ಹೂವರಳಿ ನಕ್ಕಂತೆ
“””””””””‘””””””””
ಹೊಂಗಿರಣಗಳು ಸೂಸಿ ಬೈಗು ಬೆಳಕಾದಂತೆ
ಬಿಸಿಲ ಬೇಗೆಯಲು ನಗುತ ನಲಿವ ಹೂವಂತೆ
ತಂಬೆಲರ ತಂಗಾಳಿಗೆ ಬಯಲು ತೂಗುವಂತೆ
ಅಂತರಂಗದ ತುಮುಲ ತಾಳಸರಿದು
ಭಾವಗಳಿಗೆ ಧ್ವನಿಯಾಗಿ ಬೆರೆತ ಸವಿಜೇನಾಗಿ
ನಗಬೇಕು ಹೂವರಳಿ ನಕ್ಕಂತೆ
ಕಲ್ಲು ವೀಣೆಯಲ್ಲು ನಾದ ಹೊಮ್ಮಿದಂತೆ
ಸುಪ್ತ ಬೇನೆಗಳು ಮಾಚಿ ಮರೆಯಾದಂತೆ
ಚಿಂತೆ ಕಂತೆಗಳ ಬದಿಗೊತ್ತಿ
ಸಂಘರ್ಷಗಳು ಸಮರಸದಲ್ಲಿ ಬೆರೆತಂತೆ
ಮುದ್ದು ಮಗುವಿನ ಮಲ್ಲಿಗೆ ನಗುವಂತೆ
ನಗಬೇಕು ಹೂವರಳಿ ನಕ್ಕಂತೆ
ನೊಂದವರಿಗೆ ಪ್ರೀತಿ ಪರಿಮಳ ಹೊಮ್ಮಿಸಿ
ದುಃಖಿತರಿಗೆ ಸ್ವಾಂತನ ಸಹಭಾಗಿತ್ವದಲ್ಲಿ
ಮಾತು ಮನಸ್ಸು ಒಂದಾಗಿ
ವೃದ್ಧರ ನಲಿವಿನ ಆಸರೆಯ ಗೆಲುವಾಗಿ
ನೋವ ನುಂಗಿ ನಗುವ ಚೆಲ್ಲಿ
ಮನ ತಣಿದು ಉಲ್ಲಾಸ ಪುಟಿಯುವಂತೆ
ನಗಬೇಕು ಹೂವರಳಿ ನಕ್ಕಂತೆ
ಮಸಕು ಮಬ್ಬಿನ ತೆರೆ ಸರಿದಂತೆ
ಶಿಶಿರದಲ್ಲಿ ಮರ-ಗಿಡಗಳು ಕೊನರುವಂತೆ
ಅಂದರ ಬಾಳಿಗೆ ದಾರಿದೀಪೋಕ್ತಿಯಾಗಿ
ಭರವಸೆಯ ಬೆಳಕಿನ ಶಕ್ತಿಯಾಗಿ
ಮುಗಿಲ ಮರೆಯ ನಕ್ಷತ್ರಗಳ ಹೊಳವಿನಂತೆ
ಮನದಾಳದಿ ಕಾಪಿಟ್ಟ ಕಲ್ಮಶ ಕರಗುವಂತೆ
ನಗಬೇಕು, ಹೂವರಳಿ ನಕ್ಕಂತೆ
-ಯಶೋದಾ ರಾಮಕೃಷ್ಣ