ನವ ಯುಗಾದಿಯ ಹರ್ಷ

ಬಿಸಿ ಏರಿದ್ದ ಭುವಿಗಿದು ವಸಂತಕಾಲ
ನವ ಬಾಳಿಗೆ ತರಲಿ ಸಂಭ್ರಮದ ಸಕಾಲ
ಅದರಿಂದಲೇ ಜೀವನದ ಹರುಷದ ಹೊಸ ಕಾಲ
ಅದುವೇ ಬೇವು ಬೆಲ್ಲದ ಯುಗಾದಿಯ ಪರ್ವಕಾಲ

ಹೊಸ ಸಂವತ್ಸರದ ಯುಗಾದಿ ಶುರುವಾಗಿದೆ
ಚಿಗುರೆಲೆ ನಡುವೆ ಕೋಗಿಲೆ ಕೂಗಿದೆ
ಬೇವು ಬೆಲ್ಲವ ಹೀರುತ್ತ ಮನ ತಣಿದಿದೆ
ಬಾಳ ಪಯಣದ ಕಷ್ಟವೆಲ್ಲವ ಮರೆಯುವಂತಾಗಿದೆ

ವಸಂತ ಬರುವ ಹರುಷ ತರುವ
ಬೇವುಬೆಲ್ಲವ ನಗುತ ಹಂಚುವ
ಪಲ್ಲವಗಳು ಪಲ್ಲವಿಸಲಿ ಋತುಗಾನದ ಸಂಭ್ರಮವ
ಕಹಿ ಸಿಹಿಯ ಕೊಡುವ ಇದು ಯುಗಾದಿಯ ಹಬ್ಬವ

ಮನೆಯ ಹೊರಗೆ ಮಾವಿನ ತೋರಣ
ಮನೆಯ ಒಳಗೆ ಹೋಳಿಗೆ ಪಾಯಸದ ಹೂರಣ
ಮನದ ಮರೆಯಲ್ಲಿ ಸಂತೋಷದ ಚಾರಣ
ಪಸರಿಸಲಿ ಎಲ್ಲಡೆಯೂ ಸುಂದರ ಬಾಳಿನ ಚಿತ್ರಣ

ಬಿಸಿ ಹೋಳಿಗೆ ತುಪ್ಪ ಮನೆಯವರೆಲ್ಲ ಸವಿದು
ಮಾವಿನಕಾಯಿ ಚಿತ್ರಾನ್ನ ಮತ್ತೆ ಕೇಳಿ ಪಡೆದು
ಪಚಡಿ ಕೋಸಂಬರಿ ಪಾಯಸ ಪಲ್ಯದ ರುಚಿಯ ಸವಿದು
ಸಂಜೆ ಪಂಚಾಂಗ ಶ್ರವಣ ಭಕ್ತಿಯಿಂದ ಆಲಿಸುವುದು

ಜೀವನದಿ ಕಷ್ಟ ಸುಖ ಮೆಲ್ಲುತ ಸವಿಯೋಣ
ಸವಿ ಜೇನಿನಂತೆ ಮಧುರ ಮಾತುಗಳ ಆಡೋಣ
ನೋವ ಮರೆತು ಪ್ರೀತಿಯ ಎಲ್ಲರಿಗೂ ಹಂಚೋಣ
ಭೇದ ಭಾವವ ಬಿಟ್ಟು ಒಂದಾಗಿ ಬಾಳೋಣ

ಬಾಳಿನಲ್ಲಿ ಸೋಲು ಗೆಲುವು ಸಮನಾಗಿರಲಿ
ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಇರಲಿ
ಬಾಳ ಪಯಣದ ಕಷ್ಟವೆಲ್ಲ ಮರೆಯಾಗಲಿ
ನವ ಯುಗಾದಿ ಸಂಭ್ರಮ ವಿಶ್ವಕ್ಕೆ ಪಸರಿಸಲಿ

ರವೀಂದ್ರ ಸಿ. ವಿ. ವಕೀಲರು, ಮೈಸೂರು
📞::9945773232