ಕಾಪಿಡುವ ನಾರಿ ಸಂಕುಲವ

ಜಗದ ಅತಿ ದೊಡ್ಡ ಸಂಭ್ರಮದ ಸೃಷ್ಟಿ ಹೆಣ್ಣು
ಕರುಣಾ ಸಿಂಧು ಬಾಂಧವ್ಯದ ಬಿಂದು ಈ ಹೆಣ್ಣು
ಪತ್ನಿ ಮಗಳು ತಾಗಿಯಾಗಿಹಳು ಜಗದ ಕಣ್ಣು
ಅವಳೆಂದು ಆಗದಿಹಳು ಮಾನವ ಜನ್ಮಕ್ಕೆ ಹುಣ್ಣು

ಸದಾಚಾರ ಸಚ್ಚಾರಿತ್ರ್ಯ ಉಳ್ಳವಳು ನಾರಿ
ತಿರುಗಬೇಡ ರಸ್ತೆಯಲ್ಲಿ ಸ್ವಚ್ಛಾಚಾರಿಯಾಗಿ ಮದನಾರಿ
ಸಗಣಿಯಲ್ಲಿ ಸರಸಕ್ಕಿಂತ ಗಂಧದೊಡನೆ ಗುದ್ದಾಡು ಲೇಸು ಚೋರಿ
ಇಲ್ಲದಿದ್ದರೆ ನಿನ್ನನ್ನು ಹಿಂಬಾಲಿಸುವರು ಆಗಂತುಕರು ಹಿಡಿದು ಚಾಕು ಚೂರಿ

ಸೀತಾ ತಾರಾ ಮಂಡೋದರಿಯನ್ನ ಅಪಹರಿಸಬೇಡ
ನಿನ್ನವಳಾಗಲಿಲ್ಲ ಎಂದು ಅವಳ ನೋಯಿಸಿ ಕೊಲೆಗಯ್ಯ ಬೇಡ
ಅಧರ್ಮದ ಹಾದಿಯಲ್ಲಿ ಎಂದೂ ನೀ ಮುನ್ನಡೆಯಬೇಡ
ಮಾನವೀಯ ಮೌಲ್ಯವ ಮರೆತು ನೀ ಎಂದು ವ್ಯವಹರಿಸಬೇಡ

ಸೆರಗ ಮುಸುಗ ಹೊದ್ದು ನಿದ್ರಿಸುವ ಕಾಲ ಇದಲ್ಲ
ನಿನ್ನ ಆತ್ಮ ರಕ್ಷಣೆಯ ಜವಾಬ್ದಾರಿ ನಿನದೇ ಎಲ್ಲಾ
ನಯವಂಚಕರು ಯಾರೆಂದು ತಿಳಿವ ಜ್ಞಾನ ಪಡೆದಲ್ಲಿ
ನಿನ್ನ ಮಾನ ಮರ್ಯಾದೆ ನಿನೇ ಕಾಪಾಡಬೇಕಿಲ್ಲಿ

ಪ್ರೀತಿ ಪ್ರೇಮಕ್ಕೆ ಮಾರುಹೋಗಿ ಮೋಸ ಹೋಗದಿರು ಎಂದು
ಬಿಟ್ಟು ಬಿಡು ಆತ್ಮ ವಂಚಕರ ಸಹವಾಸ ಸಂಬಂಧ ಇಂದು
ಉಳಿಸಿಕೋ ನಿನ್ನ ಜೀವವ ಆತ್ಮರಕ್ಷಣೆಯ ಚಾಕ ಚಕ್ಯತೆಯಿಂದ
ಕೊನೆವರೆಗೂ ಕಾಪಾಡುವುದು ನಿನ್ನ ಆತ್ಮಸ್ಥೈರ್ಯ ನಂಬಿಕೆ ಎಂದೆಂದು

✍️ ರವೀಂದ್ರ. ಸಿ.ವಿ. ವಕೀಲರು, ಎ.ಸರಸಮ್ಮ, ಮೈಸೂರು

 

ಮಾನಸ ಪೂಜಿತ ಲೋಕಾಭಿರಾಮ

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
ಜಗವನ್ನ ಉದ್ದರಿಸು ನೀ ಕೋದಂಡರಾಮ
ಭವ ಬಂಧ ಬಿಡಿಸೆನ್ನ ಜಾನಕಿ ರಾಮ
ನನ್ನ ಜೀವನ ಹಸನಾಗಿಸೊ ಲೋಕಾಭಿರಾಮ

ಪುಷ್ಯ ನಕ್ಷತ್ರದಂದು ರಘುವಂಶದಿ ಜನಿಸಿದ ದಶರಥ ರಾಮ
ತ್ರೇತಾಯುಗದ ಹರಿಕಾರ ನಮ್ಮ ನೆಚ್ಚಿನ ರಣರಂಗಧಾಮ
ಸ್ಮರಣೆಯಲೆ ಪರಮಾನಂದ ಕೊಡುವ ಪ್ರಭು ಕೌಸಲ್ಯಾ ರಾಮ
ನಿನ್ನ ಭಕುತರನು ಅನವರತ ಕಾಪಾಡು ಜಯ ಜಯ ರಾಮ

ಮಂದಸ್ಮಿತ ಮಧುರ ಬಾಷಿ ವಿಶಾಲ ಹೃದಯಂ ಸೀತಾಪತತಿಂ
ದೀರ್ಘ ನಯನಂ ಅಜಾನುಬಾಹುಮ್ ಆಕರ್ಷಣ ರೂಪಂ ಜಗದಾಭಿ ರಾಮಂ
ತಾಟಕಿ ಖರದೂಷಣ ಮಾರೀಚ ವಾಲಿ ಕುಂಭಕರ್ಣ ಹಂತಕಂ
ಶಬರಿ ಗುಹ ಸುಗ್ರೀವ ಹನುಮಂತ ಜಾಂಬವ ಪೂಜಿತಂ

ಕರುಣದಿ ಶಿಲೆಯನ್ನು ಸ್ತ್ರೀ ಯಾಗಿಸಿದ ಕರುಣಾರಾಮ
ತಾಟಕಿಯ ದರ್ಪವ ಮರಿದು ಮೆರೆದ ಶ್ರೀರಾಮ
ಅಸುರರ ಸಂಹಾರಗೈದು ತ್ರಿನೇತ್ರನ ಧನುವನೆತ್ತಿದ ಕೋದಂಡರಾಮ
ಭಾರ್ಗವ ರಾಮನ ಎದುರಿಸಿ ಗೆದ್ದಿಹ ಜಾನಕಿ ರಾಮ

ರಾಮನಾಮ ತಾರಕಂ
ಭಕ್ತಿ ಮುಕ್ತಿ ದಾಯಕಂ
ಜಾನಕಿ ಮನೋಹರಂ ಸರ್ವ ಲೋಕ ನಾಯಕಂ
ವೀರ ಶೂರ ವಂದಿತಂ ರಾವಣಾಧಿ ನಾಶಕಂ
ಸೀತಾ ಪರಿತ್ಯಾಗಂ ಲವ ಕುಶ ಜನನಂ

ಲೀಲಾ ಶರೀರಂ ರಣರಂಗ ಧೀರಂ ಗಂಭೀರ ನಾದಂ ಶ್ರೀರಾಮ
ವಿಬಿಷಣ ಪ್ರಿಯಂ ಸುರಲೋಕ ಪಾಲಂ
ವಚನೀಕಸಾಲಂ ಗುಣಾಭಿರಾಮಂ
ಲಂಕಾ ವಿನಾಶಂ ಭುವನ ಪ್ರಕಾಶಂ ವಚನಾಭಿರಾಮಂ ಲೋಕಾಭಿರಾಮಂ

✍️ ರವೀಂದ್ರ .ಸಿ.ವಿ. ವಕೀಲರು. ಮೈಸೂರು

 

ಜಡವಾಗಿಹಳು ಧರಣಿಸುತೆ
“”””””””””‘””””
ಧರಣಿ ಬೆಂದ ಬಿಸಿಲ ಬೇಗೆ
ದಹಿಸುತ್ತಿದೆ ಪರಿಸರ ಮುತ್ತಿ ಧಗೆ
ಹೊತ್ತಿ ಉರಿಯುತ್ತಿದೆ ಜಗಮಗ

ಪಾತಾಳದಿ ಬರಿದಾಗಿದೆ ಜಲಕಣ್ಣು
ಪಶೆ ಬತ್ತಿದ ಭೂಮಣ್ಣು
ಮುಗಿಲು ಭೂವಿಯ ಚುಂಬನವಿಲ್ಲದ ಮುನಿದ ಮಳೆ

ತಣಿದು ಕಾಂತಿ ಹೊಮ್ಮದ ಇಳೆ
ರೈತ ಬಿತ್ತಲಿಲ್ಲ ಬೀಜ ಬಾರದ ಬೆಳೆ
ಕುಂದಿದೆ ನಿಸರ್ಗ ಕಳೆ
ತುಂಬಿ ಮುದದಿ ಹರಿಯದ ಹೊಳೆ

ವಿಜ್ಞಾನ ಏರಿದ ಯುಗ ಜಗ
ಮೇಘಮಾಲೆ ಆರ್ಭಟಿಸದೆ
ಅಬ್ಬರಿಸಿ ಬೂಬ್ಬಿರಿದು ಸುರಿಯದೆ
ಜೀವ ಸಂಕುಲದ ಬದುಕೆಲ್ಲಿ,?

ರಕ್ಷೆ ಶಿಕ್ಷೆಯ ಭೂಪಥ ಸಂಚಲನ
ರೋಗದಲಿ ನೊಂದ ಜನಾಕ್ರಂದನ
ಊಹಿಸಲಾಗದ ಭೂಕಂಪನ
ಸದ್ದು ಗದ್ದಲದೊಳಗೂ ತೆರೆಮರೆಯ ಚಿತ್ರಣ
ಆದಿ ಅಂತ್ಯವಿಲ್ಲದ ಜೀವನ್ಮರಣ

Yashoda ramakrishna

 

ಮಧುರ ಝೇಂಕಾರ

ಚೈತ್ರದಾಗಮನಕೆ ಸ್ವಾಗತ ಕೋರುತ
ವನ ಸಿಂಗರಿಸಿದೆ ಸಂತಸದ ಸಂಕೇತ
ನಿತ್ಯ ನೂತನ ಜಗವು ತುಂಬಿ ಹಂಬಲ
ಮನೆ ಮನೆಗಳಲ್ಲಿ ಸಂಭ್ರಮದ ಕಾಲ !!

ಪ್ರತಿ ಚಿಗುರಲೂ ವಸಂತದ ಹಸಿರು
ತುಂಬಿ ನೀಡಿದೆ ಜೀವಕ್ಕೆ ಉಸಿರು
ಅಣು ಅಣುವಿನಲ್ಲೂ ಚೈತನ್ಯದ ಉಲ್ಲಾಸ
ವನದೇವಿ ಶೃಂಗಾರಗೊಂಡ ವಸಂತಮಾಸ !!

ವಿಧ ವಿಧದ ಬಣ್ಣಗಳ ಬೆಡಗಿಗೆ
ಸೋತು ಸಾಗಿದೆ ಬೇವು-ಬೆಲ್ಲದ ಬೀಡಿಗೆ
ಸೋಲು ಗೆಲುವಿನ ಗಳಿಗೆಯಲ್ಲೂ
ಜೀವಕಳೆ ತುಂಬಿ ಬಾಳಿನ ಪುಟ ಪುಟದಲ್ಲೂ !!

ಜಡಭಾವ ದೂಡಿ ಜೀವಂತಿಕೆ ಹೂಡಿ
ಸುಪ್ರಸನ್ನ ಜೀವನ ಮಧುರ ಝೇಂಕಾರ
ಮುಗಿಲು ಮುಟ್ಟಿದೆ ಹರುಷ ರಸಧಾರ
ಚೇತನ ನೀಡಿ ಉಕ್ಕಿದೆ ಯುಗಾದಿಯ ಸಡಗರ !!

– ಎ.ಸರಸಮ್ಮ
ಚಿಕ್ಕಬಳ್ಳಾಪುರ

ಪವಮಾನನಿಗೆ ನಮನ

ನೆನೆ ಮನವೆ ಪವಮಾನನ
ಅವನಿಲ್ಲದಿರೆ ಇಲ್ಲ ಜೀವನ
ಪರಿಹರಿಸು ನಮ್ಮ ಅನುಮಾನ
ವಂದನೆ ನಿನಗೆ ಹನುಮಾನ//

ಶ್ರೀರಾಮನ ಪ್ರೀತಿ ಪಾತ್ರನೆ
ಶನಿದೇವನ ಆಪ್ತ ಮಿತ್ರನೆ
ವಾಯುದೇವನ ಸುಪುತ್ರನೆ
ವಂದಿಪೆ ಮಾರುತಿರಾಯನೆ//

ಜೀವಿಗಳ ಮುಖ್ಯಪ್ರಾಣನೆ
ಊರ್ಧ್ವಮುಖಿ ಊರ್ಜಿತನೆ
ರಕ್ತದ ಕಣಕಣದಲಿ ಹರಿವವನೆ
ನಮೊ ಎಂಬೆ ಪ್ರಾಣನಾಥನೆ//

ಅಧೋಮುಖಿ ಅಪಾನರೂಪನೆ
ರಾಗದ್ವೇಷಗಳ ಅಳಿಸುವವನೆ
ದಾಸಭಕ್ತಿಯ ಅರಹುವವನೆ
ವಂದನೆ ನಿನಗೆ ವಾತಾತ್ಮಜನೆ//

ಶರೀರದಿ ಸರ್ವವ್ಯಾಪಿ ವ್ಯಾನನೆ
ಚಿತ್ತದಲಿ ಪ್ರಶಾಂತಿಯನೀವನೆ
ಪ್ರಜ್ಞೆಯಲಿ ಪ್ರಜ್ವಲಿಸುವವನೆ
ನಮೋ ಎಂಬೆ ಪ್ರಸನ್ನಾತ್ಮನೆ //

ಉದಾನ ಪ್ರಾಣವಾಯುವಿನಲಿ
ಸಾಮವೇದ ಉದ್ಗೀತ ಮೊಳಗಲಿ
ಓಂಕಾರನಾದ ಝೇಂಕರಿಸಲಿ
ಅಂಜನಿಸುತನಿಗೆ ನಮನವಿರಲಿ//

ಪ್ರಾಣವಾಯುವಿನ ಸಮಾನವು
ಪದ್ಮನಾಭನ ಸ್ಮರಣೆ ನಾಭಿಯಲಿ
ನರನಾಡಿಗಳಲಿ ಕೋಲ್ಮಿಂಚಲಿ
ವಂದಿಪೆ ಭೀಮರೂಪಿ ರುದ್ರನೆ//

ಪಂಚಪ್ರಾಣಗಳಲಿ ಅಭಯವಿರಲಿ
ಉಪಪ್ರಾಣಗಳಿಗೆ ರಕ್ಷಣೆಯಿರಲಿ
ಶರೀರದಲಿ ಶಕ್ತಿವರ್ಧನೆಯಿರಲಿ
ನಮೊ ಎಂಬೆ ಬಲವರ್ಧಕನೇ//

ಹನುಮಾನ ಚಾಲೀಸಾ ದಿವ್ಯೌಷಧ
ನಿನ್ನ ಮಂತ್ರಜಪ ದಿವ್ಯಾನುಭೂತಿ
ನೀಡು ನನಗೆ ನಿನ್ನ ದಿವ್ಯದರುಶನ
ವಂದಿಪೆನಿಂದು ಭವ್ಯರೂಪನೆ //

( ಪ್ರಾಣ, ಅಪಾನ ವ್ಯಾನ, ಉದಾನ,ಸಮಾನ ಇವು ಪಂಚಪ್ರಾಣಗಳು. ಇವಕ್ಕೂ ಪುನಃ ಉಪ ಪ್ರಾಣಗಳಿವೆ. ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ)

ಸೌ ಅನ್ನಪೂರ್ಣ ಸು ಸಕ್ರೋಜಿ ಪುಣೆ

 

ಶ್ರೀಗಿರಿಯ ಸಿಂಹಿಣಿ

ಶರಣ ಜ್ಞಾನಿಗಳೆಲ್ಲರ ಕಣ್ಮಣಿ
ಶ್ರೀಶೈಲ ಶ್ರೀಗಿರಿಯ ಸಿಂಹಿಣಿ
ವಚನಗಳಂದದಿ ಭವ ತಾರಿಣಿ
ಅಂತರಂಗದಿ ವೀರ ವಿರಾಗಿಣಿ

ಶರಣ ಸತಿ ಲಿಂಗ ಪತಿ ಭಾವ
ಜೀವ ಶಿವ ಐಕ್ಯದ ಅನುಭವ
ಚೆನ್ನಮಲ್ಲಿಕಾರ್ಜುನನಲಿ ಜೀವ
ಮನದಾಳದಲಿ ನಿತ್ಯೋತ್ಸವ

ಅನುಭವದ ಮಾತು ಮಂಡಿಸಿದೆ
ಅನುಭವಮಂಟಪದಿ ಹೆದರದೆ
ದಿಟ್ಟೆದೆಯ ಜಾಣ ಹೆಣ್ಣೆ ಅಂಜದೆ
ಶರಣ ಬಳಗದ ಅಕ್ಕ ನೀನಾದೆ

ಭಕ್ತಿ ಜ್ಞಾನ ವೈರಾಗ್ಯಗಳ ಸಂಗಮ
ಕದಳಿ ಕರ್ಪೂರವಾಗುವ ಸಂಭ್ರಮ
ಕನ್ನಡ ಕವಿಕುಲದ ಪ್ರಥಮ ವೈಭವ
ಬೀರಿದೆ ವಚನ ಸಾಹಿತ್ಯದ ಸೌರಭ

ಅಕ್ಕಮಹಾದೇವಿ ಜಯಂತಿಯ ಶುಭಾಶಯಗಳು

ಸೌ/ ಅನ್ನಪೂರ್ಣ ಸಕ್ರೋಜಿ ಪುಣೆ

 

ವಿಶ್ವ ಭೂಮಿದಿನ

ಬ್ರಹ್ಮಾಂಡದಲಿ ಸ್ಫೋಟಗೊಂಡು
ಧೂಮ್ರವರ್ಣಿತಳಾಗಿ
ಓಂಕಾರನಾದಗೈದು ಸಪ್ತರ್ಷಿಗಳ
ಹೊಗಳಿಕೆಗೆ ಪಾತ್ರಳಾಗಿ
ಪೃಥಾಕಾಯಳಾಗಿ ಪೃಥ್ವಿಯೆನಿಸಿ
ಪರಮ ಪವಿತ್ರಳಾದವಳು //

ಅನವರತ ಅನುಕ್ಷಣವೂ ಅವನಿ
ಸುತ್ತುತ್ತ ರವಿಯಸುತ್ತುವಳು
ರಕ್ಷಣೆಗೆ ಅನಲ ಅನಿಲ ವರುಣ
ಸಹಾಯ ಮಾಡುತಿಹರು
ಎಲ್ಲದಕೂ ಗುರುತ್ವಾಕರ್ಷಣೆಯೆ
ಕಾರಣವಾಗಿದೆಯೆನುವರು//

ಕ್ಷಮಯಾಧರಿತ್ರಿಯವಳು ಬದ್ಧ
ಜೀವಿಗಳನುದ್ಧರಿಸುವಳು
ಆಹಾರಅನ್ನ ನೀರುನೆರಳು ಕೊಟ್ಟು
ಸಂರಕ್ಷಣೆಯ ಮಾಡುವಳು
ಬಂಗಾರಬೆಳ್ಳಿ ಖನಿಜಸಂಪತ್ತು ನೀಡಿ
ಸಂತಸದಿ ಬಾಳಿರೆನ್ನುವಳು//

ಕ್ಷಮಿಸಮ್ಮ ಪೃಕೃತಿಮಾತೆಯೇ ನಾವು
ಕೃತಘ್ನರು ಅಯೋಗ್ಯರು
ಜೀವನದಾತೆಯೇ ನಿನ್ನ ಉಪಕಾರ
ತೀರಿಸಲಾರದವರು
ಇನ್ನಾದರೂ ಎಚ್ಚರವಹಿಸಿ ಉಸಿರಿನ ಹಸಿರ ಸೆರಗುಹೊದಿಸೋಣ ಬನ್ನಿ //

ಸೌ ಅನ್ನಪೂರ್ಣ ಸು ಸಕ್ರೋಜಿ ಪುಣೆ

ಜೈ ಜೈ ಹನುಮಾನ್ 🙏🙏
“””””””””””””””””””””
ಶ್ರೀರಾಮನ ನಿಷ್ಠಾವಂತ ಭಕ್ತ
ತನ್ನೆದೆಯಂಗಳದಿ ರಾಮನ ಪ್ರತಿಷ್ಠಾಪಿಸಿದ
ಉಸಿರು ಉಸಿರುಸಿರಲಿ ರಾಮ ನಾಮ ಪಠಿಸುತ್ತಾ
ದಾಸನಾಗಿ ಚರಣಗಳಿಗೆ ವಂದಿಸುತ್ತಾ
ಸ್ಥಿರವಾದ ರಾಮ ಸೇವೆಯಲಿ ಹನುಮಂತ

ಸೀತೆಯ ಅಗಲಿಕೆ ರಾಮನಾದ ದುಃಖತಪ್ತ
ಶಮನಗೊಳಿಸಿ ಕ್ಷಣದಿ ಹೊರಟ ರಾಮದೂತ
ಜನಕ ತನುಜೆಯ ಶೋಧನೆಯಲಿ ವಾಯುಪುತ್ರ
ರಾಮನ ಸಲಹಿ,ವಚನವಿತ್ತು ನಡೆದ ಧೀಮಂತ
ಸಾಗರ ಸೇತುವೆ ಕಟ್ಟಿ ಲಂಕೆಗಾರಿದ ಯಶೋವಂತ

ಅಶೋಕ ವನದಿ ಬಂಧನದಲಿ ಶೋಕಿತೆ ಸೀತಾಮಾತೆ
ನೋಡಿದಾಕ್ಷಣ ಕೃತಾರ್ಥನಾದ ಅಂಜನಿಪುತ್ರ
ಸಾದ್ವಿ ಜಾನಕಿ ಮಾತೆಗೆ ನಮಿಸುತ್ತ
ರಾಮ ಮುದ್ರಿಕೆಯ ಕುರುಹಾಗಿ ನೀಡುತ್ತ
ಸೀತಾರಾಮರ ಸಂಯೋಗಕ್ಕೆ ಪಣತೊಟ್ಟ ಹನುಮಂತ

ಲಂಕಾಧೀಶನ ವೈಭೋಗ ರಾಜ್ಯವ ದಹನಗೊಳಿಸಿ
ರಾವಣೇಶ್ವರನ ಅಟ್ಟಹಾಸವ ಧಮನಿಸಿ
ಭರದಿ ಹಾರುತ ಶ್ರೀರಾಮನಿಗೆ ಭಿನ್ನವಿಸಿ
ಅಶೋಕ ವನದಿ ವೈದೇಹಿಯ ಕಂಡೆನೆಂದು ಅರುಹಿ
ಸೀತಾರಾಮರ ಪ್ರೇಮ ಭಕ್ತಿ ಸೇವೆಗೆ,
ಅನುವಾದ ಕೇಸರಿ ನಂದನ
ಜೈ ಜೈ ಹನುಮಾನ್ 🙏🙏

Yashodaramakrishna

 

ಕಲಾವಿದನ ಕುಂಚ
“”””””””’”””””
ಕಲಾವಿದನ ಕನಸು ಕಲ್ಪನೆಗೆ ನಿಲುಕದ್ದಿಲ್ಲ
ನಿಸರ್ಗ ನೋಟಕ್ಕೆ ಕೊನೆಯಿಲ್ಲ
ಕುಶಲಮತಿ ಕಲೆಗಾರ ಕನಸುಗಳ ಸಾಕಾರ
ಪ್ರಕೃತಿಯ ಭಾವ ವಿಕಾಸದ ಸ್ಪಂದನದಿ
ಸುಂದರ ಚಿತ್ರಗಳ ಮೂರ್ತ ರೂಪ ಸಮರ್ಥದಲಿ
ವಿಸ್ಮಯ ಗೊಳ್ಳುವ ಕಲಾವಿದ

ಅಂತರಾಳದ ಹರಿವ ಝೇಂಕೃತಿಯ ಜಲಪಾತ
ದೈವ ರೂಪ ದರುಶನವೇ ಕಣ್ತುಂಬುತ
ಕಾಯಕ ಸಂಸ್ಕಾರ ಸತ್ಪಲದಿ
ಭಕ್ತಿ ಯುಕ್ತಿಯಲ್ಲಿ ಜೀವಕಾಂತಿ ಅರಳಿಸಿ
ಶಿಲೆಗಳಲ್ಲಿ ಕಲಾತ್ಮಕ ರೂಪು ರೇಖೆಗಳ ಬಿಂಬಿಸಿ ತನ್ಮಯಗೊಳ್ಳುವ ಕಲಾವಿದ

ಇರುಳ ಕನಸಿನ ಮಧುರ ಮಿಡಿತಗಳ
ವರ್ಣ ಲೇಪನದಿ ಬಿಂಬಿಸುತ್ತ
ಲಾವಣ್ಯ ರೂಪಕೆ ನನಸಿನ ಗುಡಿ ಕಟ್ಟಿ
ಅಂಗನೆಯರ ಅಧರದಂದವ ಶೃಂಗಾರದಿಂದ ಚಿತ್ರಿಸಿ
ಪ್ರೀತಿಯ ರಾಗರತಿಯ ಹೊಮ್ಮಿಸಿ
ಮುಗುಳುನಗೆಯ ತೆರೆಮರೆಯ ಕಾವ್ಯಕನ್ನಿಕೆಗೆ
ಪ್ರೇಮ ಲತೆಯಾಗುವ ಕಲಾವಿದ

ಬಾಡಿದ ಹೂಬಳ್ಳಿಗೆ ಜೀವ ಚೈತನ್ಯದಿ
ಕಾಮನಬಿಲ್ಲಿನ ಚಿತ್ತಾರ ವರ್ಣ ವೈಖರಿಗೆ
ಅರಸಿ ಬರುವ ದುಂಬಿಗಳ ಮಧು ಮೈತ್ರಿಗೆ
ಭ್ರಮನಿರಶನಗೊಳಿಸುವ ಕಲಾವಿದ

 

ವಿಶ್ವ ಕಾಗೆ ದಿನಾಚರಣೆ ಅಂಗವಾಗಿ.27.04.2024.

ಕಾಕಂಬು ಶುಂಡಿ. ವಿಚಿತ್ರ ವಿಶಿಷ್ಟ ಪಕ್ಷಿ!
*******(((((($$$$))))********

ಕಾಗೆಯೊಂದು ವಿಚಿತ್ರ ವಿಶೇಷ ಪಕ್ಷಿ.
ಕಾಗೆಯೊಮ್ಮೆ ಮಾನ್ಯ, ಪಿತೃ ಪೂಜ್ಯ.
ಇನ್ನೊಮ್ಮೆಅಡ್ಡಬಂದಾಗ ಅಪಶಕುನ
ಕಾಗೆ ಕೂಗು ಕರ್ಕಶ,ಓಡಿಸುವರುತಕ್ಷಣ!

ಕಾಕಂಬು ಪುರಾಣದಲ್ಲಿದರ ವಿವರ..
ಕಾಗೆ ಪಿತೃ ಸಮಾನ, ಪಕ್ಷಿ ರೂಪದಲ್ಲಿ
ಕಾಣಲು ಬರುವರೆಮ್ಮ ಪಿತೃಪಕ್ಷದಲ್ಲಿ
ಕಾಗೆಗೆ ಭಕ್ಷವಿಟ್ಟುತಿನಿಸಿ ಪಿತೃತರ್ಪಣೆ

ಕಾಗೆಕರೆದು ಪಿತೃಗಳಿಗೆ ಭಕ್ಷ ಸಂತರ್ಪಣೆ
ಕಾಗೆ ಆಗಿ ಬಂದು ಪಿಂಡತಿಂದು ತೃಪ್ತಿ
ಕಾಯುವರುಪಿತೃಜನ ಸದಾನಮ್ಮನು
ಕಾಗೆ ಪಡೆದಿತಲ್ಲ ಪಿತೃ ಸ್ಥಾನ ಮಾನ!!

ಕಾಗೆ ಗೂಬೆ-ಜಗಳವಾಗದೆಂದುಗೂ..
ಕಾಗೆಗೆ ರಾತ್ರಿ ಕಾಣದಲ್ಲ ಕಣ್ಣುಗಳೂ.
ಗೂಬೆಗೆ ಹಗಲು ಕಾಣದಲ್ಲಕಂಗಳೂ
ಹಾಗಾಗಿ ಕಾಗೆ-ಗೂಬೆಗಿಲ್ಲ ಯುದ್ಧವು!

ಕಾಗೆಗೊಂದ್ಕಾಲ ಪಿತೃಪಕ್ಷದಿ ಮಾನ್ಯ.
ಗೂಬೆಗೇನುಬಿಡಿ ರಾತ್ರಿ ಲಕ್ಷ್ಮಿವಾಹನ
ಕಾಗೆಗಿಂದು ವಿಶ್ವದ್ಯಾಂತದಿನಾಚರಣೆ
ಕಾಗೆ ಕರೆದುಣ್ಣುವಂತೆ ತನ್ನ ಬಳಗವ!

ಹಾಗೆ ವಿಶ್ವದೆಲ್ಲ ಜನಕಿಕ್ಕುತ್ತಿದೆ ಕಾಗೆ.
ಹೀಗೆ ನನ್ನ ನಡೆಯಂತೆ ಒಗ್ಗಟ್ಟಾಗಿರ್ರಿ.
ಅಗ್ಗದ ಸ್ವಾರ್ಥಬಿಟ್ಟುನಿಸ್ವಾರ್ಥಕಲಿರ್ರಿ
ಹಿಗ್ಗಿನಿಂದ ನೀಡುತ್ತಿದೆ ಕಾಗೆ ಸಂದೇಶವ!

******************************
ಶ್ರೀ ನಟರಾಜ್ ದೊಡ್ಡಮನಿ.

 

ಕಾರ್ಮಿಕರ ಗೌರವದ ದಿನ
🫡🇮🇳🫡🇮🇳🫡🇮🇳🫡

ದಾಸೋಹ ಕಾಯಕದ ಪಾಠ
ಕಲಿಸಿದ ಪ್ರಥಮ ವಿಶ್ವಗುರು
ಬಸವಣ್ಣನವರಿಗೆ ನಮನಗಳು

ಕಾಯಕವೇ ಕೈಲಾಸವೆನುತ
ಕಾಯಕ ಮಾಡುವ ಯೋಗಿ
ಪುರುಷರಿಗೆ ವಂದನೆಗಳು

ಕರ್ಮಯೋಗಿಯಾಗಿ ನಿತ್ಯ
ಹಗಲೂ ರಾತ್ರಿ ದುಡಿಯುವ
ಮಹಿಳೆಯರಿಗೆ ನಮನಗಳು

ದುಡಿಮೆಯ ಮಹತ್ವವನರಿತ
ನಿರೋಗಿಯಾಗಿ ಸೇವೆಗೈವ
ನಿಷ್ಕಾಮಕರ್ಮಿಗಳಿಗೆ ವಂದನೆ

ದೇಶಸೇವೆ ಈಶಸೇವೆಯೆನುವ
ಸೈನಿಕರು ರೈತರು ವೈದ್ಯರು
ಶಿಕ್ಷಕರು ಶ್ರಮಿಕರಿಗೆ ನಮನಗಳು

ಯಂತ್ರವಿಜ್ಞಾನ ತಂತ್ರಜ್ಞಾನದಲಿ
ಕಾರ್ಯನಿರತರಿಗೆ ಸಾಧಕರಿಗೆ
ಕಾರ್ಮಿಕರಿಗೆ ಕಾವ್ಯನಮನಗಳು

ಕಠಿಣ ಪರಿಶ್ರಮದ ಜೀವಿಗಳಿಗೆ
ದುಡಿಮೆಗಾರ ಕರ್ತವ್ಯಶೀಲರಿಗೆ
ಗೌರವಾದರದ ವಂದನೆಗಳು

ಅನ್ನಪೂರ್ಣ ಸಕ್ರೋಜಿ ಪುಣೆ

 

ಕಾರ್ಮಿಕ

ಕಾರ್ಮಿಕನು ಜಗದ ಒಳಿತನು ಸಾರುವ
ಕೆಲಸದಲಿ ಮುನ್ನೆಡೆಯ ನೀಡುತ ಬಾಳುವ
ಹೊಟ್ಟೆಪಾಡಾದರೂ ಕೆಲಸ ಮುಖ್ಯವೆನುವ
ಲಾಭಗೈಯುವ ಹವಣಿಕೆಯನು ತೋರ್ವ

ಸಂಪತ್ತಿದ್ದರೇನು ಬಡತನವಾದರೇನು ಕಾಯಕವು ನಿತ್ಯ
ನಿಯಮ ನಿಬಂಧನೆಯು ಸತ್ಯ
ಕಷ್ಟ ಕಾರ್ಪಣ್ಯಗಳೆಲ್ಲ ಮಿಥ್ಯ
ಕಾಯಕಯೋಗಿಯ ಕರ್ತವ್ಯ ಸ್ತುತ್ಯ

ಮಿಗಿಲಾದರೇನು ದಿಗಿಲಾದರೇನು ತಾಳ್ಮೆಯಲಿ ಬದುಕು
ಕೆಲಸವುಳಿದರೆ ಸಮಾಧಾನದ ಬದುಕು
ಗಡಿಬಿಡಿಯಲೂ ಕಾವುದು ನಿಯತ್ತಿನಲ್ಲಿ ಬದುಕು
ಮೂರಾಬಟ್ಟೆಯಾಗದು ಸುಸ್ಥಿರದಲ್ಲಿ
ಕೈಂಕರ್ಯ ಬದುಕು

ಕಾರ್ಮಿಕರು ಕೆಲಸಗೈವಂಥ ಎಲ್ಲ
ಮನುಜರು
ದುಡಿತದ ವಿವಿಧ ಮುಖಗಳ ಮುಖವಾಡದವರು
ಕರ್ಮದಲಿ ಶೃದ್ದೆ ಖುಶಿಯೆಡೆಗೆ
ಸಾಗುವ ಇವರು
ದಿನಚರಿಯ ಖರ್ಚನು ಸುಲಲಿತವಾಗಿ ನೀಗಬೇಕೆನ್ನುವರು
ಕಷ್ಟ ಸುಖದಾ ಕನ್ನಡಿಯಲಿ ಮುಖವ ತೂರಿ ಅಳು ನಗುವ ಸಹಿಸುವರು

ಕಲ್ಪನಾಅರುಣ

 

ಬಸವ ಜಯಂತಿಯ ಪ್ರಯುಕ್ತ

======================
ಕ್ರಾಂತಿಕಾರಿ ಜಗಜ್ಯೋತಿ ಬಸವೇಶ್ವರ
””””””””””””””””””””””””””'””””””””””””””

12ನೇ ಶತಮಾನದ ಶ್ರೇಷ್ಠ ಹರಿಕಾರ
ಮಾದರಸ ಮಾದಲಾಂಬಿಕೆಯರ ಮುದ್ದಿನ ಕುವರ
ಜಾತಿ ಸಮಾನತೆಗೆ ಹೋರಾಡಿದ ಧೀಮಂತ ಧೀರ
ಇವರೇ ನಮ್ಮ ಕ್ರಾಂತಿಕಾರಿ ಜಗಜ್ಯೋತಿ ಬಸವೇಶ್ವರ //1//

ಆದಿಯಲ್ಲಿ ಹುಟ್ಟಿದ ಆದಿತ್ಯನಂದದಲಿ
ಬಸವಳಿದ ಬದುಕಿಗೆ ಜೀವನೋತ್ಸಾಹದಲ್ಲಿ
ಭಕ್ತಿ ಪರವಶತೆ ಎಲ್ಲೆಡೆ ಪಸರಿಸಿದಂದದಲಿ
ಇಳೆಯ ಭಾವದ ಭಂಧ ದೂರಾದ ದಂದದಲಿ //2//

ಮಂಗಳವೇಡದಿ ಬಸವಣ್ಣ ಕಾರಣಿಕರಾಗಿ
ಗಂಗಾಂಬಿಕೆ ನೀಲಾಂಬಿಕೆಯರ ಮುದ್ದಿನ ಪತಿಯಾಗಿ
ಕಲಚೂರಿ ಬಿಜ್ಜಳನ ಆಸ್ಥಾನದಿ ಮಂತ್ರಿಯಾಗಿ
ಅನವರತ ದುಡಿದರು ನ್ಯಾಯ ನಿಷ್ಠೆಗೆ ಹೆಸರಾಗಿ //3//

ಬ್ರಾಹ್ಮಣರಾಗಿ ಹುಟ್ಟಿ ವೀರಶೈವ ಪಂಥಕ್ಕೆ ಹೋದವರು
ಮೂರ್ತಿ ಪೂಜೆಯನ್ನು ತ್ಯಜಿಸಿ ಲಿಂಗ ಪೂಜೆಯ ಗೈದವರು
ಕೂಡಲಸಂಗಮ ಎಂಬ ಅಂಕಿತನಾಮ ಪಡೆದ ವಿಶ್ವ ಗುರುಇವರು
ಕ್ರಾಂತಿಕಾರಿ ಜಗಜ್ಯೋತಿ ಬಸವೇಶ್ವರ ಎಂಬ ಬಿರುದಾಂಕಿತರು //4//

12ನೇ ಶತಮಾನದ ಪ್ರಬುದ್ಧ ಸರಳ ವಚನಗಾರರು
ವೀರಶೈವ ಸಮುದಾಯದ ಮಹಾನ್ ಕಾಯಕಯೋಗಿ ಇವರು
ವಿಭೂತಿ, ಲಿಂಗಕ್ಕೊಂದು ಸಮರ್ಥ ಅರ್ಥ ಕೊಟ್ಟವರು
ಜಾತಿ,- ವರ್ಣ, ಮೇಲು -ಕೀಳೆಂಬ ವ್ಯವಸ್ಥೆಯನ್ನು ಹೋಗಲಾಡಿಸಲು ಶ್ರಮಿಸಿದವರು //5//

ಜಗತ್ತಿಗೆ ಸರ್ವಧರ್ಮ ಸಮನ್ವಯ ಸಾರಿದವರು
ಅಹಿಂಸಾ ಮಾರ್ಗವನ್ನು ಪ್ರಬಲವಾಗಿ ಖಂಡಿಸಿದವರು
ಜನರ ಮೂಡನಂಬಿಕೆಯನ್ನು ಹೋಗಲಾಡಿಸಿದ ಧರ್ಮಗುರು
ಮಾನವೀಯ ಮೌಲ್ಯ ಗುಣವನ್ನು ಎತ್ತಿ ಹಿಡಿದವರು //6//

ಅನುಭವ ಮಂಟಪವನ್ನು ಸ್ಥಾಪಿಸಿ ಸುಜ್ಞಾನ ಹರಿಸಿದವರು
ದಯಯೆ ಧರ್ಮದ ಮೂಲ ಎಂದು ಭೋಧಿಸಿದವರು
1500ಕ್ಕೂ ಅಧಿಕ ವಚನಾಮೃತ ಉಣಬಡಿಸಿದ ಕಲ್ಯಾಣ ನಿಧಿ ಇವರು
ಮಾತು ಮುತ್ತಿನಂತಿರಲಿ ,ಕೊಲಬೇಡ ಹುಸಿಯ ನುಡಿಯಲು ಬೇಡ, ನಿನ್ನ ನೀ ತಿದ್ದಿಕೋ, ಎಂದವರು //7//

ಉಳ್ಳವರು ಶಿವಾಲಯವ ಮಾಡುವರು ಎಂದರು
ದಯವಿಲ್ಲದ ಧರ್ಮ ಯಾವುದೆಂದು ಕೇಳಿದರು
ಎನಗಿಂತ ಕಿರಿಯರಿಲ್ಲ ಶಿವಶರಣರಿಗಿಂತ ಹಿರಿಯರಿಲ್ಲೆಂದರು
ಛಲಬೇಕು ಶರಣಂಗೆ, ಪರಧನವನ್ನು ಒಲ್ಲೆ ಎಂದರು //8//

ಸ್ತ್ರೀ ಪುರುಷರಲ್ಲಿ ಸಮಾನತೆಯ ಬೋಧಿಸಿದ ವಿಶ್ವಗುರು ಇವರು
ಅಕ್ಕಮಹಾದೇವಿಯ ಪ್ರಿಯ ಗೆಳೆಯರು, ಮಹಾ ಶಿವಯೋಗಿ ಇವರು
ಸರಳ ವಚನಗಳಿಂದ ಆಧ್ಯಾತ್ಮದ ಸೆಳೆಯನ್ನ ಹುಟ್ಟಿಸಿದವರು
ಕೂಡಲಸಂಗಮದಲ್ಲಿ ಶಿವೈಕ್ಯರಾದರು ಜಗಜ್ಯೋತಿ ಬಸವೇಶ್ವರರು //9//

ಕಲಾಂ ಸ್ಥಾಪಿಸಿದರು ಸಂಸತ್ತಿನಲ್ಲಿ ನಿಮ್ಮ ಪ್ರತಿಮೆ
ಬಸವಧರ್ಮ ಪೀಠದಿಂದ 108 ಅಡಿ ಎತ್ತರದ ಪ್ರತಿಮೆ
ಲಂಡನ್ ಥೇಮ್ಸ್ ನದಿ ದಡದಲ್ಲಿ ನಿಂತಿದೆ ನಿಮ್ಮ ದುಡಿಮೆ
ವಿಶ್ವಗುರು ಕ್ರಾಂತಿಯೋಗಿ ಬೆಳಕಾಗಿದ್ದು ನಮ್ಮೆಲ್ಲರ ಗರಿಮೆ //10//

ಭಕ್ತಿಭಾವದ ಬಸವಣ್ಣನವರು ಎಂದೂ ಶಿಖರ ಪ್ರಾಯರಾಗಿ
ಜೀವತೇದು ಜಗಕೆ ಬೆಳಕಾದ ಗುರುಬಸವಣ್ಣ ಅಮರರಾಗಿ
ವಿಶ್ವವೇ ವಂದಿಸುತ್ತಿದೆ ತತ್ವಜ್ಞಾನದ ಸಾಹಿತ್ಯಕ್ಕೆ ಶರಣಾಗಿ
ಶಿರಬಾಗಿ ನಮಿಸುವೆವು ನಿಮ್ಮ ಭಕ್ತಿ-ಮುಕ್ತಿಯ ವಚನದ ತತ್ವಕ್ಕಾಗಿ //11//

🙏🏻🙏🏻🙏🏻🙏🏻🙏🏻🙏🏻🙏🏻

✍️ ರವೀಂದ್ರ.ಸಿ.ವಿ .
ವಕೀಲರು.

ಜನ್ಮ ನೀಡಿದ ಜನನಿ

ನವಮಾಸ ನೋವುಂಡು ಹಡೆದಳು ಹೆತ್ತವ್ವ
ಪದಗಳಿಗೆ ಸಿಗದ ವ್ಯಕ್ತಿತ್ವವುಳ್ಳ ನನ್ನವ್ವ
ನೂರು ಜನ್ಮಕೂ ನೀನೇ ನನ್ನ ಹಡೆದವ್ವ
ದೇವರಿಗಿಂತ ಮಿಗಿಲು ನನ್ನ ಪ್ರೀತಿಯ ಅವ್ವ

ಅಮ್ಮ ನಿನ್ನ ತೋಳಿನಲ್ಲಿ ಸ್ವರ್ಗವ ಕಂಡೆನು
ನಿನ್ನ ಮಡಿಲಲ್ಲಿ ಸ್ವರ್ಗದ ಸಿರಿಯ ಪಡೆದೆನು
ನೀನೆ ನನ್ನ ಮನದ ದೇವರೆಂದು ತಿಳಿದೆನು
ಪ್ರತಿನಿತ್ಯವೂ ನಿನ್ನ ಪಾದವ ಪೂಜಿಸಿದೆನು

ಸೋಲಿನಲ್ಲಿ ಗೆಲುವಾಗಿ ಅನ್ಯಾಯದಲ್ಲಿ ನ್ಯಾಯವಾಗಿ
ಅಧರ್ಮದಲ್ಲಿ ಧರ್ಮವಾಗಿ ಸ್ವಾರ್ಥದಲ್ಲಿ ನಿಸ್ವಾರ್ಥಿಯಾಗಿ
ಬದುಕಿದೆ ನೀನು ಕಣ್ಣಿಗೆ ಕಾಣುವ ದೇವರಾಗಿ
ಸಂಬಂಧಗಳಲ್ಲಿ ಬೆಲೆ ಬಾಳುವ ಮಹಾತ್ಯಾಗಿಯಾಗಿ

ಜನ್ಮ ನೀಡಿದ ಜನನಿಗೆ ಮಾತೃದೇವೋಭವ
ಅಕ್ಷರ ಕಲಿಸಿದ ಮಾತೆಗೆ ಆಚಾರ್ಯದೇವೋಭವ
ತಂದೆಯ ಪ್ರೀತಿ ತೋರಿಸಿದ ತಾಯಿಗೆ ಪಿತೃದೇವೋಭವ
ದೇವರಾದ ನಿಮಗೆ ಓಂ ನಮಃ ಶಿವ

ಹೆತ್ತು ಹೊತ್ತು ನನ್ನ ಸಾಕಿ ಸಲಹಿದೆ
ಬಡವಿಯಾದರೂ ರಾಜನಂತೆ ನೀ ಬೆಳೆಸಿದೆ
ಹಸಿದಿದ್ದರೂ ನೀ ಹೊಟ್ಟೆ ತುಂಬಾ ಉಣಿಸಿದೆ
ಮಡಿಲಲಿ ಸ್ವರ್ಗ ತೋರಿಸಿ ದೇವರಾದೆ

ಶ್ರೀ ಮುತ್ತು ಯ. ವಡ್ಡರ
ಶಿಕ್ಷಕರು
ಬಾಗಲಕೋಟ

 

ಧರೆಗೆ ಚೇತನ

ತಾಯಿ ಎಂಬ ದೈವವು
ಇಳೆಯಲ್ಲಿ ಎಲ್ಲಕಿಂತ ಮಿಗಿಲು
ಅಮ್ಮನಾ ಮಡಿಲ ಸುಖವು
ಸ್ವರ್ಗದಂತೆ ಬಾಳಿಗೆ ಗೆಲುವು
ಅಮ್ಮಾ ನೀನೆ ಧರೆಗೆ ಚೇತನವು !!

ಅಮ್ಮನಾ ಪ್ರೀತಿ ಸವಿಜೇನಿನಂತೆ
ಎದೆ ಹಾಲು, ಕೈ ತುತ್ತು ಅಮೃತದಂತೆ
ಅವಳ ಪ್ರೇಮದ ನುಡಿ ಬಾಳಿಗೆ ಬೆಳಕಂತೆ
ವಾತ್ಸಲ್ಯದಿ ಬಿಗಿದಪ್ಪಲು ಮರೆಸಿತು ಚಿಂತೆ
ಅಮ್ಮಾ ನೀನೆ ಧರೆಗೆ ಚೇತನವು !!

ಅಮ್ಮಾ ಎನ್ನುವ ಕರೆಯೆ ಶಕ್ತಿ ತುಂಬಿ
ಬದುಕಿನ ಸಿರಿಯಾಗುವುದು ಧೈರ್ಯ ನೀಡಿ
ಅಮ್ಮನಾ ಲಾಲಿ ಹಾಡು ಕಿವಿಗಳಿಗೆ ಇಂಪು
ಜೀವನ ಜೇನಾಗಿ ಹೊಂಗೆ ನೆರಳಂತೆ ತಂಪು
ಅಮ್ಮಾ ನೀನೆ ಧರೆಗೆ ಚೇತನವು !!

ಅಮ್ಮನಾ ಮಡಿಲ ಹಾಸಿಗೆ ಹರುಷ ಬಾಳಿಗೆ
ನನ್ನೀ ಜನುಮ ಪಾವನ ನೀನೆ ನನಗಾಸರೆ
ನೋವು-ನಲಿವಲ್ಲಿ ನೀ ಜೊತೆಯಾಗಿ ಬರುವೆ
ಪೃಥ್ವಿಗಿಂತ ಹಿರಿದು ನಿನ್ನ ತ್ಯಾಗ ಜೀವಧಾತೆ
ಅಮ್ಮಾ ನೀನೆ ಧರೆಗೆ ಚೇತನವು !!

ಎ.ಸರಸಮ್ಮ
ಚಿಕ್ಕಬಳ್ಳಾಪುರ

 

ಅಣ್ಣ ಬಸವಣ್ಣ
*********
ಕನ್ನಡ ನಾಡಿನ ಉದಯಪೂರ್ಣ
ನಿನ್ನ ಕೀರುತಿ ಜಗದಗಲವಣ್ಣ
ದೀನ ದಲಿತರಿಗೂ ಕಣ್ತೆರೆದೆಯಣ್ಣ
ವಚನಾಮೃತದ ಸವಿ ನೀಡಿದೆಯಣ್ಣ
ಕಲ್ಯಾಣಕಾರಿ ಕಾಯಕಯೋಗಿ ಬಸವಣ್ಣ
ನಿಂದನೆ ಟೀಕೆಗಳಿಗೆಲ್ಲಾ ನೀ ಅಂಜಲಿಲ್ಲವಣ್ಣ
ಸಮನ್ವತೆಯ ಸಮಾಜೋಪಕಾರಿ ನೀನಣ್ಣ
ದಾಸೋಹ ನಿಲಯ ಕತೃ ನೀನಾದೆಯಣ್ಣ
ಸಕಲರಿಗೂ ನೀ ಮಾದರಿಯಾದೆಯಣ್ಣ
ದಯೇಯೆ ನಿನ್ನ ಮಾನವೀಯತೆಯಣ್ಣ
ಶಿವಭಕ್ತಿ ಸಂಗಮಕೆ ಸಂಕಲ್ಪವಾದೆಯಣ್ಣ
ಸತ್ಕರ್ಮಗಳೇ ನಿನ್ನ ಧ್ಯೆಯವಣ್ಣ
ನಿನ್ನ ಮಾರ್ಗದಲ್ಲಿ ನಡೆವರೆ ನಿಜ ಭಕ್ತರಣ್ಣ
ಅನುಭವ ಮಂಟಪ ಕಟ್ಟಿದ ಜ್ಞಾನದೀಪ್ತಿಯಣ್ಣ
ಕೂಡಲಸಂಗಮ ಐಕ್ಯ ಜ್ಯೋತಿ ನೀನಾದೆಯಣ್ಣ
ನೀನಳಿದರೂ ಬೆಳಗುತಿಹವು ಉಜ್ವಲ ನುಡಿಗಳಣ್ಣ 👏👏
============
Yashodaramakrishna

ತಾಯಿಯ ಪ್ರೀತಿ

ನವಮಾಸದಿ ನನ್ನನು ಗರ್ಭದಿ ಹೊತ್ತು
ಸಾವು ಬದುಕಿನ ನಡುವೆ ಸೆಣಸಾಡಿ ಗೆದ್ದು
ಕರುಳ ರಕ್ತವ ಬಸಿದು ಭಾವದೆಳೆಗಳ ಹೊಸೆದು
ನನಗೆ ಜನ್ಮ ನೀಡಿದೆ ಹೇಗೆ ತೀರಿಸಲಿ?ಋಣ ಅಮ್ಮ

ಸಂಸ್ಕಾರದ ಅಡಿಪಾಯದ ಮೇಲೆ
ನಿನ್ನ ತ್ಯಾಗ ಮಮತೆಯ ಮೌಲ್ಯಗಳ ನೆಲೆ
ಎಲ್ಲ ತಪ್ಪುಗಳ ನಗುತ ಮನ್ನಿಸಿ ತಿದ್ದಿದೆ ನೀನು
ಎಂಥ ಅದ್ಭುತ! ತಾಯಿಯ ಪ್ರೀತಿ ಬಣ್ಣಿಸಲಾಗದು

ಬಾಲ್ಯದಲಿ ನನ್ನನು ಕಪ್ಪೆಚಿಪ್ಪಿನ ಮುತ್ತಾಗಿಸಿದೆ
ಯೌವನದಲಿ ಭವಿಷ್ಯದ ಗುರಿಯ ಸೊತ್ತಾಗಿಸಿದೆ
ಮೊದಲ ಗುರುವಾಗಿ ಬಾಳಿಗೆ ಬದುಕ ಸವೆಸಿದೆ
ಸಹನೆಯ ನಡೆನುಡಿಗೆ ನೀ ಸ್ಫೂರ್ತಿಯಾದೆ

ಕಣ್ಣಿಗೆ ಕಾಣುವ ದೇವರು ನೀನೆ ಅಮ್ಮ
ಸಂಸಾರನೌಕೆಯ ಏರಿಳಿತಗಳಲಿ ನಗೆಯ ಸೂಸಿ
ಮನೆತನದ ಗೌರವಕೆ ಬಸವಳಿದು ಗೆಲ್ಲಿಸಿದೆ
ನಿನ್ನ ಪಾದಧೂಳೇ ನನ್ನ ಬದುಕಿಗೆ ಶೃಂಗಾರ!

ಆತ್ಮವಿಶ್ವಾಸದ ಆಭರಣ ತೊಡಿಸಿದೆ
ನಿನಗಿಂತ ಬಂಧುವಿಲ್ಲ ನನ್ನ ದೈವ ನೀನು
ವೃದ್ದಾಪ್ಯದಲಿ ನಿನ್ನ ನನ್ನೊಡಲ ಮಗುವಾಗಿಸುವೆ
ಮನನೋಯಿಸದೇ ಸಲಹುವೆ ಬಿಡದೇ ಎಂದಿಗೂ

ಭಾರತಿ ಕೇ ನಲವಡೆ
ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮಂಗಳವಾಡ.
ತಾಲೂಕು:ಹಳಿಯಾಳ
ಶೈಕ್ಷಣಿಕ ಜಿಲ್ಲೆ:ಶಿರಸಿ(ಉ.ಕ)