ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ
ಈ ಬ್ರಹ್ಮಾಂಡದಲ್ಲಿ ಹುಟ್ಟುವ ಪ್ರತಿಯೊಂದು ಜೀವರಾಶಿಯು ಹಲವಾರು ಸಾಧನೆಗಳನ್ನು ಮಾಡುತ್ತಾ ತೆವಳುತ್ತಾ ದುರ್ಗಮವಾದ ಕ್ಷಣಗಳನ್ನು ಪೂರೈಸುತ್ತಾ ಪೂರ್ವಾರ್ಜಿತ ಕರ್ಮಗಳ ಫಲಗಳ ರೂಪದಲ್ಲಿ ಬಂದಂತಹ ಜೀವನವನ್ನು ಎಷ್ಟೋ ವರ್ಷಗಳ ಕಾಲ ಕ್ರಮಿಸಿ ನಂತರ ಅತ್ಯಂತ ಶ್ರೇಷ್ಠ ವಾದ ಮಾನವ ಜನ್ಮಕ್ಕೆ ಬಂದು ನಿಲ್ಲುತ್ತಾನೆ.
…ಜನ್ಮದ ಆರಂಭದಿಂದ ಮೊದಲುಗೊಂಡು ಭಗವದನುಗ್ರಹದಿಂದ ಹಾಗೂ ಕಾಲ ಯೋಗ ಸಂಯೋಗದಿಂದ ಪೂರ್ವಾರ್ಜಿತ ಕರ್ಮಗಳ ಫಲದಿಂದ ಉತ್ತಮವಾದ ತಂದೆ ತಾಯಿಗಳು ಪ್ರಾಪ್ತವಾಗಿ ಅವರಿಂದ ಯೋಗ್ಯವಾದ ಶಿಕ್ಷಣವನ್ನು ಪಡೆದು ಸನ್ಮಾರ್ಗವನ್ನು ಹಾಗೂ ಜ್ಞಾನದ ಪ್ರಮುಖ ತಳಹದಿಯನ್ನು ನಿರ್ಮಿಸಿ ಕೊಂಡು ನಂತರ ವ್ಯಾವಹಾರಿಕ ಶಿಕ್ಷಣದತ್ತ ಮುಖ ಮಾಡಿ ಜೊತೆಗೆ ನಿತ್ಯ ಅನುಷ್ಠಾನಗಳನ್ನು ಎಡೆಬಿಡದೆ ಮಾಡುತ್ತಾ ಶ್ರೇಷ್ಠವಾದ ಜೀವನದ ಗುರಿಯನ್ನು ಮುಕ್ತಿಯ ಪಥ ದತ್ತ ಕೊಂಡೊಯ್ಯುವ ಗುರುಗಳ ದಿವ್ಯ ಮಾರ್ಗದರ್ಶನದಿಂದ ಜೀವನವನ್ನು ಅತ್ಯಂತ ಸುಲಲಿತವಾಗಿ ಧರ್ಮ ಮಾರ್ಗವಾಗಿ ಸತ್ಯಯುತವಾದ ಹಾಗೂ ಭಗವದ್ಭಕ್ತಿಯಲ್ಲಿ ಸ್ಥಿರವಾದ ಚಿತ್ತವನ್ನು ಇರಿಸಿ ಗುರುಗಳು ತಿಳಿಸಿದ ಮಾರ್ಗದಲ್ಲಿ ನಿರಾತಂಕವಾದ ಜೀವನವನ್ನು ನಡೆಸಿ ಕೊನೆಗೆ ನಿತ್ಯ ಅನುಷ್ಠಾನದಲ್ಲಿ ಭಗವಂತನ ಪಾದಪದ್ಮಗಳಲ್ಲಿ ಸಂಪೂರ್ಣ ಸ್ಥಿರವಾದ ಮನಸ್ಸನ್ನು ನಿಲ್ಲಿಸಿ ಪ್ರಕರಣವಾದ ಬೆಳಕನ್ನೇ ಆಶ್ರಯಿಸುತ್ತ ಜೀವನವನ್ನು ಸಾರ್ಥಕ ಪಡಿಸಿಕೊಂಡು ಹರಿದು ಹೋದ ಸಾಧನೆಗೆ ಅವಶ್ಯವಲ್ಲದ ಜೀರ್ಣವಾದ ಈ ದೇಹವನ್ನು ಬಿಡುವುದಕ್ಕೆ ಸರ್ವತ್ರ ವ್ಯವಸ್ತೆ ಮಾಡಿಕೊಂಡು ಹಂಸ ಸ್ವರೂಪನಾದ ಪರಬ್ರಹ್ಮನನ್ನು ಹೊಂದಬೇಕು…. ಇದು ಗುರಿ… ಈ ಗುರಿಯನ್ನು ನಮ್ಮ ಮನಸ್ಸಿನಲ್ಲಿ ಬೀಜ ವಾಪ ಮಾಡುವಂತಹ ಗುರುಗಳಿಗೆ ಅನಂತ ಪ್ರಣಾಮಗಳನ್ನು ಪ್ರತಿ ದಿನ ಸಲ್ಲಿಸಬೇಕು… ಆದರೆ ಈ ಪೌರ್ಣಮಿಯ ದಿನ ಬಹಳ ವಿಶೇಷ ….ಮನುಷ್ಯ ಜನ್ಮವನ್ನು ಸಾರ್ಥಕ ಮಾಡಿಕೊಳ್ಳುವುದಕ್ಕೆ ಹಾಗೂ ಜೀವನದ ಪ್ರಮುಖ ಹಾದಿಯನ್ನು ಹಾಕಿ ಕೊಟ್ಟಂತಹ ಗುರುಗಳಿಗೆ ನಾವು ಯಾವ ವಿಧದಲ್ಲಿ ಸೇವೆ ಮಾಡಿದರೂ ತೀರಾ ಕಮ್ಮಿ… ಪ್ರತಿದಿನ ಸ್ಮರಣೆ ಸಾಧ್ಯವಾದರೆ ದರ್ಶನ ವರ್ಷಕ್ಕೆ ಒಂದು ಬಾರಿಯಾದರೂ ಆಶೀರ್ವಾದ ಪಡೆಯದ ಈ ಜನ್ಮ ಏತಕೆ…… ಹಾಗಾಗಿ ಆಶೀರ್ವಾದಕ್ಕಾಗಿ ಗುರುಗಳ ದರ್ಶನಕ್ಕೆ ಒಂದು ಬಾರಿಯಾದರೂ ವರ್ಷಕ್ಕೆ ಹೋಗಬೇಕಾದದ್ದು ಅತ್ಯಗತ್ಯ. ಪ್ರಯತ್ನ ಪಟ್ಟಾದರೂ ಈ ಗುರುಪೌರ್ಣಿಮೆಯ ದಿನ ಗುರುಗಳ ದರ್ಶನವನ್ನು ಮಾಡಿ ನಮ್ಮ ಮಸ್ತಕವನ್ನು ಅವರ ಪಾದದ ಹೆಬ್ಬೆರಳಿನ ಮುಂದಿರುವ ರಜಕ್ಕೆ ನಮಸ್ಕರಿಸಬೇಕು… ಅಲ್ಲವೇ
ಯಾರ್ಯಾರು ಗುರುಗಳು ಎಂಬುದನ್ನು ಚೆನ್ನಾಗಿ ಅರಿಯಬೇಕು-
1) ಮೊದಲನೆಯದಾಗಿ ಹುಟ್ಟಿದ ಕ್ಷಣದಿಂದ ಹಿಡಿದು ಮಮತೆಯಿಂದ ಪರಿಪಾಲಿಸಿ ಅಮೃತವನ್ನು ಕುಡಿಸಿ ಬೆಳೆಸಿದ ಅಕ್ಷರಗಳನ್ನು ಕಲಿಸಿದ ಅಮೃತಾನಂದ ಸ್ವರೂಪಿಣಿಯಾದ ತಾಯಿಯೇ ಮೊದಲ ಗುರು
2) ಎರಡನೆಯದಾಗಿ ಧರ್ಮ ಕರ್ಮ ಸಂಸ್ಕಾರ ಸತ್ಯ ಜ್ಞಾನ ಇವನ್ನೆಲ್ಲ ನಾವು ತಂದೆಯಿಂದ ಕಲಿತದ್ದು…ಧರ್ಮ ಮೂರ್ತಿಯನ್ನು ಬೇರೆ ಎಲ್ಲೂ ನೋಡುವ ಅಗತ್ಯವಿಲ್ಲ…ಹಾಗಾಗಿ
ತಂದೆಯವರು ಎರಡನೆಯ ಗುರುಗಳು
3) ನಮ್ಮ ಮನೆಗಳಿಗೆ ಪುರೋಹಿತ್ಯ ಮಾಡಿ ನಮಗೆ ಶುಭಾಶುಭ ಎಲ್ಲ ಕಾರ್ಯಗಳನ್ನು ಸುಲಲಿತವಾಗಿ ಮಾಡಿಸಿ ನಮಗೆ ಭಾದೆ ಕೊಡದೆ ನಮ್ಮನ್ನು ಸದಾಕಾಲ ನೆಮ್ಮದಿಯಿಂದ ಇರುವಂತೆ ಆಶೀರ್ವದಿಸುವ
ಕುಲ ಪುರೋಹಿತರು ಮೂರನೆಯ ಗುರುಗಳು
4) ವೇದ ವೇದಾಂತ ಸಂಸ್ಕೃತ ಇತಿಹಾಸ ಪುರಾಣ ಧಾರ್ಮಿಕ ಕಾರ್ಯಗಳು ಹೇಳಿಕೊಡುತ್ತಾ ಸಮಗ್ರ ಪಾಠಗಳನ್ನು ಮಾಡಿ ನಮ್ಮಲ್ಲೇ ಇರುವ ಪ್ರಖರವಾದ ಬೆಳಕಿನ ಕಿರಣಗಳಿಂದ ಅಂಧಕಾರವನ್ನು ನಿವಾರಣೆ ಮಾಡಿ ಜೀವನದಲ್ಲಿ ಧೈರ್ಯ ಧರ್ಮ ಜ್ಞಾನ ತುಂಬುತ್ತಾ ಮುಕ್ತಿಯ ಮಾರ್ಗದ ಕಡೆಗೆ ನಮ್ಮನ್ನು ನಡೆಯುವಂತೆ ಪ್ರೇರೇಪಿಸುವ ನಾವು ಏನನ್ನು ಸಮರ್ಪಿಸಿದರು ಸಹ ಚಿಕ್ಕದಾಗಿ ಬಿಡುತ್ತದೆ…. ನಮ್ಮ ಹುಟ್ಟನ್ನು ಸಾರ್ಥಕ ಪಡಿಸಿದ ಮಹಾನುಭಾವರು …
ಅಂತಹ ದಕ್ಷಿಣ ಮೂರ್ತಿ ಸ್ವರೂಪರಾದ ಗುರುಗಳು ನಾಲ್ಕನೆಯವರು
5) ಈ ಕಲಿಯುಗದಲ್ಲಿ ವ್ಯವಹಾರಿಕ ಜಗತ್ತಿನ ಸಮಸ್ತ ಆಧುನಿಕ ವಿದ್ಯೆಯನ್ನು ನಮಗೆ ಧಾರೆ ಎರೆದು ನಮಗೆ ಈ ಜಗತ್ತಿನಲ್ಲಿ ಬದುಕಲು ಕಾರ್ಯನಿರ್ವಹಿಸಲು ಧನಸಂಪಾದನೆ ಮಾಡಲು ಕಾಮೆಛೆಗಳನ್ನು ಪೂರ್ಣಗೊಳಿಸಲು ಸುಖದಿಂದ ಬಾಳಲು ಅಡಿಪಾಯ ಹಾಕಿಕೊಟ್ಟಂತಹ
ಗುರುಗಳು ಐದನೆಯವರು
6) ವಿವಾಹ ಆದಾಗಿನಿಂದ ಮೊದಲು ಗೊಂಡು ಪತಿಯ ಪ್ರತಿಯೊಂದು ಕೆಲಸಗಳಲ್ಲಿಯೂ ಭಾಗಿಯಾಗುತ್ತಾ ಧರ್ಮ ಕಾರ್ಯಗಳಿಂದ ಪತಿಗೆ ಪ್ರತಿನಿತ್ಯವೂ ಪ್ರೇರೇಪಣೆ ಕೊಡುತ್ತಾ ಸತ್ಯವಾದ ಮಾರ್ಗದಲ್ಲಿ ತಾನು ತಮ್ಮ ಕುಟುಂಬದವರು ಇರಬೇಕೆಂದು ಬಯಸುವ ತಮ್ಮ ಪತಿ ಸ್ವಲ್ಪವೂ ಅಧರ್ಮದ ಕಡೆಗೆ ಹೋಗದೆ ಬಲವಾಗಿ ಪ್ರೇರೇಪಿಸಿ ಸದ್ಬುದ್ದಿಯಿಂದ ವರ್ತಿಸುವ ಪ್ರಚೋದಿಸುವ ಜೀವನದ ಪ್ರಮುಖ ಗುರಿಯನ್ನು ಸಾಧಿಸಲು ಅಡಿಗಡಿಗೆ ಆಸರೆಯಾಗಿ ನಿಲ್ಲುವ ಗೃಹಲಕ್ಷ್ಮಿ ಎಂದು ಕರೆಸಿಕೊಳ್ಳುವ ಹೆಂಡತಿಯು ಆರನೆಯ ಗುರುವು
ವಿರಕ್ತರಾಗಿ ಸನ್ಯಾಸ ಮಾರ್ಗದಲ್ಲಿ ಶ್ರೇಷ್ಠವಾದ ಸಾಧನೆ ಮಾಡಿ ಪರಬ್ರಹ್ಮನನ್ನು ನಿತ್ಯವೂ ಸಹ ಉಪಾಸಿಸುವ ಮಹತ್ಮರಾದ ಯತಿ ವರೇಣ್ಯರು ಅತ್ಯಂತ ಶ್ರೇಷ್ಠರಾದ ಗುರುಗಳು
ಇಷ್ಟಾದ ಮೇಲೆ ಯಾರು ಯಾರು ನಮಗೆ ಕಾಣದೆ ಅನುಗ್ರಹವನ್ನು ಮಾಡಿರುತ್ತಾರೆ ಆಶೀರ್ವಾದ ಮಾಡಿರುತ್ತಾರೆ ಯಾರ ಯಾರಿಂದ ಏನೇನೋ ನಾವು ಕಲಿತಿದ್ದೀವಿ ಅದೆಲ್ಲವೂ ಸಹ ಅನುಗ್ರಹ …ಸರ್ವಕ್ಕೂ ಸಹ ಆಧಾರ ಸ್ವರೂಪನಾದ ಪರಮಾತ್ಮನು ಎಲ್ಲರಿಗೂ ಸಹ ಗುರು ..
ಆದ್ದರಿಂದ ಉಪಾಸನೆಗಾಗಿ ಒಂದು ಪೂರ್ಣಿಮೆಯನ್ನು ವರ್ಷದಲ್ಲಿ ಮೀಸಲಿಟ್ಟರೆ ಅನುಗ್ರಹ ಸದಾ ನಮ್ಮದಾಗುತ್ತದೆ…
ರಚನೆ: ವಿಶ್ವಾಸ ಡಿ. ಗೌಡ, ಸಕಲೇಶಪುರ