾ ಐದರಷ್ಟಿರಬಹುದು. ಅದು ಕೂಡ ಇರಕೂಡದು. ಮುಂದೆ ಮದುವೆ ಮಾಡಿಕೊಳ್ಳಬೇಕೆಂದುಕೊಳ್ಳುವವರು ಕೂಡ ಶಾಲೆಯ ಹೊರಗೆ ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೇ ಹೊರತು ವಿದ್ಯಾರ್ಥಿಗಳ ಮುಂದೆ ಕೀಳಾಗಿ ವರ್ತಿಸಬಾರದು.
11. ನಿಧಿಯ ಸದ್ವಿನಿಯೋಗ
ಕೆಲವು ಸಂದರ್ಭಗಳಲ್ಲಿ ಶಾಲಾಕಟ್ಟಡ ಕಟ್ಟಲು ಹಣ, ಹೊಸ ತರಗತಿಗಳ ನಿರ್ಮಾಣಕ್ಕೆ ಸರ್ಕಾರ ನಿಧಿ ಬಿಡುಗಡೆ ಮಾಡದಿರಬಹುದು. ಅಂತಹ ಸಂದರ್ಭದಲ್ಲಿ ಶಿಕ್ಷಕರು ಗ್ರಾಮದಲ್ಲಿ ಹಣ ಸಂಗ್ರಹ ಮಾಡಬೇಕಾಗಬಹುದು. ಅದರ ವಿವರಗಳನ್ನು ಎಲ್ಲರಿಗೆ ವಿವರಿಸಿ, ಸಕ್ರಮವಾಗಿ ನಿಧಿ ಉಪಯೋಗಿಸಿಕೊಂಡು, ಅಗತ್ಯ ಬಿದ್ದರೆ ತಮ್ಮ ಕೈಯಿಂದ ಸ್ವಲ್ಪ ಹಣ ಹಾಕಿ ಕೆಲಸ ಪೂರ್ಣವಾಗುವಂತೆ ನೋಡಿಕೊಂಡರೆ, ಭವಿಷ್ಯತ್ತಿನಲ್ಲಿ ವಿದ್ಯಾರ್ಥಿಗಳು ಕೂಡ ಪ್ರಾಮಾಣಿಕವಾಗಿ ಇರುತ್ತಾರೆ. ಹಣದ ದುರುಪಯೋಗಪಡಿಸಿ ಕೊಳ್ಳುವುದಿಲ್ಲ.
12. ಮನೆಯ ಸಮಸ್ಯೆ ಮನೆಗೇ
ಕೆಲವೊಮ್ಮೆ ಕೌಟುಂಬಿಕ ಸಮಸ್ಯೆಗಳ ಕಾರಣದಿಂದ ಕೆಲವು ಶಿಕ್ಷಕರು ತಮ್ಮ ಕೋಪವನ್ನು ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ತೋರಿಸುತ್ತಾರೆ. ಇದು ಒಂದು ರೀತಿಯ ರಕ್ಷಣಾ ತಂತ್ರ. ಇಂತಹ ಅಭ್ಯಾಸವಿದ್ದರೆ ಶಿಕ್ಷಕರಿಗೆ ಎಂದಿಗೂ ಸಮಸ್ಯೆಯೇ.