1. ಶ್ರಾವಣ ಸಂಭ್ರಮ
ಹಿಂದೂ ಮಾಸಗಳ ರಾಜ ಬಂದಿತು ಶ್ರಾವಣ.
ಬಹು ಹಬ್ಬಗಳ ಆಗರ ತಂದಿತು ಶ್ರಾವಣ.
ಪ್ರಕೃತಿಯ ಮುಡಿಗೆ ಹಸಿರು ತೋರಣ.
ಬಗೆ ಬಗೆಯ ಹೂಗಳ ಚೆಲುವಾದ ಬಣ್ಣ.
ಸದ್ಭಾವ ಶಾಂತಿಯ ವಾತಾವರಣ.
ಭಕ್ತಿಯ ಭಾವನೆಗಳ ಭಕ್ತರ ಜಾಗರಣ.
ಇಷ್ಟದೇವರ ಆರಾಧಿಸುವ ಮಾಸ ಶ್ರಾವಣ.
ಶ್ರಮಣರಿಂದ ಪಾವನವಾದ ಶ್ರವಣರ ಶ್ರಾವಣ.
ಸಂತರ ಉಪದೇಶದಿ ಶುಭಭಾವಗಳ ಆಗಮನ.
ಶ್ರಮಣರ ಬೋಧನೆಯ ಕೇಳಿ, ಮನವಾಯಿತು ಪಾವನ.
ಸತ್ಸಂಗದಲಿ ನಡೆಯುವ ಅಧ್ಯಾತ್ಮದ ಪ್ರವಚನ.
ಮನದ ಕೊಳೆಯ ತೊಳೆಸಿ, ಆಗುವುದು ಅಂತರಂಗದ ಶುದ್ಧೀಕರಣ.
ಶ್ರಾವಣದಿ ವೀರ ದೇಶಭಕ್ತರನ್ನು ನೆನೆಯುವ ಸುದಿನ.
ಭಾರತಾಂಬೆಯನ್ನು ಭಕ್ತಿಯಿಂದ ಪೂಜಿಸುವ “ಸ್ವಾತಂತ್ರ್ಯ ದಿನ”.
ಬಾಯಿ ನೀರೂರಿಸುವ ತಿಂಡಿ ತಿನಿಸುಗಳ ಪಕ್ವಾನ.
ಬಂತು ನೋಡು ಅಣ್ಣ ತಂಗಿಯರ ಪ್ರೀತಿಯ “ರಕ್ಷಾಬಂಧನ”.
ಸುಮಂಗಲೆಯರು ಆಚರಿಸುವರು ಲಕ್ಷ್ಮಿಯ “ಶುಭ ಶುಕ್ರವಾರ”.
ಹರುಷದಿ ಮಾಡುವರು “ಮಂಗಳ ಗೌರಿಯ ಮಂಗಳವಾರ”.
ಭಕ್ತಿಯಿಂದ ನಮಿಸಿ ಜೋಡಿಸುವರು ದೇವಿಗೆ ಕರ.
“ಮುತ್ತೈದೆ ಭಾಗ್ಯ” ಚಿರಾಯುವಾಗಲೆಂದು ಬೇಡುವರು ದೇವಿಯಲ್ಲಿ ವರ.
ಶ್ರಾವಣದಿ ಮಣ್ಣಿನ ನಾಗಪ್ಪನಿಗೆ ಪೂಜೆ ವಿಶೇಷ.
ಶ್ರದ್ಧೆಯಿಂದ ಹಾಲೆರೆಯುವರು ನಿನಗೆ ನಾಗಶೇಷ.
ಜೋಕಾಲಿ ತೂಗುವ ಹೆಣ್ಣು ಮಕ್ಕಳ ಹಬ್ಬ ಬಂತು “ನಾಗಪಂಚಮಿ”.
ಮೊಸರು ಮಡಿಕೆ ಒಡೆಯುವ ಗಂಡು ಮಕ್ಕಳ ಹಬ್ಬ ಬಂತು” ಶ್ರೀ ಕೃಷ್ಣ ಜನ್ಮಾಷ್ಟಮಿ”.
– ಸೌ. ಸುಜಾತಾ ರಾಜಕುಮಾರ ಚೌಗಲೆ
ಮುಪೊ, ಮಾಂಜರಿ. ತಾ. ಚಿಕ್ಕೋಡಿ
🎊🎊 🎊🎊🎊 🎊🎊🎊🎊🎊 🎊🎊
2. ಗೆಳೆಯನಿರಬೇಕು
ಕಗ್ಗತ್ತಲ ಕಳೆದು ಬೆಳಕೆರೆವ ರವಿಯಂಥ
ಕದ್ದಿಂಗಳ ಕಳೆವ ಬೆಳದಿಂಗಳ ಶಶಿಯಂಥ
ಸುರಿಮಳೆಯ ಸಹಿಸುವ ಧರಣಿಯಂಥ
ಗೆಳೆಯನಿರಬೇಕು ಒಬ್ಬ ಮುತ್ತಿನಂಥ
ನಾವೆ ದಾರಿ ತಪ್ಪದಿರಲೆಂಬ ದಿಕ್ಸೂಚಿಯಂಥ
ದಾರಿ ತಪ್ಪಿದ ನಾವೆಗೆ ದೀಪಸ್ತಂಭದಂಥ
ದಾರಿಯುದ್ದ ಜೊತೆ ಇರುವ ಕಾಲುಗಳಂಥ
ಗೆಳೆಯನಿರಬೇಕು ಒಬ್ಬ ಮುತ್ತಿನಂಥ
ನೂರು ಮುಳ್ಳು ನಡುವ ಗುಲಾಬಿಯಂಥ
ದುರ್ವಾಸನೆ ಕಳೆದೊಗೆವ ಧೂಪದಂಥ
ಹೃದಯ ದೇಗುಲದ ದೇವತೆಯಂಥ
ಗೆಳೆಯನಿರಬೇಕು ಒಬ್ಬ ಮುತ್ತಿನಂಥ
ಗುರಿ ನೀಡಿ ದಾರಿ ತೋರೋ ಗುರುವಿನಂಥ
ಗದರಿ ಬೆದರಿಸಿ ಹೇಳುವ ತಂದೆಯಂಥ
ಸುಡುಬಿಸಿಲಲಿ ತಂಪೆರೆವ ತಾಯಿಯಂಥ
ಗೆಳೆಯನಿರಬೇಕು ಒಬ್ಬ ಮುತ್ತಿನಂಥ
ಬಾಳ ಮರುಭೂಮಿಯ ಓಯಾಸಿಸ್ ನಂಥ
ಕಂಬನಿ ಮಹಾಪೂರ ಸಹಿಸುವ ಸಾಗರದಂಥ
ಮಮತೆಯಿಂದ ಸಂತೈಸುವ ಮಡದಿಯಂಥ
ಗೆಳೆಯನಿರಬೇಕು ಒಬ್ಬ ಮುತ್ತಿನಂಥ
ಡಾ. ಗುರುಸಿದ್ಧಯ್ಯಾ ಸ್ವಾಮಿ
ಅಕ್ಕಲಕೋಟ ಮಹಾರಾಷ್ಟ್ರ
🎊🎊 🎊🎊🎊 🎊🎊🎊🎊🎊 🎊🎊
3. ನಿಸರ್ಗ ಚಿಲುಮೆ
ಮೂಡಣದ ಮುಗಿಲು ಕೆಂಪಾಗಿ
ಎಳೆ ಬಿಸಿಲು ಇಂಪಾಗಿ
ಹಕ್ಕಿಗಳ ಜೀವಭಾವ ಧ್ವನಿಯಾಗಿ
ಪಲ್ಲವಿಸಿ ಕಲೆಯ ಚೆಲುವಲಿ ಪ್ರಕೃತಿ
ವಿಕಸಿತ ಹೂ ದಳ ದಳದಲಿ
ಚಿಮ್ಮುತ ಎಲೆ ಎಲೆಯ ಮೇಲೆ
ಮುಗಿಲ ಮುತ್ತಿನ ಹನಿ ಹನಿ ಲೀಲೆ
ತಾರೆಗಳ ತೋಟದಿ ನಗುತಿರುವ ಚಂದಿರ
ಜಾಜಿ ಮಲ್ಲಿಗೆ ಸೌರಭದ ಕಂಪು ಹೊಮ್ಮುತ
ನೀಲಾಕಾಶದ ಬಣ್ಣದ ಬೆಡಗಿಗೆ
ವಸಂತನ ವದನ ಮಿಡಿತದಲಿ
ನಸುಗೆಂಪು ಎಳೆಬಾಲೆ ಸೊಂಪಲಿ
ಹೂದೋಟ ಉಯ್ಯಾಲೆಯಾಗಿ ತೂಗಿತ್ತು
ಮೆಘಮಾಲೆಯ ಭೋರ್ಗರೆತ
ಕಡಲ ಅಲೆಗಳ ತರಂಗ ಮೊರೆತ
ನಿಸರ್ಗ ಮದುವಣಗಿತ್ತಿ ಶೋಭಿತೆಯ ಶೃಂಗಾರಕೆ
ಮನತಣಿದು ಮೌನದಿ ಬಾಗುತ
ನೋಟಕ್ಕೆ ನವಿರಾಗಿ ಪರಿಮಳ ಹರಡಿತ್ತು
– Yashoda ramakrishna
🎊🎊 🎊🎊🎊 🎊🎊🎊🎊🎊 🎊🎊
4. ಅವ್ವನ ಸೆರಗು
ನನ್ನ ಪ್ರೀತಿಯ ಅವ್ವನ ಸೆರಗದು
ನನಗೆಲ್ಲದಕೂ ಆಸರೆಯದು
ಕೂಸಿದ್ದಾಗ ಅಮೃತವನ್ನುಂಡಿದ್ದು
ಮಳೆಯಲಿ ನೆಂದು ಬಂದಾಗ
ಸೆರಗು ತಲೆ ಒರೆಸಿದ ಟಾವೆಲ್
ಅಪ್ಪನ ಕೋಪಕೆ ಸೆರಗೇ ಆಸರೆ
ಶಾಲೆಯ ಪ್ರಥಮ ದಿನದಂದು
ಅವ್ವನ ಬಿಟ್ಟಿರಲಾರದ ಕಣ್ಣೀರ
ಕಂಗಳಿಗೆ ಸೆರಗು ಕರವಸ್ತೃದಂತೆ
ಪರೀಕ್ಷೆಯಲಿ ಮಾರ್ಕ್ ಕಡಿಮೆ
ಆದಾಗ ಅವ್ವನ ಸೆರಗಿನ ಮರೆ
ಪ್ರವಾಸದಲಿ ನನಗದು ಶಾಲು
ರಣ ಬಿಸಿಲಿಗೆ ಟೊಪ್ಪಿಗೆಯಂತೆ
ಸಂತೆಗೆ ಹೊರಟಾಗ ಸೆರಗಿನತುದಿ
ದೀಪಸ್ತಂಭದಂತೆ ಬಲು ಆಸರೆ
ಅವಸರದಿಂದ ತಿಂದೋಡುವಾಗ
ಬಾಯೊರೆಸುವ ನ್ಯಾಪ್ಕಿನ್ ದಂತೆ
ಅವ್ವನಿರುವವರೆಗೂ ಸಾಕಷ್ಟು ಕಲಿತೆ
ಆ ಸೆರಗಿನಿಂದಲೇ ಸಹಜತೆ
ಆ ಪದರದಿಂದಲೇ ಸಭ್ಯತೆ
ಅವ್ವನ ಸೆರಗಿನಿಂದಲೇ ಸಂಸ್ಕೃತಿ
ಸೆರಗಿನ ತುದಿಯಲ್ಲಿ ಹರಿದರೂ
ಮುಖ ತೋರಿಸಿ ನಗುವಾಸೆ
ಪಾರದರ್ಶಕತೆಯ ಮನಸಿನಂತೆ ಸೆರಗು
– ಅನ್ನಪೂರ್ಣ ಸಕ್ರೋಜಿ. ಪುಣೆ
🎊🎊 🎊🎊🎊 🎊🎊🎊🎊🎊 🎊🎊
5. ಗಂಡ ಹೆಂಡಿರ ಜುಗಲ್ ಬಂದಿ
ನನ್ನನು ನೋಡಲು ಬಂದನಿವನು
ಪಸಂದಾಗಿ ನಿಶ್ಚಿತಾರ್ಥ ಆಯಿತು
ಅತ್ತಿ ಮಾವ ಸಂಗೀತಗಾರರು
ಒಂದ್ಹಾಡ ಹೇಳ ತಂಗಿ ಅಂದರು
ನಾನೂ ಒದರಾಕಸುರುಮಾಡಿದೆ
ಏನ ಗಂಟುಬಿತ್ತ ಯವ್ವಾ ಈ
ತಿರಸಟ್ಟಿ ಗಂಡಾನವ್ವ ಹೇಳಿದ್ದಂತೂ
ಕೇಳಂಗಿಲ್ಲ ತನಗಂತೂ ತಿಳ್ಯಂಗಿಲ್ಲ
ಹಾಡುತ್ತಲೇ ಉತ್ಸಾಹಿ ಗಂಡ ಎದ್ದು
ನನ್ನತ್ತ ಮುಖಮಾಡಿ ಏನ್ ಬೆರಕಿ
ಹೆಂಡ್ತಿ ಅದಾಳಯವ್ವಾ ಮಾಡಿದ್ದೆಲ್ಲಾ
ತಾನ ತಿಂದ ಕುಂದ್ರೊ ತಿನಬೋಕಿ
ಕುಳಿತವರೆಲ್ಲ ಮಸ್ತ್ ಜುಗಲ್ ಬಂದಿ
ಸೇರಿಗೆ ಸವ್ವಾ ಸೇರ ಕೂಡಿರಿಬ್ರು
ನನ್ನಿಷ್ಟದಂಗ ನಾ ಹಾಡತೇನಿ ತಾವು
ತಮ್ಮಿಷ್ಟದ ಹಂಗ ಹಾಡ್ರಿ ಮಾರಾಯ
– ಅನ್ನಪೂರ್ಣ ಸಕ್ರೋಜಿ. ಪುಣೆ
🎊🎊 🎊🎊🎊 🎊🎊🎊🎊🎊 🎊🎊
6. ವಿಜಯ ಪಥ
ದೇಶ ನನ್ನದೆನ್ನುವ ಭಾವ ಮೂಡಿ ಮನದಲಿ
ವಿಜಯ ಪಥಕೆ ಸಾಗಿ ಧೈರ್ಯ ತುಂಬಿ ಎದೆಯಲಿ
ಸ್ವಾತಂತ್ರ್ಯ ಸಂಗ್ರಾಮದಲಿ ಹೋರಾಡಿ ದೇಶ ಭಕ್ತರು
ಜೀವವನ್ನು ತೆತ್ತು ಇವರು ಅಮರರಾದರು !!
ನಾಡಿನೇಳ್ಗೆಯೊಂದೆ ಜಪಿಸಿ ಧ್ಯೇಯ ಮಂತ್ರವ
ಸುಖವ ಮರೆತು ದುಡಿದರು ಮಣಿಸಿ ತಂತ್ರವ
ಆಂಗ್ಲರ ದಬ್ಬಾಳಿಕೆ ಅವರ ಕಪಿಮುಷ್ಟಿಯಲ್ಲಿ ಸಿಲುಕಿ
ನಲುಗಿ ನೊಂದು ಬೆಂದರಂದು ಮಿಡಿದು ಕಂಬನಿ !!
ತಮ್ಮ ತನ ಮರೆತು ದ್ರೋಹವೆಸಗಿ ಸ್ವಾರ್ಥಿಗಳು
ಐಕ್ಯತೆ ತೊರೆದು ಮಾಡಲು ಒಳ ಜಗಳಗಳು
ಸ್ಥಳ ಊರಿದರು ಶತ್ರುಗಳು ಪಡೆದು ಇದರ ಲಾಭ
ಮೂಡರಾಗಿ ಸೆರೆಯಾದರು ಇರಲು ಮೋಹ,ಲೋಭ !!
ಗಾಂಧಿ,ನೆಹರು,ಶಾಸ್ತ್ರಿ,ಪಾಂಡೆ ಆಜ಼ಾದ್,ಭಗತ್ ಸಿಂಗ್
ತಿಲಕ್,ಪಟೇಲರು,ಚೆನ್ನಮ್ಮ,ಸುಭಾಷ್ ಚಂದ್ರ ಭೋಸ್
ಅನೇಕರು ತಮ್ಮ ಗುಂಡಿಗೆಯ ರಕ್ತವನ್ನು ಹರಿಸಿ
ಸ್ವಾತಂತ್ರ್ಯವನ್ನು ಪಡೆದರು ಭಾರತಾಂಬೆಗೆ ನಮಿಸಿ !!
– ಎ.ಸರಸಮ್ಮ, ಚಿಕ್ಕಬಳ್ಳಾಪುರ
🎊🎊 🎊🎊🎊 🎊🎊🎊🎊🎊 🎊🎊
7. 🙏ಭಕ್ತಿಗೀತೆ 🙏
“”””””””””””””””
ಸಾಗರತನಯೇ ಕಮಲನಯನೇ ಶ್ರೀಲಕ್ಷ್ಮಿ
ಜಗಜ್ಜನನಿ ಸಕಲಭಾಗ್ಯದಾಯಿನಿ ವರಲಕ್ಷ್ಮಿ 2.
ಶ್ರೀನಿವಾಸನ ಹೃದಯ ವಿಹಾರಿಣಿ
ಜಗಜ್ಜ್ಯೋತಿ ಶಿವಶಕ್ತಿ ಅನ್ನಪೂರ್ಣೆ
ಅಭಯ ಪ್ರದಾಯಿನಿ ಆದಿ ಪರಾಶಕ್ತಿ
ಮಂಗಳಾಂಗಿ ವರದ ಲಕುಮಿಯೇ
ಸಾಗರತನಯೇ ಕಮಲನಯನೇ
ಜಗಜ್ಜನನಿ “””””””
ಕಾಮಿತಾರ್ಥ ಕರುಣಿಸುವ ಪರಮೇಶ್ವರಿ
ಸರ್ವವಂದಿತೆ ಭಗವತಿಯೆ ಭುವನೇಶ್ವರಿ
ಶುಭದಾಯಿನಿ ಜಯದೇವಿ ಚಾಮುಂಡೇಶ್ವರಿ
ದಯಾಪೂರ್ಣೆ ಕೃಪೆತೋರಮ್ಮ ದುರ್ಗಾಮಾತೆ
ಸಾಗರತನಯೇ ಕಮಲನಯನೇ
ಜಗಜ್ಜನನಿ::::::::
ಸುಗಂಧ ಪುಷ್ಪಗಳ ಅಲಂಕೃತೆ
ಸಿಂಹವಾಹಿನಿ ದುಃಖ ವಿನಾಸಿನಿ ನೀನಮ್ಮ
ಮಂಗಳ ಪಾಡುತ ಆರತಿ ಬೆಳಗುವೆವಮ್ಮ
ಲೋಕಪಾಲಿನಿ ಮನದ ಮೊರೆಯ ಆಲಿಸಮ್ಮ
ಸಾಗರತನಯೇ ಕಮಲನಯನೇ
ಜಗಜ್ಜನನಿ:::::::::
– Yashodaramakrishna
🎊🎊 🎊🎊🎊 🎊🎊🎊🎊🎊 🎊🎊
8. ಸಮಯ ನಾವು ಮತ್ತು ಅವನು
ಬಿಟ್ಟರೂ ಬಿಡದೀ ಮಾಯೆಯ ತೆರದಿ
ಭೂತಕಾಲದ ಕುರುಹುಗಳ ತೂಗುಗತ್ತಿ..
ತಿಳಿದೂ- ತಿಳಿಯದೇಯೂ ಮಾಡಿದ್ದರೂ ಬೆಲೆ ತೆತ್ತುವುದು ಕಟ್ಟಿಟ್ಟ ಬುತ್ತಿ…!
ಪಾಪಶಮನದ ಕಾರ್ಯ ಎಷ್ಟು ತ್ವರಿತಗತಿಯಲ್ಲಿ ಕೈಗೊಳ್ಳುವಿರೋ ಅಷ್ಟು ಒಳಿತೆಂದಿಹುದು, ವಿಧಿಯು ನೋಡಿ ನಗುತಲಿಹುದು!!.
ನೆನಪುಗಳು
ಹಗಲು-ಇರುಳಂತೆ ಅನವರತ.
ಅವು ಸೂರ್ಯ-ಚಂದ್ರರ ಪಾತ್ರಗಳಂತೆ
ಕಾಡುವವು ಹಗಲಿರುಳು ಜತೆಗಿರುತ.
ಮರೆವಿನಂಥ ಮೋಡಗಳ ಕಾಟವು
ವಿಧಿ ಲಿಖಿತ!.
ಕೆಲವು ದೀರ್ಘ..
ಹಲವು ಮಾಸದಿದ್ದರೂ ಸರಿಸಿ ನಡೆಯಬೇಕು ಜೀವನ ಮಾರ್ಗ.
ಇವುಗಳ ನಡುವೆ ಸಮಯಯೂ ಸಾಗುವುದು ನಮ್ಮ ಜೊತೆ ಆದರೂ ಅದಕ್ಕೆ ತನ್ನದೇ ಚಲನೆ, ನಿಶ್ಚಿತ ವೇಗಿ!
ನಾವು ಹಿಗ್ಗಿದಾಗ ಅದು ಬೇಗ ಸಾಗಿ,
ದಂತೆ,ನಾವು ಕುಗ್ಗಿದಾಗ ಸಾಗದೇ ಬೀಗಿ
ನಿಂತಂತೆ ಅನಿಸುವುದು..!
ಮನದಲ್ಲಿ ರಾಮ-ರಾವಣರಿದ್ದರೂ ಯಾಕೋ ರಾಮನಿನ್ನೂ ನಮ್ಮಲ್ಲಿ ಬಂದಂತೆ ಕಾಣುವುದಿಲ್ಲ..
ಇರಬಹುದು ಇನ್ನೂ ವಿವೇಕದ ವನದಿ!.,
ಮೆರೆಯುತಿಹ ರಾವಣ ನಿತ್ಯ ಮನದಿ!.
ಆನಂದ ಭಾಷ್ಪ,ಕಣ್ಣೀರು ಅಂದಿನ ಆ ಸಮಯದ ಬಳುವಳಿ!..
ಎರಡಕ್ಕೂ ಕಾರಣಗಳಿವೆ ಹರಿಯ ಬಳಿ.
ನಮಿಸಿ ನಡೆಯುವ.. ತಿಳಿದು ಗಮಿಸುವ!.
– ಅ ದೇ ಉವಾಚ
🎊🎊 🎊🎊🎊 🎊🎊🎊🎊🎊 🎊🎊
9. ಪ್ರಭುದೇವ ಜ್ಞಾನವಿಕಾಸ ವೇದಿಕೆ ಶನಿವಾರದ ಸಾಹಿತ್ಯ ಸ್ಪರ್ಧೆಗಾಗಿ
ಶಿಶುಕಥೆ ರಚನೆ
ದತ್ತಪದ.. ಹಾವು, ನರಿ, ನಿಮ್ಮಿಷ್ಟದ್ದು
+++++++++++++++++++++++++
1. ಹಾವು
ಪುಟಾಣಿ ಮಕ್ಕಳೇ ಕಥೆ ಎಂದರೆ ನಿಮಗೆಲ್ಲ ಇಷ್ಟವಲ್ಲವೆ . ಹಾಗಿದ್ದರೆ ಬನ್ನಿ ಇವತ್ತು ಸುಂದರವಾದ ಹಾವಿನ ಹಳ್ಳಿಯ
ಕಥೆ ಹೇಳುವೆ ಕೇಳಿ.
ಮಹಾರಾಷ್ಟ್ರದ ಸೊಲ್ಲಾಪುರ ತಾಲೂಕಿನ ಶೆಟ್ಪಾಲ ಎನ್ನುವ ಹಳ್ಳಿಯಲ್ಲಿ 2600 ಜನವಸತಿ ಇರುವ ಊರು. ಈ ಊರನ್ನು ಇಲ್ಲಿಯ ಹಾವುಗಳನ್ನು ನೋಡಲು ಸಾವಿರಾರು ಜನ ಬರುತ್ತಾರೆ ಈಗಲೂ. ಮಕ್ಕಳೇ ಇಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ವಿಶೇಷವಾಗಿ ಹಾವಿಗೆಂದೇ ಬಿಲಗಳನ್ನು ಕಟ್ಟಿಸಿರುತ್ತಾರೆ. ಯಾರಿಗೂ ಎಂದಿಗೂ ಹಾವು ಕಚ್ಚಿಲ್ಲವಂತೆ. ಎಲ್ಲಾ ಜನ ತಮ್ಮ ತಮ್ಮ ಕೆಲಸಗಳನ್ನು ಮಾಡಿಕೊಂಡು ಹಾಯಾಗಿರುವಂತೆ ಹಾವುಗಳೂ ಕೂಡ ಅಡ್ಡಾಡಿ ಕೊಂಡು ಅವರ ಜೊತೆ ವಾಸಿಸುತ್ತವೆ. ಬೇರೆ ಬೇರೆ ಜಾತಿಯ ಹಾವುಗಳಿವೆ. ಮಕ್ಕಳೇ ಹಾವು ಹಾಲು ಎಂದೂ ಕುಡಿಯುವುದಿಲ್ಲ. ಯಾರಾದರೂ ಅವುಗಳಿಗೆ ತೊಂದರೆ ಕೊಟ್ಟರೆ ಬಿಡುವುದಿಲ್ಲ. ಶೆಟ್ಪಾಲ ಹಳ್ಳಿಯ ಪ್ರತಿ ಮಕ್ಕಳು ಹಾವಿನ ಜೊತೆ ಆಡುತ್ತಾರೆ. ಕೊರಳಲಿ ಧರಿಸುತ್ತಾರೆ. ಮಕ್ಕಳೇ ಹಾವುಗಳು ರೈತನ ಮಿತ್ರವಾಗಿವೆ. ಹೊಲಗಳಲ್ಲಿ, ಇಲಿ ಹೆಗ್ಗಣ ಬೆಳೆ ನಾಶ ಮಾಡುವುದನ್ನು ತಡೆಯುತ್ತವೆ. “ನಾವು ಯಾವಾಗಲೂ ಎಲ್ಲರ ಜೊತೆ ಪ್ರೀತಿಯಿಂದ ಇದ್ದರೆ ಪ್ರೀತಿಯನ್ನೇ ಪಡೆಯುತ್ತೇವೆ”
2. ನರಿ, (ಸ್ವಗತ)
ನರಿಯು ಯಾವಾಗಲೂ ಮೋಸತನಕ್ಕೆ ಪ್ರಸಿದ್ಧ ಎಂದು ಕೇಳಿದ್ದೀರಿ ಆದರೆ ಈ ರೀತಿ ನನ್ನನ್ನು ಮೋಸಗಾರನೆಂದು ಗುಲ್ಲೆಬ್ಬಿಸಿದವರು ಸಾಹಿತಿಗಳು ಕಥೆಗಾರರು. ಬರಹಗಾರರು. ಮಾನವರ ಬುದ್ಧಿಗೂ ನನ್ನನ್ನೆ ಹೋಲಿಸಿದ್ದಾರೆ.
ಅವರೆಲ್ಲರೂ ನಮ್ಮ ಕಾಡಿನಲ್ಲಿ ವಾಸವಾಗಿದ್ದು
ಅನುಭವಿಸಿ ಬರೆದಿಲ್ಲ. ಈ ದಿಟ್ಟ ಜಂಗಲ್ದಲ್ಲಿರಲು ಎದೆಗಾರಿಕೆ ಬೇಕು. ಹಿಮ್ಮತ್ ಬೇಕು. ಮೊದಲು ಬೇಟೆಗಾರರು ರಾಜರು ಬರ್ತಾ ಇದ್ದರು ಬೇಟೆಗೆ. ಈಗ ಏನೂ ಇಲ್ಲ. ಮಕ್ಕಳೇ ನಾವು ಒಳ್ಳೆಯವರು ನಿಮ್ಮೂರಿನಲ್ಲಿಯಂತೆ ನಮ್ಮ ನಮ್ಮ ಅರಣ್ಯದಲ್ಲಿ ನಮ್ಮದೇ ಆದ ಏರಿಯಾಗಳಿವೆ. ಅಲ್ಲಿ ಅವರವರದೇ ಸಾಮ್ರಾಜ್ಯ ಅವರ ಮುಖ್ಯಸ್ಥರೇ ಆಡಳಿತಗಾರರು . ಒಮ್ಮೆ ಒಂದು ದಿನ ಪಾಪ ಆಕಳ ಕರು ದಾರಿ ತಪ್ಪಿ ಬಂದುಬಿಟ್ಟಿತು. ನನ್ನ ಬಳಗದವರು ಅದನ್ನು ಅಟ್ಟಿಸಿಕೊಂಡು ಓಡುವುದು ಕಂಡು ,ನಾನು ಓಡಿಹೋಗಿ ಅವರನ್ನು ನಿಲ್ಲಿಸಿದೆ. ನಾನು ಕರುವನ್ನು ಸಮಾಧಾನಿಸಿದೆ. ನಿಮಗೆ ನಗು ಬಂದಿತೇ? ನಮ್ಮ ಪ್ರಾಣಿಗಳ ಭಾಷೆ ಬೇರೆಯದೇ ಇರುತ್ತದೆ. ನಿಮ್ಮಲ್ಲಿ ಹೇಗೆ ಬೇರೆ ಭಾಷೆಯ ಪುಟ್ಟ ಮಕ್ಕಳು ಹಾವ ಭಾವದಿಂದ ಸೊನ್ನೆಯಿಂದ ಅರ್ಥ ಮಾಡಿಕೊಳ್ಳುವಿರೋ ಹಾಗೆ ನಾವೂ ಮಾಡಿಕೊಳ್ಳುತ್ತೇವೆ. ಆ ಕರುವನ್ನು ಕರೆದುಕೊಂಡು ಅರಣ್ಯ ದಾಟಿಸಿ ಬಂದೆ. ಅಲ್ಲಿ ಅದರ ತಾಯಿ ಕಾಯುತ್ತೀತ್ತು.
ನೋಡಿ ನಾನು ನರಿಯಾದರೂ ಒಳ್ಳೆಯ ಕೆಲಸ ಮಾಡಿದೆನಲ್ಲವೆ. ಇನ್ನು ಮೇಲಾದರೂ ನಮ್ಮನ್ನು ನಂಬಿ ಮಕ್ಕಳೇ. ಈ ನನ್ನ ನಿಜ ಕಥೆ ಎಲ್ಲೆಡೆ ಹಂಚಿಕೊಳ್ಳಿ. ಅಂತರ್ಜಾಲದಲ್ಲಿ ಫೇಸ್ಬುಕ್ ಇನಸ್ಟಾಗ್ರಾಮದಲ್ಲಿ ಹಂಚಿಕೊಳ್ಳಿ. ಪರಿವರ್ತನೆ ಬೇಕು ಜೀವನದಲ್ಲಿ.
– ಅನ್ನಪೂರ್ಣ ಸಕ್ರೋಜಿ ಪುಣೆ